ಬೆಂಗಳೂರಿಗೆ ಸುರಂಗ ಮಾರ್ಗಕ್ಕಿಂತ ಸರಳ ಪರ್ಯಾಯ ಇಲ್ಲವೇ ?
50000 ಕೋಟಿ, 100 ಕಿಲೋಮೀಟರ್ ದೂರದ ಸುರಂಗ ರಸ್ತೆಗೆ, ಎರಡು ಹಂತಗಳಲ್ಲಿ, 500 ಕೋಟಿ ಪ್ರತಿ ಕಿಲೋಮೀಟರ್ ಗೆ, ಈಗಿನ ಅಂದಾಜು ವೆಚ್ಚ ಇದು. ಯೋಜನೆ ಮುಗಿಯುವ ವೇಳೆಗೆ ಇನ್ನೂ 10000 ಕೋಟಿ ಹೆಚ್ಚಾಗಬಹುದು. ಸರ್ಕಾರವೇ ನಿರ್ಮಿಸಬಹುದು ಅಥವಾ ಪಿಪಿಪಿ ಅಂದರೆ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವ ಆದರೂ ಆಗಬಹುದು. ಬೆಂಗಳೂರಿನ ಅತಿಯಾದ ಟ್ರಾಫಿಕ್ ಒತ್ತಡ ನಿವಾರಿಸಲು ಮತ್ತು ಸಮಯ ಉಳಿಸಲು… ಬ್ರ್ಯಾಂಡ್ ಬೆಂಗಳೂರು ಅಭಿವೃದ್ಧಿ ಪಡಿಸಲು, ರಸ್ತೆ ಅಭಿವೃದ್ಧಿಯಿಂದ ವಿವಿಧ ರೀತಿಯಲ್ಲಿ ಆರ್ಥಿಕ ಲಾಭಗಳಿಸಲು, ಟೋಲ್ ಸಂಗ್ರಹವೂ ಸೇರಿ...
ಗಮನಿಸಿ, ಈ ನೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕೃಷಿ ಭೂಮಿ ಇಲ್ಲ. ಕೈಗಾರಿಕಾ ಉತ್ಪಾದನೆಯೂ ಅಷ್ಟೇನು ಇಲ್ಲ, ರಕ್ಷಣಾ ಮಹತ್ವವೂ ಇಲ್ಲ, ಶಿಕ್ಷಣ ಸಂಸ್ಥೆಗಳು, ಸಾಫ್ಟವೇರ್ ಕಂಪನಿಗಳು, ವ್ಯಾಪಾರಿಗಳು, ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು, ಮನರಂಜನಾ ಚಟುವಟಿಕೆಗಳು ಜೊತೆಗೆ ಇವರಿಗೆ ಪೂರಕವಾಗಿ ಕೆಲಸ ಮಾಡುವ ಕಾರ್ಮಿಕರು ಮತ್ತು ಇವರೆಲ್ಲರೂ ಅನುಕೂಲಕ್ಕಾಗಿ ಮತ್ತು ಇವರೆಲ್ಲರೂ ಉತ್ಪಾದನಾ ಕ್ಷೇತ್ರಕ್ಕಿಂತ ಹೆಚ್ಚಾಗಿ ಸೇವಾ ವಲಯದ ವ್ಯಾಪ್ತಿಗೆ ಸೇರುವವರು. ಈಗಾಗಲೇ ರಿಂಗ್ ರೋಡ್, ಬೈಪಾಸ್ ರೋಡ್, ಫ್ಲೈ ಓವರ್, ಅಂಡರ್ ಪಾಸ್, ಮೆಟ್ರೋ ರೈಲ್, ಲೋಕಲ್ ಟ್ರೈನ್, ಸ್ಟೀಲ್ ಬ್ರಿಡ್ಜ್ ಹೀಗೆ ಭೂಮಿ ಆಕಾಶ ಪಾತಾಳ ಎಲ್ಲಾ ಉಪಯೋಗಿಸಿಕೊಂಡು ಆಗಿದೆ. ಆದರೂ ಟ್ರಾಫಿಕ್ ಜಾಮ್ ತಪ್ಪಿಲ್ಲ. ಈ ಸುರಂಗ ರಸ್ತೆ ನಿರ್ಮಾಣದ ನಂತರವೂ ತಪ್ಪುವುದಿಲ್ಲ. ಇಸ್ರೇಲ್ ಮಾದರಿಯಲ್ಲಿ ಇಬ್ಬರು ವ್ಯಕ್ತಿಗಳು ಆಕಾಶ ಮಾರ್ಗದಲ್ಲಿ ಸಂಚರಿಸುವ ಡ್ರೋನ್ ಹಾರಾಟ ವ್ಯವಸ್ಥೆ ಮಾಡಿದರೂ ಟ್ರಾಫಿಕ್ ಜಾಮ್ ಇದ್ದೇ ಇರುತ್ತದೆ. ಮುಂದೆ..
ಇಷ್ಟು ದೊಡ್ಡ ಮೊತ್ತದ ಹಣ ಖರ್ಚು ಮಾಡಿ ಕೆಲವೇ ಲಕ್ಷದಷ್ಟು ಒಂದು ನಗರದ ಜನ ಹಣ ಕೊಟ್ಟು ವಾಹನದಲ್ಲಿ ಓಡಾಡುವುದಕ್ಕೆ ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರ ಸಮಯ ಮತ್ತು ಸಂಪನ್ಮೂಲಗಳನ್ನು ಉಪಯೋಗಿಸುವುದು ಸರಿಯೇ, ಇದಕ್ಕಿಂತ ಉತ್ತಮ ಮತ್ತು ಸರಳ ಪರ್ಯಾಯ ಮಾರ್ಗಗಳು ಇಲ್ಲವೇ? ಕಲ್ಯಾಣ ಕರ್ನಾಟಕದ ಅನೇಕ ಹಳ್ಳಿಗಳು ಈಗಲೂ ಮನುಷ್ಯರು ವಾಸಿಸಲು ಯೋಗ್ಯವಾಗಿಯೇ ಇಲ್ಲ. ಹಂದಿ ಗೂಡಿನಂತ ಮನೆಗಳಲ್ಲಿ ಲಕ್ಷಾಂತರ ಜನ ವಾಸಿಸುತ್ತಿದ್ದಾರೆ. ಅನೇಕ ತಾಂಡಾಗಳಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ಸರ್ಕಾರದ ವಿದ್ಯಾರ್ಥಿ ಹಾಸ್ಟೆಲ್ ಗಳಲ್ಲಿ ಈಗಲೂ ಗ್ರಾಂ ಲೆಕ್ಕದಲ್ಲಿ ಊಟ ನೀಡುತ್ತಿದ್ದಾರೆ. ತಟ್ಟೆ ಲೋಟ ಹಾಸಿಗೆ ಚಾಪೆಗಳಿಗೂ ಬರವಿದೆ. ಕೆರೆ ಕಟ್ಟೆಗಳು ಬಹುತೇಕ ಹೂಳು ಬಿದ್ದು ಅಥವಾ ಮಾಯವಾಗಿ ಮಳೆಯನ್ನೇ ಆಶ್ರಯಿಸಬೇಕಾಗಿದೆ. ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಅನೇಕ ಊರುಗಳಲ್ಲಿ ಸರ್ಕಾರಿ ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ಶೌಚಾಲಯಗಳು ಉಪಯೋಗಿಸುವ ಸ್ಥಿತಿಯಲ್ಲಿ ಇಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಆಧುನಿಕ ಯಂತ್ರಗಳೇ ಇಲ್ಲ. ಇಡೀ ರಾಜ್ಯದಲ್ಲಿ ಬಹುತೇಕ ಸಾರ್ವಜನಿಕ ಗ್ರಂಥಾಲಯಗಳು ಭೂತ ಬಂಗಲೆಯ ರೀತಿಯಲ್ಲಿ ನಿಗೂಢವಾಗಿವೆ.
ಇಷ್ಟೆಲ್ಲಾ ಸಮಸ್ಯೆಗಳು ಇರುವಾಗ ಹೊಸ ಸರ್ಕಾರ ಸುರಂಗ ಮಾರ್ಗ ನಿರ್ಮಿಸಲು ಪ್ರಾರಂಭದಲ್ಲಿಯೇ ಆದ್ಯತೆಯಾಗಿ ಇಷ್ಟೊಂದು ಆಸಕ್ತಿ ತೆಗೆದುಕೊಳ್ಳುವುದು ಸರಿಯೇ? ಮೂಲಭೂತವಾಗಿ ನಗರದ ಈ ಆಧುನಿಕ ಕೃತಕ ಬುದ್ಧಿಮತ್ತೆಯ ಜನರಿಗೆ ತಾಳ್ಮೆಯೇ ಇಲ್ಲ. ನೀವು ಸುರಂಗ ಮಾರ್ಗವೇ ನೀಡಿ ಅಥವಾ ದಶಪಥ ರಸ್ತೆಯೇ ನೀಡಿ ಎಷ್ಟೇ ವೇಗವಾಗಿ ಹೋಗಲಿ ಎಷ್ಟೇ ಸಮಯ ಉಳಿಸಲಿ ಅದರಿಂದ ಹೆಚ್ಚಿನ ಲಾಭವೇನು ಆಗುವುದಿಲ್ಲ. ಪ್ರಾರಂಭದಲ್ಲಿ ಸ್ವಲ್ಪ ಉತ್ಸಾಹ ಇರಬಹುದು ಅಷ್ಟೇ. ಈ ಸಮಯದ ಉಳಿತಾಯ ಸಹ ಆ ರಸ್ತೆಯ ಕೊನೆಯವರೆಗೆ ಮಾತ್ರ ನಂತರ ಮತ್ತೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿ ಕೊಳ್ಳುತ್ತಾರೆ.
ಈಗಾಗಲೇ ಕಾಲ್ನಡಿಗೆಯಿಂದ ವಿಮಾನದವರೆಗೆ, ಪಾರಿವಾಳದಿಂದ ಇಂಟರ್ ನೆಟ್ ವರೆಗೆ, ಗುಡಿಸಲಿನಿಂದ ಸುಸಜ್ಜಿತ ಮನೆಯವರೆಗೆ, ಬೆಂಕಿ ಪೊಟ್ಟಣಕ್ಕಾಗಿ ಕಿಲೋಮೀಟರ್ ದೂರಕ್ಕೆ ಹೋಗುವುದರಿಂದ ಮನೆಯ ಬಾಗಿಲಿಗೆ ಎಲ್ಲವೂ ದೊರೆಯುವವರೆಗೆ, ರಾತ್ರಿ ನಾಟಕಗಳಿಂದ ಓಟಿಟಿವರೆಗೆ ಹೀಗೆ ಸಾಕಷ್ಟು ಅಭಿವೃದ್ಧಿ ಆಗಿದ್ದರು ಆ ಅಭಿವೃದ್ಧಿಗೆ ತಕ್ಕಂತೆ ಮನುಷ್ಯ ಸುಖವಾಗಿ ಸುರಕ್ಷಿತವಾಗಿ ಆರೋಗ್ಯಕರವಾಗಿ ಇದ್ದಾರೆಯೇ? ಕಾಲಕ್ಕೆ ತಕ್ಕಂತೆ ಅಭಿವೃದ್ಧಿ ಬೇಕು ನಿಜ. ಆದರೆ ಅದು ಸುಸ್ಥಿರವಾಗಿರಬೇಕು. ಸರ್ವತೋಮುಖ ಪ್ರಗತಿ ಸಾಧಿಸುವಂತಿರಬೇಕು. ಪ್ರಕೃತಿಗೆ ಅಥವಾ ಪರಿಸರಕ್ಕೆ ಹೆಚ್ಚು ಹಾನಿಯಾಗುವಂತಿರಬಾರದು. ಜನರು ಸೋಮಾರಿಗಳಾಗಿ ಅಹಂಕಾರ ಪಡುವಂತಿರಬಾರದು.
ನಗರದ ಟ್ರಾಫಿಕ್ ಸಮಸ್ಯೆಗೆ ಹಲವಾರು ಇತರ ಪರ್ಯಾಯ ಮಾರ್ಗಗಳು ಇರುತ್ತದೆ. ಸಾರ್ವಜನಿಕ ಸಂಪರ್ಕ ಸಾರಿಗೆ ಅತ್ಯುತ್ತಮ ಪಡಿಸುವುದು, ಖಾಸಗಿ ವಾಹನಗಳ ನಿಯಂತ್ರಣ, ಶಿಕ್ಷಣ ಮತ್ತು ಎಲ್ಲಾ ಕಚೇರಿಗಳ ಸಮಯ ಮತ್ತು ಸ್ಥಳಗಳ ಮರು ವರ್ಗೀಕರಣ, ಮನರಂಜನಾ ಸ್ಥಳಗಳನ್ನು ನಗರದ ಹೊರಗಡೆ ಕೇಂದ್ರೀಕರಿಸುವುದು, ರಾಜ್ಯದ ಇತರ ನಗರಗಳನ್ನು ಅಭಿವೃದ್ಧಿಪಡಿಸುವುದು ಹೀಗೆ ಅನೇಕ ಯೋಜನೆಗಳು ಇರುತ್ತವೆ. ಇದೆಲ್ಲದರ ಜೊತೆಗೆ ಟ್ರಾಫಿಕ್ ಎಷ್ಟೇ ಹೆಚ್ಚಾದರೂ ಅನಿವಾರ್ಯವಾಗಿ ಅದನ್ನು ಸ್ವಲ್ಪಮಟ್ಟಿಗೆ ಸಹಿಸಿಕೊಳ್ಳುವ ತಾಳ್ಮೆಯೂ ಮುಖ್ಯ. ನಮ್ಮಂತೆ ಇತರರು ಸಂಚರಿಸುವರು. ಅದಕ್ಕಾಗಿ ನಾವು ಕಾಯುವ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ವಿಶಾಲ ಅರಿವೂ ಇರಬೇಕು.
ಅಭಿವೃದ್ಧಿ ಕೇವಲ ವಸ್ತುಗಳಿಗೆ ಮಾತ್ರ ಸೀಮಿತವಾಗಿರಬಾರದು. ಮಾನಸಿಕ ಅಭಿವೃದ್ಧಿ ಸಹ ಮುಖ್ಯ. ಆಗ ಸಮಸ್ಯೆಗಳು ಸಹ ಕಡಿಮೆ ಒತ್ತಡ ಸೃಷ್ಟಿಸುತ್ತದೆ. ನಗರೀಕರಣದ ಲಾಭದ ಜೊತೆಗೆ ಅದರ ದುಷ್ಪರಿಣಾಮಗಳನ್ನು ಸಹ ಅಷ್ಟೇ ತಾಳ್ಮೆಯಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು.
ಸುಮ್ಮನೆ ಇರುವಷ್ಟೇ ಜಾಗದಲ್ಲಿ ಒಂದರಮೇಲೊಂದು ಯೋಜನೆಗಳನ್ನು ರೂಪಿಸುತ್ತಾ, ಜನಸಂಖ್ಯೆ ಹೆಚ್ಚಿಸುತ್ತಾ, ಪರಿಸರ ನಾಶಮಾಡುತ್ತಾ, ಅನಾರೋಗ್ಯ ವಾತಾವರಣ ನಿರ್ಮಿಸುತ್ತಾ ಗಾರ್ಬೇಜ್ ಸಿಟಿ ಮಾಡಿದರೆ ಪ್ರಯೋಜನವೇನು. ಒಮ್ಮೆ ಭೂಮಿ ಬೇಸರವಾಗಿ ಸ್ವಲ್ಪ ಮಗ್ಗಲು ಬದಲಾಯಿಸಿದರು ಸಾಕು ಎಲ್ಲವೂ ಸರ್ವನಾಶವಾಗುತ್ತದೆ. ಅದು ಪ್ರಾಕೃತಿಕ ಅವಘಡ. ಅದನ್ನು ನಿರೀಕ್ಷೆ ಮಾಡಲಾಗದು ನಿಜ. ಆದರೆ ಕನಿಷ್ಠ ಸರ್ಕಾರಕ್ಕೆ ಅಭಿವೃದ್ಧಿಯ ದೂರದೃಷ್ಟಿ ಇರಬೇಕಲ್ಲವೇ. ಟ್ರಾಫಿಕ್ ಹೆಚ್ಚಳದಿಂದ ಸ್ವಲ್ಪ ತೊಂದರೆಯಾಗಬಹದು. ಆದರೆ ಅದರ ನಿವಾರಣೆಗಾಗಿ ಕೈಗೊಳ್ಳುವ ಯೋಜನೆಗಳಿಂದ ಅದಕ್ಕಿಂತ ಹೆಚ್ಚಿನ ಹಾನಿಯಾಗುತ್ತದೆ. ಸಾರ್ವಜನಿಕ ಹಣ ಯಥೇಚ್ಛವಾಗಿ ಖರ್ಚಾಗುತ್ತದೆ. ಈಗಾಗಲೇ ಸರ್ಕಾರದ ಎಷ್ಟೋ ಪರ್ಸೆಂಟ್ ಹಣ ಕೇವಲ ಬಡ್ಡಿಗಾಗಿ ಖರ್ಚಾಗುತ್ತಿದೆ. ಅಂತಹ ಸಂದರ್ಭದಲ್ಲಿ ಈ ಯೋಜನೆ ಹೊಟ್ಟೆಗೆ ಅನ್ನವಿಲ್ಲ ಜುಟ್ಟಿಗೆ ಮಲ್ಲಿಗೆ ಹೂವಿನಂತಿದೆ. ಒಟ್ಟಿನಲ್ಲಿ ನಾವು ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ ಶೋಕಿ ಬದುಕಿಗಿಂತ ಸರಳ ಸುಂದರ ಶ್ರಮದಾಯಕ ಪ್ರಗತಿಪರ ವೈಚಾರಿಕ ಜೀವನಶೈಲಿಯೇ ನಮ್ಮ ಮೊದಲ ಆಯ್ಕೆ.
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ