ಬೆಂಗಳೂರು ಹಬ್ಬ: ಹನ್ನೊಂದರಲ್ಲಿ ಮೂರು ಮಾತ್ರ ಕನ್ನಡ ಕಾರ್ಯಕ್ರಮಗಳು

ಬೆಂಗಳೂರು ಹಬ್ಬ: ಹನ್ನೊಂದರಲ್ಲಿ ಮೂರು ಮಾತ್ರ ಕನ್ನಡ ಕಾರ್ಯಕ್ರಮಗಳು

 ಮೊನ್ನೆಯಿಂದಾ “ಬೆಂಗಳೂರು ಹಬ್ಬ” ಹೆಸರಿನ ಕಾರ್ಯಕ್ರಮಗಳು ಶುರುವಾಗಿವೆ. “ಈ ಸತಿ ಇಲ್ಲಿನ ಕಲಾವಿದರಿಗೆ ಹೆಚ್ಚು ಆದ್ಯತೆ ಕೊಡಲಾಗಿದೆ. ಗುರುಕಿರಣ್ ಅವರ ಸಂಗೀತ ಕಾರ್ಯಕ್ರಮದೊಂದಿಗೆ ಹಬ್ಬ ಶುರು” ಎಂದೆಲ್ಲಾ ದಿನಪತ್ರಿಕೆಗಳಲ್ಲಿ ಓದಿ “ಅಬ್ಬಾ, ಈ ಸತಿನಾದ್ರೂ ಬೆಂಗಳೂರು ಹಬ್ಬದಲ್ಲಿ ಹೆಚ್ಚು ಕನ್ನಡ ಕಾರ್ಯಕ್ರಮಗಳು ಬಂದ್ವಲ್ಲ” ಅಂತ ಒಳಗೊಳಗೇ ಖುಶಿಯಾಗಿತ್ತು. ಆದ್ರೆ, ಬೆಂಗಳೂರು ಹಬ್ಬದ ವೆಬ್ಸೈಟ್ ನೋಡಿದ್ರೆ, ಕಾರ್ಯಕ್ರಮಗಳ ಪಟ್ಟಿ ಬೇರೆನೇ ಕಥೆ ಹೇಳ್ತಿದೆ. 


ಒಟ್ಟು ಹನ್ನೊಂದು ಬೇರೆ ಬೇರೆ ಥರದ ಕಾರ್ಯಕ್ರಮಗಳನ್ನ “ಬೆಂಗಳೂರು ಹಬ್ಬ”ದ ಸಲುವಾಗಿ ಆಚರಿಸಲಾಗ್ತಿದೆ. ಅವುಗಳಲ್ಲಿ ಮೂರು ಮಾತ್ರ ಕನ್ನಡದ ಕಾರ್ಯಕ್ರಮಗಳು. ಜನವರಿ 29ಕ್ಕೆ ಇರುವ “ಮೆಗಾ ಈವೆಂಟ್”ನಲ್ಲಿ ರಾಕ್ ಮ್ಯೂಸಿಕ್ ಮತ್ತು ಬಾಲಿವುಡ್ ಹಾಡುಗಳಿಗೆ ಮಾತ್ರ ಜಾಗ, ಕನ್ನಡಕ್ಕೆ ಜಾಗವೇ ಇಲ್ಲ.


ಬೆಂಗಳೂರಿಗೆ ಕನ್ನಡ ಹಾಡುಗಳು, ಕನ್ನಡ ಕಾರ್ಯಕ್ರಮಗಳೇ ಇಷ್ಟ ಅನ್ನೋದು ಇಲ್ಲಿನ ಎಫ್.ಎಂ ವಾಹಿನಿಗಳನ್ನ ಕೇಳಿದ್ರೆ ಗೊತ್ತಾಗತ್ತೆ. 85%ನಷ್ಟು ಎಫ್.ಎಂ ಕೇಳುಗರು ಕನ್ನಡ ಹಾಡುಗಳನ್ನೇ ಕೇಳುತ್ತಾರೆ ಅಂತ RAM rating ಹೇಳತ್ತೆ. ಹಾಗಿದ್ದಮೇಲೆ, ಬೆಂಗಳೂರಿನ ಹಬ್ಬದಲ್ಲಿ ಕನ್ನಡದ ಕಾರ್ಯಕ್ರಮಗಳಿಗೆ ಆದ್ಯತೆ ಕೊಟ್ಟರೆ ಮಾತ್ರ ಅದು ನಿಜವಾಗಿ ಬೆಂಗಳೂರಿನ ಹಬ್ಬ ಎನಿಸಿಕೊಳ್ಳುತ್ತದೆ. ಮತ್ತು, ಬೆಂಗಳೂರಿಗರನ್ನು ರಂಜಿಸುತ್ತದೆ.


“ಇಲ್ಲಿನ ಕಲಾವಿದರಿಗೆ ಆದ್ಯತೆ” ಎಂದು ಹೇಳುತ್ತಾ ಕನ್ನಡಿಗರ ಮೂಗಿನ ಮೇಲೆ ತುಪ್ಪ ಸವರಿ, “ಬೆಂಗಳೂರು ಹಬ್ಬ”ದ ಹೆಸರಿನಲ್ಲಿ ಬೇರೆ ಭಾಷೆಯ ಕಾರ್ಯಕ್ರಮಗಳನ್ನೇ ಹೆಚ್ಚಾಗಿ ಮಾಡುವವರಿಗೆ ನನ್ನ ಅನಿಸಿಕೆಗಳನ್ನು ಬರೆದು ತಿಳಿಸಿದ್ದೇನೆ. “ರಾಕ್ ಈವೆಂಟ್”, “ಬಾಲಿವುಡ್ ನೈಟ್” ಹೆಸರಿನಲ್ಲಿ ಬೇಕಿದ್ದರೆ ಈ ಕಾರ್ಯಕ್ರಮಗಳನ್ನು ಮಾಡಿ, ಬೆಂಗಳೂರು ಹಬ್ಬವೆಂದರೆ ಬೆಂಗಳೊರಿಗರನ್ನು ರಂಜಿಸುವ ಕನ್ನಡ ಕಾರ್ಯಕ್ರಮಗಳಿರಲಿ ಎಂದು ಹೇಳಿದ್ದೇನೆ. ನಿಮಗೂ ನನ್ನಂತೆಯೇ ಬೇಸರವಾಗಿದ್ದರೆ, ಬೆಂಗಳೂರು ಹಬ್ಬ ಏರ್ಪಾಡು ಮಾಡುತ್ತಿರುವವರಿಗೆ ಬರೆದು ನಿಮ್ಮ ಅನಿಸಿಕೆ ಹೇಳಿ.


ಮಿಂಚೆ: bangalorehabba@gmail.com


ಫೇಸ್ಬುಕ್ಕಿನಲ್ಲಿ: http://www.facebook.com/pages/Bengaluru-Habba/178933235459415?v=wall#!/pages/Bengaluru-Habba/178933235459415

Comments