ಬೂಸ್ಟರ್ ಡೋಸ್ ಲಸಿಕೆ ಅಗ್ಗದ ದರದಲ್ಲಿ ದೊರೆಯಲಿ
ದೇಶದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಸಾರ್ವಕಾಲಿಕ ಕನಿಷ್ಟ ಮಟ್ಟಕ್ಕೆ ಕುಸಿದ್ದಿದ್ದರೂ, ಹೊಸ ತಳಿಯ ಪ್ರವೇಶದಿಂದ ಯಾವುದೇ ಸಂದರ್ಭದಲ್ಲೂ ಕೋವಿಡ್ ದಿಢೀರನೆ ಏರಿಕೆಯಾಗಬಹುದೆಂಬ ಆತಂಕವಂತೂ ಇದ್ದೇ ಇದೆ. ‘ಎಕ್ ಇ' ಎಂಬ ಹೊಸ ರೂಪಾಂತರ ತಳಿಯ ಆತಂಕ, ಚೀನಾದಲ್ಲಿ ಹಠಾತ್ತನೆ ಸೋಂಕು ಪ್ರಕರಣಗಳು ಏರಿಕೆಯಾಗಿರುವುದು ಈ ಕಳವಳಕ್ಕೆ ಇಂಬು ಕೊಡುವಂತಿದೆ. ಮತ್ತೊಂದೆಡೆ, ಜೂನ್ ಗೆ ದೇಶದಲ್ಲಿ ಕೊರೋನಾ ೪ನೇ ಅಲೆ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಕೆಲವು ರಾಜ್ಯಗಳು ಮಾಸ್ಕ್ ಕಡ್ಡಾಯ ನೀತಿಯನ್ನು ಕೈಬಿಟ್ಟಿರುವುದರಿಂದ ಹಾಗೂ ಜನರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿರುವುದರಿಂದ ದೇಶದಲ್ಲಿ ಕೋವಿಡ್ ಹೊಸ ರೂಪಾಂತರಿಯೇನಾದರೂ ಕಾಣಿಸಿಕೊಂಡರೆ ಕಾಡ್ಗಿಚ್ಚಿನಂತೆ ಹಬ್ಬುವುದಕ್ಕೆ ಪೂರಕ ವಾತಾವರಣ ಇದೆ. ಇದನ್ನೆಲ್ಲ ಮನಗಂಡಿರುವ ಕೇಂದ್ರ ಸರಕಾರ, ೨ನೇ ಡೋಸ್ ಲಸಿಕೆ ಪಡೆದು ೯ ತಿಂಗಳು ಪೂರೈಸಿದವರು ಏಪ್ರಿಲ್ ೧೦ರ ಭಾನುವಾರದಿಂದ ಬೂಸ್ಟರ್ ಡೋಸ್ ಪಡೆಯಲು ಅನುಮತಿ ನೀಡಿದೆ. ಸಾಂಕ್ರಾಮಿಕದಿಂದ ದೇಶವಾಸಿಗಳನ್ನು ಪಾರು ಮಾಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ನಿರ್ಧಾರ. ವಿಶ್ವದ ಹಲವು ದೇಶಗಳಲ್ಲಿ ಈಗಾಗಲೇ ಬೂಸ್ಟರ್ ಡೋಸ್ ನೀಡಲಾಗಿತ್ತಾದರೂ, ಭಾರತದಲ್ಲಿ ಅದು ಸೀಮಿತ ವಯೋಮಾನದವರಿಗೆ ಮಾತ್ರ ಲಭ್ಯವಿತ್ತು.
ಗಮನಿಸಬೇಕಾದ ಸಂಗತಿ ಎಂದರೆ, ಭಾನುವಾರದಿಂದ ಸಿಗುವ ಬೂಸ್ಟರ್ ಡೋಸ್ ಉಚಿತವಲ್ಲ, ಹಣ ಕೊಟ್ಟು ಖಾಸಗಿ ಆಸ್ಪತ್ರೆಗಳಲ್ಲಿ ಇದನ್ನು ಪಡೆಯಬೇಕು. ಕೋವಿಡ್ ೨ನೇ ಅಲೆ ಉತ್ತುಂಗದಲ್ಲಿದ್ದಾಗ ಜನ ಸಾವಿರಾರು ರೂ. ತೆತ್ತು ಖಾಸಗಿ ಆಸ್ಪತ್ರೆಗಳ ಮುಂದೆ ಸಾಲುಗಟ್ಟಿ ನಿಂತು ಲಸಿಕೆಯನ್ನು ಪಡೆದುಕೊಂಡಿದ್ದರು. ಯಾವಾಗ ಸರ್ಕಾರ ಉಚಿತವಾಗಿ ಲಸಿಕೆ ನೀಡಲು ಆರಂಭಿಸಿತೋ ಅಂದಿನಿಂದ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುವವರ ಸಂಖ್ಯೆಯೇ ಕ್ಷೀಣಿಸಿತು. ‘ಉಚಿತ' ಯೋಜನೆಗೆ ಇರುವ ಸಾಮರ್ಥ್ಯವೇ ಅದು. ಕೋವಿಡ್ ಸೋಂಕು ಕಡಿಮೆಯಾಗಿದೆ. ಅದೂ ಅಲ್ಲದೆ ಲಸಿಕೆಗೆ ಹಣ ಕೊಡಬೇಕು ಎಂಬ ಕಾರಣಕ್ಕೆ ಶ್ರೀಸಾಮಾನ್ಯರು ಬೂಸ್ಟರ್ ಡೋಸ್ ಲಸಿಕೆ ಪಡೆಯುವುದರಿಂದಲೇ ವಿಮುಖವಾಗಬಹುದು. ಹಾಗಾದಲ್ಲಿ ಕೇಂದ್ರ ಸರ್ಕಾರದ ಉದ್ದೇಶ ಈಡೇರುವುದಿಲ್ಲ. ಆದ ಕಾರಣ ಕೇಂದ್ರ ಸರ್ಕಾರ ಈ ಲಸಿಕೆಯ ಮಹತ್ವವನ್ನು ಮನವರಿಕೆ ಮಾಡಿಕೊಡುವುದರ ಜತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಅಗ್ಗದ ದರದಲ್ಲಿ ವ್ಯಾಕ್ಸಿನ್ ದೊರೆಯುವ ವ್ಯವಸ್ಥೆ ಮಾಡಬೇಕು. ತನ್ಮೂಲಕ ಹೆಚ್ಚು ಹೆಚ್ಚು ಜನರು ಬೂಸ್ಟರ್ ಡೋಸ್ ಲಸಿಕೆ ಪಡೆಯುವಂತಾಗಬೇಕು. ಖಾಸಗಿ ಆಸ್ಪತ್ರೆಗಳು ಸಹ ಈ ವಿಚಾರದಲ್ಲಿ ಮನಸೋ ಇಚ್ಛೆ ಸುಲಿಗೆ ಮಾಡದಂತೆ ಸೂಕ್ತ ಕಡಿವಾಣವನ್ನು ಹಾಕಬೇಕಾದ ಅಗತ್ಯವಿದೆ.
ಕೃಪೆ: ಕನ್ನಡಪ್ರಭ, ಸಂಪಾದಕೀಯ, ದಿ: ೦೯-೦೪-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ