ಬೂಬರಾಜ ಸಾಮ್ರಾಜ್ಯ
ಮುನ್ನುಡಿಯಲ್ಲಿ ಹೇಳಿದ ಹಾಗೆ ಇಲ್ಲಿ ಉಪನ್ಯಾಸಕ ಕೃಷ್ಣಚಂದ್ರ ಪ್ರಧಾನ ಪಾತ್ರ, ವೇಶ್ಯಾ ವಂಶ ಎನ್ನಲಾಗುವ ಗೇಟ್ ಭಾರತಿ ಪ್ರವೇಶಿಸಿ ಕಥೆ ಬೆಳೆಸುತ್ತಾಳೆ. ಆ ಕಾಲದ ವೇಶ್ಯಾ ಮನಸ್ಥಿತಿಯನ್ನು ಅರಿಯಲು ಗೇಟ್ ಭಾರತಿಯ ಮೂಲಕ ಸಂಶೋಧನೆಗೆ ತೊಡಗಿ ಭೂವರಾಹ ಪಾಂಡ್ಯನ ಕಥೆಯನ್ನು ಹೇಳುತ್ತಾ ಹೋಗುತ್ತಾರೆ.
ಸುಮಿತ್ರ ಹೆರಿಗೆಗೆಂದು ತವರುಮನೆಗೆ ಹೋಗಿ ಕೃಷ್ಣಚಂದ್ರ ಬ್ರಹ್ಮಚಾರಿ ಜೀವನಕ್ಕೆ ಮರಳಿದ್ದ, ಗೇಟ್ ಭಾರತಿಯ ಕುಟುಂಬಕ್ಕೂ ಹಾಗು ಬೂಬಾವರದ ಗಣ್ಯವ್ಯಕ್ತಿ ಪಟೇಲ್ ಗುಣಪಾಲ ಸೆಟ್ಟಿಯವರ ಕುಟುಂಬಕ್ಕೆ ಸಂಬಂಧ ಇದೆಯನ್ನುವುದನ್ನು ಆಧಾರವಾಗಿಟ್ಟುಕೊಂಡು ತನ್ನ ಪಿ.ಎಚ್.ಡಿ ಅಧ್ಯಯನ ಮಾಡಲು ಆಸಕ್ತನಾಗಿದ್ದ, ಆದರೆ ಪಾಂಡ್ಯ ರಾಜ್ಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಗೇಟ್ ಭಾರತಿಯ ವಿವಾಹ ವಿಚ್ಛೇದನ ಪ್ರಕರಣದಲ್ಲಿ ಪಾಂಡ್ಯ ರಾಜರ ಬಗ್ಗೆ ಏನಾದರೂ ಮಾಹಿತಿ ಸಿಗಬಹುದೆಂದು ಅವರ ಪ್ರಕರಣದಲ್ಲಿ ಆಸಕ್ತನಾಗಿದ್ದ, ಜೊತೆಗೆ ಅವರ ಪ್ರಕರಣ ತೀರ್ಪಿಗೆ ನ್ಯಾಯಾಧೀಶ ತಿಮ್ಮಪ್ಪ ಶೆಟ್ಟರನ್ನೂ ಭೇಟಿಯಾಗುವ ಕೆಲಸವಿತ್ತು. ಕೃಷ್ಣಚಂದ್ರ ಮರೋಡಿ ಪದವಿಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕನಾಗಿದ್ದ, ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನವನಾದರೂ, ತನ್ನ ಸಹೋದ್ಯೋಗಿ ರಂಜನ್ ಕುಮಾರ್ ಹಾಗು ಪ್ರಿನ್ಸಿಪಾಲ್ ಗುಂಜಣ್ಣನವರಿಗೆ ಈತನ ಮೇಲೆ ದ್ವೇಷ, ಆತನ ಪಿ.ಎಚ್.ಡಿ ಯನ್ನು ನಿಲ್ಲಿಸಲು ಹಲವಾರು ಕುತಂತ್ರಗಳನ್ನು ಮಾಡಿದ್ದಲ್ಲದೆ ಕೃಷ್ಣಚಂದ್ರನಿಗೆ ಕಿರುಕುಳಗಳನ್ನು ಕೊಡುತ್ತಿದ್ದರು, ಹೀಗೆ ಕಾಲೇಜಿನ ರಾಜಕೀಯ ದೃಷ್ಟಿಗೆ ಒಳಗಾದರೂ ಕೃಷ್ಣಚಂದ್ರ ಇಂತಹ ಸಂಕಷ್ಟ ಪರಿಸ್ತಿತಿಯಲ್ಲೂ ತನ್ನ ಅಧ್ಯಯನವನ್ನು ಮುಂದುವರೆಸುತ್ತಾನೆ.
ಬೂಬಾವರ ರಾಜ್ಯದ ಚಾರಿತ್ರಿಕ ಸನ್ನಿವೇಶ, ವಿದೇಶ ವ್ಯಾಪಾರ, ವೇಶ್ಯಾ ಪದ್ದತಿ, ಗುಲಾಮ ವ್ಯಾಪಾರ ಎಂಬ ಶೀರ್ಷಿಕೆ ಇಟ್ಟುಕೊಂಡು ಅಧ್ಯಯನ ಮುಂದುವರೆಸುತ್ತಾನೆ. ಬೂಬರಾಜ ಪಾಂಡ್ಯ ಅಥವಾ ಭೂವರಾಹ ಪಾಂಡ್ಯ ಎನ್ನುವ ತೌಳವ ಪಾಂಡ್ಯ ಅರಸನ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದು ಒಂದನೆ ವಿಷಯ ಹಾಗು ಬೂಬಾವರದಲ್ಲಿ ಗುಲಾಮಿ ಪದ್ಧತಿ, ಅದರಲ್ಲೂ ಸಹ ಹೆಣ್ಣುಮಕ್ಕಳನ್ನು ಮಾರುವ ಮಾರುಕಟ್ಟೆ ಇತ್ತೆನ್ನುವ ಮಾಹಿತಿ ಎರಡನೆಯ ವಿಷಯ, ಮೂರನೆಯದು ಈ ಸಾಮ್ರಾಜ್ಯವು ಒಂದು ವೇಶ್ಯಾ ಕೇಂದ್ರವಾಗಿತ್ತೆನ್ನುವುದು. ಹಾಗು ಭೂವರಾಹ ಪಾಂಡ್ಯ ಮತ್ತು ಚಂದ್ರಭಾಗಿ ದೈವಗಳಾಗಿ ಹೇಗೆ ಪರಿವರ್ತನೆಗೊಂಡರು ಎಂಬ ಈ ಎಲ್ಲಾ ವಿಷಯಗಳನ್ನು ಅಧ್ಯಯನ ಮಾಡುತ್ತಾನೆ. ಈತನಿಗೆ ದೇವರಾಜ ರಾಯರು ನೆರವಾಗುತ್ತಾರೆ. ಅವರು ನಿವೃತ್ತ ಪ್ರಾಥಮಿಕ ಶಾಲಾ ಮಾಸ್ಟರರು. ದೇವರಾಜ ರಾಯರು ಪಾಂಡ್ಯ ಪ್ರತಿಷ್ಠಾಪನ ಕಾವ್ಯದ ತಾಳೆಗರಿ ಕಟ್ಟನ್ನು ಓದಿ ಕೃಷ್ಣಚಂದ್ರರಿಗೆ ವಿವರಿಸುತ್ತಾ ಹೋಗುತ್ತಾರೆ.
ಭೂವರಾಹ ಪಾಂಡ್ಯನ ಮುಖ್ಯ ಆಸಕ್ತಿ ವ್ಯಾಪಾರದಲ್ಲಿ ಎಂಬುದು ಎಲ್ಲರಿಗೂ ತಿಳಿದಿರುತ್ತದೆ, ಆತನ ಆಳ್ವಿಕೆಯಲ್ಲಿ ವಿದೇಶಿ ವ್ಯಾಪಾರಸ್ಥರ ಹಡಗುಗಳನ್ನು ಅತ್ತ ಚೇರರ ಕಡೆಗೆ ಹೋಗದಂತೆ ಕಳಂಗಾಯಿ ಕುದುರಿನಲ್ಲಿ ಕುರುಂಬ ಕಡಲುಗಳ್ಳರನ್ನು ಸಾಕಿದ್ದನು. ಬೂಬಾವರದ ಮೂಲ ಹೆಸರು ನರವು, ನಂತರ ಅದು ಬಂದರಿನ ಹೆಸರಾಗಿ ಉಳಿಯಿತು, ಅದು ಅರಬ್ ದೇಶಗಳ ಜೊತೆಗೆ ವ್ಯಾಪಾರಕ್ಕೆ ಪ್ರಸಿದ್ಧವಾದ ಬಂದರು. ನರವು ಸ್ಥಳವನ್ನೇ ಭೂವರಾಹ ಪಾಂಡ್ಯನು ತನ್ನ ರಾಜಧಾನಿಯಾಗಿ ಮಾಡಿಕೊಂಡಿದ್ದನು. ಭೂವರಾಹಪುರದ ಚೆಲವೆಯಾದ ಹಾಗು ಕೋಶರರ ಹುಡುಗಿಯಾದ ಚಂದ್ರಭಾಗಿಗೆ ಪಾಂಡ್ಯರಾಜರು ಮರಣದಂಡನೆ ವಿಧಿಸುತ್ತಾರೆ, ಆಕೆಯನ್ನು ಪಡೆಯಲು ಹಲವು ಯೋಜನೆಗಳು ವಿಫಲವಾದಾಗ ರಾಜ ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ಒಮ್ಮೆ ಚಂದ್ರಭಾಗಿ ಕಾಮಿನೀ ನದಿಯಲ್ಲಿ ಸ್ನಾನಕ್ಕೆ ಹೋದಾಗ ಪಂಚವರ್ಣ ಮಾವಿನ ಹಣ್ಣೊಂದು ತೇಲಿ ಬರುತ್ತದೆ, ಅದು ಆಕೆ ಸೇವಿಸುತ್ತಾಳೆ ಆಗ ಆಕೆಗೆ ಅದು ರಾಜನ ಕಾವಲುಮರದ ಹಣ್ಣು ಎಂಬುದು ತಿಳಿದಿರಲಿಲ್ಲ, ತಿಳಿದಿದ್ದರೆ ಸೇವಿಸುತ್ತಿರಲಿಲ್ಲ, ಈ ಸುದ್ಧಿ ತಿಳಿದ ಭೂವರಾಹ ಪಾಂಡ್ಯನು ಆಕೆಯ ಮೇಲೆ ಸೇಡು ತೀರಿಸಿಕೊಳ್ಳಲು ಮರಣದಂಡನೆ ವಿಧಿಸುತ್ತಾನೆ. ಇತ್ತ ಕೋಶರರು (ಕೋಶರ ನನ್ನ, ಕುರುಂಬಿಲಯ್ಯ, ಈತನು ಕೋಶರ ಜಾತಿಯ ಶ್ರೀಮಂತ ವರ್ತಕ) ಚಂದ್ರಭಾಗಿಯನ್ನು ಬಿಡಿಸಲು ಹುಡುಗಿಯ ತೂಕದಷ್ಟು ಧನಕನಕ ಒಪ್ಪಿಸುತ್ತೇವೆಂದರೂ ರಾಜನು ಅದಕ್ಕೆ ಮರುಳಾಗದೆ ಮರಣದಂಡನೆಯನ್ನು ರದ್ದು ಮಾಡಲಿಲ್ಲ. ಆಕೆಗೆ ಮರಣದಂಡನೆಯಾಗುತ್ತದೆ, ಇತ್ತ ಕೋಶರರು ರಾಜನ ಮೇಲೆ ಸೇಡು ತೀರಿಸಿಕೊಳ್ಳು ಕಾಯುತ್ತಿರುತ್ತಾರೆ. ಕೆಲವು ದಿನಗಳಾದ ಮೇಲೆ ಇಬ್ಬರು ರಾವುತರು ರಾಜನ ಕಾವಲು ಮರವಿದ್ದ ಅರಮನೆಯ ಕೈತೋಟಕ್ಕೆ ಹೋಗಿ ಕಾವಲು ಭಟನ ತಲೆಯನ್ನು ಹಾರಿಸಿ ಮಾವಿನ ಮರದ ಬುಡಕ್ಕೆ ಕೊಡಲಿಗಳಿಂದ ಘಾಸಿಗೊಳಿಸಿ ಮರವನ್ನು ಉರುಳಿಸುತ್ತಾರೆ. ಈ ವಿಷಯವನ್ನು ತಿಳಿದ ರಾಜಪುರೋಹಿತರಾದ ಅಪ್ಪಣ್ಣ ಭಟ್ಟರು ಇನ್ನು ರಾಜ್ಯಕ್ಕೆ ಉಳಿಗಾಲವಿಲ್ಲವೆಂದು ರಾಜನ ನರ್ಮ ಸಚಿವನಾದ ವಾಮದೇವ ಹಾಗು ಪಾಂಡ್ಯನ ಸೇನಾಧಿಪತಿಯಾದ ಕುಂಜೆ ಕುಟ್ಟಿಗೆ ತಿಳಿಸುತ್ತಾರೆ. ಅದಕ್ಕೆ ಕೆಲವು ಪರಿಹಾರವನ್ನೂ ಸೂಚಿಸುತ್ತಾರೆ ಆದರೆ ಅವೆಲ್ಲವೂ ವಿಫಲವಾಗುತ್ತವೆ.
ಭೂವರಾಹ ಪಾಂಡ್ಯನ ಕೆಲವು ತಂತ್ರಗಾರಿಕೆಯ ವಿಜಯಗಳಿಂದ ಆತನ ಸಾಮ್ರಾಜ್ಯವು ಸಂಪದ್ಭರಿತವಾಗಿದ್ದಿತು, ಆತನು ಬಹಳ ಶಕ್ತಿವಂತನೆಂಬ ಕೀರ್ತಿಯನ್ನೂ ಪಡೆದಿದ್ದನು, ಕಾರಣ ಮೊದಲನೆಯದಾಗಿ ಕಳಂಗಾಯಿ ದ್ವೀಪದಲ್ಲಿ ವಾಸಿಸುತ್ತಿದ್ದ ಕುರುಂಬರೆಂಬ ಕಡಲ್ಗಳ್ಳರನ್ನು ಸೋಲಿಸಿ ತನ್ನ ಅಧೀನದಲ್ಲಿ ಇರಿಸಿಕೊಂಡದ್ದು, ಮಿಞಲಿ ಎಂಬುವನು ಕಡಲ್ಗಳ್ಳರ ನಾಯಕ, ಅಂತೂ ಕೆಲವು ಒಪ್ಪಂದಗಳಿಂದ ಮಿಞಲಿಯನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು ನಂತರ ಕಳಂಗಾಯಿ ದ್ವೀಪವನ್ನು ತನ್ನ ಅಧೀನದಲ್ಲಿಟ್ಟುಕೊಂಡನು. ಎರಡನೆಯದು ಯವನರಲ್ಲಿ ಅರಬರೆಂಬ ಪಂಗಡಕ್ಕೆ ಸೇರಿದ ನಕುಡ ಮೊದಲು ವ್ಯಾಪಾರಿಯಾಗಿ ಭಾರತ ದೇಶಕ್ಕೆ ಬಂದವನಾಗಿದ್ದು ಕಾಲಕ್ರಮೇಣ ವ್ಯಾಪಾರಕ್ಕಿಂತ ಹೆಚ್ಚಾಗಿ ದರೋಡೆ ಮಾಡುವುದರಲ್ಲಿ ಸಂತೋಷ ಕಂಡು ದುಷ್ಟನಾದನು, ಭೂವರಾಹ ಪಾಂಡ್ಯನು ಈ ನಕುಡನನ್ನು ಸೋಲಿಸಿ ನಿರ್ನಾಮ ಮಾಡುತ್ತಾನೆ. ಈ ಸುದ್ಧಿ ಇಡೀ ದಕ್ಷಿಣ ಭಾರತ ದೇಶಕ್ಕೆ ಹರಡಿ ಕೀರ್ತಿಯನ್ನು ಗಳಿಸುತ್ತಾನೆ.
ಚಂದ್ರಭಾಗಿಯ ಸಾವು ಭೂವರಾಹ ಅಂಗರಕ್ಷಕನಾಗಿದ್ದ ಕುಂಜಕ್ಕೋಡನ ಮೇಲೆ ತುಂಬಾ ಪರಿಣಾಮ ಬೀರಿತು, ಸಮಯ ನೋಡಿ ಭೂವರಾಹ ಪಾಂಡ್ಯನನ್ನು ಕೊಂದು ಪರಾರಿಯಾಗುತ್ತಾನೆ, ಪಾಂಡ್ಯರ ಬಲವು ಕುಗ್ಗುತ್ತದೆ. ಈ ಸನ್ನಿವೇಷವನ್ನೇ ಕಾಯುತ್ತಿದ್ದ ಕುಲಶೇಖರ ನಾರ್ಮುಡಿ ಚೇರನು ಭೂವರಾಹಪುರದ ಸೈನ್ಯವನ್ನು ಸೋಲಿಸಿ ತನ್ನ ರಾಜ್ಯವನ್ನಾಗಿ ಮಾಡಿ ಅಲ್ಲಿಂದ ಕಪ್ಪ ಪಡೆದುದಲ್ಲದೆ ಕಳಂಗಾಯಿ ಕುರುಂಬರನ್ನು ಮಟ್ಟಹಾಕಿ ಕಳಂಗಾಯ್ ಕೊಂಡ ನಾರ್ಮುಡಿ ಚೇರನ್ ಎಂಬ ಬಿರುದನ್ನು ಪಡೆಯುತ್ತಾನೆ. ಮುಂದೆ ಭೂವರಾಹ ಪಾಂಡ್ಯನ ಸಿಂಹಾಸನಕ್ಕೆ ಏರಿದವನು ತನ್ನ ಹಿರಿಯ ಪುತ್ರ ಮೂಲದೇವ ಆತನೇ ಪಸುಮುಸುಂಟು ಪಾಂಡ್ಯನೆಂಬ ಹೆಸರನ್ನು ಪಡೆಯುತ್ತಾನೆ. ಯುದ್ಧವಿದ್ಯೆ, ಇನ್ನು ಹಲವು ಶಾಸ್ತ್ರಗಳನ್ನು ಕಲಿಯದೆ ಬರಿ ಅಕ್ಕನ ಮಗಳು ಪೆಂಪಿನಿ ಸಂಗದಲ್ಲಿ ಕಾಲಕಳೆಯುತ್ತಿರುತ್ತಾನೆ. ಇದು ಕುಲಶೇಖರ ಚೇರನಿಗೆ ಪಾಂಡ್ಯ ರಾಜ್ಯವನ್ನು ತನ್ನ ಹತೋಟಿಯಲ್ಲಿಟ್ಟುಕೊಳ್ಳಲು ಒಳ್ಳೆಯ ಅವಕಾಶವಾಗುತ್ತದೆ. ಚೇರರು ಪಸುಮುಸುಂಟು ಪಾಂಡ್ಯನನ್ನು ಹಿಡಿದು ರಾಜ್ಯವನ್ನು ಆಕ್ರಮಣ ಮಾಡಿದಾಗ ಪಾಂಡ್ಯನು ಶಾಂತಿ ಸಂಧಾನವನ್ನು ಕೋರುತ್ತಾನೆ, ಚೇರನು ಕೆಲವು ಶರತ್ತುಗಳಿಂದ ರಾಜ್ಯವನ್ನು ಕಬಳಿಸುತ್ತಾನೆ, ರಾಜ್ಯದಲ್ಲಿ ಚೇರರ ಸೈನ್ಯ ಎಲ್ಲಿ ಬೇಕೀದರೂ ಸಂಚರಿಸಬಹುದು, ವರ್ಷಕ್ಕೆ ಲಕ್ಷ ವರಹಗಳನ್ನು ಕಪ್ಪವಾಗಿ ಕೊಡತಕ್ಕದ್ದು, ಕಳಂಗಾಯಿ ದ್ವೀಪ ಚೇರರ ಸೈನ್ಯಕ್ಕೆ ಒಳಪಟ್ಟದ್ದು ಹೀಗೆ ಶರತ್ತುಗಳಿಗೆ ಒಪ್ಪುತ್ತಾನೆ. ನೋಡು ನೋಡುತ್ತಿದ್ದಂತೆ ಭೂವರಾಹಪುರವು ಕುಸಿಯುತ್ತಾ ಹೋಯಿತು, ನಂತರ ಚೇರನ ಗಮನ ಕಾಮಿನಿ ನದಿಯ ಉತ್ತರದಲ್ಲಿದ್ದ ಕೋಶರರ ನಾಡುಗಳನ್ನು ಆಕ್ರಮಣ ಮಾಡಿ ಚೇರನಾಡನ್ನಾಗಿ ಪರಿವರ್ತಿಸಿದನು. ಹೀಗೆ ಕೋಶರರ ನಾಡನ್ನು, ಭೂವರಾಹ ಪುರವನ್ನು, ನರವು ಬಂದರನ್ನು ತನ್ನ ಹತೋಟಿಯಲ್ಲಿಟ್ಟುಕೊಂಡನು. ಈ ಮಂಡಲವನ್ನು ನಂತರ ನಡುಂಗಾಟ್ಟು ಮಂಡಲ ಎಂದು ಕರೆದನು. ನಂತರ ಬ್ರಿಟೀಷರ ಕಾಲದಲ್ಲಿ ಅದು ನಡು ಪಟ್ಟಣವಾಗಿ ಈಗ ಪಟ್ಟಣವಾಗಿ ಉಳಿದಿದೆ. ಹೀಗೆ ಕೃಷ್ಣಚಂದ್ರನು ಪಾಂಡ್ಯ ಪ್ರತಿಷ್ಠಾಪನ ಕಾವ್ಯದ ಬಗ್ಗೆ ಹಲವು ಮಾಹಿತಿಗಳನ್ನು ಸಂಗ್ರಹಿಸುತ್ತಾನೆ. ಬೂಬಾವರದ ಪ್ರಧಾನ ದೈವ ಬೂಬರಾಜ ಮತ್ತು ಚಂದ್ರಮ್ಮ, ಮತ್ತು ಬಗ್ಗ ಭೂತಗಳು ಚುಂಯ, ಬುಂಯ ಎಂಬ ಬೋವಿಕಲ್ಲುಗಳ ಬಗ್ಗೆ ಮಾಹಿತಿ ಪಡೆಯುತ್ತಾನೆ. ಬೂಬಾವರದ ದೈವಗಳ ಬಗ್ಗೆ ತಿಳಿದು ಅದನ್ನು ತನ್ನ ಕೊನೆಯ ಅಧ್ಯಾಯದಲ್ಲಿ ಹಾಕಬೇಕೆಂದು ನಿರ್ಧರಿಸಿದಾಗ ಆತನ ಜೀವನದಲ್ಲಿ ಹಲವಾರು ಘಟನೆಗಳು ನಡೆಯುತ್ತವೆ.
ಸುಮಿತ್ರ ಹೆಣ್ಣು ಮಗುವಿಗೆ ಜನ್ಮನೀಡಿ ಬೂಬಾವರಕ್ಕೆ ಬಂದಿರುತ್ತಾಳೆ, ಅದೇ ಸಮಯದಲ್ಲಿ ಕೃಷ್ಣಚಂದ್ರ ಸಹೋದ್ಯೋಗಿ ರಂಜನ್ ಕುಮಾರು ಹಾಗು ವಿರಾಗ್ ಸನ್ನಿಧಿ ಎಂಬ ಕೃಷ್ಣಚಂದ್ರನ ವಿದ್ಯಾರ್ಥಿನಿಗೂ ಹಾಗು ಕೃಷ್ಣಚಂದ್ರನಿಗೆ ಅಕ್ರಮ ಸಂಬಂಧ ಇರುವುದಾಗಿ ಸುದ್ಧಿ ಹಬ್ಬಿಸುತ್ತಾರೆ. ಒಮ್ಮೆ ನೋಟ್ಸ್ ಕೇಳಲು ಸನ್ನಿಧಿ ಕೃಷ್ಣಚಂದ್ರನ ಮನೆಗೆ ಹೋದಾಗ ಇವರಿಗರಿವಿಲ್ಲದೇ ಅವರಿಬ್ಬರ ಫೋಟೋಗಳನ್ನು ತೆಗೆದು ಹಲವರಿಗೆ ಕಳುಹಿಸಿದಾಗ ಮಾನಸಿಕವಾಗಿ ಸನ್ನಿಧಿ ಹಾಗು ಕೃಷ್ಣಚಂದ್ರ ನೊಂದುತ್ತಾರೆ. ಇದೆಲ್ಲವೂ ರಂಜನ ಕುಮಾರ, ವಿರಾಗ್, ಗುಂಜಣ್ಣನವರ ಕಿತಾಪತಿಯೆಂದೆ ತಿಳಿದ ಕೃಷ್ಣಚಂದ್ರ ಧೈರ್ಯದಿಂದ ಹಾಗು ತನಗೆ ನೆರವಾದ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀನಿವಾಸ ಕುಂಜತ್ತೂರರ ಸಹಾಯದಿಂದ ಹೋರಾಟ ಮಾಡುತ್ತಾನೆ. ಇದೇ ಸಮಯದಲ್ಲಿ ಸನ್ನಿಧಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ, ಕುಂಜತ್ತೂರರ ಆದೇಶದಂತೆ ಕೆಲವು ದಿನ ರಜೆಯಲ್ಲಿದ್ದು ತನಗೆ ಮಾನಸಿಕವಾಗಿ ಕಿರುಕುಳ ಕೊಡುತ್ತಿರುವವರ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಾನೆ, ಆ ಬಿಡುವಿನ ಸಮಯದಲ್ಲಿ ತನ್ನ ಸಂಶೋಧನೆಯ ಕೊನೆಯ ಅಧ್ಯಾಯವನ್ನು ಮುಗಿಸುವುದರಲ್ಲಿ ತಲ್ಲೀನನಾಗುತ್ತಾನೆ.
7ನೆಯ ಶತಮಾನದ ಮಧ್ಯಭಾಗದಲ್ಲಿ ಪುಸುಮುಸುಂಟು ಪಾಂಡ್ಯನ ಕಾಲದಲ್ಲಿ ಬೂಬಾವರದಲ್ಲಿ ಗುಲಾಮ ಮಾರುಕಟ್ಟೆ ಪ್ರಾರಂಭವಾಯಿತೆನ್ನುವುದು ಕೃಷ್ಣಚಂದ್ರನ ಸಂಶೋಧನೆಯ ಮುಖ್ಯ ಅಂಶ. ವೇಶ್ಯಾ ಪದ್ಧತಿಗೆ ದೇವದಾಸಿ ಪದ್ಧತಿಯೆ ಮೂಲ ಎನ್ನುವ ಅಭಿಪ್ರಾಯಕ್ಕೆ ತನ್ನ ಸಂಶೋಧನೆಯಿಂದ ಉತ್ತರ ಕಂಡುಕೊಳ್ಳುತ್ತಾನೆ. ವೇಶ್ಯಾ ಪದ್ಧತಿಯ ಜೊತೆಗೆ ಗುಲಾಮ ಪದ್ಧತಿಯ ಕುರಿತೂ ಹೇಳುತ್ತಾನೆ, ಕುಲಶೇಖರ ನಾರ್ಮುಡಿ ಚೇರನು ಕಳ್ಳಕಾಕರನ್ನು ಹಿಡಿದು ತರಿಸಿ ವಿದೇಶೀ ವರ್ತಕರಿಗೆ ಗುಲಾಮರನ್ನಾಗಿ ಮಾರತೊಡಗಿದ್ದೆ ಬೂಬಾವರದಲ್ಲಿ ಗುಲಾಮ ವ್ಯಾಪಾರ ಬೆಳೆಯುತ್ತಾ ಹೋಗುತ್ತದೆ. ಇದೇ ಸಮಯದಲ್ಲಿ ಕೃಷ್ಣಚಂದ್ರ ದೈವಗಳ ಕುರಿತೂ ಅಧ್ಯಯನ ನಡೆಸುತ್ತಾನೆ. ಪುಸುಮುಸುಂಟು ಪಾಂಡ್ಯನ ಮೇಲೆ ಆವಾಹನೆಯಾಗುತ್ತಿರುವುದು ಭೂವರಾಹ ಪಾಂಡ್ಯನದೆಂದು ತಿಳಿದಾಗ ಅಪ್ಪಣ್ಣ ಭಟ್ಟರು ಪಾಂಡ್ಯನ ನರ್ಮ ಸಚಿವನಾದ ವಾಮದೇವನಿಗೆ ಆ ದೈವಕ್ಕೆ ಒಂದು ದೇವಸ್ಥಾನ ನಿರ್ಮಿಸಬೇಕಾಗಿ ಹಾಗು ಭೂವರಾಹ ದೈವದ ಮುಖ ಊರನ್ನು ನೋಡುವಂತಿರುವುದು ಬೇಡ, ಸಮುದ್ರ ಬದಿಯಲ್ಲಿ ಸಮುದ್ರ ನೋಡುವಂತೆ ಪ್ರತಿಷ್ಠಾಪನೆ ಮಾಡಬೇಕೆಂದು ಹೇಳುತ್ತಾರೆ. ಅದರ ಜೊತೆ ಚಂದ್ರಮ್ಮನ ಹಾಗು ಚುಂಯ ಬುಂಯರ ಕೆತ್ತನೆಗಳನ್ನು ನಿರ್ಮಿಸುವ ಹಾಗು ಅದಕ್ಕೆ ಕಾರಣಗಳನ್ನೂ ವಿವರಿಸುತ್ತಾನೆ. ಇತ್ತ ಹೋರಾಟದಲ್ಲಿ ಕೃಷ್ಣಚಂದ್ರನಿಗೆ ನ್ಯಾಯ ದೊರಕಿ ರಂಜನ್ ಕುಮಾರ್ ಅರೆಷ್ಟ್ ಆಗುತ್ತಾರೆ. ತನ್ನ ಸಂಶೋಧನೆ ಪರಿಸಮಾಪ್ತಿಯಾದಲ್ಲಿ ಭೂವರಾಹ ಪಾಂಡ್ಯನ ಚರಿತ್ರೆಯ ಕುರಿತು ಪ್ರಕಟಿಸಬೇಕೋ ಇಲ್ಲವೋ ಎನ್ನುವುದನ್ನು ದೈವವೇ ನಿರ್ಧರಿಸಬೇಕೆಂದು ವಿಜ್ಞಾಪನೆ ಸಲ್ಲಿಸಿದ್ದ ಲೇಖಕನೊಬ್ಬ ಅದರ ಒಪ್ಪಿಗೆಗಾಗಿ ಕಾಣಿಕೆ ಹಿಡಿದು ನಿಂತಿದ್ದ ಆ ದೃಶ್ಯದ ಫೋಟೋ ತೆಗದಿದ್ದರೆ ಮುಂದೆ ಎಲ್ಲಾ ಕಾಲದ, ಎಲ್ಲಾ ದೇಶಗಳ ಜನರು ನೋಡಿ ಸಂತೋಷಪಡಬಹುದಿತ್ತು ಎನ್ನುವಲ್ಲಿಗೆ ಮುಕ್ತಾಯವಾಗುತ್ತದೆ.
ಮುನ್ನುಡಿಯಲ್ಲಿ ಹೇಳಿದ ಹಾಗೆ ತನ್ನ ರಾಜ್ಯದ ಮೇಲೆ ದಾಳಿ ಮಾಡಲು ಬರುವ ನಕುಡನನ್ನು ತಂತ್ರಗಾರನು, ಶೂರನೂ ಆದ ಭೂವರಾಹ ಪಾಂಡ್ಯ ರಾಜನು ಸೋಲಿಸಿ ನಿರ್ಣಾಮ ಮಾಡುತ್ತಾನೆ, ಅದೇ ರೀತಿ ಕೃಷ್ಣಚಂದ್ರನಿಗೆ ಅನ್ಯಾಯವೆಸಗಿದ್ದ ರಂಜನ್ ಕುಮಾರ್ ಎಂಬ ಸಹೋದ್ಯೋಗಿಗೆ ಬುದ್ಧಿ ಕಲಿಸುತ್ತಾನೆ. ಅಂದರೆ ಆ ಕಾಲದ ಮನುಷ್ಯರ ಮನಸ್ಥಿತಿಯನ್ನು ಈ ಕಾಲಕ್ಕೆ ಹೋಲಿಸುತ್ತಾರೆ. ಹಾಗೆ ತನಗರಿವಿಲ್ಲದೆಯೆ ಹಣ್ಣು ಸೇವಿಸಿ ಮರಣದಂಡನೆಗೀಡಾದ ಆಗಿನ ಚಂದ್ರಭಾಗಿಯ ಕಥೆಯೂ ಹಾಗು ತನ್ನ ತಪ್ಪಿಲ್ಲದಿದ್ದರೂ ಸನ್ನಿಧಿಯು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ, ಚಂದ್ರಭಾಗಿಯ ಸಾವು ಸನ್ನಿಧಿಯ ಸಾವಿಗೆ ಹೋಲಿಕೆಯಾಗುತ್ತದೆ, ಇಲ್ಲಿ ಇಬ್ಬರೂ ತಪ್ಪಿತಸ್ತರಲ್ಲ. ಹೀಗೆ ಹಲವು ಪ್ರಸಂಗಗಳನ್ನು ಲೇಖಕರು ಅತ್ಯದ್ಭುಚವಾಗಿ ಚಿತ್ರಿಸಿದ್ದಾರೆ.
- ಕಾರ್ತಿಕೇಯ, ಬೆಂಗಳೂರು