ಬೃಹತ್ ಆಲದ ಮರ
ಮಹಾಲಯ ಪಿತೃಪಕ್ಷ ಬಂತೆಂದರೆ ಸಾಕು ಅರ್ಪಣ
ಹಿರಿಯ ತಲೆಮಾರಿನ ಪಿತೃಗಳಿಗೆ ತಿಲ ತರ್ಪಣ
ಹಿರಿಯ ತಲೆಮಾರಿನ ಋಣವ ತೀರಿಸುವ ದಿನಗಳು
ಎಲ್ಲ ಮನೆ ಮನಗಳಲಿ ನೆನಹಿನ ದಿನಗಳು
ನನ್ನಜ್ಜಿ ಸುಬ್ಬಮ್ಮ ಬಲು ಘಾಟಿಯಂತೆ
ಆದರೂ ಎಲ್ಲರಿಗೂ ಆದರ್ಶ ವಂತೆ
ಬಡತನದ ಬೇಗುದಿಯ ಸಹಿಸಿದ ಮಾತೆ
ಬಾಳಿನಲಿ ಉಂಡರು ಕಷ್ಟಗಳ ಸಂತೆ
ನನ್ನಜ್ಜ ವೆಂಕಪ್ಪ ಶ್ರೀರಾಮನಂತೆ
ಕಟ್ಟಿದರು ಹೋಟೆಲ್ ಕುಟುಂಬ ಸಲಹಲಂತೆ
ಧೈರ್ಯ ಸಾಹಸ ದಿಟ್ಟತನದ ವ್ಯಕ್ತಿತ್ವವಂತೆ
ನಮ್ಮೆಲ್ಲರಲು ಅವರದೇ ನಿಜಗುಣವಂತೆ
ಮುತ್ತಾತ ಈಶ್ವರನು ಪರಮ ಪುರುಷನಾಗಿ
ಮನೆಯ ಸಂಭಾಳಿಸಿದ ಧೀಮಂತ ಅರಸನಾಗಿ
ತೋಟ ಹಟ್ಟಿ ದನಕರುಗಳ ಜೊತೆಯಲ್ಲಿ ಬದುಕು
ಕಂಡವನು ಅದರಲ್ಲಿ ಬಾಳಿನ ಸಿರಿಸುಖ
ಮಾವಂದಿರು ಸಾಹಿತ್ಯ ಲೋಕದ ನಕ್ಷತ್ರಗಳು
ಕೀರ್ತಿಯನು ಪಡೆದರು ಬರವಣಿಗೆ ಕ್ಷೇತ್ರದೊಳು
ನಮಗೆಲ್ಲ ಸೃಜನಶೀಲತೆಯ ಕಲಿಸಿ ಮೆರೆದರು
ಮಕ್ಕಳನು ಸೇರಿಸಿ ತಿದ್ದಿ ತೀಡಿದರು
ನನ್ನ ತವರಿನ ಸಿರಿಯ ನವರತುನಗಳಿವರು
ಬೃಹತ್ ಆಲದ ಮರದ ನೆರಳಿನಂತವರು
ಪಿತೃಋಣ ಮಾತೃ ಋಣ ಸಕಲ ಋಣಗಳ ಭಾರ
ಬದುಕಿನ ಹಾದಿಯಲಿ ಹಾಸಿತ್ತು ಸಾಸಿರ
ಯಾಕೊ ಏನೊ ಎಲ್ಲರ ನೆನೆದು
ಆಗಿತ್ತು ಮನಸೆಂಬ ಗುಡಿ ಭಾರ
ಋಣ ತೀರಿಸುವುದೆಂತು ನಾನರಿಯೆ
ಸಮಾಜದಲಿ ಕೈಲಾದಷ್ಟು ಸೇವೆ ಮಾಡಿ ತೀರಿಸುವೆ
(ಪಿತೃಪಕ್ಷ ಮಹಾಲಯ ಅಮಾವಾಸ್ಯೆ)
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ