ಬೃಹದಾರಣ್ಯಕ
ಬಿ. ಜಿ. ಎಲ್. ಸ್ವಾಮಿಯವರು ತಮ್ಮ "ಹಸುರು ಹೊನ್ನು” ಪುಸ್ತಕದಿಂದ ಪ್ರಖ್ಯಾತರು. ಸಸ್ಯಗಳ ಬಗ್ಗೆ ಅದೊಂದು ಅಪರೂಪದ ಪುಸ್ತಕ. ಕತೆ ಹೇಳಿದಂತೆ ಸಸ್ಯಗಳ ಪರಿಚಯವನ್ನು ಮಾಡಿಕೊಡುವ ಪುಸ್ತಕ ಅದು. ಶುಷ್ಕ ಎನಿಸಬಹುದಾದ ವಿಜ್ನಾನದ ವಿಷಯಗಳನ್ನು ಹಾಸ್ಯ ಲೇಪಿಸಿ, ಚೇತೋಹಾರಿಯಾಗಿ ಹೇಗೆ ಓದುಗರಿಗೆ ಉಣಬಡಿಸಬೇಕು ಎಂಬುದಕ್ಕೊಂದು ಮಾದರಿ ಅದು.
“ಬೃಹದಾರಣ್ಯಕ" ಅವರು ಪ್ರಾಣಿಗಳು ಮತ್ತು ಕಾಡಿನ ವಿಸ್ಮಯಗಳ ಬಗ್ಗೆ ಬರೆದಿರುವ 11 ಅಧ್ಯಾಯಗಳ ಪುಸ್ತಕ. ಸಸ್ಯಗಳ ಬಗ್ಗೆ "ಹಸುರು ಹೊನ್ನು” ಬರೆದಂತೆ ಪ್ರಾಣಿಗಳ ಬಗ್ಗೆ ವಿವರವಾದ ಪುಸ್ತಕವೊಂದನ್ನು ಬರೆಯಬೇಕೆಂದು ಅವರು ಹಲವು ಪುಟಗಳ ವಿವರಣೆ ಬರೆದಿದ್ದರು. ಆದರೆ, ಆ ಪುಸ್ತಕವನ್ನು ಬರೆದು ಮುಗಿಸುವ ಮುನ್ನ ಅವರು ನಮ್ಮನ್ನು ಅಗಲಿದರು. ಆ ವಿವರಣಾ ಪುಟಗಳನ್ನು ಅವರ ಭಾಮೈದುನ ಕೃಷ್ಣವೂರ್ತಿಯವರು ರಕ್ಷಿಸಿಟ್ಟಿದ್ದರು. ಅದರಿಂದಾಗಿ “ಬೃಹದಾರಣ್ಯಕ" ಪುಸ್ತಕ ಪ್ರಕಟಿಸಲು ಸಾಧ್ಯವಾಯಿತು. ಇದರಲ್ಲಿವೆ, "ಕಾಡು ಮರಗಳು” ಮತ್ತು "ಕಾಡು ಪ್ರಾಣಿಗಳು" ಎಂಬ ಎರಡು ಭಾಗಗಳು.
“ಬೋನ್‌ಸಾಯ್" ಎಂಬ ಮೊದಲ ಅಧ್ಯಾಯದಲ್ಲಿ ಅವರು ಕುತೂಹಲದಾಯಕ ಸಂಗತಿಯೊಂದನ್ನು ತಿಳಿಸುತ್ತಾರೆ: “ಮರದ ಬೆಳವಣಿಗೆಯ ಮೇಲೆ ವಾಯುಗುಣದ ಹತೋಟಿ ಎಷ್ಟಿದೆ ಎಂಬುದಕ್ಕೆ ಒಂದು ನಿದರ್ಶನವನ್ನು ಕೊಡಬಹುದು. ಉತ್ತರ ಅಮೇರಿಕದ ಪಶ್ಚಿಮದಲ್ಲಿ ರಾಅಕೀಸ್ ಎಂಬ ಪರ್ವತಾವಳಿಯಿದೆಯಲ್ಲವೇ? ಅಲ್ಲಿ ಸಿಟ್ಕಸ್ಟ್ರೂಸ್ ಎಂಬ ಮರ ಬೆಳೆಯುತ್ತದೆ. ಇದರ ಹರವು ಅಲಾಸ್ಕಾದ ವರೆಗೂ ಹಬ್ಬಿದೆ. ದಕ್ಷಿಣ ಭಾಗದ ರಾಕೀಸ್ ಕಣಿವೆಗಳಲ್ಲಿ ಸರಾಸರಿ ಮಳೆ 150 ಅಂಗುಲ; ಸಾಮಾನ್ಯ ಋತುನಿಯಮವನ್ನು ಅನುಸರಿಸಿದ ವಾಯುಗುಣ. ಸ್ಟ್ರೂಸ್ ಮರ ನೂರು ವರ್ಷದಲ್ಲಿ 120 ಅಡಿ ಎತ್ತರ ಬೆಳೆದು 20 ಅಡಿ ಸುತ್ತಳತೆಗೆ ಹಿಗ್ಗುತ್ತದೆ. ಅಲಾಸ್ಕ ಪ್ರದೇಶದ ಋತುನಿಯಮ ಅಸಾಧಾರಣವಾದದ್ದು; ವರ್ಷದಲ್ಲಿ ಬಹುಭಾಗ ನೆಲವನ್ನು ಮುಚ್ಚಿದ ಮಂಜು; ನೆಲದ ನೀರು ಗಟ್ಟಿ ಕಟ್ಟಿರುತ್ತದೆ. ಮೂರು ನಾಲ್ಕು ತಿಂಗಳು ಮಾತ್ರ ಪ್ರಕಾಶಿಸುವ ಬಿಸಿಲಿಗೆ ಶಾಖವೇ ಇಲ್ಲ. ಮಳೆಯೋ ವರ್ಷಕ್ಕೆ ಸರಾಸರಿ 10 ಇಂಚು. ಈ ಹದದಲ್ಲಿ ಬೆಳೆದ ಅದೇ ನೂರು ವರ್ಷದ ಮರ ಮೂರಡಿ ಎತ್ತರ, ಒಂದು ಅಂಗುಲ ಸುತ್ತಳತೆಯ ಕಾಂಡದ ಕುಬ್ಜಾವತಾರವನ್ನು ಪ್ರದರ್ಶಿಸುತ್ತದೆ. ಸ್ವಾಭಾವಿಕವಾದ ಬೋನ್‌ಸಾಯ್!”
“ವೃಕ್ಷಲೋಕ" ಎಂಬ ಮೂರನೆಯ ಅಧ್ಯಾಯದಲ್ಲಿ ತಮ್ಮ ಅನುಭವವೊಂದನ್ನು ಹೀಗೆ ಹಂಚಿಕೊಳ್ಳುತ್ತಾರೆ ಬಿ. ಜಿ. ಎಲ್. ಸ್ವಾಮಿಯವರು: "ಬೆಳಕಿಗೆ ಮೈಯೊಡ್ಡಿರುವ ರೆಂಬೆಕೊಂಬೆಗಳ ಮೇಲೆಲ್ಲ ನಾನಾ ವಿಧವಾದ ಅಪ್ಪು ಗಿಡಗಳು ಬೆಳೆದು ತೊಗಟೆಗೊಂದು ಮೇಲ್ಹೊದಿಕೆಯಾಗುತ್ತದೆ. ಕೆಲವು ಅಪ್ಪುಗಿಡಗಳ ಬೇರುಗಳು ತೊಗಟೆಯ ಕೊರಕಲುಗಳಲ್ಲಿ ತೊಗಟೆಯ ಮೇಲೂ ಒತ್ತಾಗಿ ಹೆಣೆದುಕೊಳ್ಳುತ್ತವೆ. ಕೆಲವು ಗಾಳಿಯಲ್ಲಿ, ತೋರಣಗಳಂತೆ ಜೋಲಾಡುತ್ತಿರುತ್ತವೆ. ಇಂಥ ದೊಡ್ಡ ಬಾಹುವೊಂದು ಕೇರಳದ ಮಳೆಗಾಡಿನಲ್ಲಿ ಸಿಡಿಲು ಹೊಡೆದು ವಾರದ ಹಿಂದೆ ತಾನೆ ಕೆಳಗೆ ಬಿದ್ದಿತ್ತು. ಧೂಮಮರದ 30 ಅಡಿ ಎತ್ತರದಲ್ಲಿದ್ದ ದೊಡ್ಡ ಕೊಂಬೆ. ಒಂದು ಗಂಟೆ ಕಾಲ ಅಲ್ಲಿಯೇ ಕುಳಿತು ಪರೀಕ್ಷಿಸಿದೆವು. ಅಪ್ಪುಗಿಡಗಳ ಸಸ್ಯ ವೈವಿಧ್ಯ ಹೀಗಿತ್ತು: ಬರಿಗಣ್ಣಿಗೆ ಕಾಣುವಂಥವು (ಅಲ್ಲಿಯೇ ಪರೀಕ್ಷಿಸಿದ್ದು): ಹೂತಳೆದ ಗಿಡಗಳು - 8 ಸ್ಪೀಷೀಸ್; ಜರೀ ಗಿಡಗಳು - 33 ಸ್ಪೀಷೀಸ್; ಬ್ರಯೊಫೈಟ್‌ಗಳು - 13 ಸ್ಪೀಷೀಸ್. ಸೂಕ್ಷ್ಮದರ್ಶಕದಲ್ಲಿ ಕಾಣುವಂಥವು (ಸಂಶೋಧನಾಲತದಲ್ಲಿ ಪರೀಕ್ಷಿಸಿದ್ದು): ಬೂಷ್ಟು ಅಣಬೆ - 14 (ಗೊತ್ತಾದದ್ದು); ಮೊದಲಾದವು - 10 (ಗೊತ್ತಿಲ್ಲದ್ದು); ಪಾಚಿ ಗಿಡಗಳು - 30 (ಗೊತ್ತಾದದ್ದು) ಮತ್ತು 33 (ಗೊತ್ತಿಲ್ಲದ್ದು) ಇಷ್ಟೊಂದು ಸಸ್ಯ ವೈವಿಧ್ಯವೂ ರೆಂಬೆಯ ಮೂರಡಿ ಉದ್ದದಲ್ಲಿ ಅಡಗಿತ್ತು.”
“ಕಾಡಿನ ವಾಸ್ತು” ಎಂಬ ವಿಸ್ತಾರವಾದ ಐದನೆಯ ಅಧ್ಯಾಯದಲ್ಲಿ, ಕಾಡಿನಲ್ಲಿ ನೆಲದಿಂದ 120 ಅಡಿ ಎತ್ತರದ ವರೆಗಿನ ನಾಲ್ಕು ಹಂತಗಳ ಹಸುರು ಸಸ್ಯಪ್ರಪಂಚದ ಸ್ವಾರಸ್ಯ ಹಾಗೂ ವಿಸ್ಮಯಗಳನ್ನು ರೋಚಕವಾಗಿ ವಿವರಿಸಿದ್ದಾರೆ.
"ಕಾಡು ಪ್ರಾಣಿಗಳು" ಎಂಬ ಎರಡನೇ ಭಾಗದಲ್ಲಿ, ಆನೆಗಳು, ಹಾರು ಅಳಿಲು, ಕಾಡೆಮ್ಮೆ, ಹುಲಿ, ಕರಡಿ ಬಗ್ಗೆ ಪ್ರತ್ಯೇಕ ಅಧ್ಯಾಯಗಳಿವೆ. ಈ ಪ್ರಾಣಿಗಳ ಬಗ್ಗೆ ಹಲವಾರು ಕೌತುಕದ ಸಂಗತಿಗಳನ್ನು ಬರೆದಿದ್ದಾರೆ. ಈ ಪುಸ್ತಕ ಬಿ.ಜಿ.ಎಲ್. ಸ್ವಾಮಿಯವರ ವ್ಯಾಪಕ ಅಧ್ಯಯನ, ಸಂಶೋಧನೆ ಮತ್ತು ಕ್ಷೇತ್ರಾಧ್ಯಯನಗಳ ಮಗದೊಂದು ಪುರಾವೆ ಎಂಬುದಂತೂ ನಿಜ.