ಬೂಶ್ ಮಹಾಶಯನ ಆದರ್ಶ ಅನುಕರಣೀಯ

ಬೂಶ್ ಮಹಾಶಯನ ಆದರ್ಶ ಅನುಕರಣೀಯ

ಬರಹ

(ನಗೆ ನಗಾರಿ ಉದ್ಯಮ ವಾರ್ತೆ)


 

ಜಗತ್ತಿನ ಶ್ರೀಮಂತ ರಾಷ್ಟ್ರಗಳೆಲ್ಲಾ ಆರ್ಥಿಕ ಕುಸಿತದ ಭೂತದಿಂದ ನರಳುತ್ತಿರುವಾಗ, ಎಲ್ಲಾ ಕಂಪೆನಿಗಳು ತಮಗಾಗುತ್ತಿರುವ ನಷ್ಟವನ್ನು ತಪ್ಪಿಸುವುದಕ್ಕಾಗಿ ಒಬ್ಬ ಉದ್ಯೋಗಿ ಒಬ್ಬ ಮನುಷ್ಯನ ಆಹಾರವನ್ನು ಮಾತ್ರ ತಿನ್ನಬೇಕು, ಒಬ್ಬಳು ಕೇವಲ ನಾಲ್ಕು ಪೂರ್ತಿ ಊಟಗಳಿಗಾಗುವಷ್ಟು ಖರ್ಚನ್ನು ತನ್ನ ಮೇಕಪ್‌ಗಳಿಗಾಗಿ ವಿನಿಯೋಗಿಸಬೇಕು, ವಾರಕ್ಕೆ ಒಂದೇ ಬಾರಿ ದುಬಾರಿ ಹೊಟೇಲಿನಲ್ಲಿ ಊಟ ಮಾಡಬೇಕು, ವಾರಕ್ಕೆ ಎರಡೇ ಬಾರಿ ಗುಂಡು ಪಾರ್ಟಿ ಇಟ್ಟುಕೊಳ್ಳಬೇಕು, ಹೆಚ್ಚೆಂದರೆ ವಾರಕ್ಕೆ ಮೂರು ಸಿನೆಮಾಗಳನ್ನು ಮಲ್ಟಿಪ್ಲೆಕ್ಸುಗಳಲ್ಲಿ ನೋಡಬೇಕು, ಮನೆಕೆಲಸಕ್ಕೆ ಗರಿಷ್ಠ ಇಬ್ಬರನ್ನು ನೇಮಿಸಿಕೊಳ್ಳಬಹುದು, ಒಂದಿಡೀ ಮಧ್ಯಮವರ್ಗದ ಒಂದು ತಿಂಗಳ ಬಜೆಟ್ಟನ್ನು ಫರ್ ಫೂಮಿಗಳಿಗಾಗಿ ಖರ್ಚು ಮಾಡುವುದನ್ನು ಹತ್ತಿಕ್ಕಬೇಕು  ಎಂದು ಕಟ್ಟಳೆಯನ್ನು ವಿಧಿಸುತ್ತಿದೆ. ಯುದ್ಧಕಾಲದಲ್ಲಿ
ಭೀಕರ ಆಹಾರ ಕೊರತೆ ಸಮಸ್ಯೆ ಉದ್ಭವಿಸಿದಾಗ ಅಂದಿನ ಪ್ರಧಾನಿ ಲಾಲ್ ಬಹದ್ದೂರ್
ಶಾಸ್ತ್ರಿಯವರು ದೇಶದ ಜನರಿಗೆ ಒಂದು ಹೊತ್ತಿನ ಊಟವನ್ನು ಬಿಡುವಂತೆ ಮನವಿ ಮಾಡಿದಾಗ
ದೇಶದ ಜನತೆ ಸ್ಪಂದಿಸಿದ ಹಾಗೆಯೇ ಈ ಮೊದಲು ಉಲ್ಲೇಖಿಸಿರುವ ನಿಬಂಧನೆಗಳಿಗೆ  ಕಂಪೆನಿಗಳ
ಉದ್ಯೋಗಿಗಳು ಸ್ಪಂದಿಸುತ್ತಿದ್ದಾರೆ
.

 

 

ತಾವು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತೆ ಎಂದು ನಂಬಿಕೊಂಡಿದ್ದ ಉದ್ಯಮಪತಿಗಳು, ಬಿಸಿನೆಸ್ ಟೈಕೂನುಗಳು ಕಂಡಕಂಡದ್ದನ್ನೆಲ್ಲಾ ಮುಟ್ಟಿ ಮುಟ್ಟಿ ತಡಕಾಡಿ ಕೈ ನೋವು ಮಾಡಿಕೊಂಡರೂ ಕಿಲುಬು ಕಾಸು ಹುಟ್ಟುತ್ತಿಲ್ಲ. ಇದಕ್ಕೆಲ್ಲಾ
ಭಾರತದಂತಹ ಆಸೆಬುರುಕ ದೇಶಗಳ ಜನರು ಹೆಚ್ಚೆಚ್ಚು ಹೊಟ್ಟೆ ಬಾಕರಾಗಿದ್ದೇ ಕಾರಣ ಎಂದು
ಅಮೇರಿಕಾದ ಅಧ್ಯಕ್ಷರು ಖಾಸಗಿಯಾಗಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪದವಿಗಾಗಿ ಬೆಂಗಳೂರು
ವಿವಿಗೆ ಅರ್ಜಿಗುಜರಾಯಿಸಿದ್ದು ಹಳೆಯ ಸುದ್ದಿ
.

 

bush-booted

 

 

ಈ ಬಗೆಯ ಭೀಕರ ಆರ್ಥಿಕ ದುಸ್ಥಿತಿಯ ಸಂದರ್ಭದಲ್ಲಿ ಎಲ್ಲಾ ಕೈಗಾರಿಕೆಗಳು ನಷ್ಟವನ್ನೇ ಬೋನಸ್ಸಾಗಿ ಪಡೆಯುತ್ತಿರುವಾಗ ಉದ್ಯಮಪತಿಗಳು, ಕಂಟ್ರ್ಯಾಕ್ಟರುಗಳುಗಳಿಂದ
ಪ್ರಸಾದವನ್ನು ಪಡೆದು ತಮ್ಮ ಉದರ ಪೋಷಣೆ ಮಾಡುವ ರಾಜಕಾರಣಿಗಳು ತಮ್ಮ ಸ್ವಂತ
ವೇತನದಲ್ಲಿಯೇ ಉಂಡು ಉಪವಾಸ ಮಲಗಬೇಕಾದ ಸ್ಥಿತಿ ಬಂದಿದೆ
. ತಮ್ಮ ಆರ್ಥಿಕ ಸುಭದ್ರತೆಗಾಗಿ ತಾವು ಕೈಗಾರಿಕೋದ್ಯಮಿಗಳನ್ನು, ಲಾಬಿಕೋರರನ್ನು, ರಿಯಲ್ ಎಸ್ಟೇಟ್ ದಂಧೆಯವರನ್ನು, ಗಣಿ ಧಣಿಗಳನ್ನು, ಚಿಟ್ ಫಂಡ್ಸ್ ಶೂರರನ್ನು, ಲಾಟರಿ ವೀರರನ್ನು, ಲಿಕ್ಕರ್ ದೊರೆಗಳನ್ನು ಅವಲಂಬಿಸುವ ಬದಲು ಸ್ವಾವಲಂಬಿಗಳಾಗಬೇಕು ಎಂದು ರಾಜಕಾರಣಿಗಳಿಗೆ ಮನವರಿಕೆಯಾಗತೊಡಗಿದೆ. ಹೀಗಾಗಿ ದೇಶದ ಎಲ್ಲಾ ರಾಜಕಾರಣಿಗಳು ಭಯೋತ್ಪಾದಕ ದಾಳಿ ನಡೆದಾಗಲೂ ತೋರಿಸಲು ಹಿಂದು ಮುಂದು ನೋಡಿದ ಒಗ್ಗಟ್ಟನ್ನು ತೋರಿ ಪಕ್ಷಭೇದ ಮರೆತು ಸಭೆ ಸೇರಿದರು. ಆ ಸಭೆಯಲ್ಲಿ ತಮ್ಮ ಸ್ವಾವಲಂಬನೆಗೆ ರಾಜಕಾರಣಿಗಳು ಏನು ಮಾಡಬೇಕು, ಯಾವ ವ್ಯಾಪಾರವನ್ನು ಶುರು ಮಾಡುವುದು ಪ್ರಸ್ತುತ ಸಂದರ್ಭದಲ್ಲಿ ಲಾಭದಾಯಕ ಎಂದು ಸಮಾಲೋಚನೆ ನಡೆಸಿದರು.

 


 

ನಕಲಿ
ಗುರುತು ಚೀಟಿ ಬಳಸಿ ಸಮಾವೇಶದ ಪ್ರವೇಶ ಗಿಟ್ಟಿಸಿಕೊಂಡಿದ್ದ ನಗೆ ಸಾಮ್ರಾಟರು ಸಭೆಯಲ್ಲಿ
ಯಾರೊಬ್ಬರೂ ಒಂದೂ ಐಡಿಯಾ ಕೊಡದೆ ತೆಪ್ಪಗೆ ಕುಳಿತಿದ್ದನ್ನು ಕಂಡು ಬೇಸರ ಗೊಂಡರು
. ಇದ್ದುದರಲ್ಲಿ ಒಬ್ಬ ಪ್ರಾಮಾಣಿಕಮಂತ್ರಿಯೊಬ್ಬರು ಮಾತನಾಡಿ, ‘ತಲೆ ಉಪಯೋಗಿಸುವ ಕೆಲಸವನ್ನು ನಾವು ಬಿಟ್ಟು ತುಂಬಾ ವರ್ಷಗಳಾಗಿವೆ. ಮೆದುಳಿನ ಕೆಲಸವನ್ನೆಲ್ಲಾ ನಮ್ಮ ಸೆಕ್ರಟರಿಗಳಿಗೆ ವರ್ಗಾಯಿಸಿರುವುದರಿಂದ ನಮ್ಮ ಮೆದುಳುಗಳು ಕೆಲಸ ಮಾಡುವುದಕ್ಕೆ ಸ್ವಲ್ಪ ಕಷ್ಟ ಪಡುತ್ತಿವೆಎಂದು ಆತ್ಮನಿವೇದನೆ ಮಾಡಿಕೊಂಡರು. ಮತ್ತೊಂದು ಅರ್ಧ ಗಂಟೆ ಕಳೆದರೂ ಎರಡು ಗ್ಯಾಲನ್ ಕಾಫಿ, ಒಂದು ಟನ್ನು ಬಿಸ್ಕೇಟುಗಳು ಕರಗಿದವೇ ವಿನಃ ನಮ್ಮ ಶಾಸಕರ ಮೆದುಳುಗಳು ಸ್ಟಾರ್ಟ್ ಆಗಲಿಲ್ಲ.


 

ಇದೇ ಸಂದರ್ಭವನ್ನು ಬಳಸಿಕೊಂಡು ನಗೆ ಸಾಮ್ರಾಟರು ತಮ್ಮ ಆಲೋಚನೆಯನ್ನು ಸಭೆಯಲ್ಲಿ ಮಂಡಿಸಿದರು. ‘ನಾನು ಈ ಕ್ಷೇತ್ರಕ್ಕೆ ಹೊಸಬ ಹೀಗಾಗಿ ನನ್ನ ಪರಿಚಯ ನಿಮಗೆ ಇರಲಾರದು. ನಾನಿನ್ನೂ ಈ ಫೀಲ್ಡಿಗೆ ಹೊಸಬನಾದ್ದರಿಂದ ನನ್ನ ಮೆದುಳು ಇನ್ನೂ ಕೆಲಸ ಮಾಡುತ್ತಿದೆ. ನಾನು ನಿಮ್ಮೆಲ್ಲರ ಆದರ್ಶ, ಮಾರ್ಗದರ್ಶನದಿಂದ ಅತಿ ಶೀಘ್ರದಲ್ಲಿ ಅದು ಕೆಲಸ ನಿಲ್ಲಿಸುವಂತೆ ಮಾಡಲು ಪ್ರಯತ್ನಿಸುವೆ. ಸದ್ಯಕ್ಕೆ ಈ ಸಮಸ್ಯೆಗೆ ಒಂದು ಪರಿಹಾರ ನನ್ನ ಬಳಿ ಇದೆ.

 

ಮೊದಲೇ ಹೇಳಿದ ಹಾಗೆ ನಾನಿನ್ನೂ ಅಮೆಚೂರ್ ಆದ್ದರಿಂದ ದಿನ ಪತ್ರಿಕೆಯನ್ನು ಓದುವ ಕೆಟ್ಟ ಅಭ್ಯಾಸವನ್ನಿನ್ನೂ ಇರಿಸಿಕೊಂಡಿದ್ದೇನೆ. ಇರಾಕಿನಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪನೆ ಮಾಡುವುದಕ್ಕೆ, ಸಮೂಹ ನಾಶ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವುದಕ್ಕೆ ಸೈನ್ಯವನ್ನು ನುಗ್ಗಿಸಿ ಅವರೆಡನ್ನೂ ಮಾಡುವುದರಲ್ಲಿ ಯಶಸ್ವಿಯಾಗಿ ವಿಫಲರಾಗಿರುವ,
ನಿವೃತ್ತಿಯ ಅಂಚಿನಲ್ಲಿರುವ ಅಮೇರಿಕಾದ  ಅಧ್ಯಕ್ಷ ಜಾರ್ಜ್ ಬೂಶ್ ತಮ್ಮ ಅಧಿಕಾರವಧಿ
ಮುಗಿಯುವ ಮೊದಲು ತಾವು ಉದ್ಧಾರ ಮಾಡಿದ ದೇಶವನ್ನೊಮ್ಮೆ ನೋಡಿಕೊಂಡು ಹೋಗಲು ಇರಾಕಿಗೆ
ಭೇಟಿ ನೀಡಿದ್ದರು
. ತಾವು
ಮಹದುಪಕಾರ ಮಾಡಿದ ದೇಶದ ಮಧ್ಯಮದ ಎದುರು ಬಡಾಯಿ ಕೊಚ್ಚಿಕೊಳ್ಳುತ್ತಾ ನಿಮ್ಮನ್ನು ಕ್ರೂರ
ಸರ್ವಾಧಿಕಾರಿಯಿಂದ ರಕ್ಷಿಸಿದ ನನಗೆ ಏನೆಂದು ಬಿರುದು ಕೊಡುವಿರಿ
, ನನಗೆ ಏನು ಬಹುಮಾನ ಕೊಡುವಿರಿ ಎಂದು ಕೇಳಿದಾಗ ಇರಾಕಿ ಪತ್ರಕರ್ತನೊಬ್ಬ ಅತ್ಯಂತ ಕಳಕಳಿಯಿಂದ ಎದ್ದು ನಿಂತು ಬೂಶ್ ಮಹಾಶಯನಿಗೆ ನಾಯಿಎಂಬ ಬಿರುದನ್ನು ನೀಡಿ, ತನ್ನ ಕಾಲುಗಳ ಬೂಟುಗಳನ್ನು ಬಿಚ್ಚಿ ಬಹುಮಾನವಾಗಿ ಅಧ್ಯಕ್ಷರೆಡೆಗೆ ಎಸೆದ. ಚಪ್ಪಲಿ ಹಾರ ಅವಮಾನದ ಸಂಕೇತವಲ್ಲ, ಅದು
ಶ್ರಮಿಕನ ಬೆವರಿನ ಸಂಕೇತ ಎಂದು ನಮ್ಮ ನಾಡಿನ ಮಠಾಧೀಶರು ನೀಡಿದ ಹೇಳಿಕೆಯನ್ನು ಕದ್ದು
ಕೇಳಿಸಿಕೊಂಡಿದ್ದ ಬೂಶ್ ಬೂಟು ಎಸೆಯುವುದರಿಂದ ನನಗೆ ಅವಮಾನವಾಗಲಿಲ್ಲ
. ಅಂದಹಾಗೆ ಬೂಟಿನ ನಂಬರು ಹತ್ತು ಎಂದು ಹೇಳಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಆದರೆ
ವರದಿಯಾಗದ ಅಂಶವೆಂದರೆ ಆ ಬೂಟನ್ನು ಅವರು ಹರಾಜಿಗೆ ಇಟ್ಟು ಹರಾಜಿನಲ್ಲಿ ಬಂದ ಹಣದಿಂದ
ಅಮೇರಿಕಾದ ಮತ್ತೊಂದು ಆಟೋ ಮೊಬೈಲ್ ಕಂಪೆನಿಯನ್ನು ಬೇಲ್ ಔಟ್ ಮಾಡಲಿದ್ದಾರೆ
. ಇದು ನಮ್ಮ ನಾಡಿನ ಹೆಮ್ಮೆಯ ಪತ್ರಿಕೆ ನಗೆ ನಗಾರಿ ಡಾಟ್ ಕಾಮ್ ಪತ್ತೆ ಹಚ್ಚಿದೆ. (ಇದೀಗ ತಾನೆ ಬಂದ ಸುದ್ದಿಯ ಪ್ರಕಾರ ಸೌದಿಯ ಧನಿಕನೊಬ್ಬ ಆ ಬೂಟಿಗೆ ಹತ್ತು ಮಿಲಿಯನ್ ಡಾಲರ್ ಬಿಡ್ ಮಾಡಿದ್ದಾನೆ)


 

ಎಲ್ಲದರಲ್ಲೂ ಮೇಲ್ಪಂಕ್ತಿಯನ್ನು ಹಾಕಿಕೊಡುವ ಅಮೇರಿಕಾ ನಮಗೆ ಈ ವಿಚಾರದಲ್ಲೂ ಮಾದರಿಯಾಗಬೇಕು. ನಾವು ರಾಜಕಾರಣಿಗಳು ಸ್ವಾವಲಂಬಿಗಳಾಗಲು ಬೂಟ್ಸ್, ಚಪ್ಪಲಿಗಳ ವ್ಯಾಪಾರವನ್ನು ಶುರು ಮಾಡಬೇಕು. ಇದು ಅತ್ಯಂತ ಲಾಭದಾಯಕ ಹಾಗೂ ಸುಲಭ ಉದ್ಯಮವಾಗುವ ಎಲ್ಲಾ ಅಂಶಗಳನ್ನೂ ಹೊಂದಿದೆ. ಇದಕ್ಕೆ ಬೇರೆ ಉದ್ಯಮಗಳಿಗೆ ಬೇಕಾದಂತೆ ಯಾವುದೇ ಬಂಡವಾಳದ ಅಗತ್ಯವಿಲ್ಲ. ಕಾರ್ಖಾನೆ ಸ್ಥಾಪಿಸುವುದಕ್ಕಾಗಿ ಜಾಗ ಕೊಡಿ ಎಂದು ಯಾರ ಮುಂದೂ ಕೈಚಾಚಬೇಕಿಲ್ಲ. ನಾವೆಲ್ಲಾ ರಾಜಕಾರಣಿಗಳು ನಮ್ಮ ನಮ್ಮ ಮತ ಕ್ಷೇತ್ರಕ್ಕೆ ಹೋಗಿ ನಮ್ಮ ಬೂಶ್ ಮಹಾಶಯರು ಹೇಳಿದಂತೆ ನಾವು ನಿಮಗೆ ಮಾಡಿರುವ ಸೇವೆಗೆ ನಮಗೆ ಏನೆಂದು ಬಿರುದು ಕೊಡುವಿರಿ? ಏನು ಬಹುಮಾನ ಕೊಡುವಿರಿ?’ ಎಂದು ಕೇಳಬೇಕು. ಆಗ ಜನರು ಪೂರ್ಣ ಮನಸ್ಸಿನಿಂದ ಕೊಡುವ ಬೂಟು, ಚಪ್ಪಲಿಗಳ ಬಹುಮಾನವನ್ನು ನಾವು ಬಂಡವಾಳವಾಗಿಟ್ಟುಕೊಂಡು ಉದ್ಯಮವನ್ನು ನಡೆಸಬಹುದು. ಏನಂತೀರಿ?’ ಎಂದರು.

 

 

ಒಂದು ಕ್ಷಣ ಕಿಕ್ಕಿರಿದ ಸಭಾಂಗಣವನ್ನು ದಿಟ್ಟಿಸಿದ ಸಾಮ್ರಾಟರು ಎದೆಯುಬ್ಬಿಸಿ, ‘ಈ ಸಲಹೆಯನ್ನು ನೀಡಿದ್ದಕ್ಕೆ ನನಗೆ ಯಾವ ಬಹುಮಾನ ಕೊಡುವಿರಿ…’ ಎಂದು ಕೇಳಿದರು ಅಷ್ಟೇ!


 

ಈಗ ಸಾಮ್ರಾಟರು ಮಾಗಡಿ ರಸ್ತೆಯ ಬದಿಯಲ್ಲಿ ಬಹುದೊಡ್ಡ ಶೂ, ಚಪ್ಪಲಿ ಶೋರೂಂ ಇಟ್ಟುಕೊಂಡಿದ್ದಾರೆ.