ಬುದ್ಧಿಯ ಕಥೆಗಳು

ಬುದ್ಧಿಯ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ದೇವುಡು ನರಸಿಂಹ ಶಾಸ್ತ್ರಿ
ಪ್ರಕಾಶಕರು
ಹೇಮಂತ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ.100/-

ಕನ್ನಡದಲ್ಲಿ ಪೌರಾಣಿಕ ಕಾದಂಬರಿಗಳನ್ನು ರಚಿಸಿದ ಪ್ರತಿಭಾವಂತ ಸಾಹಿತಿ ದೇವುಡು ನರಸಿಂಹ ಶಾಸ್ತ್ರಿ. ತಮ್ಮ ಮೂರು ಬೃಹತ್ ಕಾದಂಬರಿಗಳಾದ “ಮಹಾ ಬ್ರಾಹ್ಮಣ”, “ಮಹಾ ಕ್ಷತ್ರಿಯ” ಮತ್ತು “ಮಹಾ ದರ್ಶನ”ಗಳಿಂದ ಮೇರು ಸದೃಶ ಸಾಹಿತಿಗಳಾಗಿ ಕನ್ನಡದ ಓದುಗರಿಗೆ ಪರಿಚಿತರು.

ಬಹುಮುಖ ಪ್ರತಿಭೆಯ ದೇವುಡು ಅವರು ಮಕ್ಕಳ ಸಾಹಿತ್ಯಕ್ಕೆ ಕೂಡ ಸುಮಾರು 85 ವರುಷಗಳ ಹಿಂದಿನಿಂದಲೂ ಕೊಡುಗೆ ಇತ್ತವರು. ಅವರು ಬರೆದ 49 ಮಕ್ಕಳ ನೀತಿಕತೆಗಳು ಈ ಸಂಕಲನದಲ್ಲಿವೆ. ತೆನಾಲಿ ರಾಮಕೃಷ್ಣನ ವಿಚಾರವಾಗಿ ಜನಜನಿತವಾಗಿರುವ ಒಂದು ದಂತಕಥೆಯನ್ನು ಆಧರಿಸಿದ “ವಿಚಿತ್ರ ಶಿಕ್ಷೆ” ಎಂಬ ಮಕ್ಕಳ ನಾಟಕವೂ ಇದರಲ್ಲಿದೆ.

ಸರಳ ಶೈಲಿಯಲ್ಲಿ ನೀತಿ ಬೋಧಕವಾಗಿಯೂ ಮನೋರಂಜಕವಾಗಿಯೂ ಮಕ್ಕಳ ಕತೆಗಳನ್ನು ಬರೆಯುವ ಕಲೆ ಅವರಿಗೆ ಸಿದ್ಧಿಸಿತ್ತು. ಕರ್ನಾಟಕ ಸರಕಾರದವರು ಪ್ರಾಥಮಿಕ ಶಿಕ್ಷಣ ಶಾಲೆಗಳಲ್ಲಿ ವಿಧಿಸಿರುವ ನೀತಿಬೋಧೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ದೇವುಡು ಅವರ ಬರೆದ ಕತೆಗಳನ್ನು ಇದರಲ್ಲಿ ಸಂಕಲಿಸಲಾಗಿದೆ.

ಪ್ರಾಥಮಿಕ ಶಾಲಾ ಮಕ್ಕಳಿಗೆ ಉಪಾಧ್ಯಾಯರು ಮೊದಲ ದಿನ ಕತೆಯನ್ನು ರಸವತ್ತಾಗಿ ಹೇಳುವುದು. ಎರಡನೆಯ ದಿನ ಆ ಕತೆಯನ್ನು ವಿದ್ಯಾರ್ಥಿಗಳಿಂದಲೇ ಹೇಳಿಸುವುದು. ಮೂರನೆಯ ದಿನ ಕಥೆಯನ್ನು ನಾಟಕದಂತೆ ಆಡಿ ತೋರಿಸುವುದು - ಈ ವಿಧಾನವನ್ನು ಉಪಾಧ್ಯಾಯರು ಅನುಸರಿಸಿದರೆ, ಕಥೆಯಲ್ಲಿರುವ ನೀತಿಯು ಮಕ್ಕಳಿಗೆ ಚೆನ್ನಾಗಿ ಅರ್ಥವಾಗುತ್ತದೆ. ಹೀಗಾಗಬೇಕೆಂದೇ, ನೀತಿಯೊಂದನ್ನು ಮಕ್ಕಳ ಮುಂದಿಟ್ಟು ಕತೆಯನ್ನು ಹೇಳಬಾರದೆಂದೇ, ಇಲ್ಲಿನ ಕತೆಗಳಲ್ಲಿ ನೀತಿಗಳನ್ನು ಬರೆದಿಲ್ಲ - ಹೀಗೆಂದು ಪುಸ್ತಕದ “ಪೀಠಿಕೆ”ಯಲ್ಲಿ ಸ್ಪಷ್ಟಪಡಿಸಲಾಗಿದೆ.

“ತಿಮ್ಮ” ಮತ್ತು “ತಂದೆಮಕ್ಕಳು” ಎಂಬ ಕತೆಗಳು ತಂದೆತಾಯಿಗಳಿಗೆ ಮಕ್ಕಳು ವಿಧೇಯರಾಗಿ ಇರಬೇಕು ಎಂಬ ನೀತಿಯನ್ನು ಬೋಧಿಸುತ್ತವೆ. ಹಾಗೆಯೇ “ಬಾಳೆ - ಸುಗಂಧರಾಜ” ಮತ್ತು “ಹುಲಿ - ಬೆಕ್ಕು” ಎಂಬ ಕತೆಗಳು ತಿಳಿಯಪಡಿಸುವ ನೀತಿ: ಗುರುಗಳಿಗೆ ವಿಧೇಯರಾಗಿ ಇರಬೇಕು ಎಂಬುದನ್ನು.

“ಕರ್ಣ” ಮತ್ತು “ನೇರಿಲು ಹಣ್ಣಿನ ಕಥೆ” ಎಂಬವು ಯಾವಾಗಲೂ ಸತ್ಯವನ್ನೇ ಹೇಳಬೇಕೆಂಬ ನೀತಿಯನ್ನು ಮನದಟ್ಟು ಮಾಡುತ್ತವೆ. “ಸುಬ್ಬು - ಶಿವು” ಮತ್ತು “ಬಡಗಿಗಳು - ಆನೆ” ಎಂಬೆರಡು ಕತೆಗಳು ಮನಗಾಣಿಸುವ ನೀತಿ: ಪ್ರಾಣಿಗಳಿಗೆ ದಯೆ ತೋರಿಸಬೇಕು ಎಂಬುದು. “ಪುಟ್ಟೂ” ಮತ್ತು “ರಾಮು - ಶ್ಯಾಮು” ಎಂಬ ಕತೆಗಳು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಬೇಕೆಂಬ ನೀತಿಯನ್ನು ಮನಸ್ಸಿಗೆ ನಾಟುವಂತೆ ಪ್ರಸ್ತುತ ಪಡಿಸುತ್ತವೆ. ಹೀಗೆ, ಇದರಲ್ಲಿನ ಪ್ರತಿಯೊಂದು ಕತೆಯೂ ಮುಖ್ಯವಾದ ನೀತಿಯೊಂದನ್ನು ಮಕ್ಕಳ ಮನಸ್ಸಿಗೆ ನಾಟುವಂತೆ ತಿಳಿಸುತ್ತದೆ.

ಇದರಲ್ಲಿರುವ “ಬುದ್ಧಿಯೆಂದರೆ ಬುದ್ಧಿ!” ಎಂಬುದು ಜನಪ್ರಿಯವಾದ “ಹದಿನೆಂಟನೆಯ ಆನೆಯ ಕತೆ”ಯ ರೂಪಾಂತರ. ಹಾಗೆಯೇ ದೇವುಡು ಅವರು ರೂಪಾಂತರಿಸಿದ ಕೆಲವು ವಿದೇಶೀ ಕತೆಗಳು ಈ ಸಂಕಲನದಲ್ಲಿವೆ. ಉದಾಹರಣೆಗೆ, “ಆಫ್ರಿಕದ ಕಥೆ”, “ತೋಳನನ್ನು ಕಟ್ಟಿದ್ದು”, “ಕಪ್ಪೆ ಗಂಡ” ಇತ್ಯಾದಿ.

ದೇವುಡು ಅವರು ಕಪ್ಪೆಯ ಬಗ್ಗೆ ಹಲವು ಕುತೂಹಲಕರ ಮಾಹಿತಿ ಸಂಗ್ರಹಿಸಿದ್ದು, ಅವನ್ನೆಲ್ಲ “ಕಪ್ಪೆಯ ಪುರಾಣ” ಎಂಬ ಶೀರ್ಷಿಕೆಯಲ್ಲಿ ಮೂರು ಭಾಗಗಳಲ್ಲಿ ಈ ಸಂಕಲನದಲ್ಲಿ ಪ್ರಸ್ತುತ ಪಡಿಸಲಾಗಿದೆ.