ಬೆಂಗಳೂರು ಕೆಫೆ ಬಾಂಬರ್ ಗಳಿಗೆ ಅತ್ಯಂತ ಕಠಿಣವಾದ ಶಿಕ್ಷೆಯಾಗಲಿ

ಬೆಂಗಳೂರು ಕೆಫೆ ಬಾಂಬರ್ ಗಳಿಗೆ ಅತ್ಯಂತ ಕಠಿಣವಾದ ಶಿಕ್ಷೆಯಾಗಲಿ

ಬೆಂಗಳೂರಿನ ಐಟಿ ಕಾರಡಾರ್ ನಲ್ಲಿ ಇರುವ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಮಾ ೧ರಂದು ಬಾಂಬ್ ಸ್ಫೋಟಿಸಿ ಭೀತಿ ಸೃಷ್ಟಿಸಿದ್ದ ಪ್ರಕರಣ ಸಂಬಂಧ ಬಾಂಬರ್ ಸೇರಿ ಇಬ್ಬರನ್ನು ಎನ್ ಐ ಎ ಅಧಿಕಾರಿಗಳು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದಾರೆ. ೪೩ ದಿನಗಳಿಂದ ಈ ಶಂಕಿತ ಉಗ್ರರಿಗಾಗಿ ತೀವ್ರವಾಗಿ ನಡೆದಿದ್ದ ಶೋಧಕ್ಕೆ ಕೊನೆಗೂ ತೆರೆ ಬಿದ್ದಿದೆ. ಶಂಕಿತ ಭಯೋತ್ಪಾದಕರ ಬಂಧನದ ಬೆನ್ನಲ್ಲೇ ಇದು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಬಂಗಾಳ ಉಗ್ರರ ಆಶ್ರಯ ತಾಣವಾಗಿದೆ ಎಂದು ಬಿಜೆಪಿ ಕುಟುಕಿದ್ದರೆ, ಶಂಕಿತ ಉಗ್ರರು ಬರುತ್ತಿದ್ದಂತೆ ಬಂಧನವಾಗಿದೆ. ಅದಕ್ಕೆ ರಾಜ್ಯ ಪೋಲೀಸರ ಸಹಕಾರವಿದೆ ಎಂದು ಬಂಗಾಳದ ಆಡಳಿತಾರೂಢ ಪಕ್ಷ ತೃಣಮೂಲ ಕಾಂಗ್ರೆಸ್ ತಿರುಗೇಟು ನೀಡಿದೆ. ಲೋಕಸಭೆ ಚುನಾವಣೆ ನಡೆಯುತ್ತಿರುವ ಕಾರಣ ಇಂತಹ ವಿಚಾರಗಳು ರಾಜಕೀಯ ಅಸ್ತ್ರವಾಗಿ ಬಳಕೆಯಾಗುವುದು ಸಹಜವೇ. ಅದೆಲ್ಲಾ ಒತ್ತಟ್ಟಿಗಿರಲಿ, ಕೃತ್ಯ ನಡೆದ ಬಳಿಕ ಸರಕಾರಿ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಹೆಚ್ಚು ಸುಳಿವು ನೀಡದೇ ಪ್ರಯಾಣಿಸಿ, ದೂರದ ಬಂಗಾಳದವರೆಗೂ ತಲುಪಿದ ಉಗ್ರರನ್ನು ಹೆಡೆಮುರಿ ಕಟ್ಟಿರುವ ಎನ್ ಐ ಎ, ಕರ್ನಾಟಕ, ಬಂಗಾಳ, ಕೇರಳ ಹಾಗೂ ತೆಲಂಗಾಣ ಪೋಲೀಸರಿಗೆ ಅಭಿನಂದನೆಗಳು ಸಲ್ಲಬೇಕು. ಟೋಪಿ ಧರಿಸಿಕೊಂಡು ಬಾಂಬ್ ಇಟ್ಟು ಹೋದ ಯುವಕನಿಂದಾಗಿ ರಾಮೆಶ್ವರ ಕೆಫೆಯಲ್ಲಿ ೧೦ ಮಂದಿ ಗಾಯಗೊಂಡಿದ್ದರು. ಬಾಂಬ್ ಸ್ವಲ್ಪ ಪ್ರಬಲವಾಗಿ ಸ್ಫೋಟಿಸಿದ್ದರೂ ಹೆಚ್ಚಿನ ಅನಾಹುತವಾಗಿ ಬಿಡುತ್ತಿತ್ತು. ನಾಗರಿಕ ಸಮಾಜದಲ್ಲಿ ಇಂತಹ ಭಯೋತ್ಪಾದಕ ಕೃತ್ಯಗಳನ್ನು ಯಾರೂ ಒಪ್ಪುವುದಿಲ್ಲ. ಈಗ ಬಂಧಿತರಾಗಿರುವವರು ಶಿವಮೊಗ್ಗ ಜಿಲ್ಲೆ ಮೂಲದವರು. ಈ ಹಿಂದೆ ನಡೆದ ಹಲವು ಭಯೋತ್ಪಾದಕ ಕೃತ್ಯಗಳಿಗೂ ಇವರಿಗೂ ಸಂಬಂಧವಿದೆ ಎಂದು ವರದಿಗಳು ಹೇಳುತ್ತಿವೆ. 

ರಾಮೇಶ್ವರ ಕೆಫೆ ಸ್ಫೋಟವನ್ನು ಅಧಿಕಾರಿಗಳು ಈಗಾಗಲೇ ಗಂಭೀರವಾಗಿ ಪರಿಗಣಿಸಿದ್ದಾರೆ. ತನಿಖೆಯನ್ನು ಇನ್ನಷ್ಟು ಆಳಕ್ಕೆ ಒಯ್ದು, ಈ ಸಂಚಿನ ಹಿಂದೆ ಇರುವ ರುವಾರಿಗಳನ್ನು ಹೆಡೆಮುರಿ ಕಟ್ಟಬೇಕು. ಈಗ ಬಂಧಿತರಾಗಿರುವವರ ವಿರುದ್ಧ ಪ್ರಬಲ ಸಾಕ್ಷ್ಯಗಳನ್ನು ಕ್ರೋಢೀಕರಿಸಿ, ನ್ಯಾಯಾಲಯದ ಮುಂದೆ ಇಟ್ಟು, ಪ್ರಬಲವಾಗಿ ವಾದ ಮಂಡನೆ ಮಾಡಿ, ಶಂಕಿತ ಉಗ್ರರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ತನಿಖಾಧಿಕಾರಿಗಳ ಮುಂದೆ ಇದೆ. ಬಂಧನವಾದ ಬಳಿಕವೂ ಕೆಲವೊಂದು ಪ್ರಕರಣಗಳಲ್ಲಿ ಉಗ್ರರು ದೋಷಮುಕ್ತಗೊಂಡು ಹೊರಬಂದ ನಿದರ್ಶನಗಳಿವೆ. ದೇಶದ ಐಟಿ ರಾಜಧಾನಿಯಲ್ಲಿ ಭೀತಿ ಹುಟ್ಟಿಸಿದ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಹಾಗಾಗದಿರಲಿ ಎಂಬುದೇ ಎಲ್ಲರ ಆಶಯ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೩-೦೪-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ