ಬುದ್ಧ, ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ

ಬುದ್ಧ, ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ

ಇವತ್ತು ಬುದ್ಧ ಪೂರ್ಣಿಮೆ. "ಬುದ್ಧ, ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ" ಎಂಬ ಕವನದ ಸಾಲು ನೆನಪಾಯಿತು. ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧ ಹುಟ್ಟಿದ ಮತ್ತು ಆತನಿಗೆ ಜ್ನಾನೋದಯವಾದ ಪವಿತ್ರ ದಿನವಿದು. ವೈಶಾಖ ತಿಂಗಳ ಹುಣ್ಣಿಮೆಯ ದಿನ.

ಬುದ್ಧ ಪೂರ್ಣಿಮೆಯ ದಿನ ಆತನ ಅನುಯಾಯಿಗಳು ಬಿಹಾರದ ಬೋಧಗಯಾದಲ್ಲಿರುವ ಮಹಾಬೋಧಿ ಮಂದಿರಕ್ಕೆ ಭೇಟಿ ನೀಡುತ್ತಾರೆ. ಇದು ಯುನೆಸ್ಕೋದ ಜಾಗತಿಕ ಪಾರಂಪರಿಕ ತಾಣಗಳಲ್ಲೊಂದು. ಬೌದ್ಧ ಧರ್ಮವು ಭಾರತದ ಗಡಿಗಳನ್ನು ದಾಟಿ, ಶ್ರೀಲಂಕಾ ಹಾಗೂ ಪೂರ್ವ ಏಷ್ಯಾದ ದೇಶಗಳಲ್ಲೆಲ್ಲ ಹಬ್ಬಿ, ಚೀನಾ ಮತ್ತು ಜಪಾನಿನ ವರೆಗೂ ವ್ಯಾಪಿಸಿದ್ದೇ ಬುದ್ಧನ ಉಪದೇಶಗಳು ಜನಸಾಮಾನ್ಯರ ಮನತಟ್ಟುತ್ತವೆ ಎಂಬುದರ ಪುರಾವೆ.

ಮಹಾಬೋಧಿ ಮಂದಿರದ ಆವರಣದಲ್ಲಿರುವ ಬೋಧಿವೃಕ್ಷದ ಕೆಳಗೆ ಬುದ್ಧನಿಗೆ ಜ್ನಾನೋದಯವಾಗಿ 2,500 ವರುಷಗಳು ದಾಟಿವೆ. ಇಂದಿಗೂ ಜನರನ್ನು ಜಾಗೃತಗೊಳಿಸಿ, ಅಧ್ಯಾತ್ಮದ ಬದುಕಿನತ್ತ ಸೆಳೆಯುವ ಬುದ್ಧನ ಉಪದೇಶಗಳು ಸಾರ್ವಕಾಲಿಕ. ನಮ್ಮಲ್ಲಿ ಚಿಂತನೆಯ ಕಿಡಿ ಹಚ್ಚಿ, ಅರಿವಿನ ದೀಪ ಬೆಳಗಿಸಬಲ್ಲ ಬುದ್ಧನ ಕೆಲವು ಚಿಂತನೆಗಳು ಇಲ್ಲಿವೆ:

-ಪ್ರತಿದಿನ ಮುಂಜಾನೆ ನಮಗೆ ಮರುಹುಟ್ಟು. ಆದ್ದರಿಂದ, ಇವತ್ತು ನಾವು ಏನು ಮಾಡುತ್ತೇವೆ ಅನ್ನೋದೇ ಎಲ್ಲದಕ್ಕಿಂತ ಮುಖ್ಯ.

-ಈ ಮೂರನ್ನು ದೀರ್ಘ ಕಾಲ ಮುಚ್ಚಿಡಲು ಸಾಧ್ಯವಿಲ್ಲ: ಸೂರ್ಯ, ಚಂದ್ರ ಮತ್ತು ಸತ್ಯ.

-ಒಂದು ಮೊಂಬತ್ತಿಯಿಂದ ಸಾವಿರಾರು ಮೊಂಬತ್ತಿಗಳನ್ನು ಬೆಳಗಿಸಬಹುದು. ಇದರಿಂದಾಗಿ ಆ ಮೊಂಬತ್ತಿಯ ಬಾಳಿನವಧಿ ಕಡಿಮೆಯಾಗೋದಿಲ್ಲ. ಹಾಗೆಯೇ ಹಂಚಿಕೊಂಡಾಗ ಹರುಷ ಕಡಿಮೆಯಾಗೋದಿಲ್ಲ.

-ಧಾನ್ಯವನ್ನು ಜರಡಿಯಲ್ಲಿ ಜಾಲಾಡಿದಂತೆ ಜ್ನಾನಿಗಳು ತಮ್ಮ ಯೋಚನೆಗಳನ್ನು ಜಾಲಾಡಿ ಅವುಗಳಿಂದ ತಮ್ಮ ಮಾತುಗಳನ್ನು ರೂಪಿಸುತ್ತಾರೆ.

-ಬದುಕಿನಲ್ಲಿ ನಿನಗೆ ದಕ್ಕಿದ್ದಕ್ಕೆ ಜಾಸ್ತಿ ಬೆಲೆ ಕಟ್ಟಬೇಡ, ಇತರರ ಬಗ್ಗೆ ಮತ್ಸರ ಪಡಲೂ ಬೇಡ. ಅಂಥವರಿಗೆ ಮನಶ್ಶಾಂತಿ ಸಿಗುವುದೇ ಇಲ್ಲ.

-ಜ್ನಾನದ ಪುಸ್ತಕದ ಮೊದಲ ಅಧ್ಯಾಯವೇ ಪ್ರಾಮಾಣಿಕತೆ.

-ಬೇರೊಬ್ಬರಿಗಾಗಿ ನೀನೊಂದು ದೀಪ ಹಚ್ಚಿದರೆ ಅದು ನಿನ್ನ ದಾರಿಯನ್ನೂ ಬೆಳಗುತ್ತದೆ.

-ಸಾವು ಮತ್ತು ದುಃಖದಿಂದ ಯಾರೊಬ್ಬರೂ ತಪ್ಪಿಸಿಕೊಳ್ಳಲಾರರು. ಬದುಕಿನಲ್ಲಿ ಜನರು ಸಂತೋಷವನ್ನು ಮಾತ್ರ ನಿರೀಕ್ಷೆ ಮಾಡಿದರೆ, ಅವರಿಗೆ ನಿರಾಶೆ ಆಗಿಯೇ ಆಗುತ್ತದೆ.

-ನಿನ್ನ ಸಮಸ್ಯೆ ಏನೆಂದರೆ, ಎಲ್ಲದಕ್ಕೂ ಇನ್ನೂ ಸಮಯವಿದೆ ಎಂದು ನೀನು ಯೋಚಿಸುತ್ತಿ.

-ನಿನ್ನ ಮೌನವನ್ನು ಯಾರು ಅರ್ಥ ಮಾಡಿಕೊಳ್ಳುವುದಿಲ್ಲವೋ, ಆ ವ್ಯಕ್ತಿ ನಿನ್ನ ಮಾತುಗಳನ್ನೂ ಅರ್ಥ ಮಾಡಿಕೊಳ್ಳಲಾರ.

ಫೋಟೋ ೧: ಬಿಹಾರದ ಬೋಧಗಯಾದ ಮಹಾಬೋಧಿ ಮಂದಿರ
ಫೋಟೋ ೨: ಉತ್ತರಪ್ರದೇಶದ ಖುಷಿನಗರದ ಬುದ್ಧನ ಮೂರ್ತಿ
ಫೋಟೋ ಕೃಪೆ: ಷಟರ್ ಸ್ಟಾಕ್ ಜಾಲತಾಣ