ಬುಲ್ಡೋಜರ್... ಕಟ್ಟುವುದು ಕಷ್ಟ ಕೆಡವುವುದು ಸುಲಭ
ಯಾರ ಮೇಲೆ ಬುಲ್ಡೋಜರ್ ಹೊಡೆಸುತ್ತಿರುವಿರಿ - ಯಾರ ಮನೆಯನ್ನು ನೆಲಸಮ ಮಾಡುತ್ತಿರುವಿರಿ - ಅವರು ಭಾರತೀಯರೇ ಅಥವಾ ವಿದೇಶಿಯರೇ - ಅಷ್ಟು ದೊಡ್ಡ ಮನೆಗಳನ್ನು ಕಟ್ಟುತ್ತಿದ್ದಾಗ ಸಂಬಳ ಪಡೆದು ನಿದ್ದೆ ಮಾಡುತ್ತಿದ್ದವರು ಯಾರು - ವಿದ್ಯುತ್ ನೀರಿನ ಸಂಪರ್ಕ ಕೊಟ್ಟವರು ಯಾರು - ಈಗ ಆ ಮನೆ ಹೊಡೆದರೆ ಅದರಲ್ಲಿ ವಾಸವಾಗಿದ್ದವರು ಎಲ್ಲಿಗೆ ಹೋಗಬೇಕು - ಅದಕ್ಕೆ ಖರ್ಚಾದ ಹಣವನ್ನು ಯಾರು ಕೊಡುತ್ತಾರೆ - ಅವರ ಮುಂದಿನ ಬದುಕು ಹೇಗೆ - ನ್ಯಾಯಾಧೀಶರು - ಮಂತ್ರಿಗಳು - ಅಧಿಕಾರಿಗಳು ಅಕ್ರಮ ಎಂದು ಆದೇಶ ನೀಡುವಿರಿ - ಆದರೆ ಕಟ್ಟುವಾಗ ನೀವೆಲ್ಲ ಎಲ್ಲಿ ಮಲಗಿದ್ದಿರಿ - ಶಿಕ್ಷೆ ಮುಖ್ಯವೇ ಶಿಕ್ಷಣ ಮುಖ್ಯವೇ - ನಿಮ್ಮ ಎಲ್ಲಾ ಚಟುವಟಿಕೆಗಳು ಸಕ್ರಮವೇ - ಸರ್ಕಾರಿ ಜಾಗವನ್ನು ಮತ್ತು ರಾಜ ಕಾಲುವೆಯನ್ನು ರಕ್ಷಿಸಲು ವಿಫಲವಾದ ನಿಮ್ಮ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ - ಮಳೆ ನೀರಿನ ಪ್ರವಾಹ ತಡೆಯಲು ಇದನ್ನು ಹೊರತುಪಡಿಸಿ ಬೇರೆ ಯಾವ ಪರ್ಯಾಯ ಕ್ರಮಗಳನ್ನು ಕೈಗೊಂಡಿರುವಿರಿ - ಬೆಂಗಳೂರಿನ ಬಹಳಷ್ಟು ಕೆರೆಗಳು ಎಲ್ಲಿ ಮಾಯವಾದವು ಅದಕ್ಕೆ ಯಾರು ಜವಾಬ್ದಾರರು - ನಮ್ಮದೇ ಜನರನ್ನು ನಿರ್ದಾಕ್ಷಿಣ್ಯವಾಗಿ ಬೀದಿಗೆ ತಳ್ಳುವ ಬದಲು ಮಾನವೀಯ ದೃಷ್ಟಿಯಿಂದ ಅವರಿಗೆ ಒಂದು ಪರ್ಯಾಯ ವ್ಯವಸ್ಥೆ ಮಾಡಬಾರದೇ - ಅವರು ತಪ್ಪೇ ಮಾಡಿದ್ದರು ಸಹ ಏಕಾಏಕಿ ಮನೆಯಿಂದ ಹೊರ ಹಾಕಿದರೆ ಈ ವ್ಯವಸ್ಥೆಯ ಬಗ್ಗೆ ಅವರ ಮಕ್ಕಳಿಗೆ ಯಾವ ಅಭಿಪ್ರಾಯ ಮೂಡಬಹುದು - ಮಳೆಯ ಹೊಡೆತ ಮನೆಯ ಒಡೆತ ಮನಸ್ಸಿನ ಗಾಯ ವಾಸಿಯಾಗಲು ಜನ ಸಾಮಾನ್ಯರಾದ ನಾವು ಏನು ಮಾಡಬೇಕು - ಆ ಅಕ್ರಮ ಮನೆಗಳನ್ನು ನಿರ್ಮಿಸಲು ಉಪಯೋಗಿಸಿದ ಹಣ ಮಾನವ ಸಂಪನ್ಮೂಲಗಳು, ಪ್ರಾಕೃತಿಕ ಸಂಪನ್ಮೂಲಗಳು, ಶ್ರಮ ಎಲ್ಲವೂ ವ್ಯರ್ಥವಾಗಲು ಮೂಲ ಕಾರಣ ಯಾರು - ಸರ್ಕಾರಿ ಜಮೀನು ಅತಿಕ್ರಮವಾಗುವಾಗ ಅದನ್ನು ತಡೆಯದೆ ಮನೆ, ಕಟ್ಟಡ, ಕಚೇರಿ ಕಟ್ಟಿ ಸಂಸಾರದ ಸಮೇತ ಬದುಕು ಕಟ್ಟಿಕೊಂಡ ಮೇಲೆ ಈಗ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೇ ಕೆಡವುವುದು ನ್ಯಾಯವೇ - ಬಡವರ ಮನೆ ಒಡೆದ ಮೇಲೆ ಶ್ರೀಮಂತರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಬಚಾವಾದ ಹಿಂದಿನ ಘಟನೆಗಳು ಇರುವಾಗ ಯಾವ ರೀತಿಯ ನ್ಯಾಯ ಎಲ್ಲರಿಗೂ ಒದಗಿಸುವಿರಿ - ಈ ವ್ಯವಸ್ಥೆಯಲ್ಲಿ ಯಾರನ್ನು ನಂಬುವುದು ಯಾರ ಮೇಲೆ ಭರವಸೆ ಇಡುವುದು - ಒಂದು ಸಾಧಾರಣ ಜಾಗ ಅಥವಾ ಮನೆ ಕೊಳ್ಳಲು ಇಷ್ಟೊಂದು ಅಡೆತಡೆಗಳು ಇರುವಾಗ ಇದಕ್ಕೆ ಒಂದು ವ್ಯವಸ್ಥೆ ರೂಪಿಸಲು ಏಕೆ ಸಾಧ್ಯವಾಗಲಿಲ್ಲ - ಮುಂದಿನ ಮಳೆಗಾಲದ ಒಳಗಾಗಿ ಎಲ್ಲಾ ರಾಜ ಕಾಲುವೆಗಳು ತೆರೆವಿಗೆ ಒಳಗಾಗಿರುತ್ತವೆ ಎಂದು ನಂಬಬಹುದೇ - ಕಾನೂನು ಮತ್ತು ಮಾನವೀಯತೆ ನಡುವೆ ಸಮನ್ವಯ ಸಾಧ್ಯವಿಲ್ಲವೇ?
ಇಷ್ಟೆಲ್ಲಾ ಪ್ರಶ್ನೆಗಳಿಗೆ ಉತ್ತರ ರೂಪದ ಒಂದು ದುರಂತ ಕಥೆ ನಿಮ್ಮ ಮುಂದೆ...
ನನ್ನ ಮದುವೆಗೆ ಇನ್ನು ಉಳಿದಿರುವುದು ಕೇವಲ 20 ದಿನಗಳು ಮಾತ್ರ. ಬದುಕಿನ ಹೊಸ ಮನ್ವಂತರಕ್ಕೆ ಹೆಜ್ಜೆ ಇಡುತ್ತಿದ್ದೇನೆ. ಆಸೆ ಕನಸು ಉದ್ವೇಗಗಳು ಮನಸ್ಸಿನಲ್ಲಿ ಕುಣಿದು ಕುಪ್ಪಳಿಸುತ್ತಿವೆ. ಭವಿಷ್ಯದ ಸುಂದರ ದಿನಗಳು ಮನದಲ್ಲಿ ಬಣ್ಣದ ಓಕುಳಿಯಾಟವಾಡುತ್ತಿವೆ. ಅಂದ ಹಾಗೆ ನಾನೇನು ಸಿನಿಮಾ ನಟಿಯಲ್ಲ, ಮಾಡೆಲ್ ಅಲ್ಲ. ಶ್ರೀಮಂತಳಲ್ಲ. ಒಬ್ಬ ಕೆಳ ಮಧ್ಯಮ ವರ್ಗದ ಟೈಲರ್ ಒಬ್ಬರ ಒಬ್ಬಳೇ ಮುದ್ದಿನ ಮಗಳು. ಮೊನ್ನೆಯಷ್ಟೆ 22 ತುಂಬಿತು.
ನನ್ನ ಹೆಸರು ನಿಹಾರಿಕ. SSLC ವರೆಗೆ ಮಾತ್ರ ಓದಿದ್ದೇನೆ. ಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡುವುದು, ಹಾಸಿಗೆ ಹಿಡಿದಿರುವ ಅಜ್ಜಿಯ ಹಾರೈಕೆ ಮತ್ತು ಸದಾ ಟಿವಿ ನೋಡುವುದು ನನ್ನ ಕೆಲಸ. ಆಗಾಗ ಕಥೆ ಪುಸ್ತಕ ಓದುತ್ತೇನೆ. ನನಗೆ ಗೊತ್ತು ಮಾಡಿರುವ ಹುಡುಗ ಮೈಸೂರಿನಲ್ಲಿ ಶಿಕ್ಷಕರಾಗಿದ್ದಾರೆ. ದೂರದ ಸಂಬಂದಿಗಳಿಂದ ಇದು ಏರ್ಪಟ್ಟಿದೆ. ನೋಡಲು ತುಂಬಾ ಸುಂದರವಾಗಿದ್ದಾರೆ. ಮೂರು ತಿಂಗಳ ಹಿಂದೆ ನಮ್ಮ ಮನೆಯಲ್ಲಿಯೇ ಸರಳವಾಗಿ Engagement ಆದ ದಿನದಿಂದಲೂ ದಿನವೂ ಫೋನ್ ಮಾಡುತ್ತಾರೆ. ಅವರು ಶಾಲೆಯಿಂದ ಮನೆಗೆ ಹೋಗುವಾಗ ಒಂದು ಗಂಟೆಯಷ್ಟು ಇಬ್ಬರೂ ಹರಟೆ ಹೊಡೆಯುತ್ತೇವೆ. ಭವಿಷ್ಯದ ಕನಸುಗಳನ್ನು ಹಂಚಿಕೊಳ್ಳುತ್ತೇವೆ. ಕೀಟಲೆ ಕನವರಿಕೆಗಳು ಬಹಳ ಇರುತ್ತದೆ. ಅವೆಲ್ಲಾ ನಿಮ್ಮ ಬಳಿ ಹೇಳಲಾಗುವುದಿಲ್ಲ. ನಾಚಿಕೆಯಾಗುತ್ತದೆ.
ಮದುವೆ ನನಗೇನು ಸದ್ಯಕ್ಕೆ ಅಗತ್ಯವಿರಲಿಲ್ಲ. ಆದರೆ ನಮ್ಮ ಅಜ್ಜಿಯ ಹೃದಯದ ಆರೋಗ್ಯ ಕೆಟ್ಟು ಡಾಕ್ಟರ್ ಅವರಿಗೆ ಯಾವುದೇ ಕ್ಷಣದಲ್ಲಿ ತೊಂದರೆ ಆಗಬಹುದು ಎಂದು ಹೇಳಿದ್ದರಿಂದ ಅಜ್ಜಿ ಅಪ್ಪನ ಬಳಿ ಹಠಹಿಡಿದು
"ನನ್ನ ಮೊಮ್ಮಗಳ ಮದುವೆ ನೋಡಲೇಬೇಕು ಅದೇ ನನ್ನ ಕೊನೆಯ ಆಸೆ" ಎಂದುದಕ್ಕಾಗಿ ಅಪ್ಪ ತರಾತುರಿಯಲ್ಲಿ ವ್ಯವಸ್ಥೆ ಮಾಡಿದ್ದಾರೆ. ಅಜ್ಜಿಯ ಆಸೆಗೆ ಇಲ್ಲವೆನ್ನಲು ನನಗೂ ಮನಸ್ಸಾಗಲಿಲ್ಲ.
ಹೆಣ್ಣಿನ ಮದುವೆಯ ಸಂಭ್ರಮ ಅನುಭವಿಸಿದವರಿಗಷ್ಟೇ ಗೊತ್ತು. ಎರಡು ದಿನದಿಂದ ನನಗೆ ಅವಶ್ಯವಾದ ಆರತಕ್ಷತೆ ಸೀರೆ, ಮುಹೂರ್ತದ ಸೀರೆ ಅದು ಇದು ಅಂತ ಶಾಪಿಂಗ್ ಮಾಡಿದ್ದೇ ಮಾಡಿದ್ದು. ಅಪ್ಪ ಬಡವರಾದರೂ ಒಬ್ಬಳೇ ಮಗಳಾದ್ದರಿಂದ ತಮ್ಮೆಲ್ಲ ತನು ಮನ ಧನಗಳನ್ನು ನನಗೆ ಧಾರೆ ಎರೆಯುತ್ತಿದ್ದಾರೆ. ನನ್ನವರಿಗೆ ಸೂಟ್ ಹೊಲಿಸಿಕೊಳ್ಳುವುದಕ್ಕಾಗಿ ಒಂದಷ್ಟು ಹಣ ಕೊಟ್ಟಿದ್ದಾರೆ. ಇವತ್ತೂ ಬೆಳಗ್ಗೆಯಿಂದ ಶಾಪಿಂಗ್ ಮಾಡಿ ಈಗ ರಾತ್ರಿ 9 ರ ಸುಮಾರಿಗೆ ಮನೆಗೆ ಬಂದೆವು. ಊಟ ಕೂಡ ಮಾಡಲಿಲ್ಲ. ಸರಿರಾತ್ರಿಯಾದರೂ ತಂದಿದ್ದ ಒಡವೆಗಳನ್ನು ಮತ್ತೆ ಮತ್ತೆ ನೋಡುತ್ತಾ ಖುಷಿಪಡುತ್ತಿದ್ದೆ. ನನ್ನ ರೂಮಿನಲ್ಲಿ ಒಬ್ಬಳೇ ಕನಸು ಕಾಣುತ್ತಾ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದೆ.
ಸಮಯ ರಾತ್ರಿ ಒಂದು ಗಂಟೆ. ಎಂದೂ ಇಲ್ಲದ ಅಪ್ಪ ಬಾಗಿಲು ತೆಗೆದು ಒಳ ಬಂದರು. ನನ್ನ ಬಳಿ ಮಾತನಾಡಬೇಕಿದೆ ಎಂದು ಪಕ್ಕದಲ್ಲೇ ಕುಳಿತರು. ಅಪ್ಪ ಅಪಾರ ಪ್ರೀತಿಯ ಅಗರವಾದರೂ ಹೊರಗಡೆ ಎಂದೂ ತೋರಿಸಿಕೊಳ್ಳುತ್ತಿರಲಿಲ್ಲ. ನನ್ನ ಎಲ್ಲಾ ಬೇಕುಬೇಡ ಅಮ್ಮನೇ ತೀರ್ಮಾನಿಸುತ್ತಿದ್ದಳು.
ಆದರೆ, ಆಶ್ಚರ್ಯ ಅಪ್ಪ ಇವತ್ತು ನನ್ನ ಬಳಿ ಮಾತನಾಡಬೇಕು ಎನ್ನುತ್ತಿದ್ದಾರೆ. ಒಮ್ಮೆ ನನ್ನ ಮುಖ ನೋಡಿದ ಅಪ್ಪ ತಮ್ಮ ದೇಹದ ಎಲ್ಲಾ ನೀರನ್ನೂ ಕಣ್ಣುಗಳಲ್ಲಿ ಚಿಮ್ಮಿಸುತ್ತಾ ನನ್ನನ್ನು ಬಿಗಿದಪ್ಪಿಕೊಂಡರು. ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ನನಗೆ ಗಾಬರಿಯಾಯಿತು. ಏನೋ ದುರಂತದ ಮುನ್ಸೂಚನೆ ಎಂದು ಅರಿವಾಯಿತು. ಧೈರ್ಯ ತಂದುಕೊಂಡು ಗದರಿಸಿ ಸಮಾಧಾನಿಸಿ ವಿಷಯ ಕೇಳಿದೆ. ಅಪ್ಪಾ ತೊದಲುತ್ತಾ "ಮಗಳೇ ನಿನ್ನ ಮದುವೆ ಕ್ಯಾನ್ಸಲ್ ಆಯ್ತು ".!
ಆಕಾಶ ಕಳಚಿ ತಲೆಯ ಮೇಲೆ ಬೀಳಲಿಲ್ಲ. ಆದರೆ ಮನೆಯ ತಾರಸಿ ದೊಪ್ಪನೆ ಬಿದ್ದಿತು. ಹೌದು ನಿಜವಾಗಿಯೂ ಮನೆಯ ತಾರಸಿಯೇ. ನಾನು ಹುಟ್ಟಿ ಬೆಳೆದ ಈ ಮನೆಯನ್ನು ಅಪ್ಪ 25 ವರ್ಷಗಳ ಹಿಂದೆ ತಮ್ಮೆಲ್ಲಾ ಸಂಪಾದನೆಯನ್ನು ಕೂಡಿಸಿ ಹೊಟ್ಟೆ ಬಟ್ಟೆ ಕಟ್ಟಿ ಖರೀದಿಸಿದ್ದರಂತೆ. ಅದರ ಮರು ವರುಷವೇ ಅವರ ಮದುವೆಯಾಯಿತು. ಆಗಾಗ ಸಣ್ಣ ರಿಪೇರಿ ಬಿಟ್ಟರೆ ಈ ಎರಡು ಬೆಡ್ ರೂಂಗಳ ಪುಟ್ಟ ಮನೆ ತುಂಬಾ ಚೆನ್ನಾಗಿಯೇ ಇತ್ತು.ನಮ್ಮ ಸರ್ವಸ್ವವೂ ಇದೇ ಆಗಿತ್ತು.
ಆದರೆ 6 ತಿಂಗಳ ಹಿಂದೆ ಅರಣ್ಯ ಇಲಾಖೆಯವರು ಅಪ್ಪನಿಗೆ ಒಂದು ನೋಟೀಸ್ ಕೊಟ್ಟಿದ್ದರಂತೆ. (ಅಪ್ಪ ಅದನ್ನು ನನಗೆ ಹೇಳದೆ ಮುಚ್ಚಿಟ್ಟಿದ್ದರು.) ನಿಮ್ಮ ಮನೆಯನ್ನು ಅರಣ್ಯ ಭೂಮಿ ಒತ್ತುವರಿ ಮಾಡಿ ಕಟ್ಟಲಾಗಿದೆ. ಅದನ್ನು ಖಾಲಿಮಾಡಿ. ನಿಮ್ಮ ಸುತ್ತಲಿರುವ ಎಲ್ಲಾ 70 ಮನೆಗಳನ್ನೂ ಒಡೆದು ಹಾಕಲಾಗುತ್ತದೆ ಎಂದು.
ಆದರೆ ಸ್ಥಳೀಯ ರಾಜಕಾರಣಿಯ ಭರವಸೆ ಮೇಲೆ ಅಲ್ಲಿನ ಜನ ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಎಲ್ಲರಿಗೂ ಆದದ್ದೇ ನಮಗೂ ಆಗುತ್ತದೆ ಎಂದು ಸುಮ್ಮನಿದ್ದರು. ಆದರೆ ಇಂದು ಬೆಳಗ್ಗೆ ಮನೆಗೆ ಬಂದ ಅಧಿಕಾರಿಗಳು ಕೋರ್ಟ್ ನೋಟೀಸ್ ತೋರಿಸಿ ನಾಳೆಯೇ ಮನೆ ಹೊಡೆಯುವುದಾಗಿ ಕೊನೆಯ ಎಚ್ಚರಿಕೆ ಕೊಟ್ಟು ಹೋಗಿದ್ದರು. ಅಮ್ಮ ಮತ್ತು ನೆಂಟರ ಜೊತೆಗೆ ಶಾಪಿಂಗ್ ಹೋಗಿದ್ದ ನಮಗೆ ಈ ವಿಷಯ ತಿಳಿದಿರಲಿಲ್ಲ. ಗಾಬರಿಯಾದ ಅಪ್ಪ ಹಿಂದೆ ಮುಂದೆ ನೋಡದೆ ಬೇರೆಯವರ ಸಲಹೆಯನ್ನು ಕೇಳದೆ ನೇರವಾಗಿ ಹುಡುಗನ ಮನೆಯವರಿಗೆ ಪೋನ್ ಮಾಡಿ ವಿಷಯ ತಿಳಿಸಿ ಮದುವೆ ಮುಂದೂಡಲು ಕೇಳಿ ಕೊಂಡಿದ್ದಾರೆ.
ನಮ್ಮ ವ್ಯವಸ್ಥೆಯಲ್ಲಿ ಸತ್ಯಕ್ಕೆ ಬೆಲೆ ಕಡಿಮೆ ಅಲ್ಲವೆ. ವಿಷಯ ತಿಳಿದ ಸ್ವಲ್ಪ ಹೊತ್ತಿಗೆ ಮತ್ತೆ ಪೋನ್ ಮಾಡಿದ ಹುಡುಗನ ಕಡೆಯವರು ಅಪ್ಪನಿಗೆ ಸಿಕ್ಕಾಪಟ್ಟೆ ಬೈದು ಇಂತಹ ದರಿದ್ರ ಮನೆಯವರೊಂದಿಗೆ ನಮಗೆ ಸಂಬಂಧ ಬೇಡವೇ ಬೇಡ. Engagement ಸಮಯದಲ್ಲಿ ಕೊಟ್ಟಿದ್ದ ಉಂಗುರ, ಚೈನು, ಹಣ ಎಲ್ಲಾ ನಾಳೆಯೇ ಹಿಂದಿರುಗಿಸುವುದಾಗಿ ಹೇಳಿದ್ದರು. ಅಪ್ಪನ ಪರಿ ಪರಿ ಮನವಿಗೆ ಬೆಲೆಕೊಟ್ಡಿರಲಿಲ್ಲ.
ಅಪ್ಪನ ಕಣ್ಣೀರು ನಿಂತಿರಲಿಲ್ಲ. ಅಮ್ಮ ಪ್ರಜ್ಞೆ ತಪ್ಪುವುದಷ್ಟೆ ಬಾಕಿ. ಅಜ್ಜಿಗೆ ವಿಷಯ ತಿಳಿಯಬಾರದೆಂದು ಅವರ ರೂಮ್ ಬಾಗಿಲು ಹಾಕಲಾಗಿತ್ತು. ನನಗಿನ್ನು 22 ವರ್ಷ. ಆದರೂ ಧೃತಿಗೆಡಬಾರದೆಂದು ಆ ಕ್ಷಣವೇ ಹುಡುಗನಿಗೆ ಫೋನ್ ಮಾಡಿದೆ. ಸ್ವಿಚ್ ಆಫ್ ಆಗಿತ್ತು. ದಿನವೂ ಸಂಜೆ ಫೋನ್ ಮಾಡುತ್ತಿದ್ದ ಆತ ಇಂದು ಮಾಡಿರಲಿಲ್ಲ. ಶಾಪಿಂಗ್ ಗಡಿಬಿಡಿಯಲ್ಲಿ ನಾನು ಮರೆತಿದ್ದೆ. ಈಗ ಎಲ್ಲವೂ ಸ್ಪಷ್ಟವಾಗತೊಡಗಿತು Whatsapp message ಕಳಿಸಲು open ಮಾಡಿದೆ. ರಾತ್ರಿ 10.22 ರ ಸಮಯಕ್ಕೆ ಆತನೇ message ಕಳಿಸಿದ್ದ. ನಾನು ಗಮನಿಸಿರಲಿಲ್ಲ.
" ಕ್ಷಮಿಸು ನಿಹಾರಿಕ, ವಿಧಿ ತುಂಬಾ ಕ್ರೂರ. ದೇವರ ಇಚ್ಚೆ ಬೇರೆಯೇ ಇದೆ. ನಾನು ಅಸಹಾಯಕ ನನ್ನನ್ನು ಮರೆತು ಬಿಡು. ನಿನಗೆ ಒಳ್ಳೆಯದಾಗಲಿ " ಆತ ಆಗಲೇ ಕೈ ತೊಳೆದುಕೊಂಡಿದ್ದ. ಈಗ ನನ್ನ ದು:ಖ ಮಾಯವಾಗಿ ಕೋಪ ಬಂದಿತು. ಮನದಲ್ಲಿ ಛಲ ಮೂಡಿತು. ಎದ್ದುನಿಂತು ಅಪ್ಪ ಅಮ್ಮನಿಗ ಧೈರ್ಯ ಹೇಳಿದೆ.
" ನೀವು ಭಯಪಡಬೇಡಿ. 22 ವರ್ಷ ನನ್ನನ್ನು ಸಾಕಿದ್ದೀರ. ಇನ್ನು ನೀವು ಇರುವವರೆಗೂ ನಾನು ನೋಡಿಕೊಳ್ಳುತ್ತೇನೆ. ನಾನು ಇನ್ನು ಎಂದೆಂದಿಗೂ ಮದುವೆಯಾಗುವುದಿಲ್ಲ .ಈ ಒಡವೆ ಸೀರೆ ಎಲ್ಲಾ ಮಾರಿ ಮದುವೆಗೆ ಇಟ್ಟಿರುವ ಹಣ ಸೇರಿಸಿ ಒಂದು ಬಾಡಿಗೆ ಮನೆ ಹಿಡಿಯೋಣ. ನಾನು ಗಾರ್ಮೆಂಟ್ಸ್ ನಲ್ಲಿ ಕೆಲಸಕ್ಕೆ ಸೇರುತ್ತೇನೆ. ನೀವು ಚಿಂತೆ ಮಾಡಬೇಡಿ. ಅಜ್ಜಿಯನ್ನು ನಾನು ಸಮಾಧಾನ ಮಾಡುತ್ತೇನೆ "ಎಂದು ಖಚಿತವಾಗಿ ಹೇಳಿದೆ.
ಅಮ್ಮನಿಗೆ ಸ್ವಲ್ಪ ಧೈರ್ಯ ಬಂತು. ಅಪ್ಪ ಮಾತ್ರ ಬಹಳ ವೇದನೆಪಡುತ್ತಿದ್ದರು. ನಿನ್ನನ್ನು ಈ ಸ್ಥಿತಿಯಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ ಎಂದು ಅಳುತ್ತಲೇ ಮತ್ತೊಮ್ಮೆ ನನ್ನನ್ನು ಅಪ್ಪಿಕೊಂಡು ಅಮ್ಮನೊಂದಿಗೆ ಹೋದರು. ದಿಂಬಿಗೆ ತಲೆಕೊಟ್ಟು ಕುಳಿತೆ. ನನ್ನ ಹೃದಯವೂ ಕಣ್ಣೀರಾಯಿತು. ಉಮ್ಮಳಿಸಿದ ದು:ಖವನ್ನು ಶಬ್ದ ಮಾಡದೇ ತೃಪ್ತಿಯಾಗುವವರೆಗೂ ಅಳುತ್ತಿದ್ದೆ. ನಿದ್ದೆ ಹೇಗೆ ಆವರಿಸಿತೋ ಗೊತ್ತಾಗಲಿಲ್ಲ. ಬೆಳಗ್ಗೆ 5 ರ ಸುಮಾರಿಗೆ ಅಮ್ಮನ ಚೀರಾಟ ಕೇಳಿ ಓಡಿ ಬಂದೆ. ಅಪ್ಪ ಯಾವ ಘಳಿಗೆಯಲ್ಲೋ ಅಜ್ಜಿ ಮಲಗಿದ್ದ ರೂಮಿನ ಫ್ಯಾನಿಗೆ ಆಹಾರವಾಗಿದ್ದರು.
ತಪ್ಪು ಸೃಷ್ಟಿಯದೋ, ವಿಧಿಯದೋ, ದೇವರದೋ, ಸರಕಾರದ್ದೋ ಅಥವಾ ನಮ್ಮೆಲ್ಲಾ, ವ್ಯವಸ್ಥೆಯದೋ ಗೊತ್ತಾಗಲೇ ಇಲ್ಲ.
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ