ಬೆಂಗಳೂರು ದಿಲ್ಲಿಯಾಗದಿರಲಿ
ಪರಿಸರದ ಕಾಳಜಿ ಮರೆತು ಅತಿಯಾದ ನಗರೀಕರಣಕ್ಕೆ ಒಡ್ಡಿಕೊಂಡಿರುವ ಹೊಸದಿಲ್ಲಿಯ ಮಾಲಿನ್ಯ ಸಂಕಟಗಳು ಕಣ್ಮುಂದೆ ಇರುವಾಗಲೇ ಬೆಂಗಳೂರಿಗೂ ಇಂಥ ಆತಂಕವನ್ನು ಬರಮಾಡಿಕೊಳ್ಳಲು ಪರೋಕ್ಷವಾಗಿ ಪ್ರಯತ್ನಗಳು ನಡೆಯುತ್ತಿರುವುದು ಖಂಡನೀಯ. ತಜ್ಞರ ಎಚ್ಚರಿಕೆಯ ನಡುವೆಯೇ ಬೆಂಗಳೂರಿನ ನೀರು ಪೂರೈಕೆಯ ಆಸರೆಯಾಗಿರುವ ತಿಪ್ಪಗೊಂಡನಹಳ್ಳಿ (ಟಿ.ಜಿ.ಹಳ್ಳಿ) ಜಲಾಶಯ ವ್ಯಾಪ್ತಿಯ ಎರಡು ವಲಯಗಳ ರಕ್ಷಣಾ ವಲಯ ತಗ್ಗಿಸಲು ಸರಕಾರ ಮುಂದಾಗಿರುವುದು ಅವೈಜ್ಞಾನಿಕ ನಡೆಯಲ್ಲದೆ ಮತ್ತೇನೂ ಅಲ್ಲ. ಇದರೊಂದಿಗೆ ಟಿ.ಜಿ.ಹಳ್ಳಿ ಹಾಗೂ ಹೆಸರಘಟ್ಟ ಕೆರೆ ಪ್ರದೇಶದಲ್ಲಿ ಸೋಲಾರ್ ಪಾರ್ಕ್ ನಿರ್ಮಿಸುವ ಉದ್ದೇಶವೂ ಆತಂಕವನ್ನೇ ಸೃಷ್ಟಿಸಿದೆ.
ಜಲಾಶಯ ವ್ಯಾಪ್ತಿಯ ೪ ವಲಯಗಳ ಪೈಕಿ ಶಿವಗಂಗೆಯಿಂದ ತಿಪ್ಪಗೊಂಡನಹಳ್ಳಿ (ಕುಮದ್ವತಿ) ಜೋನ್-೪ ಹಾಗೂ ಹೆಸರಘಟ್ಟ ಕೆರೆಯಿಂದ ತಿಪ್ಪಗೊಂಡನಹಳ್ಳಿಯವರೆಗಿನ (ಅರ್ಕಾವತಿ) ಜೋನ್ - ೩ ರ ರಕ್ಷಣಾ ವಲಯ ಸದ್ಯ ೧ ಕಿ.ಮೀ. ಇದೆ. ಈ ವ್ಯಾಪ್ತಿಯನ್ನು ೫೦೦ ಮೀಟರ್ ಗೆ ತಗ್ಗಿಸಲು ಸರಕಾರ ಉದ್ದೇಶಿಸಿರುವುದು ಅರ್ಥಹೀನ. ಜಲಾಶಯದ ಮೂಲಗಳಾದ ಕುಮುದ್ವತಿ, ಅರ್ಕಾವತಿ ನದಿಗಳನ್ನು ಉಳಿಸಿಕೊಳ್ಳುವ ಪ್ರಯತ್ನಗಳ ನಡುವೆ ಸರಕಾರದ ಚಿಂತನೆ ಅಚ್ಚರಿಯ ಆಘಾತವನ್ನೇ ತಂದುಕೊಟ್ಟಿದೆ. ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗೆ ಮಾತ್ರವೇ ಅವಕಾಶವಿದ್ದಂಥ ಈ ಪ್ರದೇಶದಲ್ಲಿ ಅಕ್ರಮ ಲೇಔಟ್ ಗಳು, ನಿವೇಶನ ಜಾಗಗಳು ತಲೆಯೆತ್ತಿವೆ. ಹಾಗೆ ನೋಡಿದರೆ ಸರಕಾರ ಇವುಗಳನ್ನು ತೆರವು ಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ, ಸರಕಾರ ಬಫರ ಜೋನನ್ನು ೫೦೦ ಮೀಟರ್ ಗೆ ತಗ್ಗಿಸಲು ಹೊರಟು ಅಕ್ರಮ ಲೇಔಟ್ ಗಳನ್ನು ಸಕ್ರಮಗೊಳಿಸಲು ಮುಂದಾಗುತ್ತಿದೆಯೇ? ಸರಕಾರದ ಈ ಉದ್ದೇಶದ ಹಿಂದೆ ಯಾರ ಒತ್ತಡವಿದೆ? ಪರಿಸರದ ಬದಲಾಗಿ ಇಲ್ಲಿಯಾರ ಹಿತಾಸಕ್ತಿಯನ್ನು ಕಾಪಾಡುತ್ತಿದೆ? ಮುಂತಾದ ಪ್ರಶ್ನೆಗಳೂ ಉದ್ಭವಿಸಿವೆ.
ಬಫರ ಜೋನ್ ವ್ಯಾಪ್ತಿಯಲ್ಲಿ ಈ ಹಿಂದೆ ಅಕ್ರಮ ಕಾಮಗಾರಿಗಳು ಕೈಗೊಂಡವರಿಗೆಲ್ಲ ಹೋರಾಟಗಳ ಮೂಲಕ ಎಚ್ಚರಿಕೆಗಳು ರವಾನೆಯಾಗಿದ್ದವು. ಕಾಲಕಾಲಕ್ಕೆ ಬಂದ ಸರಕಾರಗಳೂ ಹೋರಾಟಗಾರನ ಧ್ವನಿಗೆ ತಲೆಬಾಗುವಂತಾಗಿತ್ತು. ಆದರೆ, ಈಗ ಸರಕಾರವೇ ಅಕ್ರಮ ಒತ್ತುವರಿದಾರರ ಬೆನ್ನಿಗೆ ನಿಂತರೆ ಬೇಲಿಯೇ ಎದ್ದು ಹೊಲ ಮೇಯ್ದಂತಾಗುವುದಿಲ್ಲವೇ?
ಎಲ್ಲಕ್ಕಿಂತ ಹೆಚ್ಚಾಗಿ ಡ್ಯಾಂ ಸುತ್ತಲಿನ ೪೦೦ ಎಕರೆ ಜಮೀನಿನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಉದ್ದೇಶಿಸಿರುವುದು ಮತ್ತೊಂದು ವಿವಾದಿತ ಸಂಗತಿ. ಇಂಧನ ಕೊರತೆಯ ನೆಪವೊಡ್ಡಿ ಈ ವ್ಯಾಪ್ತಿಯಲ್ಲಿರುವ ಅರಣ್ಯಗಳನ್ನೆಲ್ಲ ಕಡಿದು ಸೋಲಾರ್ ಪಾರ್ಕ್ ನಿರ್ಮಿಸುವ ಆಲೋಚನೆಯನ್ನೂ ಮರುಪರಿಶೀಲಿಸುವುದು ಸೂಕ್ತ. ಸೋಲಾರ್ ಫಲಕಗಳಿಗೆ ಫೋಟೋ ವೋಲ್ಟಾಯಿಕ್ ಸೆಲ್ಸ್ ಗಳನ್ನು ಬಳಕೆ ಸಾಮಾನ್ಯ. ಅದರಲ್ಲಿ ಸೀಸ, ಸತು, ಪಾದರಸದಂತಹ ಅಂಶಗಳೂ ಇರುತ್ತವೆ. ಇವು ಮನುಷ್ಯನ ದೇಹಕ್ಕೆ ಅತ್ಯಂತ ಅಪಾಯಕಾರಿ ಕೂಡ. ನೀರು ಮತ್ತು ಮಣ್ಣಿನ ಮೂಲಕ ಇವು ಅಂತರ್ಜಲ, ಜಲಮೂಲಗಳನ್ನು ಸೇರಿಕೊಂಡರೆ ಅದು ಕಟ್ಟಕಡೆಯದಾಗಿ ಮನುಷ್ಯರ ಆರೋಗ್ಯಕ್ಕೇ ಹಾನಿ. ಜಲಮೂಲಗಳ ಸನಿಹ ಇಂಥ ಅಪಾಯಕಾರಿ ನಿಲುವುಗಳನ್ನು ಕೈಗೊಳ್ಳದಿರುವುದೇ ಒಳಿತು. ಬೆಂಗಳೂರು ಸುತ್ತಮುತ್ತಲಿನ ಜಲಾಶಯಗಳ ರಕ್ಷಣೆ ವಿಚಾರದಲ್ಲಿ ಸರಕಾರ ವಿವೇಚನೆಯ ಹೆಜ್ಜೆಗಳನ್ನಿಡಲಿ. ಪರಿಸರ ಮಾಲಿನ್ಯ ವಿಚಾರದಲ್ಲಿ ಬೆಂಗಳೂರು ಇನ್ನೊಂದು ದಿಲ್ಲಿಯಾಗದಿರಲಿ.
ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೧೨-೧೦-೨೦೨೩
ಚಿತ್ರ ಕೃಪೆ: ಅಂತರ್ಜಾಲ ತಾಣ