ಬೂದು ಬಣ್ಣದ ಕಾಂಗರೂ (ವಿಶ್ವಕಥಾಕೋಶ -೮)

ಬೂದು ಬಣ್ಣದ ಕಾಂಗರೂ (ವಿಶ್ವಕಥಾಕೋಶ -೮)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಮುದ್ರಣ ಮಾಡಲಾಯಿತು. ಆ ಸಮಯದಲ್ಲಿ ಪ್ರಕಾಶಕರ ನುಡಿ ಹೀಗಿದೆ. 

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಎಂಟನೆಯ ಸಂಪುಟ ‘ಬೂದು ಬಣ್ಣದ ಕಾಂಗರೂ’'. ವಿಶ್ವಕಥಾಕೋಶದ ೮ನೇ ಸಂಪುಟದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ದೇಶದ ಕಥೆಗಳಿವೆ. ಮಾನವನ ಸಾಹಸ- ದುಸ್ಸಾಹಸಗಳ ಸೃಷ್ಟಿಯಾದ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್ ದೇಶಗಳ ಸಾಮಾಜಿಕ ಆರ್ಥಿಕ ರಾಜಕೀಯ ಸ್ವರೂಪದ ಪರಿಚಯವನ್ನೂ ಆ ಹಿನ್ನಲೆಯಲ್ಲಿ ಅಲ್ಲಿನ ಸಾಹಿತ್ಯದ ಪರಿಚಯವನ್ನೂ ಮಾಡಿಕೊಳ್ಳಬಹುದು. ಈ ಸಂಕಲನಕ್ಕಾಗಿ ಆರಿಸಿರುವ ಆಸ್ಟ್ರೇಲಿಯಾದ ೧೪ ಕಥೆಗಳ ಮತ್ತು ನ್ಯೂಜಿಲ್ಯಾಂಡಿನ ಎರಡು ಕಥೆಗಳ ಆಸ್ವಾದನೆಗೆ ಈ ಪುಸ್ತಕ ನೆರವಾಗುತ್ತದೆ. ವಿಮಾನಯಾನ, ನೌಕಾಯಾನ ಕೈಗೊಳ್ಳದೇ ಅಲ್ಲಿನ ಮಾನವ ಸಮಾಜಗಳೊಂದಿಗೆ ನಾವು ಕೊಂಡಿ ಹೊಸೆಯು ಬಹುದು.

ಈ ಪುಸ್ತಕದಲ್ಲಿ ಇರುವ ೧೬ ಕಥೆಗಳೆಂದರೆ, ಬೂದು ಬಣ್ಣದ ಕಾಂಗರೂ (ಅಲನ್ ಮಾರ್ಶಲ್), ರುಂಡಗಳು ಮುಂಡಗಳ ಮೇಲೆಯೇ ಇರಲಿ (ಬಿಲ್ ಸಟ್ಟನ್), ಜಾನ್ ಪ್ರೈಸ್ ನ ಉಕ್ಕಿನ ಸರಳು ( ಪ್ರೈಸ್ ವಾರಂಗ್), ಫ್ಲೋರಾ (ಮೇರಿ ಗಿಲ್ ಮೋರ್), ನಮ್ಮದೀ ನೆಲ ( ಏಲ್ಲಿಯಂ ಹ್ಯಾಟ್ ಫೀಲ್ಡ್), ಸರದಾರ ಕ್ಯಾಸಿಗೆ ಇನ್ನೊಂದು ಗೌರವ ಪಟ್ಟಿ (ರಾಡೆರಿಕ್ ಕ್ವಿನ್), ಕರೆಗಂಟೆ ( ಲೂಯಿ ಬೆಕ್), ಮೀನಿನ ಶಿಕಾರಿ (ವಾನ್ಸ್ ಪಾಮರ್), ಹಾಡುಗಾರ ಕೈಜೆಕ್ (ಕ್ಸೇವಿಯರ್ ಹರ್ಬರ್ಟ್), ಅಜ್ಞರು (ಮಾರ್ಗರೇಟ್ ಟ್ರಸ್ಟ್) , ಬ್ಯಾರಿಂಗ್ಟನ್ (ಜಾನ್ ಲಾಂಗ್), ಅವನ ತಂದೆಯ ಸಂಗಾತಿ ( ಹೆನ್ರಿ ಲಾಸನ್), ಅಪ್ಪನ ವಿಪತ್ತು ( ಸ್ಟೀಲಿ ರಡ್), ಎನ್ ಗೊಲಾ (ಕ್ಯಾಥರಿನ್ ಸುಸನ್ಹಾ ಪ್ರಿಚರ್ಡ್), ತಾಯಿ (ಎಡ್ವರ್ಡ್ ಬ್ರೌನ್), ಮದುವೆ (ವಿಟಿ ಇಹಿಮೆರಾ).

ಇಲ್ಲಿರುವ ಎಲ್ಲಾ ಕಥೆಗಳ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಅಪರಿಚಿತರಾಗಿರುವ ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇಲ್ಲಿರುವ ಕಥೆಗಳನ್ನು ಪಾ.ಸಂಜೀವ ಬೋಳಾರ ಇವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ಸುಮಾರು ೧೫೦ ಪುಟಗಳನ್ನು ಹೊಂದಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶದ ಕಥೆಗಳನ್ನು ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.