ಬೆಂಕಿ ಇರುವೆಗಳೆಂಬ ಅಪಾಯಕಾರಿ ಕೀಟಗಳು

ಬೆಂಕಿ ಇರುವೆಗಳೆಂಬ ಅಪಾಯಕಾರಿ ಕೀಟಗಳು

ಇದೇನು? ಬೆಂಕಿ ಇರುವೆಗಳು, ಇದರಿಂದ ಬೆಂಕಿ ಹುಟ್ಟಿಕೊಳ್ಳುತ್ತಾ ಅಥವಾ ಬೆಂಕಿಯನ್ನು ಉತ್ಪಾದಿಸುತ್ತಾ ಎಂಬೆಲ್ಲಾ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು. ಈ ಇರುವೆಗಳಿಂದ ಬೆಂಕಿ ಉತ್ಪಾದನೆಯಾಗುವುದಿಲ್ಲ ಆದರೆ ಕಚ್ಚಿದರೆ ಮಾತ್ರ ಜೀವಹಾನಿಯಾಗೋ ಸಾಧ್ಯತೆ ಇರುತ್ತದೆ.  ಬೆಂಕಿ ಇರುವೆ ಅಥವಾ ಫೈರ್ ಆಂಟ್ (Fire ant) ಎಂದು ಕರೆಯಲ್ಪಡುವ ಈ ಇರುವೆಗಳ ಮೈ ಬಣ್ಣ ಬೆಂಕಿ ಹೊಂಬಣ್ಣದಲ್ಲಿರುತ್ತದೆ. ನೋಡುವಾಗ ಉರಿಯುತ್ತಿರುವ ಕೆಂಡದಂತೆ ಕಾಣಿಸುವುದರಿಂದ ಈ ಇರುವೆಗಳನ್ನು ಬೆಂಕಿ ಇರುವೆಗಳೆಂದು ಕರೆಯುತ್ತಾರೆ. 

ಸೊಲೆನೋಪ್ಸಿಸ್ (Solenopsis) ಎಂಬ ವೈಜ್ಞಾನಿಕ ಹೆಸರಿರುವ ಈ ಬೆಂಕಿ ಇರುವೆಯು ಕೀಟಗಳ ವರ್ಗಕ್ಕೆ ಸೇರಿದೆ. ಈ ಇರುವೆಗಳು ಎರಡು ಮಿ.ಮೀ.ನಿಂದ ಆರು ಮಿ.ಮೀ.ವರೆಗೆ ಬೆಳೆಯುತ್ತದೆ. ಬಹುತೇಕ ಎಲ್ಲಾ ಕೀಟಗಳಿಗಿರುವಂತೆ ಇದಕ್ಕೆ ಒಂದು ಜೊತೆ ಆಂಟೆನಾ, ಆರು ಕಾಲುಗಳು ಹಾಗೂ ಮೂರು ಭಾಗದ ದೇಹ ಪ್ರಕೃತಿಯನ್ನು ಹೊಂದಿರುತ್ತದೆ. ತನಗಿರುವ ಆಂಟೆನಾದಿಂದ ಇದು ವಾಸನೆಯನ್ನು ಗ್ರಹಿಸುತ್ತದೆ. ಇರುವೆಗಳು ಸಂಘಜೀವಿಗಳಾಗಿರುವುದರಿಂದ ಗುಂಪಾಗಿಯೇ ಬೇಟೆಯಾಡುತ್ತವೆ. ಬೆಂಕಿ ಇರುವೆಗಳು ಮಾಂಸಹಾರಿಗಳು. ಇವುಗಳ ಕುಟುಂಬದಲ್ಲಿ ಒಂದೇ ಒಂದು ಹೆಣ್ಣು ಇರುವೆ ಅಂದರೆ ರಾಣಿ, ಒಂದು ಗಂಡು ಇರುವೆ, ಮತ್ತು ಅಸಂಖ್ಯಾತ ಕೆಲಸಗಾರ ಇರುವೆಗಳು ಇರುತ್ತದೆ. ರಾಣಿ ಇರುವೆ ಮಾತ್ರವೇ ಮೊಟ್ಟೆಗಳನ್ನು ಇಡಬಲ್ಲುದು. ಕೇವಲ ಸಂತಾನೋತ್ಪತ್ತಿಗಾಗಿ ಮಾತ್ರ ಹೆಣ್ಣು ಇರುವೆ ಗಂಡು ಇರುವೆ ಜೊತೆ ಮಿಲನ ಹೊಂದುತ್ತದೆ. ಮಿಲನದ ಬಳಿಕ ಗಂಡು ಇರುವೆಯನ್ನು ಅದು ಗೂಡಿನಿಂದ ಹೊರಗೆ ಹಾಕುವುದರಿಂದ ಗಂಡು ಇರುವೆ ಸತ್ತು ಹೋಗುತ್ತದೆ. ಮೊದಲ ಮಿಲನದ ಸಂದರ್ಭದಲ್ಲಿ ಗಂಡು-ಹೆಣ್ಣು ಇರುವೆಗಳಿಗೆ ರೆಕ್ಕೆ ಇರುತ್ತದೆ. ನಂತರ ಅದು ಉದುರಿಹೋಗುತ್ತದೆ. ಕೆಲವು ಸಲ ಹೆಣ್ಣು ಇರುವೆ ತನ್ನ ರೆಕ್ಕೆಯನ್ನು ಒಂದು ವರ್ಷಗಳವರೆಗೆ ಉದುರಿಸದೇ ಇಟ್ಟಿರುತ್ತದೆ. ಹೆಣ್ಣು ಇರುವೆ ಗುಂಪಿನಲ್ಲಿರುವ ಇತರ ಇರುವೆಗಳಿಗಿಂತ ಆಕಾರದಲ್ಲಿ ದೊಡ್ಡದಾಗಿರುತ್ತದೆ. 

ಹೆಣ್ಣು ಇರುವೆ ಸುಮಾರು ಏಳು ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ. ಹೆಣ್ಣು ಇರುವೆಯು ದಿನಕ್ಕೆ ಸುಮಾರು ೧೫೦೦ರಷ್ಟು ಮೊಟ್ಟೆಯನ್ನು ಇಡುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಕೆಲಸಗಾರ ಇರುವೆಯು ಆರು ತಿಂಗಳು ಮಾತ್ರ ಬದುಕಿರುತ್ತವೆ. ಅವುಗಳು ಹುಟ್ಟಿದ ಒಂದು ತಿಂಗಳ ಒಳಗಾಗಿ ಪ್ರೌಢಾವಸ್ತೆಗೆ ತಲುಪುತ್ತವೆ. ಶತ್ರುಗಳಿಂದ ತನ್ನ ಗುಂಪನ್ನು ರಕ್ಷಿಸುವುದೇ ಈ ಕೆಲಸಗಾರ ಇರುವೆಗಳ ಕೆಲಸ. ಬೆಂಕಿ ಇರುವೆಗಳು ತೇವಾಂಶ ಭರಿತ ಪ್ರದೇಶಗಳಲ್ಲಿ ತನ್ನ ಗೂಡನ್ನು ನಿರ್ಮಿಸಿಕೊಳ್ಳುತ್ತದೆ. ನದಿ ಅಥವಾ ಹಳ್ಳಗಳ ದಡದಲ್ಲಿ ತೇವಾಂಶ ಇರುವಲ್ಲಿ ಮಣ್ಣಿನ ದಿಬ್ಬಗಳನ್ನು ರಚಿಸಿ ಅದರಲ್ಲಿ ತನ್ನ ಗುಂಪನ್ನು ಬೆಳೆಸುತ್ತದೆ. 

ಪ್ರಪಂಚದಲ್ಲಿ ಸುಮಾರು ೨೫೦ಕ್ಕೂ ಮಿಕ್ಕಿದ ಬೆಂಕಿ ಇರುವೆಗಳ ಪ್ರಭೇಧಗಳಿವೆ ಎಂದು ಅಂದಾಜಿಸಲಾಗಿದೆ. ತಮಗೆ ತೊಂದರೆ ಕೊಟ್ಟ ಜೀವಿಯನ್ನು ಇದು ಕುಟುಕಿದಾಗ ಸೊಲೆನೊಪ್ಸಿನ್ ಎಂಬ ರಾಸಾಯನಿಕವು ಜೀವಿಯ ದೇಹವನ್ನು ಸೇರುತ್ತದೆ. ಇದು ತೀವ್ರವಾದ ಉರಿಯನ್ನು ಉಂಟು ಮಾಡುತ್ತದೆ. ಈ ರಾಸಾಯನಿಕದಿಂದ ಉಂಟಾದ ಉರಿಯು ಒಂದೆರಡು ವಾರಗಳವರೆಗೂ ಇರುವುದಿದೆ. ಸಣ್ಣ ಸಣ್ಣ ಕೀಟಗಳು, ಪ್ರಾಣಿಗಳು ಇದರ ಕಡಿಯುವಿಕೆಯಿಂದ ಜೀವ ಕಳೆದುಕೊಳ್ಳುವುದೂ ಇದೆ. ಗುಂಪಿನಲ್ಲಿ ಈ ಇರುವೆಗಳು ದಾಳಿ ಮಾಡುವುದರಿಂದ ಉರಿತದ ಪ್ರಮಾಣ ಜಾಸ್ತಿಯಾಗುತ್ತದೆ.

ನಾವು ವಾಸಿಸುತ್ತಿರುವ ಈ ವಿಶ್ವ ಒಂದು ಅಚ್ಚರಿಗಳ ಕಣಜ. ಏನೆಲ್ಲಾ ಅಪರೂಪದ ಜೀವ ವೈವಿಧ್ಯಗಳು ಇವೆಯಲ್ಲವೇ? ಬೆಂಕಿ ಇರುವೆಗಳೂ ಈ ಸಾಲಿಗೆ ಸೇರುತ್ತವೆ.

ಚಿತ್ರ ವಿವರ: ೧. ಗುಂಪಾಗಿ ಇರುವ ಬೆಂಕಿ ಇರುವೆಗಳು

       ೨. ರೆಕ್ಕೆಯನ್ನು ಹೊಂದಿರುವ ಹೆಣ್ಣು ಬೆಂಕಿ ಇರುವೆ       

ಚಿತ್ರ ಕೃಪೆ: ಅಂತರ್ಜಾಲ ತಾಣ