ಬೃಹತ್ ಬೆಂಗಳೂರಿನ ನಾಯಿಗಳು ಮತ್ತು ಚರಂಡಿಗಳು
ಬೆಂಗಳೂರಿನ ಬೀದಿಗಳಲ್ಲಿ ನಾಯಿಗಳು ಕಚ್ಚಿ ಮಕ್ಕಳು ಸತ್ತಾಗಲೇ ಅವುಗಳೊಂದು ಸಮಸ್ಯೆಯೆಂದನಿಸಿದ್ದು; ಪ್ರತೀ ವರ್ಷವೂ ಮೊದಲ ಮಳೆ ಬಿದ್ದು, ಕಸ-ಕಡ್ಡಿಗಳಿಂದ ತುಂಬಿದ ಚರಂಡಿಗಳಲ್ಲಿ ನೀರು ಹರಿಯದೇ ಉಂಟಾಗುವ ಪ್ರವಾಹದಲ್ಲಿ ಒಂದಿಬ್ಬರು ಕೊಚ್ಚಿಹೋದಾಗಲೇ ಓ, ಇದೂ ಒಂದು ಸಮಸ್ಯೆಯೇ ಅಂತನಿಸುವುದು. ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಕಳೆದ ಐದು ವರ್ಷಗಳಲ್ಲಿ ಐವತ್ತು ಸಾವಿರ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲು ಹೊರಟು ಎರಡು ಲಕ್ಷ ನಾಯಿಗಳ ಮೇಲೆ ಆರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರೂ ನಾಯಿಗಳಿಂದ ಕಚ್ಚಿಸಿಕೊಳ್ಳುವವರ, ಅದರಿಂದ ಸಾಯುವವರ ಸಂಖ್ಯೆಯು ಕಡಿಮೆಯಾದಂತೇನೂ ತೋರುವುದಿಲ್ಲ. ಅದೇ ರೀತಿ, ಚರಂಡಿಗಳ ‘ತುರ್ತು ದುರಸ್ತಿಗಾಗಿ’ ಮುನ್ನೂರು ಕೋಟಿ ರೂಪಾಯಿಗಳ ಯೋಜನೆಯನ್ನು ಬೃ.ಬೆಂ.ಮ.ಪಾ. ಹಾಕಿಕೊಂಡಿದ್ದರೂ, ಅದರಿಂದೇನೂ ಪ್ರಯೋಜನವಾದಂತೆ ಕಾಣುತ್ತಿಲ್ಲ. ಉದ್ಯಾನನಗರಿಯಲ್ಲಿರುವ ಮಾಹಿತಿವಂತ ತೆರಿಗೆದಾರರು ಕಟ್ಟಿದ ಕೋಟಿಗಟ್ಟಲೆ ಹಣವೆಲ್ಲ ಹೀಗೆ ನಾಯಿಪಾಲೋ, ಚರಂಡಿಪಾಲೋ ಆಗುತ್ತಿದ್ದು, ಜನಸಾಮಾನ್ಯರು ತರಗೆಲೆಗಳಂತೆ ಬಿದ್ದು ಸಾಯುತ್ತಿದ್ದರೂ, ಬೆಂಗಳೂರಿಗರು ಮಾತ್ರ ಅದೇಕೆ ಸುಮ್ಮನಿದ್ದಾರೋ?