ಬೃಹತ್ ದೇವಾಲಯ

ಬೃಹತ್ ದೇವಾಲಯ

ಬರಹ

ಕೆಲವು ದಿನಗಳ ಕೆಳಗೆ ಚಂದನ ವಾಹಿನಿಯಲ್ಲಿ “ಥಟ್ಟಂತ ಹೇಳಿ” ಕಾರ್ಯಕ್ರಮ ನೋಡುತ್ತಿದ್ದೆ. ಅದರಲ್ಲಿ ಬಂಪರ್ ಪ್ರಶ್ನೆಯಲ್ಲಿ ಪ್ರಖ್ಯಾತ ಚೋಳ ವಂಶದ ಪ್ರಖ್ಯಾತ ರಾಜನಾದ ರಾಜೇಂದ್ರ ಚೋಳ ಎಂಬ ಉತ್ತರ ಬರುವಂತೆ ಪ್ರಶ್ನೆ ಕೇಳಿದ್ದರು. ಮೊದಲೆರಡು ಸುಳುಹುಗಳೂ ರಾಜೇಂದ್ರ ಚೋಳ ಮಾಡಿದ ಕೆಲಸಗಳ ಬಗ್ಗೆ ಇದ್ದವು. ಆದರೆ ಮೂರನೆಯ ಸುಳುಹು “ತಂಜಾವೂರಿನಲ್ಲಿರುವ ಬೃಹದೀಶ್ವರ ದೇವಸ್ಥಾನವನ್ನು ಕಟ್ಟಿಸಿದವನು” ಎಂದು ಇತ್ತು. ಆದರೆ ನನಗೆ ತಿಳಿದಮಟ್ಟಿಗೆ ಬೃಹದೀಶ್ವರ ದೇವಸ್ಥಾನವನ್ನು ಕಟ್ಟಿಸಿದವನು ರಾಜೇಂದ್ರ ಚೋಳನ ತಂದೆಯವರಾದ ರಾಜರಾಜ ಚೋಳನ್ ಅವರು. ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಅದರಲ್ಲಿ ಆ ದೇವಾಲಯವನ್ನು ಕಟ್ಟಿಸಿದವರು ರಾಜರಾಜ ಚೋಳನ್ ಎಂದೇ ಬರೆದಿದೆ.
ತಮಿಳಿನ ಹಿರಿಯ ಸಾಹಿತಿ ಕಲ್ಕಿಯವರು “ಪೊನ್ನಿಯಿನ್ ಶೆಲ್ವನ್” ಎಂಬ ಬೃಹತ್ ಕಾದಂಬರಿಯನ್ನು ಬರೆದಿದ್ದಾರೆ, ಅದು ಐತಿಹಾಸಿಕ ಕಥೆ, ರಾಜರಾಜ ಚೋಳನ್ ಅವರ ಚಿಕ್ಕ ವಯಸ್ಸಿನ ದಿನಗಳ ಕಥೆ. ಅದರಲ್ಲಿ ಅವರು ಇನ್ನೂ 19 ವರ್ಷದ ಯುವಕನಾಗಿದ್ದಾಗಲೇ ಶ್ರೀಲಂಕೆಯನ್ನು ಗೆದ್ದು ಬರುತ್ತಾರೆ. ಆನಂತರದ ಒಂದು ಸನ್ನಿವೇಶದಲ್ಲಿ ಅವರು ತಮ್ಮ ಸೋದರಿಯೊಂದಿಗೆ ಒಂದು ಮಾತನ್ನು ಹೇಳುತ್ತಾರೆ. “ಅಕ್ಕಾ, ಶ್ರೀಲಂಕಾದಲ್ಲಿ ಬುದ್ದನ ಪ್ರತಿಯೊಂದು ವಿಗ್ರಹವೂ ಆಕಾಶದೆತ್ತರಕ್ಕೆ ನಿಲ್ಲಿಸಿದ್ದಾರೆ. ಅವನ್ನು ನೋಡಿ ಈಗ ನಮ್ಮ ತಮಿಳುನಾಡಿನಲ್ಲಿರುವ ಚಿಕ್ಕ ಚಿಕ್ಕ ಈಶ್ವರ ದೇವಾಲಯಗಳನ್ನು ನೋಡಿದರೆ ನನಗೆ ಅವಮಾನ ಎನ್ನಿಸುತ್ತಿದೆ. ನಾನು ನಮ್ಮ ಊರಿನಲ್ಲೂ ಒಂದು ದೊಡ್ಡದಾದ ಶಿವಾಲಯ ಕಟ್ಟಿಸಬೇಕೆಂಬ ಆಸೆ ಇದೆ.” ಎಂದು ಹೇಳುತ್ತಾರೆ.
ಕಲ್ಕಿಯವರು ಇದನ್ನು ರಾಜರಾಜಚೋಳನ್ ಕಟ್ಟಿಸಿದ್ದು ಎಂಬುದರಿಂದಲೇ ಅವರ ಬಾಯಿಂದ ಈ ಮಾತು ಹೇಳಿಸಿದ್ದಾರೆ ಎಂದು ಕಾಣುತ್ತದೆ.

ಈ ದೇವಸ್ಥಾನ ಕಟ್ಟಿಸಿದಾಗ ನಡೆಯಿತು ಎನ್ನಲಾದ ಒಂದು ದಂತಕಥೆಯೂ ಸಹ ಇದೆ. ರಾಜರಾಜಚೋಳನ್ ಕಟ್ಟಿಸಿ ಮುಗಿಸಿ ಅದರ ಪ್ರಾರಂಭೊತ್ಸವವನ್ನು ವೈಭವದಿಂದ ಆಚರಿಸಬೇಕೆಂದುಕೊಂಡಿದ್ದಾಗ ಅತಿ ಬಡವನಾದ ಭಕ್ತನೊಬ್ಬನು ತನ್ನ ಹೃದಯ ಮಂದಿರದಲ್ಲಿ ಶಿವನಿಗಾಗಿ ಒಂದು ಪುಟ್ಟಗುಡಿ ಕಟ್ಟಿಸಿದ್ದನಂತೆ. ಅವನೂ ಸಹ ರಾಜರಾಜಚೋಳನ್ ಪ್ರಾರಂಭೋತ್ಸವಕ್ಕೆ ನೋಡಿದ ಮುಹೂರ್ತದಲ್ಲೇ ತನ್ನ ದೇವಾಲಯದ ಪ್ರಾರಂಭೋತ್ಸವವನ್ನು ಇಟ್ಟುಕೊಂಡನಂತೆ. ಆಗ ಮನದೊಳಗೇ ಅವನು, “ದೇವಾ ನೀನು ನಾಳೆ ಮುಹೂರ್ತದ ವೇಳೆಗೆ ರಾಜನು ಕಟ್ಟಿಸಿದ ದೇವಾಲಯದಲ್ಲಿ ದರುಶನ ಭಾಗ್ಯ ನೀಡಿ ಸಂಭ್ರಮಪಡುವೆ ಅಲ್ಲವೇ? ಎಷ್ಟಾಗಲಿ ಅವನು ಶ್ರೀಮಂತ. ನಾನಾದರೆ ಬಡವ ನಾನು ನಿನಗೆ ಯಾವ ಲೆಕ್ಕ ಅಲ್ಲವೇ?” ಎಂದು ಕೊರಗುತ್ತಿದ್ದನಂತೆ. ಆಗ ಈಶ್ವರ ಅವನ ಕನಸಿನಲ್ಲಿ ಬಂದು, “ನಿನ್ನ ದೇವಾಲಯಕ್ಕೂ ಬಂದು ನಾನು ಬೆಳಗುವೆ ಚಿಂತಿಸದಿರು.” ಎಂದು ಅಭಯಹಸ್ತ ನೀಡಿದನೆಂದು ಹೇಳಲಾಗಿದೆ. ಮರುದಿನ ರಾಜನಿಗೆ ತನ್ನ ದೇವಾಲಯದಲ್ಲಿ ಏನೋ ಕೊರತೆಯುಂಟಾಗಿದೆ ಎಂದೆನಿಸಿ ತಾನರಿಯದೇ ಏನಾದರೂ ತಪ್ಪು ನಡೆದಿದ್ದರೆ ತನ್ನನ್ನು ಕ್ಷಮಿಸಿ ಅನುಗ್ರಹಿಸಬೇಕೆಂದು ಈಶ್ವರನನ್ನು ಕೇಳಿಕೊಂಡನೆಂದೂ, ಆಗ ಶಿವ ಅವನ ಕನಸಿನಲ್ಲಿ ಬಂದು ಅವನಿಗಿಂತ ದೊಡ್ಡ ಭಕ್ತ ತನ್ನನ್ನು ಕರೆಸಿಕೊಂಡನೆಂದೂ ಹೇಳಿದಂತಾಯಿತು. ತನಗಿಂತ ದೊಡ್ಡ ಭಕ್ತನಾರೆಂದು ಕೇಳಿದಾಗ ಆ ಬಡವನ ಹೆಸರು ಊರು ತಿಳಿಸಿದನಂತೆ. ಮರುದಿವಸ ರಾಜನು ಅಲ್ಲಿಗೆ ಹೋಗಿ ಆ ಬಡಭಕ್ತನ ಕಾಲಿಗೆರಗಿ ಆಶೀರ್ವಾದ ಪಡೆದನು ಎಂದೂ, ನಂತರ ರಾಜನ ಮನೋವೈಶಾಲ್ಯ ಎಲ್ಲರನ್ನೂ ಬೆರಗುಗೊಳಿಸಿತೆಂದೂ ಹೇಳುತ್ತಿದ್ದರು. ನಂತರ ರಾಜನ ದೇವಾಲಯದಲ್ಲೂ ಶಿವ ಸಂತಸದಿಂದ ಬಂದು ನೆಲೆಸಿದನೆಂದೂ ಕಥೆ ಇದೆ.
ಅದೇನೇ ಇರಲಿ ತಂಜಾವೂರಿನ ಈ ದೇವಾಲಯ ದಕ್ಷಿಣ ಭಾರತದ ಅತಿ ದೊಡ್ಡ ದೇವಸ್ಥಾನ. 256 ಅಡಿ ಎತ್ತರದ ಈ ದೇವಸ್ಥಾನದ ಗೋಪುರದ ತೂಕ 81.3ಟನ್ಗಳು. ಇದನ್ನು ಮೇಲೇರಿಸಲು ಉಪಯೋಗಿಸಿದ ಜಾರು ಹಲಗೆಯ ಉದ್ದ 6ಕಿಲೋಮೀಟರ್. ಒಂದು ವಿಶೇಷ ಎಂದರೆ ಈ ಗೋಪುರದ ನೆರಳು ಎಲ್ಲೂ ಬೀಳುವುದಿಲ್ಲ. 11ನೆಯ ಶತಮಾನದಲ್ಲಿ ರಾಜರಾಜಚೋಳನ್ ಕಟ್ಟಿಸಿದ ದೇವಾಲಯ ದಕ್ಷಿಣ ಭಾರತದ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಅತಿ ದೊಡ್ಡ ದೇವಾಲಯವಾಗಿದೆ. ರಾಜರಾಜಚೋಳನ್ ತನ್ನ 19ನೆಯ ವಯಸ್ಸಿನಲ್ಲಿ ಕಟ್ಟಿಸಲು ಪ್ರಾರಂಭಿಸಿದ . ಇದನ್ನು ಕಟ್ಟಿ ಮುಗಿಸಲು 12 ವರ್ಷಗಳೇ ಬೇಕಾಯಿತು. ಅಷ್ಟು ದೊಡ್ಡ ಲಿಂಗಕ್ಕೆ ಹೊಂದುವಂತೆ ಮುಂದಿರುವ ನಂದಿಯೂ ಸಹ 6 ಮೀ. ಉದ್ದ, 2.6ಮೀ ಅಗಲ ಹಾಗೂ 3.7ಮೀ ಎತ್ತರ ಇದ್ದು ಗಂಭೀರವಾಗಿ ನಿಂತಿರುವ ದೃಶ್ಯ ನೋಡಲು ಮನಮೋಹಕವಾಗಿದೆ. ಈ ದೇವಸ್ಥಾನ ಇರುವ ಸ್ಥಳಕ್ಕೆ ರಾಜರಾಜೇಶ್ವರಂ ಎಂದು ಹೆಸರಿಸಿದ್ದಾರೆ ಹಾಗೂ ದೇವಸ್ಥಾನಕ್ಕೆ ಪೆರಿಯ ಕೋಯಿಲ್ ಎಂದೂ ಅಲ್ಲಿನ ಶಿವಲಿಂಗಕ್ಕೆ ಪೆರುವುಡೈಯಾರ್ ಎಂದೂ ಹೇಳುತ್ತಾರೆ. ಎಲ್ಲರೂ ಒಮ್ಮೆ ನೋಡಬಹುದಾದಂತಹ ಒಂದು ಸುಂದರ ಸ್ಥಳ ಎಂಬುದರಲ್ಲಿ ಅನುಮಾನವಿಲ್ಲ.