ಬುದ್ಧಿವಂತರು ಮತ್ತು ಪ್ರಜ್ಞಾವಂತರು
ಪ್ರೀತಿಯ ವಿದ್ಯಾರ್ಥಿಗಳೇ, ಇಂದು ನೀವು ಶಾಲೆಯಲ್ಲಿ ಕಲಿಯುತ್ತಿದ್ದೀರಿ. ಅಂದರೆ ವಿದ್ಯಾಭ್ಯಾಸ ಮಾಡುತ್ತಿದ್ದೀರಿ. ಬುದ್ಧಿವಂತಿಕೆಯನ್ನು ಇಂದು ನಾವು ಅಂಕಗಳಲ್ಲಿ ಅಳೆಯುತ್ತಿದ್ದೇವೆ. ಹೆಚ್ಚು ಅಂಕ ಪಡೆದವನು ಬುದ್ಧಿವಂತ. ಕಡಿಮೆ ಅಂಕ ಪಡೆದವನು ದಡ್ಡ ಎಂದು ಭಾವಿಸುತ್ತೇವೆ. ಬಾಯಿ ಪಾಠ ಮಾಡಿಯೋ, ಕಲಿತಿದ್ದನ್ನು ನೆನಪಿನಲ್ಲಿಟ್ಟುಕೊಂಡೊ ಹೆಚ್ಚು ಅಂಕ ಪಡೆಯುತ್ತಾರೆ. ಕಲಿತಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವರನ್ನು ಬುದ್ಧಿವಂತರೆನ್ನುತ್ತೇವೆ. ಈ ಘಟನೆಗಳನ್ನು ಓದಿ.
ಇದು ಕೋವಿಡ್ ಕಾಲಘಟ್ಟದಲ್ಲಿ ನಡೆದ ಘಟನೆ. ದಿನ ಪತ್ರಿಕೆಯಲ್ಲಿ ಇದನ್ನು ಓದಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಬಹುತೇಕ ಕಂಪನಿ, ಕಾರ್ಖಾನೆಗಳು ಮತ್ತು ಕಚೇರಿಗಳು ಮುಚ್ಚಿದ್ದವು. ಒಬ್ಬ ವ್ಯಕ್ತಿ ಬಿ ಇ ಯಲ್ಲಿ ರಾಂಕ್ ಬಂದು ಕ್ಯಾಂಪಸ್ ಸೆಲೆಕ್ಷನ್ ಆಗಿ ಕಂಪನಿಗೆ ಸೇರಿದ್ದನು. ಎಂಟು ವರ್ಷ ಸರ್ವಿಸ್ ಆಗಿತ್ತು. ಆತನಿಗೆ ಸುಮಾರು ಒಂದುವರೆ ಲಕ್ಷ ಸಂಬಳ ತಿಂಗಳಿಗೆ ಬರುತ್ತಿತ್ತು. ಸುಂದರಳಾದ ಪತ್ನಿ, ಎರಡು ಮಕ್ಕಳಿದ್ದರು. ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದರು. ಕೋವಿಡ್ ಕಾಲದಲ್ಲಿ ಕಂಪನಿ ಮುಚ್ಚಿತು. ಉತ್ಪಾದನೆ ಕಡಿಮೆಯಾಗಿದ್ದು, ಕಂಪನಿ ನಡೆಸಲು ಬೇಕಾದ ಸಾಮಗ್ರಿ ಸರಬರಾಜಿನಲ್ಲಿ ಕೊರತೆಯಾಗಿತ್ತು. ಹಾಗಾಗಿ ಕಂಪನಿಯಿಂದ ಕೆಲವರನ್ನು ತೆಗೆದು ಹಾಕಿದರು. ಅದೇ ರೀತಿ ಈತನ ಕೆಲಸವೂ ಹೋಯಿತು. ಈತನಿಗೆ ಚಿಂತೆ ಶುರುವಾಯಿತು. ಸಂಸಾರ ಸಾಗಿಸುವುದು ಹೇಗೆ....? ಎಂದು. ಬೇರೆ ಕಡೆ ಕೆಲಸಕ್ಕೆ ಪ್ರಯತ್ನಿಸಿದ. ಕೆಲಸ ಸಿಗಲಿಲ್ಲ. ತಾನು ಓದಿದ್ದು ಮತ್ತು ಕೆಲಸ ಮಾಡುತ್ತಿದ್ದುದನ್ನು ಬಿಟ್ಟರೆ ಬೇರೆ ಏನು ಗೊತ್ತಿರಲಿಲ್ಲ. ಆಗ ಆತನಿಗೆ ಏನು ತೋಚದಂತಾಗಿ ಆತ್ಮಹತ್ಯೆ ಮಾಡಿಕೊಂಡನು. ಈತ ಅವಿದ್ಯಾವಂತನಲ್ಲ, ದಡ್ಡನಲ್ಲ, ಬುದ್ಧಿವಂತನೆ...!!
ಇದೇ ರೀತಿ ಇನ್ನೊಬ್ಬನು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಆತನ ಕಂಪನಿಯು ಮುಚ್ಚಿತು. ಆತನನ್ನೂ ಕೆಲಸದಿಂದ ತೆಗೆದು ಹಾಕಿದರು. ಎಲ್ಲಾ ಕಡೆ ಲಾಕ್ ಡೌನ್ ಇದ್ದಿದ್ದರಿಂದ ಬೇರೆಲ್ಲೂ ಕೆಲಸ ಸಿಗಲಿಲ್ಲ. ಆದರೆ ಆತ ಪ್ರಜ್ಞಾವಂತನಾಗಿದ್ದ. ತಕ್ಷಣ ಒಂದು ಗೂಡ್ಸ್ ಆಟೋ ತೆಗೆದುಕೊಂಡು, ಅದರಲ್ಲಿ ಹಣ್ಣು ತರಕಾರಿಗಳನ್ನು ಮಾರಲು ಪ್ರಾರಂಭಿಸಿದನು. ಅದರಲ್ಲಿ ಸಂಪಾದಿಸಿ ಜೀವನ ಸಾಗಿಸುತ್ತಿದ್ದನು. ಈ ಎರಡು ಘಟನೆಗಳು ದಿನಪತ್ರಿಕೆಯಲ್ಲಿ ಬಂದಿದ್ದು. ಈ ಎರಡು ಘಟನೆಗಳನ್ನು ವಿಶ್ಲೇಷಣೆ ಮಾಡೋಣ.
1. ಬುದ್ಧಿವಂತನು ವಿಷಯ ನೆನಪಿಟ್ಟುಕೊಂಡು ಅಂಕ ಸಂಪಾದಿಸಿರುತ್ತಾನೆ. ವಿಷಯ ಅನುಭವವಾಗಿರುವುದಿಲ್ಲ. ಆತನಿಗೆ ಉದ್ಯೋಗ ಸಂಪಾದನೆ ಮುಖ್ಯವಾಗಿರುತ್ತದೆ ವಿನಹ ಬದುಕು ಮುಖ್ಯವಾಗಿರಲಿಲ್ಲ.
2. ಪ್ರಜ್ಞಾವಂತನಾಗಿದ್ದ ಎರಡನೇಯವನು ಜಾಣನೇ ಆದರೆ ಬುದ್ಧಿವಂತನಷ್ಟು ಜಾಣ ಇಲ್ಲದಿರಬಹುದು. ಆತ ಅನುಭವಿಯಾಗಿದ್ದನು. ಆತನಿಗೆ ಉದ್ಯೋಗ ಮುಖ್ಯವಾಗಿರಲಿಲ್ಲ, ಜೀವನ ಮುಖ್ಯವಾಗಿತ್ತು. ಹಾಗಾಗಿ ಪರ್ಯಾಯ ದಾರಿ ಹುಡುಕಿಕೊಂಡು ಜೀವನ ಸಾಗಿಸಿದನು.
3. ಬುದ್ಧಿವಂತರು ಒಂದು ಸಮಸ್ಯೆಗೆ ಒಂದೇ ಉತ್ತರ ಹುಡುಕುತ್ತಾರೆ. ಸಿಗದಿದ್ದಲ್ಲಿ ಜಿಗುಪ್ಸೆ ಹೊಂದುತ್ತಾರೆ.
4. ಪ್ರಜ್ಞಾವಂತರು ಒಂದು ಸಮಸ್ಯೆಗೆ ಬೇರೆ ಬೇರೆ ಉತ್ತರ ಹುಡುಕುತ್ತಾರೆ. ಅದರಲ್ಲಿ ಯಾವುದಾದರೂ ಉಪಾಯ ದೊರಕುತ್ತದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ.
5. ನಿರುದ್ಯೋಗ ಸಮಸ್ಯೆ ಇರುವುದು ವಿದ್ಯಾವಂತರು ಮತ್ತು ಬುದ್ಧಿವಂತರಿಗೆ ವಿನಹ ಅವಿದ್ಯಾವಂತರು ಪ್ರಜ್ಞಾವಂತರಿಗಲ್ಲ. ಉದ್ಯೋಗಕ್ಕಾಗಿ ಮೋಸ ಹೋದವರು ವಿದ್ಯಾವಂತರು ಮತ್ತು ಬುದ್ಧಿವಂತರಲ್ಲವೇ.
6. ಬುದ್ಧಿವಂತರು ತಮ್ಮ ವಿದ್ಯಾಭ್ಯಾಸಕ್ಕೆ ಸರಿಯಾಗುವಂತಹ ಉದ್ಯೋಗ ಹುಡುಕುತ್ತಾರೆ. ಕೆಲವರು ಯಶಸ್ವಿ ಯಾದರೆ ಕೆಲವರು ಯಶಸ್ವಿಯಾಗುವುದಿಲ್ಲ. ವಿದ್ಯಾವಂತರು ಮತ್ತು ಪ್ರಜ್ಞಾವಂತರು ಇಂತಹದೇ ಉದ್ಯೋಗಬೇಕೆಂದು ಚಿಂತಿಸುವುದಿಲ್ಲ ಹಾಗಾಗಿ ಜೀವನದಲ್ಲಿ ಯಶಸ್ವಿಯಾಗುತ್ತಾರೆ.
ಮಕ್ಕಳ ಜೀವನ ಅಮೂಲ್ಯ. ಬದುಕು ಬಹಳ ಅಮೂಲ್ಯ. ಈ ಜೀವನ ಮತ್ತೊಮ್ಮೆ ಬರುತ್ತದೆ ಎಂದು ಹೇಳಲು ಬರುವುದಿಲ್ಲ. ಹಾಗಾಗಿ ಬದುಕು ಮುಖ್ಯನೇ ವಿನಹ ಉದ್ಯೋಗ ಮುಖ್ಯವಲ್ಲ. ಉದ್ಯೋಗ ಯಾವುದಾದರೂ ಏನು...? ಅದು ಸಂತೋಷ ಕೊಟ್ಟರೆ ಸಾಕು. ಬದುಕು ಸುಂದರವಾಗಿರಬೇಕು, ಸಂತೋಷವಾಗಿರಬೇಕು, ಮತ್ತು ಶಾಂತವಾಗಿರಬೇಕು ಅಷ್ಟೇ, ಅಲ್ಲವೇ ಮಕ್ಕಳೆ.....
-ಎಂ.ಪಿ. ಜ್ಞಾನೇಶ್, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ