ಬೃಹತ್ ಉದ್ಯೋಗ ಮೇಳ - ಸರಕಾರದ ಮಾದರಿ ಕಾರ್ಯಕ್ರಮ

ಬೃಹತ್ ಉದ್ಯೋಗ ಮೇಳ - ಸರಕಾರದ ಮಾದರಿ ಕಾರ್ಯಕ್ರಮ

ರಾಜ್ಯ ಸರಕಾರ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದ್ದ ತಿಂಗಳೊಳಗೆ ಯುವ ಸಮೃದ್ಧಿ ಸಮ್ಮೇಳನ ಬೃಹತ್ ಉದ್ಯೋಗ ಮೇಳ ಎಂಬ ಮತ್ತೊಂದು ಜನಪರ ಕಾರ್ಯಕ್ರಮ ಆಯೋಜಿಸಿದೆ. ಉದ್ಯೋಗಾಕಾಂಕ್ಷಿ ಯುವಕರನ್ನು ಮತ್ತು ಉದ್ಯೋಗ ನೀಡಬಲ್ಲ ಸಂಸ್ಥೆಗಳನ್ನು ಖುದ್ದು ಸರಕಾರವೇ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಒಂದು ವೇದಿಕೆಗೆ ತಂದಿರುವುದು ಸ್ತುತ್ಯರ್ಹ.

೫೦೦ಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿನ ಒಂದು ಲಕ್ಷಕ್ಕಿಂತ ಹೆಚ್ಚು ಉದ್ಯೋಗಗಳಿಗಾಗಿ ಸುಮಾರು ೮೦ ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಅಂಕಿ ಅಂಶಗಳು ರಾಜ್ಯದಲ್ಲಿನ ಉದ್ಯೋಗಗಳ ಲಭ್ಯತೆ, ನಿರುದ್ಯೋಗದ ಪ್ರಮಾಣದ ಅಗಾಧತೆಯನ್ನು ನಮ್ಮ ಮುಂದಿಡುತ್ತದೆ. ಹಾಗೆಯೇ ಕೌಶಲ ಶಿಕ್ಷಣದ ನೀತಿ ನಿರೂಪಣೆಯಲ್ಲಿ ಸರಕಾರ ಏನೆಲ್ಲ ಕ್ರಮ ಅನುಸರಿಸಬಹುದು ಎಂಬ ಚಿಂತನೆಗೆ ಕಾರಣವಾಗಲಿ.

ಸಾಮಾನ್ಯವಾಗಿ, ಪ್ರತಿಭಾನ್ವಿತ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದ ಮೂಲಕ ದೊಡ್ಡ ದೊಡ್ಡ ಕಂಪೆನಿಗಳಿಗೆ ಸೇರಿಕೊಂಡು ಬಿಡುತ್ತಾರೆ. ಹಲವು ಪ್ರತಿಷ್ಟಿತ ಕಂಪೆನಿಗಳು ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ಗೆ ಬಂದು ಅಥವಾ ತಮ್ಮ ಮಾನವ ಸಂಪನ್ಮೂಲ ವಿಭಾಗಗಳ ಮೂಲಕ ತಮ್ಮ ಅಗತ್ಯಗಳಿಗೆ ಹೊಂದಬಲ್ಲ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡುಬಿಡುತ್ತಾರೆ. ಆದರೆ ಇಲ್ಲಿ ವಿಫಲ ಗೊಳ್ಳುವ ವಿದ್ಯಾರ್ಥಿಗಳಿಗೆ ಆ ಬಳಿಕ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಹುಡುಕಿಕೊಳ್ಳುವುದು, ಉದ್ಯೋಗ ಪಡೆದುಕೊಳ್ಳಲು ಅಗತ್ಯ ಕೌಶಲ ಸಂಪಾದಿಸಿಕೊಳ್ಳುವುದು ಬಹು ದೊಡ್ದಕೆಲಸ.

ಈ ಎರಡು ಅಂಶಗಳನ್ನು ಸರಿಯಾಗಿ ಅರ್ಥೈಸಿಕೊಂಡಿರುವ ಸರಕಾರ ನಿರುದ್ಯೋಗ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಉದಾಹರಣೆಗೆ ಯುವ ನಿಧಿ ಯೋಜನೆಯ ಮೂಲಕ ನಿರುದ್ಯೋಗಿ ಯುವಕರ ಅಂದಾಜು ಲೆಕ್ಕ ಸರಕಾರದ ಕೈಸೇರುತ್ತಿದೆ. ತದನಂತರ ಆ ಯುವಕರನ್ನು ಒಳಗೊಂಡಂತೆ ಎಲ್ಲರಿಗೂ ಉದ್ಯೋಗ ಮೇಳದ ಮಾಹಿತಿ ನೀಡುತ್ತಿದೆ. ಉದ್ಯೋಗ ಮೇಳದಲ್ಲಿ ಕೆಲಸ ಸಿಕ್ಕರೆ ಸರಿ, ಒಂದು ವೇಳೆ ಕೆಲಸ ಸಿಗದಿದ್ದರೆ ಆ ಯುವಕರ ಕೌಶಲ ತರಬೇತಿಯ ಯೋಜನೆಯನ್ನು ಹಾಕಿಕೊಂಡಿರುವುದು ಸ್ವಾಗತಾರ್ಹ.

ಉದ್ಯೋಗ ಮೇಳ ಎಂಬುದು ನಿರುದ್ಯೋಗಿಗಳಿಂದ ಅರ್ಜಿ ಸ್ವೀಕಾರಕ್ಕೆ ಸೀಮಿತಗೊಳ್ಳದಂತೆ ಸರಕಾರ ಕ್ರಮ ಕೈಗೊಳ್ಳಬೇಕು. ಅರ್ಜಿ ಸ್ವೀಕರಿಸಿ ಆ ಬಳಿಕ ಮತ್ತೆ ಕರೆ ಮಾಡುತ್ತೇವೆ ಎಂದು ಹೇಳಿ ಆ ಬಳಿಕ ಮರೆತುಬಿಡುವ ಕಂಪೆನಿಗಳ ಚಾಳಿಗೆ ಅವಕಾಶ ಕೊಡಬಾರದು. ಸರಕಾರ ತನ್ನ ಅಂಕಿ ಅಂಶಗಳಲ್ಲಿ ನೈಜ ಉದ್ಯೋಗ ಅಂದರೆ ಆಫರ್ ಲೆಟರ್ ಪಡೆದದ್ದನ್ನೇ ಮಾನದಂಡವಾಗಿಸಿಕೊಳ್ಳಬೇಕು. ಈ ಹಿನ್ನಲೆಯಲ್ಲಿ ಸಂದರ್ಶನಕ್ಕೆ ಹಾಜರಾದವರ ಉದ್ಯೋಗ ಸ್ಥಿತಿಗತಿಗಳ ಬಗ್ಗೆಯೂ ಸರಕಾರ ನಿರಂತರ ಕಣ್ಣಿಡಬೇಕು. ವಿದ್ಯಾರ್ಥಿಗಳಿಗೆ ಉದ್ಯೋಗದ ಭರವಸೆ, ಆಸೆ ಹುಟ್ಟಿಸಿ ಆ ಬಳಿಕ ಸಂದರ್ಶನಕ್ಕೂ ಕರೆಯದಿರುವ ಸಂಸ್ಥೆಗಳು ಹಾಗೆಯೇ ಸಂದರ್ಶನಕ್ಕೆ ಕರೆದು ತಿರಸ್ಕರಿಸಲು ಕಾರಣ ನೀಡದ ಸಂಸ್ಥೆಗಳಿಗೆ ಬಿಸಿ ಮುಟ್ಟಿಸುವ ನಿಯಮಗಳನ್ನು ತರುವ ಬಗ್ಗೆಯೂ ಸರಕಾರ ಚಿಂತನೆ ಮಾಡಬೇಕು.

ಇದರ ಜತೆಗೆ ನಿರುದ್ಯೋಗಿಗಳಿಗೆ ಕೌಶಲ ನೀಡುವ ಪ್ರಕ್ರಿಯೆ ನಿರಂತರವಾಗಿ ಸಾಗಬೇಕು. ಜತೆಗೆ ಈಗ ಜಾಗತಿಕವಾಗಿ ‘ಗಿಗ್ ಕೆಲಸ' ಮುನ್ನಲೆಗೆ ಬರುತ್ತಿರುವುದು ಕೌಶಲಗಳ ಅಗತ್ಯಗಳು, ಆಯಾಮಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುವುದು, ಮಧ್ಯ ವಯಸ್ಸಿನಲ್ಲಿ ಕೆಲಸ ಕಳೆದುಕೊಳ್ಳುವ ವಿದ್ಯಮಾನಗಳು ಹೆಚ್ಚುತ್ತಿರುವ ಹಿನ್ನಲೆಯನ್ನು ಗಮನಿಸಿ ಕೌಶಲಗಳ ತರಬೇತಿಗೆ ಮರು ವ್ಯಾಖ್ಯಾನ ನೀಡುವ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತಗೊಳ್ಳಲಿ.

ಇದೀಗ ಉದ್ಯೋಗ ಮೇಳವನ್ನು ಪ್ರಾದೇಶಿಕ, ಜಿಲ್ಲಾ ಮಟ್ಟಗಳಿಗೂ ವಿಸ್ತರಿಸುವ ಸರಕಾರದ ಚಿಂತನೆ ಸ್ವಾಗತಾರ್ಹ. ಹಾಗೆಯೇ ಪದವಿ, ವೃತ್ತಿಪರ ಪದವಿ, ತಾಂತ್ರಿಕ ಶಿಕ್ಷಣದ ಕೊನೆಯ ಸೆಮಿಸ್ಟಾರ್ ನಲ್ಲಿ ಸಂದರ್ಶನಗಳನ್ನು ಎದುರಿಸುವ ಬಗ್ಗೆಯೂ ಮಕ್ಕಳಿಗೆ ತರಬೇತಿ ನೀಡಲು ಸರಕಾರ ಮುಂದಾಗಬೇಕು.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೭-೦೨-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ