ಬುದ್ಧ ಪೂರ್ಣಿಮೆಯ ಶುಭದಿನ
ಕ್ರಿ.ಪೂ.೫೬೦ರಲ್ಲಿ ಶುದ್ಧೋದನ, ಮಾಯಾದೇವಿ ದಂಪತಿಗಳ ಮಗನಾಗಿ ಜನಿಸಿ, ಸಿದ್ಧಾರ್ಥಎಂಬ ನಾಮದಿಂದ ಬಾಲ್ಯವನ್ನು ಕಳೆದ ಮಹಾ ಚೇತನ. ಅರಮನೆಯನ್ನೇ ಮಗನಿಗಾಗಿ ಹೊಸದು ನಿರ್ಮಿಸಿ ತಂದೆ ಬೆಳೆಸಿದನೆಂದು ತಿಳಿದು ಬರುತ್ತದೆ. ಭವಿಷ್ಯಕಾರರ ಮಾತು "ಈ ಬಾಲಕ ಮುಂದೆ ಚಕ್ರವರ್ತಿ ಯಾಗುವನು ಇಲ್ಲವೇ ಮಹಾ ಸನ್ಯಾಸಿಯಾಗಿ ಲೋಕವಿಖ್ಯಾತಿ ಹೊಂದುವನು" ಎಂಬುದಾಗಿ ಇತ್ತು ಎಂದು ತಿಳಿದು ಬರುವುದು.
ಬಾಲ್ಯದಿಂದಲೂ ಸಿದ್ಧಾರ್ಥ ಕರುಣಾಮಯಿ. ಗೆಳೆಯರ ಕೂಟದಲ್ಲಿ *ದಯಾಮಯಿ, ದಯಾಳು* ಎಂಬ ಅಡ್ಡ ಹೆಸರನ್ನು ಪಡೆದ ಬಾಲಕನೀತ. ಪ್ರಾಯಕ್ಕೆ ಬಂದ ಮಗನಿಗೆ ಪಕ್ಕದ ರಾಜ್ಯದ ರಾಜಕುಮಾರಿ ಯಶೋಧರಾ ಜೊತೆ ಮದುವೆ ಮಾಡಿಸಿದ ತಂದೆ. ರಾಹುಲ ಎಂಬ ಮಗನನ್ನು ಪಡೆದ ಸಿದ್ಧಾರ್ಥ. ಯಾಕೋ ಸಿದ್ಧಾರ್ಥ ನ ಮನಸ್ಸು ಸದಾ ಏಕಾಂತ,ವೈರಾಗ್ಯದ ಕಡೆಗೆ ಸೆಳೆಯುತಿತ್ತು. ಮುಂದೊಂದು ದಿನ ಪಟ್ಟಣ ತಿರುಗಲು ಹೊರಟವನಿಗೆ ರೋಗಿ, ಮುದುಕ, ಮರಣ, ದುಃಖದ ವಿಷಯ ತಿಳಿದು, ಸ್ವತಃ ಎಲ್ಲವನ್ನು ನೋಡಿ ಮನಸ್ಸು ಕಲಕಿತು. ಈ ಬದುಕು ಎಂದರೆ ಇಷ್ಟೆಯಾ? ಇದರಾಚೆ ಏನಾದರೂ ಇದೆಯೇ? ನೋಡಬೇಕು, ಹುಡುಕಬೇಕು ಎಂಬ ಆತುರ, ಕಾತರ ಹೆಚ್ಚಾಯಿತು.
ದುಃಖಕ್ಕೆ ಪರಿಹಾರ ಕಂಡುಹಿಡಿಯಲೇಬೇಕು ಎಂಬ ನಿರ್ಧಾರ ಮಾಡಿದ. ರಾತ್ರಿ ಇಡೀ ಯೋಚಿಸಿ, ತನ್ನ ಮಿತ್ರನಿಗೆ ಶ್ರೇಷ್ಠ ವಸ್ತ್ರಗಳನ್ನು, ಆಭರಣಗಳನ್ನು ಎಲ್ಲವನ್ನೂ ಕೊಟ್ಟು, ಕಾಡಿನ ದಾರಿ ಹಿಡಿದವನು ಹಿಂದಿರುಗಿ ನೋಡಲೇ ಇಲ್ಲ. ಮಿಡಿವ ಮನಗಳಿಗಾಗಿ ಅರಮನೆ, ರಾಜ್ಯ, ಕೋಶ, ಮಡದಿ, ಮಗ, ಹೆತ್ತವರು ಎಲ್ಲವನ್ನೂ ತ್ಯಾಗ ಮಾಡಿದ ಸಿದ್ಧಾರ್ಥ.
ಬಿಹಾರದ *ಗಯಾ* ಎಂಬಲ್ಲಿ ಒಂದು ಬೋಧಿ ಮರದ ಕೆಳಗೆ ಕುಳಿತು ಅನೇಕ ವರ್ಷಗಳ ಕಾಲ ತಪಸ್ಸನ್ನು ಮಾಡಿ ಜ್ಞಾನವಂತನಾದ. ಜ್ಞಾನೋದಯವಾದ ಸಿದ್ಧಾರ್ಥ *ಬುದ್ಧ* ನಾದ, ಮಹಾ ಸಂತನಾದ. ವಿಶಿಷ್ಟ ಜ್ಞಾನವನ್ನು ಹೊಂದಿದ ಬುದ್ಧ ಮೊದಲ ಉಪದೇಶವನ್ನು ವಾರಣಾಸಿಯ ಸಾರಾನಾಥದಲ್ಲಿ ಗೈದ. ಶಾಂತಿ ಮಾರ್ಗ ಎಲ್ಲೆಲ್ಲಿ ಇರೋಲ್ಲ, ನಮ್ಮಲ್ಲೇ ಇದೆ, ಸ್ವಾತಂತ್ರ್ಯ ಮತ್ತು ಶಾಂತಿ ಶಾಶ್ವತವಿದ್ದರೆ ಅದುವೇ ನಿರ್ವಾಣವೆಂದ.
ಪಾಲಿ ಭಾಷೆಯಲ್ಲಿ ಬುದ್ಧನ ಉಪದೇಶಗಳು ಬರೆಯಲ್ಪಟ್ಟು ಜನಮನ್ನಣೆ ಗಳಿಸಿತು. ಸಂಸಾರ ಹೊಂದಿಯೂ, ಅದರಾಚೆಗೆ ತ್ಯಾಗ, ಏಕಾಗ್ರತೆ, ನಿಷ್ಠೆ ಜ್ಞಾನ ಸಂಪಾದಿಸಿ, ಮಹಾನ್ ಸಾಧಕನಾಗಬಹುದು ಎಂಬುದನ್ನು ಜಗಕೆ ತೋರಿಸಿಕೊಟ್ಟ ಸಂತನೀತ.ಆದರೆ *ಒಂದನ್ನು ಪಡೆಯಲು ಇನ್ನೊಂದನ್ನು ತ್ಯಾಗ ಮಾಡಲೇಬೇಕು*.ಇದು ಲೋಕ ಉದ್ಧಾರ.ಅದು ಕೇವಲ ನನ್ನ ಸಂಸಾರದ ಪರಿಧಿ ಅರಿತ ಜ್ಞಾನಿಯಾದ. ಸಾವು, ನೋವು, ದುಃಖ ಇದು ಸಂಪೂರ್ಣ ಬದಲಾಯಿಸಬಹುದು ಬದುಕಿನ ಹಾದಿಯನ್ನು ಎಂಬುದನ್ನು ಸಾರಿದ ಮಹಾಜ್ಞಾನಿ,.ಅಹಿಂಸೆಯನ್ನು ನೀಡುವ ಅಧಿಕಾರ ಹುಲುಮಾನವನಿಗೆಲ್ಲಿದೆ? ಅಸಮಾನತೆ ಹೋಗಲಾಡಿಸಿ, ಧರ್ಮದ ಬೆಳಕನ್ನು ಬೀರಿದ ಸಂತ, ಮಮತೆಯ ಮೂರುತಿ. ಬುದ್ಧನು ತನ್ನ ಅನುಯಾಯಿಗಳೊಂದಿಗೆ ಕಪಿಲವಸ್ತುವಿಗೆ ಬಂದಾಗ, ತನ್ನ ಮಡದಿ ಯಶೋಧರಾ ಸನ್ಯಾಸಿನಿಯಂತೆ ಇರುವುದನ್ನು ಕಂಡನು.ಆಕೆಯ ಇಚ್ಛೆಯಂತೆ ಬೌದ್ಧಧರ್ಮ ದೀಕ್ಷೆಯನ್ನು ಕೊಡಿಸಿದನು. ಮಗ ರಾಹುಲನಿಗೂ ಹಳದಿ ವಸ್ತ್ರವನ್ನು ನೀಡಿ ಹರಸಿದನು. ಸುಮಾರು ೪೫ವರುಷಗಳ ಕಾಲ ಬೇರೆ ಬೇರೆ ರಾಜ್ಯಗಳಿಗೆ ಹೋಗಿ ಧರ್ಮ ಪ್ರಚಾರ ಕೈಗೊಂಡನು.
ಎಂಬತ್ತು ವರ್ಷ ಬದುಕಿದ ಬುದ್ಧನು ಮಹಾ ಸಂಕ್ರಮಣವನ್ನೇ ಉಂಟುಮಾಡಿ, ಅನುಯಾಯಿಗಳ ಮೂಲಕವಾಗಿ ಸಂಘ ಸ್ಥಾಪನೆ ಮಾಡಿದನು. *ಬುದ್ಧಂ ಶರಣಂ ಗಚ್ಛಾಮಿ, ಸಂಘಂ ಶರಣಂ ಗಚ್ಛಾಮಿ, ಧರ್ಮಂ ಶರಣಂ ಗಚ್ಛಾಮಿ* ಘೋಷವಾಕ್ಯಗಳು ಜನಪ್ರಿಯವೆನಿಸಿ ಆ ಕಾಲಕ್ಕೆ ಮೆರೆಯಿತು. ನಮ್ಮ ದೇಶದ ಇತಿಹಾಸದಲ್ಲಿ ಬೌದ್ಧ ಧರ್ಮ ಶಾಶ್ವತ ನೆಲೆಬೆಲೆಯನ್ನು ಕಂಡುಕೊಂಡಿತು. ವಾಸ್ತು, ಶಿಲ್ಪಕಲೆ, ಸಾಹಿತ್ಯದಲ್ಲಿ ಬೌದ್ಧಧರ್ಮದ ಸಾರವನ್ನು ಇಂದಿಗೂ ಕಾಣಬಹುದು.
-ರತ್ನಾ ಭಟ್, ತಲಂಜೇರಿ
ಆಧಾರ:ಭಾರತದ ಶ್ರೇಷ್ಠ ಧಾರ್ಮಿಕ ಪುರುಷರು.