ಬೆಂಗಳೂರಿನ ಹೊರವಲಯದಲ್ಲಿ ಮಾದರಿ ಜಲಪ್ರಯೋಗ

ಬೆಂಗಳೂರಿನ ಹೊರವಲಯದಲ್ಲಿ ಮಾದರಿ ಜಲಪ್ರಯೋಗ

ಬರಹ

(ಬೆಂಗಳೂರಿನ ಸುತ್ತಲಿನ ಅರದೇಶಹಳ್ಳಿ, ಕಡತನಮಲೆ, ಅದ್ದೆ ಮತ್ತು ಬಿಸುವನಹಳ್ಳಿ ಗ್ರಾಮಗಳಲ್ಲಿ ಸದ್ದಿಲ್ಲದ ಜಲಕ್ರಾಂತಿಯೊಂದು ನಡೆಯುತ್ತಿದೆ. ಐದು ವರ್ಷಗಳ ಹಿಂದೆ ದೊಡ್ಡಬಳ್ಳಾಪುರದ ಜನಜಾಗೃತಿ ಸಂಸ್ಥೆ ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳ ಸಹಕಾರ ಪಡೆದು, ಈ ಭಾಗದ ಒಂದು ಕಿ.ಮೀ ಉದ್ದ, ೫ರಿಂದ ೩೦ ಮೀಟರ್ ಅಗಲ ಹಾಗೂ ೨-೩ ಮೀಟರ್ ಆಳವಿರುವ ಕೊರಕಲನ್ನು ಅಂತರ್ಜಲ ಇಂಗಿಸುವ ತಾಣವನ್ನಾಗಿ ಆರಿಸಿಕೊಳ್ಳಲಾಯಿತು. ಏನೂ ಕಷ್ಟವಿಲ್ಲದೇ ರೂ.೨ ಲಕ್ಷ ದೇಣಿಗೆ ಸಂಗ್ರಹವಾಯಿತು. ಸರ್ಕಾರದ ನೆರವಿಗಾಗಿ ಕಾಯದೇ ರೈತರು, ನೀರನ್ನು ನಿಲ್ಲಿಸಲು ಮಣ್ಣಿನ ಐದು ಚೆಕ್ ಡ್ಯಾಂಗಳನ್ನು ಕಟ್ಟಲು ಸಿದ್ಧರಾದರು. ನಂತರ ಏನಾಯಿತು? ಜಲ ಮರುಪೂರಣ ಯಶಸ್ವಿಯಾಯಿತೆ?)

ಬೆಂಗಳೂರಿನ ಹೊರವಲಯದ ಅರದೇಶಹಳ್ಳಿ, ಕಡತನಮಲೆ, ಅದೆ ಮತ್ತು ಬಿಸುವನಹಳ್ಳಿ ಗ್ರಾಮದಲ್ಲಿ ಸದ್ದಿಲ್ಲದ ಜಲಕ್ರಾಂತಿಯೊಂದು ನಡೆಯುತ್ತಿದೆ. ಸುತ್ತಲ ಊರುಗಳ ಹಲವಾರು ರೈತರಿಗೆ ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಯ ಅಂಚಿನ ಒಂದು ಸಣ್ಣ ಮಣ್ಣಿನ ಚೆಕ್ ಡ್ಯಾಂ (ಅಣೆಕಟ್ಟು) ಯಾತ್ರಾ ಸ್ಥಳದಂತಾಗಿಬಿಟ್ಟಿದೆ.

ಇದೆಲ್ಲ ಪ್ರಾರಂಭವಾಗಿದ್ದು ಆಕಸ್ಮಿಕವಾಗಿ. ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಕೆಲವು ಸರ್ಕಾರೇತರ ಸಂಸ್ಥೆಗಳು ನಡೆಸಿದ ಅಂತರ್ಜಲ ಹೆಚ್ಚಿಸುವ ಕಾಮಗಾರಿಗಳ ಬಗ್ಗೆ ತಿಳಿದುಕೊಂಡ ಕೆಲ ಉತ್ಸಾಹಿ ರೈತರು ಕೈಗಾರೀಕರಣದಿಂದ ಒಣಭೂಮಿಯಾಗಿ ಪರಿವರ್ತನೆಗೊಂಡಿರುವ ದೇವನಹಳ್ಳಿ ತಾಲೂಕಿನ ಅರದೇಶಹಳ್ಳಿ ಮತ್ತು ಅದ್ದೆ, ದೊಡ್ಡಬಳ್ಳಾಪುರ ತಾಲೂಕಿನ ಬಿಸುವನಹಳ್ಳಿ ಮತ್ತು ಬೆಂಗಳೂರು ಉತ್ತರ ತಾಲೂಕಿನ ಕಡತನಮಲೆ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಅಂತರ್ಜಲ ಮರುಪೂರಣ ಮಾಡುವ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸಿದರು.

ಈ ಹಂತದಲ್ಲಿ ಮುಂದೆ ಬಂದಿದ್ದು ದೊಡ್ಡಬಳ್ಳಾಪುರದ ಜನಜಾಗೃತಿ ಸಮಿತಿ. ಯೋಜನೆಯನ್ನು ಜಾರಿಗೊಳಿಸುವ ಜವಾಬ್ದಾರಿ ವಹಿಸಿಕೊಂಡ ಸಮಿತಿ ತಾಂತ್ರಿಕ ಮಾರ್ಗದರ್ಶನಕ್ಕಾಗಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಇರುವ ಆಕ್ಸ್‌ಫಾಮ್ ಇಂಡಿಯಾ ಎಂಬ ಸರ್ಕಾರೇತರ ಸಂಸ್ಥೆಯ ನೆರವು ಕೋರಿತು. ನೂರಾರು ಕೆರೆಗಳು ನಿರ್ಮಾಣವಾಗಲು ಕಾರಣರಾದ ಜಲತಜ್ಞ ಅಯ್ಯಪ್ಪ ಮಸಗಿಯವರನ್ನು ಸಂಸ್ಥೆ ಕಳಿಸಿಕೊಟ್ಟಿತು. ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳ ಸಹಕಾರ ಪಡೆದು, ಈ ಭಾಗದ ಒಂದು ಕಿ.ಮೀ ಉದ್ದ, ೫ರಿಂದ ೩೦ ಮೀಟರ್ ಅಗಲ ಹಾಗೂ ೨-೩ ಮೀಟರ್ ಆಳವಿರುವ ಕೊರಕಲನ್ನು ಅಂತರ್ಜಲ ಇಂಗಿಸುವ ತಾಣವನ್ನಾಗಿ ಆರಿಸಿಕೊಳ್ಳಲಾಯಿತು.

ಮೂರೂ ಗ್ರಾಮಗಳ ಶೇಕಡಾ ೨೫ ಗ್ರಾಮಸ್ಥರು ಯೋಜನೆಗೆ ತಗಲುವ ಖರ್ಚನ್ನು ವಹಿಸಿಕೊಳ್ಳಲು ಸ್ವಯಂಪ್ರೇರಿತರಾಗಿ ಮುಂದೆ ಬಂದರು. ರೈತರಾದ ಮರಿಯಪ್ಪ ಮತ್ತು ಸುಬ್ಬಣ್ಣ ಯೋಜನೆ ಪ್ರದೇಶದಲ್ಲಿ ಬರುವ ತಮ್ಮ ಭೂಮಿಯನ್ನು ಬಿಟ್ಟುಕೊಟ್ಟರು. ಏನೂ ಕಷ್ಟವಿಲ್ಲದೇ ರೂ.೨ ಲಕ್ಷ ದೇಣಿಗೆ ಸಂಗ್ರಹವಾಯಿತು. ಸರ್ಕಾರದ ನೆರವಿಗಾಗಿ ಕಾಯದೇ ರೈತರು, ನೀರನ್ನು ನಿಲ್ಲಿಸಲು ಸುಲಭವಾದ ಮಣ್ಣಿನ ಐದು ಚೆಕ್ ಡ್ಯಾಂಗಳನ್ನು ಕಟ್ಟಲು ಸಿದ್ಧರಾದರು. ರೈತರು ತಾವೇ ಟ್ರ್ಯಾಕ್ಟರ್‌ಗಳ ಮೂಲಕ, ಜೆಸಿಬಿಗಳ ನೆರವಿನಿಂದ ಒಂದು ಕಿಮೀ ಉದ್ದದ ಆಳ ಕೊರಕಲಿಗೆ ಅಡ್ಡವಾಗಿ ಎರಡು ಕಡೆ ಮಣ್ಣಿನ ಚೆಕ್ ಡ್ಯಾಮ್‌ಗಳನ್ನು ಎರಡೇ ದಿನಗಳಲ್ಲಿ ಕಟ್ಟಿಬಿಟ್ಟರು. ೨೫ ಮೀಟರ್ ಅಗಲ ಹಾಗೂ ೫ ಮೀಟರ್ ಎತ್ತರದ ಹರಿನಾಲಾ ಹೆಸರಿನ ಮುಖ್ಯ ಚೆಕ್ ಡ್ಯಾಮ್ ಅಂತೂ ಕೇವಲ ಒಂದೇ ದಿನದಲ್ಲಿ ತಯಾರಾಯಿತು.

ಅರದೇಶಹಳ್ಳಿಯ ಸುಬ್ಬಣ್ಣ, ಉದ್ಯಮಿ-ರೈತ ಸೀತಾರಾಮ್, ಬಿಸುವನಹಳ್ಳಿಯ ಮುನಿಯಪ್ಪ, ಲಕ್ಷ್ಮಣ, ಹರೀಶ, ಅಪ್ಪಯ್ಯ ಮುಂತಾದವರಿಗೆ ಇದು ಹಲವಾರು ವರ್ಷಗಳ ನಿರೀಕ್ಷೆಯ ನಂತರ ಫಲಿಸಿದ ಕೆಲಸ. ಮಣ್ಣಿನಿಂದ ನಿರ್ಮಿಸಿದ ಚೆಕ್ ಡ್ಯಾಮ್‌ಗಳಿಗೆ ಸಿಮೆಂಟ್ ಹಂಗಿಲ್ಲದ ಕಲ್ಲು ಗೋಡೆಯನ್ನು ನಿರ್ಮಿಸಲಾಗಿದೆ. ಒಂದು ಹನಿ ನೀರೂ ಆಚೀಚೆ ಹೋಗದಂತೆ ಭದ್ರವಾಗಿ ನಿರ್ಮಿಸಲಾಗಿರುವ ಈ ಅಣೆಕಟ್ಟೆಗೆ ೦.೫ರಿಂದ ೦.೬ ಚದರ ಕಿಮೀ ಪ್ರದೇಶದಲ್ಲಿ ಬೀಳುವ ಮಳೆ ನೀರು ಹರಿದು ಬರುತ್ತದೆ. ಕೋಟ್ಯಂತರ ಲೀಟರ್ ನೀರು ಸಂಗ್ರಹವಾಗುತ್ತದೆ. ಹೆಚ್ಚಿನ ನೀರು ಕೊನೆಯ ಚೆಕ್ ಡ್ಯಾಂನಿಂದ ಹರಿದು ಒಂದು ಕಿ.ಮೀ ಕೆಳಗೆ ಮಾರಸಂದ್ರ ಕೆರೆಗೆ, ನಂತರ ಅಲ್ಲಿಂದ ಹೆಸರಘಟ್ಟದ ಕೆರೆಗೆ ಹರಿದು ಹೋಗುತ್ತದೆ.

ಅಷ್ಟೇ ಅಲ್ಲ, ಅಣೆಕಟ್ಟೆಯ ಸುತ್ತಮುತ್ತಲಿನ ಹಾಗೂ ಹರಿವಿನ ಕೆಳಭಾಗದ್ಲಲಿರುವ ಭೂಮಿಗಳಲ್ಲಿ ಕೊರೆದಿರುವ ನೂರಾರು ಕೊಳವೆಬಾವಿಗಳಿಗೆ ನಿರಂತರ ಜಲ ಮರುಪೂರಣ ಮಾಡುತ್ತದೆ. ಮೊದಲು ಇಲ್ಲಿ ಎಕರೆಗೆ ಒಂದರಂತೆ ಕೊಳವೆಬಾವಿಗಳಿದ್ದವು. ಆದರೆ ಅವುಗಳ ಪೈಕಿ ಶೇಕಡಾ ೬೦ರಲ್ಲಿ ನೀರಿದ್ದಿಲ್ಲ. ಇನ್ನುಳಿದ ಕೊಳವೆಬಾವಿಗಳ ಪೈಕಿ ಶೇ.೮೦ರಲ್ಲಿ ನೀರು ಅತ್ಯಲ್ಪ ಪ್ರಮಾಣದ್ಲಲಿತ್ತು. ಎಲ್ಲಕ್ಕಿಂತ ಮುಖ್ಯ: ಕೆಲಸ ಮಾಡುತ್ತಿರುವ ಕೊಳವೆ ಬಾವಿಗಳ ನೀರು ಸುತ್ತಮುತ್ತಲಿನ ಕಾರ್ಖಾನೆಗಳಿಂದ ಹೊರಸೂಸುವ ಕಲುಷಿತ ಜಲದಿಂದಾಗಿ ಬಳಕೆಗೆ ಅನರ್ಹವಾಗಿದ್ದವು.

ಆದರೆ ಮೊದಲ ಜೋರು ಮಳೆ ಬಂದ ನಂತರ ಇವೆಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದಕ್ಕಿಬಿಟ್ಟಿತು. ೭,೬೦೦ ಚದರ ಮೀಟರ್ ನೀರು ಈ ಕೊರಕಲಿನಲ್ಲಿ ಸಂಗ್ರಹವಾಗಿ, ಕ್ರಮೇಣ ಇಂಗಿ ಭೂಮಿಯಾಳಕ್ಕಿಳಿಯಿತು. ಹರಿನಾಲಾ ಹೆಸರಿನ ದೊಡ್ಡ ಮಣ್ಣಿನ ಅಣೆಕಟ್ಟು ಪೂರ್ತಿ ತುಂಬಿದ್ದಲ್ಲದೆ, ಅಲ್ಲಿಂದ ಸಣ್ಣ ಝರಿಯೊಂದು ನಿರಂತರವಾಗಿ ಹರಿಯುತ್ತ ಕೆಳ ಹಂತದಲ್ಲಿದ್ದ ಇನ್ನೂ ಐದು ಚಿಕ್ಕ ಮಣ್ಣಿನ ಅಡ್ಡಗಟ್ಟೆಗಳನ್ನು ಸೇರಿ ಅರ್ಧ ಕಿಮೀ ವ್ಯಾಪ್ತಿಯ್ಲಲ್ಲಿದ್ದ ಎರಡು ಡಜನ್‌ಗಳಿಗೂ ಹೆಚ್ಚು ಕೊಳವೆ ಬಾವಿಗಳ ಒಡಲಿಗೆ ನೀರು ತುಂಬಿತು.

‘ಇದೇ ರೀತಿ ಮಳೆ ಬಂದರೆ ಒಂದೆರಡು ಮಳೆಗಾಲದಲ್ಲಿ ಸುತ್ತಮುತ್ತಲಿನ ಭೂಮಿಯ ಅಂತರ್ಜಲ ಮಟ್ಟ ಸಾಕಷ್ಟು ಏರುತ್ತದೆ. ಆಗ ನಾಲೆಯ ಸುತ್ತಮುತ್ತಲಿನ ಐವತ್ತು ಎಕರೆ ಭೂಮಿಯಲ್ಲಿ ರೈತರು ವರ್ಷವಿಡೀ ನೀರಾವರಿ ಮಾಡಬಹುದು’ ಎಂಬುದು ಜಲತಜ್ಞ ಅಯ್ಯಪ್ಪ ಮಸಗಿ ಅವರ ಹೇಳಿಕೆ.

ಈಗಾಗಲೇ ಸುತ್ತಮುತ್ತಲಿನ ದನಗಾಹಿಗಳು ತಮ್ಮ ದನಗಳನ್ನು ಈ ಕಡೆಯೇ ಕರೆತರುತ್ತಿದ್ದಾರೆ. ಹಕ್ಕಿಗಳೂ ಬಂದು ಬೀಡು ಬಿಟ್ಟಿವೆ. ಜೊತೆಗೆ ಸುತ್ತಲೂರುಗಳ ಆಸಕ್ತ ಜನರೂ. ‘ಸರ್ಕಾರ ಕೈಗೊಂಡ್ದಿದರೆ ಒಂದು ಚೆಕ್ ಡ್ಯಾಮ್‌ಗೆ ಎರಡು ಲಕ್ಷದಂತೆ ಏನಿಲ್ಲವೆಂದರೂ ೧೦-೧೨ ಲಕ್ಷ ವೆಚ್ಚಕ್ಕೆ ಕಾರಣವಾಗುತ್ತಿದ್ದ ಈ ಕಾಮಗಾರಿಯನ್ನು ಜನರೇ ಕೈಗೊಂಡ್ದಿದರಿಂದ ಕೇವಲ ೧-೧.೫ ಲಕ್ಷದಲ್ಲಿ ಕೆಲಸ ಮುಗಿದಿದೆ’ ಎನ್ನುತ್ತಾರೆ ಉದ್ಯಮಿ-ರೈತ ಸೀತಾರಾಂ. ರೈತರು ಒಂದೇ ಬೆಳೆಯಲ್ಲಿ ಈ ಖರ್ಚನ್ನು ತೆಗೆಯಬಲ್ಲರು ಎಂಬುದು ಅವರ ಅಭಿಪ್ರಾಯ.

ಈಗ ಬಿಸುವನಹಳ್ಳಿ, ಅರದೇಶಹಳ್ಳಿ, ಅದೆ ಮತ್ತು ಕಡತನಮಲೆ ಹಳ್ಳಿಗಳ ಜನತೆ ಮುಗಿಲಿನತ್ತ ಕೈಮಾಡಿ ನಿಲ್ಲುವುದನ್ನು ಬಿಟ್ಟಿದ್ದಾರೆ. ಅದರ ಬದಲು, ಈಗಿರುವ ಭೂಮಿಯಲ್ಲೇ ಇನ್ನಷ್ಟು ನೀರನ್ನು ಹೇಗೆ ಸಂಗ್ರಹಿಸುವುದು ಎಂಬುದರತ್ತ ಗಮನ ಹರಿಸುತ್ತಿದ್ದಾರೆ. ಹರಿನಾಲೆ ಅವರ ಪಾಲಿಗೆ ಯಾತ್ರಾಸ್ಥಳವಾಗಿದೆ. ಮಳೆ ನೀರು ಸಂಗ್ರಹ ಅವರ ಬದುಕಿನ ಹೊಸ ಮಂತ್ರವಾಗಿದೆ.

- ಚಾಮರಾಜ ಸವಡಿ
(೨೦೦೪ರಲ್ಲಿ ಬರೆದ ಲೇಖನ. ಇದಾದ ನಂತರ ನಾನು ಆ ಕಡೆ ಹೋಗಿಲ್ಲ. ಆಸಕ್ತರು ಆ ಕಡೆ ಹೋಗಿ ಬಂದರೆ, ಈಗಿನ ಪರಿಸ್ಥಿತಿಯ ಬಗ್ಗೆ ಪೂರಕ ಲೇಖನ ಬರೆಯಬೇಕೆಂದು ವಿನಂತಿ.)