ಬುದ್ಧಿ ಜೀವಿಯಾಗುವುದು ಹೇಗೆ?

ಬುದ್ಧಿ ಜೀವಿಯಾಗುವುದು ಹೇಗೆ?

ಬರಹ

(ನಗೆ ನಗಾರಿ ಅತಿ ಆಧ್ಯಾತ್ಮ ಬ್ಯೂರೋ)


 

ಸರ್ವ ಭಾಷಗೆಳನ್ನು, ಭಾರತದ ಸಕಲ ಸಂಸ್ಕೃತಿಯನ್ನು, ಭಾರತೀಯರ
ಎಲ್ಲಾ ದೇವರುಗಳನ್ನು ಗೌರವದಿಂದ ಕಾಣುವ ಹಾಗೂ ಸ್ವಲ್ಪವೂ ದುರಭಿಮಾನವನ್ನು ತೋರ್ಪಡಿಸದ
ತಮಿಳು ನಾಡೆಂಬ ಭೂಲೋಕದ ಸ್ವರ್ಗದ ರಾಜಧಾನಿಯಲ್ಲಿ  ಕರುಣಾಜನಕ ವಿಧಿಯವರು
ಬುದ್ಧಿಜೀವಿಯಾಗುವುದು ಹೇಗೆ?’ ಎಂಬ ಕಾರ್ಯಾಗಾರವನ್ನು ಯಶಸ್ವಿಯಾಗಿ  ನಡೆಸಿಕೊಟ್ಟಿದ್ದಾರೆ.
ಕಾರ್ಯಾಗಾರದಲ್ಲಿ ಸಾಮಾನ್ಯರಲ್ಲಿ ಅತೀ ಸಾಮಾಯರಾದವರು ಕೂಡ ಹೇಗೆ ಕೆಲವೇ ಕೆಲವು
ಪರಿಣಾಮಕಾರಿ ಹಾಗೂ ಸತ್ವಯುತ ಉಪಾಯಗಳನ್ನು ಬಳಸುವ ಮೂಲಕ ಖ್ಯಾತಿವೆತ್ತ
ಬುದ್ಧಿಜೀವಿಯಾಗಿ ನಾಡಿನ ಎಲ್ಲಾ ಪತ್ರಿಕೆಗಳ ಮುಖಪುಟಗಳಲ್ಲಿ
, ಟಿವಿ ಚಾನೆಲ್ಲುಗಳಲ್ಲಿ ಮಿಂಚಬಹುದು ಎಂಬುದನ್ನು ಬೋಧಿಸಿದ್ದಾರೆ.


 

img1081105066_1_1

 

ಬುದ್ಧಿಜೀವಿಯಾಗಲು ಕೆಲವೇ ಮೆಟ್ಟಿಲು ಎಂದು ತಮ್ಮ ಉಪನ್ಯಾಸವನ್ನು ಪ್ರಾರಂಭಿಸಿದ ಕರುಣಾಜನಕ ವಿಧಿಯವರು ಮೊದಲ ಮೆಟ್ಟಿಲಿನ ಬಗ್ಗೆ ಹೇಳಿದ್ದು ಹೀಗೆ: ತಣ್ಣಗಿರುವ ಕೊಳದ ಪಕ್ಕದಲ್ಲಿ ನೀವು ಸಾವಿರ ವರ್ಷ ತಪಸ್ಸು ಮಾಡುತ್ತಾ ಕುಳಿತರೂ ಪ್ರಪಂಚದ ಗಮನವನ್ನು ಸೆಳೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ಪ್ರಶಾಂತವಾದ ಕೊಳಕ್ಕೆ ಒಂದೇ ಒಂದು ಕಲ್ಲು ಬೀರಿ ನೋಡಿಅಲೆಗಳ ಮೇಲೆ ಅಲೆಗಳು ಎದ್ದು ಪ್ರಪಂಚದ ಗಮನವೆಲ್ಲಾ ನಿಮ್ಮೆಡೆಗೆ ತಿರುಗುತ್ತದೆ. ಆದರೆ ಇಲ್ಲಿ ಒಂದು ಎಚ್ಚರಿಕೆಯ ಮಾತನ್ನು ಗಮನಿಸಬೇಕಾದ್ದು ಆವಶ್ಯಕ. ಹೀಗೆ ಶಾಂತ ಸರೋವರಕ್ಕೆ ಇಲ್ಲವೇ ತೃಪ್ತ ಹೆಜ್ಜೇನಿನ ಗೂಡಿಗೆ ಕಲ್ಲು ಬೀರುವಾಗ ನೀವು ಬುದ್ಧಿವಂತಿಕೆಯನ್ನು ಉಪಯೋಗಿಸಬೇಕು. ಕಚ್ಚಲಾಗದ, ಬೊಗಳಲಾಗದ ನಾಯಿಯನ್ನು ನಿಮ್ಮ ಪರಾಕ್ರಮ ತೋರಲು ಆಯ್ದುಕೊಳ್ಳುವ ಚಾಕಚಕ್ಯತೆಯನ್ನು ಅನುಭವದಿಂದ ಮಾತ್ರ ಸಿದ್ಧಿಸಿಕೊಳ್ಳಲು ಸಾಧ್ಯ.’

 

ಮೊದಲ ಸೂತ್ರವನ್ನು ಮತ್ತಷ್ಟು ವಿವರವಾಗಿ ಅರ್ಥೈಸುತ್ತಾ, ತಾವು ಬರೆದ ಇತ್ತೀಚಿನ ಕವನವೊಂದನ್ನು ಉದಾಹರಿಸಿದರು.ನನ್ನ ಇತ್ತೀಚಿನ ಕವನವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿಹಿಂದೂಗಳು ತಿಲಕ, ವಿಭೂತಿಯನ್ನು ಹಣೆಯಲ್ಲಿ ಧರಿಸುವುದು ತಪ್ಪು ಎಂದು ಉಗ್ರವಾಗಿ ವಾದಿಸಿದ್ದೇನೆ. ಸಮಾನತೆಯ
ಆಶಯದಲ್ಲಿ ಹುಟ್ಟಿಕೊಂಡಿರುವ ದೇಶದಲ್ಲಿ ಹೀಗೆ ತಿಲಕ ಹಚ್ಚಿಕೊಂಡು ತಿರುಗುವುದು
ಅಸಮಾನತೆಯನ್ನು ಉಂಟು ಮಾಡುತ್ತದೆ ಎಂದು ಕಾವ್ಯಾತ್ಮಕವಾಗಿ ಪ್ರಚುರಪಡಿಸಿದ್ದೇನೆ
. ಬ್ರಾಹ್ಮಣರು ಜನಿವಾರವನ್ನು ಹಾಕಿಕೊಳ್ಳುವುದು ಏತಕ್ಕೆ, ಅದರಿಂದ ಏನೂ ಪ್ರಯೋಜನವಿಲ್ಲ ಎಂದು ವಿದ್ವತ್ ಪೂರ್ಣವಾಗಿ ಪ್ರಶ್ನೆ ಹಾಕಿರುವೆ. ಹೀಗೆ ಸುಮ್ಮನಿದ್ದ ಕೊಳಕ್ಕೆ ಕಲ್ಲನ್ನು ಎಸೆಯಬೇಕು. ಹಿಂದೂಗಳೆಂಬುವವರೆಲ್ಲಾ ಕಣ್ಣು ಕೆಂಪಗೆ ಮಾಡಿಕೊಂಡು ನಿಮ್ಮತ್ತ ನೋಡುತ್ತಾರೆ. ಮಾಧ್ಯಮಗಳು ಉಳಿದೆಲ್ಲಾ ಮುಖ್ಯ ಕೆಲಸ ಬಿಟ್ಟು ಈಗ ನನ್ನ ಮುಂದೆ ಹಲ್ಕಿರಿದು ಕ್ಯಾಮರಾ ತೆಗೆದು ನಿಂತಿಲ್ಲವೇ ಹಾಗೆ ನಿಮ್ಮೆದುರು ಬರುತ್ತಾರೆ.


 

ಅದರ ಜೊತೆಗೇ ನಾನು ಪಾಲಿಸಿರುವ ಎಚ್ಚರಿಕೆಯನ್ನೂ ಸಹ ನೀವು ಪಾಲಿಸಬೇಕು. ಕಚ್ಚದ, ಬೊಗಳದ ನಾಯಿಗೆ ಕಲ್ಲೆಸುವ ಎಚ್ಚರಿಕೆಯನ್ನು ಮರೆಯಬಾರದು. ಉದಾಹರಣೆಗೆ, ನಾನು ಮುಸ್ಲೀಮರು ತಲೆಗೆ ಟೊಪ್ಪಿ ಧರಿಸುವುದು, ಹೆಂಗಸರು ಬುರ್ಕಾ ಧರಿಸುವುದು ಯಾಕೆ ಎಂದೋ, ಸಮಾನತೆಯಿರುವ ನಾಡಿನಲ್ಲಿ ಕ್ರಿಸ್ತರು ಶಿಲುಬೆಯ ಚೈನನ್ನು ಕೊರಳಿಗೆ ಹಾಕಿಕೊಳ್ಳುವುದು ಏಕೆ, ಬಿಳಿಯ ಬಟ್ಟೆಯನ್ನೇ ಹೆಚ್ಚಾಗಿ ಧರಿಸುವುದು ಏಕೆ ಎಂದೇನಾದರೂ ಪ್ರಶ್ನಿಸಿ ಕವನ ಬರೆದಿದ್ದರೆ ಟಿವಿ ಚಾನಲ್ಲುಗಳಿಗೆ, ಪತ್ರಿಕೆಗಳಿಗೆ ನನ್ನ ಸಂದರ್ಶನ ಮಾಡುವುದಕ್ಕೆ ಅವಕಾಶವಾಗುತ್ತಿರಲಿಲ್ಲ. ಬದಲಾಗಿ ನನ್ನ ಅಂತ್ಯಸಂಸ್ಕಾರದ ಲೈವ್ ಕವರೇಜ್ ಮಾಡುವ ಅವಕಾಶ ಸಿಕ್ಕುತ್ತಿತ್ತು ಅಷ್ಟೇ. ಆ ಅಪಾಯವನ್ನು ಮನಗಂಡೇ ನಾನು ಹಿಂದೂಗಳ ಬಗ್ಗೆ ಕವನ ಬರೆದದ್ದು.


 

ಹಿಂದೆಯೂ ನಾನು ಶ್ರೀರಾಮನ ಬಗ್ಗೆ ಕ್ರಾಂತಿಕಾರಿಯಾದ ಸಂಗತಿಗಳನ್ನು ಬಯಲಿಗೆಳೆದು ಪ್ರಸಿದ್ಧನಾದದ್ದರ ಬಗ್ಗೆ ನಿಮಗೆ ತಿಳಿದಿರಬಹುದು. ಈಗ ನೋಡಿ ನಮ್ಮ ದೇಶವೊಂದರಲ್ಲಿ ಅಷ್ಟೇ ಅಲ್ಲ ಇಡೀ ಜಗತ್ತಿನಲ್ಲಿನ ಮಾಧ್ಯಮ ಮಿತ್ರರು ನನ್ನನ್ನು ಬುದ್ಧಿಜೀವಿ ರಾಜಕಾರಣಿ ಎಂದೇ ಪರಿಗಣಿಸುತ್ತಾರೆ. ಈ ಸೂತ್ರವನ್ನು ಪರಿಣಾಮಕಾರಿಯಾಗಿ ಬಳಸಿದರೆ ಒಂದೇ ದಿನದಲ್ಲಿ ನೀವೂ ಜಗದ್ವಿಖ್ಯಾತರಾಗಬಹುದು.’


 

ಬಹು ಯಶಸ್ವಿಯಾಗಿ ಜರುಗಿದ ಕಾರ್ಯಾಗಾರದಲ್ಲಿ ಕರುಣಾ ಜನಕ ವಿಧಿಯವರು ಇನ್ನೂ ಅನೇಕ ಶಕ್ತಿಶಾಲಿ ಯಶಸ್ವಿ ಸೂತ್ರಗಳನ್ನು ಹೇಳಿಕೊಟ್ಟರು. ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಮೂರು ಮುಕ್ಕಾಲು ಮಂದಿ ತಮ್ಮ ಭವಿಷ್ಯ ಭದ್ರವಾಯಿತೆಂಬ ನೆಮ್ಮದಿಯಿಂದ ಮನೆಗೆ ತೆರಳಿದರು.