ಬೆಂಡೆ ಬೇಸಾಯ ಕ್ರಮಗಳು (ಭಾಗ ೧)

ಬೆಂಡೆ ಬೇಸಾಯ ಕ್ರಮಗಳು (ಭಾಗ ೧)

ಬೆಂಡೆಕಾಯಿಯು ಉಷ್ಣವಲಯದ/ ಸಮಉಷ್ಣವಲಯ ಬೆಳೆಯಾಗಿದ್ದು ಈ ಬೆಳೆಯನ್ನು ಆಫ್ರಿಕಾ, ಏಷಿಯಾ, ಮಧ್ಯ ಅಮೇರಿಕಾ, ದಕ್ಷಿಣ ಅಮೇರಿಕಾ ಹಾಗೂ ಭಾರತದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಭಾರತದಲ್ಲಿ ಹೆಚ್ಚಾಗಿ ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ, ಪಶ್ಚಿಮ ಬಂಗಾಳ, ಮಧ್ಯ ಪ್ರದೇಶ, ಕರ್ನಾಟಕ ಹಾಗೂ ಆಸ್ಸಾಂ ರಾಜ್ಯಗಳಲ್ಲಿ ಬೆಳೆಯುತ್ತಾರೆ. ಭಾರತದಲ್ಲಿ ೬.೧೦ ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬೆಂಡೆ ಬೆಳೆಯನ್ನು ಬೆಳೆಯುತ್ತಿದ್ದಾರೆ. ಭಾರತದ ಸರಾಸರಿ ಉತ್ಪಾದನೆ ೧೮-೨೨ ಟನ್ ಪ್ರತಿ ಹೆಕ್ಟೇರಿಗೆ. ಬೆಂಡೆಕಾಯಿ ಹೆಚ್ಚಾಗಿ ಸುಣ್ಣ ಹಾಗೂ ಕ್ಯಾಲ್ಸಿಯಂ ಅಂಶವನ್ನು ಹೊಂದಿರುತ್ತದೆ (೯೦ ಮಿ.ಗ್ರಾಂ. ಪ್ರತಿ ೧೦೦ ಗ್ರಾಂ ಹಸಿರು ಬೆಂಡೆ). ಒಣಗಿಸಿದ ಬೆಂಡೆ ಬೀಜಗಳು ೧೩-೨೨% ಎಡಿಬಲ್ ಎಣ್ಣೆಯನ್ನು ಹೊಂದಿದ್ದು ಸೋಪ್ ತಯಾರಿಕೆಗೆ ಉಪಯೋಗಿಸುತ್ತಾರೆ. ಬೆಂಡೆಕಾಯಿ ಬೀಜದಲ್ಲಿ ಶೇ.೨೦-೨೪ ಪ್ರೋಟೀನ್ ಅಂಶವನ್ನು ಹೊಂದಿದ್ದು ಬೀಜದ ಪುಡಿಯನ್ನು ಜಾನುವಾರುಗಳಿಗೆ ಕೊಡುವುದರಿಂದ ಹಾಲು ಉತ್ಪನ್ನ ಹೆಚ್ಚಾಗುತ್ತದೆ. ಬೆಂಡೆ ನಾರನ್ನು ಸೆಣಬಿನ ವಸ್ತ್ರ ಹಾಗೂ ಉದ್ಯಮಗಳಲ್ಲಿ ಉಪಯೋಗಿಸುತ್ತಾರೆ.

ಹವಾಮಾನ : ಬೆಂಡೆ ಬೆಳೆಗೆ ಮುಂಗಾರು ಬಹಳ ಸೂಕ್ತವಾಗಿರುತ್ತದೆ ಮತ್ತು ಬೇಸಿಗೆ ಕಾಲದಲ್ಲಿಯೂ ಬೆಳೆಯಬಹುದು ಹಾಗೂ ಬೆಂಡೆ ಬೆಳೆಯ ಸಮಯದಲ್ಲಿ ಹೆಚ್ಚಿನ ತೇವಾಂಶ ಬೇಕಾಗಿರುತ್ತದೆ. ಚಳಿಗಾಲದಲ್ಲಿ ಚಳಿಯನ್ನು ತಡೆಯುವ ಶಕ್ತಿ ಇರುವುದಿಲ್ಲವಿರುವುದರಿಂದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಬೆಂಡೆ ಬೆಳೆಗೆ (೨೧ ಡಿಗ್ರಿ ಸೆ. - ೪೦ ಡಿಗ್ರಿ ಸೆ.) ತಾಪಮಾನ ಸೂಕ್ತವಾಗಿರುತ್ತದೆ. ಹೆಚ್ಚಿನ ಬಿಸಿಲು (೪೦ ಡಿಗ್ರಿ ಸೆ - ೪೨ ಡಿಗ್ರಿ ಸೆ ಇದ್ದಲ್ಲಿ ಹೂ ಬಾಡಿ ಉದುರುವುದು. ಬೆಂಡೆ ಇಳುವರಿ ಕಡಿಮೆಯಾಗುವುದು.

ಮಣ್ಣಿನ ವಿಧ : ನೀರು ಬಸಿದು ಹೋಗುವಂತಹ ಹಾಗೂ ರಸಸಾರ ೬ ರಿಂದ ೭ ಇರುವಂತಹ ಮಣ್ಣು ಸೂಕ್ತ.

ಬೀಜ ಬಿತ್ತನೆಯ ಸೂಕ್ತ ಕಾಲ: ಜೂನ್ – ಜುಲೈ (ಮಳೆಗಾಲ), ಫೆಬ್ರವರಿ – ಮಾರ್ಚ್ (ಬೇಸಿಗೆ ಕಾಲ) , ಅಕ್ಟೋಬರ್ : ಜನವರಿ (ಚಳಿಗಾಲ)

ತಳಿಗಳು: 

ಅರ್ಕಾ ಅನಾಮಿಕ: ಈ ತಳಿಯ ಗಿಡಗಳು ಉದ್ದವಾಗಿರುತ್ತವೆ ಹಾಗೂ ಕಾಯಿ ಉದ್ದವಾಗಿ ಹಸಿರುಭರಿತವಾಗಿರುತ್ತವೆ. ಕಾಯಿಗಳು ೫ ರಿಂದ ೬ ರೇಖೆಗಳನ್ನು ಹೊಂದಿದ್ದು ಚಿಕ್ಕ ಮುಳ್ಳುಗಳನ್ನು ಹೊಂದಿರುವುದಿಲ್ಲ. ಇದು ಪ್ರತಿ ಹೆಕ್ಟೇರಿಗೆ ೧೩೦-೧೩೫ ದಿನಗಳಲ್ಲಿ ಸರಾಸರಿ ೨೦  ಟನ್ನು ಇಳುವರಿ ಕೊಡುತ್ತದೆ. ಈ ತಳಿ ಹಳದಿ ನಂಜು ರೋಗ ನಿರೋಧಿಸುವ ಶಕ್ತಿ ಹೊಂದಿದ್ದು ತಾಜಾ ಮಾರುಕಟ್ಟೆಗೆ ಸೂಕ್ತವಾಗಿದೆ. (ಚಿತ್ರ ೪)

ಅರ್ಕಾ ಅಭಯ: ಗಿಡಗಳು ಉದ್ದವಾಗಿರುತ್ತವೆ ಹಾಗೂ ಉದ್ದನೆಯ ಹಚ್ಚ ಹಸಿರು ಎಳೆಯ ಕಾಯಿಗಳನ್ನು ಬಿಡುತ್ತವೆ. ಉತ್ತಮ ಅಡುಗೆ ಗುಣ ಹೊಂದಿರುತ್ತದೆ. ಈ ತಳಿಯು ಹಳದಿ ಎಲೆ ನಂಜು ರೋಗ ನಿರೋಧಿಸುವ ಶಕ್ತಿ ಹೊಂದಿದೆ.ಪ್ರತಿ ಹೆಕ್ಟೇರಿಗೆ ೧೨೦-೧೩೫ ದಿನಗಳಲ್ಲಿ ೧೮ ಟನ್ನು ಇಳುವರಿಯನ್ನು ನೀಡುತ್ತದೆ. ಇದರ ಕಾಯಿಗಳನ್ನು ತಾಜಾವಾಗಿ ಹಾಗೂ ಸಂಸ್ಕರಣಕ್ಕಾಗಿ ಬಳಸುತ್ತಾರೆ. (ಚಿತ್ರ ೧)

ಅರ್ಕಾ ನಿಕಿತಾ : (ಎಫ್-೧) ಸಂಕರಣ ತಳಿ ವಿಶೇಷ. ಬೇಗನೆ ಹೂ ಬಿಡುವುದು ಅತ್ಯುತ್ತಮ (೩೦-೩೩ ದಿನಗಳಲ್ಲಿ). ಹೀಗಾಗಿ ಮೊದಲ  ಕೊಯ್ಲುನ್ನು ೪೩ ದಿನಗಳಲ್ಲಿ ಮಾಡಬಹುದು. ಅತ್ಯುತ್ತಮ ಅಡುಗೆ ಗುಣ ಹೊಂದಿದ್ದು, ಹೆಚ್ಚಿನ ಲೋಳೆ ಅಂಶ ಹೊಂದಿದ್ದು (೧.೮%  ತಾಜಾ ತೂಕಕ್ಕೆ) ಹಾಗೂ ನಾರಿನಾಂಶ ಶೇಕಡಾ ೮.೮೫ ರಷ್ಟು  ಹೊಂದಿರುತ್ತದೆ. ಈ ತಳಿಯು ೧೨೫-೧೩೦ ದಿನಗಳಲ್ಲಿ ೨೧-೨೪ ಟನ್ನು ಪ್ರತಿ ಹೆಕ್ಟೇರಿಗೆ ಇಳುವರಿಯನ್ನು ಕೊಡುತ್ತದೆ. (ಚಿತ್ರ ೨)

ಮುಖ್ಯ ತಾಕಿನ ತಯಾರಿ: ಮಣ್ಣನ್ನು ೨-೩ ಬಾರಿ ಉಳುಮೆ ಮಾಡಿ ಒಂದು ಹದಕ್ಕೆ ತರಬೇಕು. ಕೊಟ್ಟಿಗೆ ಗೊಬ್ಬರವನ್ನು ಪ್ರತಿ ಹೆಕ್ಟೇರಿಗೆ ೨೫ ಟನ್ನುನಂತೆ ಮಣ್ಣಿನಲ್ಲಿ ಬೆರೆಸಬೇಕು. ಏರು ಮಡಿ ಪದ್ಧತಿಗಾಗಿ ೧೦-೧೫ ಸೆಂ.ಮೀ. ಎತ್ತರ, ೮೦ ಸೆಂ.ಮೀ ಅಗಲ, ಅನೂಕೂಲಕ್ಕೆ ತಕ್ಕಂತೆ ಉದ್ದ, ಮಡಿಗಳ ನಡುವಿನ ಅಂತರ ೪೫ ರಿಂದ ೬೦ ಸೆಂ.ಮೀ. ನೀಡುವುದು ಉತ್ತಮ. ಗಿಡದಿಂದ ಗಿಡಕ್ಕೆ ೧೫ ರಿಂದ ೨೦ ಸೆಂ.ಮೀ. ಅಂತರ ಬಿಡಬೇಕು.

ಬೀಜ ಬಳಕೆಯ ಪ್ರಮಾಣ: ಪ್ರತಿ ಎಕರಿಗೆ ೨.೫ ಕಿ.ಗ್ರಾಂ. ಹಾಗೂ ೬ ಕಿ.ಗ್ರಾಂ. ಪ್ರತಿ ಹೆಕ್ಟೇರಿಗೆ ಬಳಸಬೇಕು.

ಬಿತ್ತನೆ: ಏರು ಮಡಿಯಲ್ಲಿ ಬಿತ್ತನೆ ಮಾಡಬೇಕು. ಉತ್ತಮ ಮೊಳಕೆಯೊಡೆಯುವುದಕ್ಕಾಗಿ ಬೀಜಗಳನ್ನು ಪ್ರತಿ ಲೀ. ನೀರಿನಲ್ಲಿ ೨ ಗ್ರಾಂ ಕ್ಯಾಪ್ಟನ್ ನ್ನು ಬೆರೆಸಿ ಸುಮಾರು ೬ ಗಂಟೆಗಳ ಕಾಲ ನೆನೆಸಿ ಬದುಗಳ ಒಂದು ಬದಿಯಲ್ಲಿ ಬಿತ್ತಬೇಕು. ಬದುಗಳ ನಡುವೆ ೩೦ ಸೆಂ.ಮೀ. ಮಳೆಗಾಲದಲ್ಲಿ ಹಾಗೂ ೨೦ ಸೆಂ.ಮೀ. ಬೇಸಿಗೆಯಲ್ಲಿ ಅಂತರವನ್ನು ಕೊಡಬೇಕು. ಪ್ರತಿ ಹೆಕ್ಟೇರಿಗೆ ೨೫೦ ಎಂ ಜಿ. ಬೇವಿನಹಿಂಡಿಯನ್ನು ಮಣ್ಣಿಗೆ ಬೆರೆಸುವುದರಿಂದ  ಬೇರು ಗಂಟು ಜಂತುಗಳನ್ನು ನಿಯಂತ್ರಿಸುತ್ತದೆ.

ಗಿಡಗಳ ಅಂತರ ಹಾಗೂ ಗಿಡ ಸಂಖ್ಯೆ : ಎರಡು ಸಾಲು ಮಡಿಯನ್ನು ೮೦ ಸೆಂ.ಮೀ ಅಗಲದಂತೆ ೪೦ ಸೆಂ.ಮೀ ಅಂತರದಲ್ಲಿ ಮಾಡಬೇಕು. ೫ ಸೆಂ.ಮೀ. (ಬೇಸಿಗೆಯಲ್ಲಿ ೭.೫ ಸೆಂ.ಮೀ.)  ಅಳತೆಯ ರಂದ್ರಗಳನ್ನು ಮಡಿಯ ಉದ್ದಳತೆಯಂತೆ (೨೨.೫ ಸೆಂ.ಮೀ.) ಮಾಡಬೇಕು. ಹೀಗೆ ಸುಮಾರು ೩೦೦೦ ಸಸಿಗಳನ್ನು ಒಂದು ಎಕರೆಯಲ್ಲಿ ಒಟ್ಟುಗೂಡಿಸಬಹುದು. ಮಳೆಗಾಲದಲ್ಲಿ ೬೦ ಸೆಂ.ಮೀ. ಘಿ ೩೦ ಸೆಂ.ಮೀ. ರಷ್ಟು ಅಂತರದಲ್ಲಿ ಬಿತ್ತನೆ ಮಾಡುವುದರಿಂದ ೫೫,೦೦೦ ಸಸಿಗಳನ್ನು ಒಟ್ಟುಗೂಡಿಸಬಹುದು. 

ಗೊಬ್ಬರ ಬಳಕೆ: ಪ್ರತಿ ಬಿತ್ತನೆಯ ಬದುಗಳಲ್ಲಿ ಶೇ.೫೦ ರಂತೆ ಸಾರಜನಕ ಹಾಗೂ ಪರ‍್ಣ ಪ್ರಮಾಣದ ರಂಜಕ, ಪೊಟ್ಯಾಷ್ ಹಾಕಬೇಕು ಹಾಗೂ ಪ್ರತಿ ಹೆಕ್ಟೇರಿಗೆ ೨೫೦ ಕೆ.ಜಿ. ಬೇವಿನಹಿಂಡಿಯನ್ನು ನೀಡಬೇಕು. ಉಳಿದ ಶೇ.೫೦ ರಷ್ಟು  ಸಾರಜನಕವನ್ನು ೩೦ ದಿನಗಳ ಬಿತ್ತನೆಯ ನಂತರ ಮಣ್ಣಿಗೆ ಬೆರೆಸಬೇಕು. ಮೂರು ದಿನಕ್ಕೆ ಒಂದು ಬಾರಿಯಂತೆ ರಸವರಿ ಕೊಡಬೇಕು. ನಾಟಿಮಾಡಿದ ೨೧ ದಿನಗಳಿಂದ ೧೦೨ ದಿನಗಳ ವರೆಗೆ ಒಟ್ಟಾರೆ ೨೮ ರಸಾವರಿ ಬೇಕಾಗುವುದು.

(ಇನ್ನೂ ಇದೆ)

ವಿಷಯ ಸಂಗ್ರಹಣೆ ಮತ್ತು ಮಾಹಿತಿ : ಡಾ.ಪಿಚ್ಚಯ್ ಮುತ್ತು, ಬೆಂಗಳೂರು