ಬೆಂಗಳೂರು ಬ್ರ್ಯಾಂಡ್ ಹೊಳಪೇರಲಿ

ಬೆಂಗಳೂರು ಬ್ರ್ಯಾಂಡ್ ಹೊಳಪೇರಲಿ

ರಾಜಧಾನಿ ಬೆಂಗಳೂರು ನಮ್ಮ ದೇಶದ ಬ್ರ್ಯಾಂಡ್ ‘ಸಿಲಿಕಾನ್ ವ್ಯಾಲಿ' ಎಂದೇ ಖ್ಯಾತಿಯಾಗಿರುವ ಈ ನಗರಿ, ಜಗತ್ತಿನ ಪಾಲಿಗೆ ಭಾರತದ ಪೋಸ್ಟರ್ ಬಾಯ್. ನಮ್ಮ ದೇಶಕ್ಕೆ ಭೇಟಿ ನೀಡುವ ನಾನಾ ರಾಷ್ಟ್ರಗಳ ಪ್ರಧಾನಿ, ರಾಷ್ಟ್ರಪತಿಗಳು ಬೆಂಗಳೂರಿಗೆ ಭೇಟಿ ನೀಡಲು ಹಾತೊರೆಯುವುದು ಇದರ ಅಗ್ಗಳಿಕೆಗೆ ಹಿಡಿದ ಕೈಗನ್ನಡಿ. ಮೈಸೂರು ಒಡೆಯರ್, ಕೆಂಪೇಗೌಡರ ಕಾಲದಿಂದ ಇಲ್ಲಿಯವರೆಗಿನ ಎಲ್ಲ ಆಳುವ ಮಂದಿ ಬೆಂಗಳೂರು ನಗರವನ್ನು ಜಗದ್ವಿಖ್ಯಾತಗೊಳಿಸಲು ತಮ್ಮ ಶಕ್ತ್ಯಾನುಸಾರ, ಸಮಯಾನುಸಾರ ಪೂರಕವಾಗಿಯೇ ಕೆಲಸ ಮಾಡಿದ್ದಾರೆ. ಆದರೆ, ೯೦ರ ದಶಕದ ಬಳಿಕ ಬ್ರ್ಯಾಂಡ್ ಬೆಂಗಳೂರು ಕೇಂದ್ರಿತವಾಗಿಯೇ ತುಸು ಹೆಚ್ಚು ಕೆಲಸ ನಡೆದಿದ್ದು ಎಚ್ ಡಿ ದೇವೇಗೌಡ, ವೀರಪ್ಪ ಮೊಯಿಲಿ, ಎಸ್ ಎಂ ಕೃಷ್ಣ ಹಾಗೂ ಎಚ್ ಎನ್ ಅನಂತಕುಮಾರ್ ಅವರ ಅಧಿಕಾರಾವಧಿಯಲ್ಲಿ ಎಂಬುದನ್ನು ಉಲ್ಲೇಖಿಸಬೇಕು. ಪ್ರಧಾನಿಯಾಗಿ, ಮುಖ್ಯಮಂತ್ರಿಗಳಾಗಿ, ಕೇಂದ್ರ ಸಚಿವರಾಗಿ ಈ ಮೂವರು ಕೂಡ ಬೆಂಗಳೂರಿನ ಮೂಲ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿದ್ದರು. ಪರಿಣಾಮ ಬೆಂಗಳೂರಿನ ಬೆರಗು ಹೆಚ್ಚಾಯಿತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ಕೋವಿಡ್ ಬಳಿಕ ಬೆಂಗಳೂರು ಮೂಲ ಸೌಕರ್ಯಗಳ ಕೊರತೆ ಕಾರಣಕ್ಕೆ ಸದ್ದಾಯಿತು. ಕಳೆದ ವರ್ಷ ಸುರಿದ ವಿಪರೀತ ಮಳೆ ಈ ಮಹಾನಗರಿಯನ್ನು ನೀರಿನಲ್ಲಿ ತೇಲಿಸಿದ್ದು, ಅಂತಾರಾಷ್ಟ್ರೀಯ ಸುದ್ದಿಯಾಯಿತು. ಸಹಜವಾಗಿಯೇ ಬ್ರ್ಯಾಂಡ್ ಗೆ ಮಂಕು ಕವಿಯಿತು. ಸಂಕಷ್ಟ ಕಾಲದಲ್ಲಿ ಬೆಂಗಳೂರಿನ ಅಹವಾಲು ಆಲಿಸಲು ಬಿಬಿಎಂಪಿ ಚುನಾವಣೆ ನಡೆಯದೇ ಇರುವುದು, ತತ್ ಪರಿಣಾಮ ಮೇಯರ್ ಗೈರು, ಬೆಂಗಳೂರು ಅಭಿವೃದ್ಧಿಯನ್ನು ಸ್ಥಳೀಯ ಆಸಕ್ತ ಸಚಿವರಿಗೆ ನೀಡದೇ ಇರುವುದೂ ಸೇರಿದಂತೆ ವಿವಿಧ ಕಾರಣಗಳಿಂದ ಹಿನ್ನಡೆಯಾಗಿತ್ತು. ಈ ಹಿಂದಿನ ಬಹುತೇಕ ಮುಖ್ಯಮಂತ್ರಿಗಳು ಬೆಂಗಳೂರು ಅಭಿವೃದ್ಧಿಯ ಖಾತೆಯನ್ನು ಇತರರಿಗೆ ನೀಡದೆ, ತಾವೇ ನಿರ್ವಹಿಸಲು ಹೋಗಿ ನಿರೀಕ್ಷಿತ ಲಕ್ಷ್ಯ ವಹಿಸಿರಲಿಲ್ಲ.

ಆದರೆ, ಈಗ ತುಸು ಸಮಾಧಾನ ಪಡುವಂಥ ಪ್ರಯತ್ನಗಳು ಗೋಚರಿಸುತ್ತಿವೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬೆಂಗಳೂರು ಅಭಿವೃದ್ಧಿಯ ನೊಗ ಹೊತ್ತಿರುವುದು ಲಕ್ಷ್ಯದ ದೃಷ್ಟಿಯಿಂದ ಒಳ್ಳೆಯದು. ಬೆಂಗಳೂರು ಅಭಿವೃದ್ಧಿ ಕುರಿತು ಡಿಕೆಶಿ ಅವರು ಸಭೆ ನಡೆಸಿ, ಬ್ರ್ಯಾಂಡ್ ಬೆಂಗಳೂರಿನ ಹೊಳಪನ್ನು ಇನ್ನಷ್ಟು ಹೆಚ್ಚಿಸಲು ತಜ್ಞರನ್ನೊಳಗೊಂಡ ಸಲಹಾ ಸಮಿತಿ ರಚಿಸುವುದಾಗಿ ಘೋಷಿಸಿದ್ದಾರೆ. ನಗರದ ಅಭಿವೃದ್ಧಿಯಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಪಾಲುದಾರರಾಗಿರುವ ಎಲ್ಲರನ್ನೂ ಒಳಗೊಂಡಂತೆ ಪ್ರತ್ಯೇಕ ಸಮಿತಿಗಳನ್ನೂ ರಚಿಸುವುದಾಗಿ ತಿಳಿಸಿರುವುದು ಸ್ವಾಗತಾರ್ಹ. ಕುಡಿಯುವ ನೀರು, ತ್ಯಾಜ್ಯ ನಿರ್ವಹಣೆ, ಸಂಚಾರ ದಟ್ಟಣೆ ನಿವಾರಣೆಗೆ ಮಾಸ್ಟರ್ ಪ್ಲಾನ್ ರೂಪಿಸುವುದಾಗಿಯೂ ಹೇಳಿದ್ದಾರೆ. ಇದು ತುರ್ತಾಗಿ ಆಗಲೇಬೇಕಾದ ಕೆಲಸ. ಬಹಳ ಪ್ರಮುಖವಾಗಿ ಮಳೆಗಾಲದ ಸಂದರ್ಭದಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಕಾರಣವಾಗಿರುವ ಒತ್ತುವರಿ, ರಾಜಕಾಲುವೆ ನಿರ್ವಹಣೆಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ.

ಮೊದಲ ದಿನ ಬೆಂಗಳೂರಿನಲ್ಲಿ ನಡೆದ ಸಭೆಗೆ ಡಿ ಕೆ ಶಿವಕುಮಾರ್ ತಡವಾಗಿ ಬಂದರು ಎಂಬ ಕಾರಣ ನೀಡಿ ಬಿಜೆಪಿ ಶಾಸಕರು ಹೊರನಡೆದಿದ್ದಾರೆ. ಚುನಾವಣೆ ಸೋಲಿನ ಹಿನ್ನಲೆಯಲ್ಲಿ ಇದನ್ನು ಅರ್ಥಮಾಡಿಕೊಳ್ಳಬಹುದು. ಆದರೆ, ಭವಿಷ್ಯದಲ್ಲಿ ಇಂಥ ಮುನಿಸು ಸರಿಯಲ್ಲ. ಬಿಜೆಪಿಯೇ ಹೊಸೆದಿರುವ ‘ಡಬಲ್ ಇಂಜಿನ್' ಅಭಿವೃದ್ಧಿ ಎಂಬುದು ಈ ಹೊತ್ತಲ್ಲೂ ಸಾಕಾರಗೊಳ್ಳಬೇಕಿದೆ. ಎಸ್ ಎಂ ಕೃಷ್ಣ-ಅನಂತಕುಮಾರ್ ಜೋಡಿ ಬೆಂಗಳೂರಿಗಾಗಿ ಇಂಥದ್ದೊಂದು ಕೆಲಸ ಮಾಡಿತ್ತು ಎಂಬುದನ್ನು ಮರೆಯದಿರೋಣ. 

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೭-೦೬-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ