ಬೆಕ್ಕಿಗಂಜದಳುಕದ ಇಲಿ!

ಬೆಕ್ಕಿಗಂಜದಳುಕದ ಇಲಿ!

ಬರಹ

(ಇ-ಲೋಕ-53)(16/12/2007) 

ಬೆಕ್ಕು ತನ್ನ ಮೇಲೆ ಆಕ್ರಮಣ ಮಾಡುವುದರಿಂದ ಇಲಿ ಬೆಕ್ಕಿಗೆ ಹೆದರುತ್ತದೆ ಇಲಿಯ ಸ್ವಭಾವ ಎನ್ನುವುದು ನಮ್ಮ ಕಲ್ಪನೆ. ಅದು ಹಾಗಲ್ಲ,ಬೆಕ್ಕಿನ ವಾಸನೆಗೆ ಹೆದರುವ ಸ್ವಭಾವ ಇಲಿಗಿರುವುದು ಈ ವರ್ತನೆಗೆ ಕಾರಣ ಎನ್ನುವುದನ್ನು ಟೋಕಿಯೋದ ಸಂಶೋಧಕರು ಸಿದ್ಧ ಪಡಿಸಿದ್ದಾರೆ.ಅವರು ಜೆನೆಟಿಕ್ ಇಂಜಿನಿಯರಿಂಗ್ ಮೂಲಕ ಇಲಿಯ ಮೂಗಿನ ರಚನೆಯನ್ನು ಬದಲಾಯಿಸಿದರು.ಇದರಿಂದ ಬೆಕ್ಕಿನ ವಾಸನೆ ಹಿಡಿಯುವ ಶಕ್ತಿ ಇಲಿಗೆ ಇಲ್ಲವಾಗುತ್ತದೆ.ಪರಿಣಾಮ,ಬೆಕ್ಕು ಸನಿಹದಲ್ಲಿದ್ದರೂ ಇಲಿಗೆ ಬೆಕ್ಕಿನ ವಾಸನೆ ಬಾರದು.ಹಾಗಾಗಿ ಅದು ಬೆಕ್ಕಿನ ಸಮೀಪ ಇದ್ದರೂ ಅಂಜದು,ಅಳುಕದು!ಬೆಕ್ಕಿನ ಜತೆ ಆಟಕ್ಕಿಳಿಯುವ ಸಾಹಸವನ್ನೂ ಅದು ಪ್ರದರ್ಶಿಸಿದರೂ ಅಚ್ಚರಿಯಿಲ್ಲ.ಅದೆಲ್ಲಾ ಸರಿ,ಬೆಕ್ಕಿಗೆ ಇಲಿಯ ವಾಸನೆ ಹೊಡೆದು,ಅದನ್ನು ಸವಿಯುವ ಆಸೆ ಆಗಲಿಲ್ಲವೇ ಎಂದು ನೀವು ಕೇಳಿದರೆ ನನ್ನಲ್ಲಿ ಉತ್ತರವಿಲ್ಲ.
ಮೊಬೈಲ್ ನೆಟ್‌ವರ್ಕ್ ಬಳಸದೆ ಮೊಬೈಲ್‌ನಲ್ಲಿ ಕ್ರಿಕೆಟ್ ಮಾಹಿತಿ
 ಕ್ರಿಕೆಟ್ ಮಾಹಿತಿಯನ್ನು ಸೆಲ್‌ಫೋನಿನಲ್ಲಿ ಪಡೆಯುವುದು ಸುಲಭ.ನಿಗದಿತ ದರ ತೆತ್ತರೆ,ಸೆಲ್‍ಫೋನ್ ಕಂಪೆನಿಗಳು ಕ್ರಿಕೆಟ್ ಬಗೆಗಿನ ತಾಜಾ ವರದಿಯನ್ನು ಮೊಬೈಲ್ ಮೂಲಕ ಒದಗಿಸುತ್ತವೆ.ಆದರೆ ಇತ್ತೀಚೆಗಿನ ಪಾಕ್-ಭಾರತ ನಡುವಣ ಕ್ರಿಕೆಟ್ ಟೆಸ್ಟ್ ನಡೆದಾಗ,ಕ್ರೀಡಾಂಗಣದಲ್ಲಿದ್ದವರಿಗೆ ಕ್ರಿಕೆಟಿನ ತಾಜಾ ಸುದ್ದಿಗಳು ನೆಟ್‍ವರ್ಕ್ ಹಂಗಿಲ್ಲದೆ ದೊರೆಯುವ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಒಕ್ಕೂಟವು ಟೆಲಿಬ್ರಹ್ಮ ಎನ್ನುವ ಕಂಪೆನಿಯ ಜತೆಗೂಡಿ ನೀಡಿತು.ಇದರ ಲಾಭ ಪಡೆಯಲು ಸೆಲ್‍ಫೋನಿನಲ್ಲಿ ಬ್ಲೂಟೂತ್ ಎನ್ನುವ ತಂತ್ರಜ್ಞಾನ ಇರಬೇಕಿತ್ತು.ಕಡಿಮೆ ಶಕ್ತಿಯ ನಿಸ್ತಂತು ವ್ಯವಸ್ಥೆಯನ್ನು ಬ್ಲೂಟೂತ್ ತಂತ್ರಜ್ಞಾನ ಒದಗಿಸುತ್ತದೆ.ಕ್ರಿಕೆಟ್ ಸ್ಕೋರಿನ ಜತೆ,ದಾಖಲೆಗಳು,ಆಟಗಾರರ ಬಗೆಗಿನ ಮಾಹಿತಿ,ಕ್ರೀಡಾಂಗಣದ ಬಗೆಗಿನ ಮಾಹಿತಿಯೂ ಪ್ರೇಕ್ಷಕರಿಗೆ ಲಭ್ಯವಾಯಿತು.ಜತೆಗೆ ಪಕ್ಕದ ವ್ಯವಹಾರ ಮಳಿಗೆಗಳಲ್ಲಿ ಲಭ್ಯವಿದ್ದ ವಿಶೇಷ ದರ ಕಡಿತ ಮಾರಾಟ ಕೊಡುಗೆಗಳ ಬಗೆಗೆಯೂ ಜನರಿಗೆ ಪುಕ್ಕಟೆ ಮಾಹಿತಿ ಸಿಕ್ಕಿತು.
ದಾರಿ ತೋರಿಸುವ ಕೈಪಿಡಿ ಸಾಧನ
 ಭಾರತದ ಹದಿನೆಂಟು ನಗರ,ಐವತ್ತು ಸಾವಿರಕ್ಕೂ ಅಧಿಕ ಪಟ್ಟಣ ಮತ್ತು ಹಳ್ಳಿಗಳ ಡಿಜಿಟಲ್ ನಕಾಶೆಯನ್ನು ಮ್ಯಾಪ್ ಇಂಡಿಯಾ ಎಂಬ ಕಂಪೆನಿ ಸಿದ್ಧ ಪಡಿಸಿದೆ.ವ್ಯಕ್ತಿ ಇರುವ ಸ್ಥಳ ಗುರುತಿಸುವ ವ್ಯವಸ್ಥೆ ಜಿಪಿಎಸ್ ಈಗಾಗಲೇ ಚಾಲ್ತಿಯಲ್ಲಿದೆ ಎನ್ನುವುದು ನಿಮಗೆ ಗೊತ್ತಿರಬಹುದು.ಇದು ಕೃತಕ ಉಪಗ್ರಹ ಆಧಾರಿತ ವ್ಯವಸ್ಥೆಯಾಗಿದ್ದು,ಕಿರು ಸಾಧನವೊಂದನ್ನು ಬಳಸಿ ವ್ಯಕ್ತಿಯಿರುವ ಸ್ಥಾನವನ್ನು ಗುರುತಿಸುತ್ತದೆ.ಸಿ ಇ ಇನ್ಫೋಸಿಸ್ಟಮ್ಸ್ ಜತೆಗೂಡಿ ಮ್ಯಾಪ್ ಇಂಡಿಯ ಕಂಪೆನಿಯು ಪ್ರಯಾಣ ಕಾಲದಲ್ಲಿ ಗಮ್ಯಸ್ಥಳವನ್ನು ಹೇಗೆ ಕ್ರಮಿಸಬೇಕು ಎನ್ನುವ ನಿರ್ದೇಶನ ನೀಡುವ ವ್ಯವಸ್ಥೆಯನ್ನು ಒದಗಿಸಲಾರಂಭಿಸಿದೆ.ಈ ಅನುಕೂಲತೆ ಪಡೆಯಲು ಇಪ್ಪತ್ತು ಸಾವಿರ ಖರ್ಚು ಬರುತ್ತದೆ.ಕೈಪಿಡಿ ಸಾಧನ ಇದಕ್ಕೆ ಬೇಕು.ಈ ಸಾಧನದಲ್ಲಿ ಡಿಜಿಟಲ್ ನಕಾಶೆಗಳನ್ನು ಸಂಗ್ರಹಿಸಲಾಗಿದೆ.ಜತೆಗೆ ಈ ಸಾಧನದಲ್ಲಿ ಜಿಪಿಎಸ್ ವ್ಯವಸ್ಥೆಯ ಗ್ರಾಹಕ ಇದೆ.ಹಾಗಾಗಿ ಇದು ನೀವು ಸಾಗಬೇಕಾದ ಹಾದಿಯ ಬಗ್ಗೆ ಮಾರ್ಗದರ್ಶನ ಮಾಡಬಲ್ಲುದು.
ನಿಮಗೆಂದೇ ತಯಾರಾಗುವ ಚಲನಚಿತ್ರ
 ನಿಮ್ಮನ್ನೇ ದೃಷ್ಟಿಯಲ್ಲಿರಿಸಿಕೊಂಡು ಚಿತ್ರ ತೆಗೆದರೆ ನಿಮಗೆ ಖುಷಿಯಾಗದಿರುತ್ತದೆಯೇ?ನಿಮ್ಮ ಆಸಕ್ತಿ,ಪ್ರಾಯ,ಲಿಂಗ ಇತ್ಯಾದಿಗಳನ್ನು ದೃಷ್ಟಿಯಲ್ಲಿರಿಸಿ,ಚಿತ್ರಕತೆ,ಪಾತ್ರಧಾರಿಗಳ ಉಡುಪು,ವರ್ತನೆ ಇತ್ಯಾದಿಗಳು ಬದಲಾಗುವಂತಹ ಚಿತ್ರ ನಿಮ್ಮ ಕಂಪ್ಯೂಟರಿನಲ್ಲಿ ಮೂಡಿಬರುವ ತಂತ್ರಜ್ಞಾನ ಇದೀಗ ಸಿದ್ಧವಾಗಿದೆ.ಈ ತಂತ್ರಜ್ಞಾನಕ್ಕೆ ಕಂಪ್ಯೂಟರ್ ಗೇಮ್‍ಗಳ ತತ್ತ್ವವನ್ನು ಬಳಸಲಾಗಿದೆ.ಕಂಪ್ಯೂಟರ್ ಆಟಗಳಲ್ಲಿ ಆಡುವವನ ಪ್ರತಿಕ್ರಿಯೆ ಆಧಾರಿಸಿ,ಆಟದ ಓಟ ನಿರ್ಧಾರವಾಗುತ್ತದೆ ತಾನೇ?ಇಲ್ಲೂ ಅದೇ ರೀತಿ ಆಗುವಂತೆ ಮಾಡಲಾಗಿದೆಯಂತೆ."ಲೀವಿಂಗ್ ದ್ ಗೇಂ" ಈ ಬಗೆಯಲ್ಲಿ ತಯಾರಾದ ಚಿತ್ರ.ಇಂತಹ ಚಿತ್ರ ನೋಡುವಾಗ ನಿಮ್ಮ ಇಷ್ಟಾನಿಷ್ಟಗಳ ಆಧಾರದಲ್ಲಿ ಪಾತ್ರಧಾರಿಗಳು ಕೋಕ್ ಕುಡಿಯಬಹುದು ಇಲ್ಲವೇ ಬೀರು ಗುಟುಕರಿಸಬಹುದು.
ಮೈಕ್ರೋಸಾಫ್ಟ್ ಬಗಲಿಗೆ ಮಲ್ಟಿಮ್ಯಾಪ್ ಕಂಪೆನಿ
 ಮೈಕ್ರೋಸಾಫ್ಟ್ ಕಂಪೆನಿ ನಕಾಶೆಗಳನ್ನು ಜನರಿಗೆ ಲಭ್ಯವಾಗಿಸುವ ಸೇವೆಯನ್ನು ಒದಗಿಸಲು ಉತ್ಸುಹಕವಾಗಿರುವಂತಿದೆ.ಮಲ್ಟಿಮ್ಯಾಪ್ ಎಂಬ ಕಂಪೆನಿಯನ್ನು ಬಗಲಿಗೆ ಹಾಕಿಕೊಂಡಿರುವ ಮೈಕ್ರ್ರೋಸಾಫ್ಟ್ ಹಿಂದೆ ಇದೇ ಉದ್ದೇಶ ಅಡಗಿರುವಂತಿದೆ.ಮಲ್ಟಿಮ್ಯಾಪ್ ದಶಕ ಪೂರೈಸಿರುವ ಕಂಪೆನಿಯಾಗಿದ್ದು,ಇದರ ಅಂತರ್ಜಾಲ ತಾಣ ಇಂಗ್ಲೆಂಡಿನ ಜನಪ್ರಿಯ ತಾಣಗಳ ಪೈಕಿ ಒಂದು.ಡಿಜಿಟಲ್ ನಕಾಶೆಗಳನ್ನು ಆನ್‍ಲೈನಿನಲ್ಲಿಒದಗಿಸುವ ಸೇವೆಯನ್ನು ಮಲ್ಟಿಮ್ಯಾಪ್ ಒದಗಿಸುತ್ತಿದೆ.ಗೂಗಲ್ ಅರ್ಥ್ ಅಂತಹ ಸೇವೆಯನ್ನು ಮೈಕ್ರೋಸಾಫ್ಟ್ ಒದಗಿಸಲಾರಂಭಿಸಿದರೆ ಅಚ್ಚರಿ ಪಡಬೇಕಿಲ್ಲ.
ಗೂಗಲ್‍ನ ವಿಶ್ವಕೋಶ ನೋಲ್
 ವಿಕಿಪೀಡಿಯಾವು ಜನರಿಂದ ಜನರಿಗಾಗಿ ಜನರೇ ಬರೆದ ವಿಶ್ವಕೋಶವನ್ನು ಅಂತರ್ಜಾಲ ಮೂಲಕ ಒದಗಿಸುತ್ತಿದೆ.ಇದರಲ್ಲಿ ಬರಹಗಳ ಲೇಖಕನ ಬಗ್ಗೆ ಇತರರಿಗೆ ಮಾಹಿತಿ ಸಿಗದು.ಯಾರು ಬೇಕಾದರೂ ಲೇಖನಗಳನ್ನು ಬರೆಯಬಹುದು.ಇರುವ ಲೇಖನಗಳನ್ನು ಮಾರ್ಪಡಿಸಬಹುದು.ಅಂತಿಮ ತೀರ್ಮಾನ ಸಂಪಾದಕೀಯ ಮಂಡಳಿಯದು.ಗೂಗಲ್ ಕೂಡಾ ವಿಶ್ವಕೋಶವನ್ನು ಜನರ ಸಹಯೋಗದಲ್ಲಿ ರಚಿಸುವ ತಾಣ ನೋಲ್(knol) ಅನ್ನು ಆರಂಭಿಸಿದೆ.ಇಲ್ಲಿ ಲೇಖನ ಓರ್ವನದ್ದೇ ಆಗಿರುತ್ತದೆ ಮಾತ್ರವಲ್ಲ,ಲೇಖಕ ಯಾರೆಂಬುದು ಇತರರಿಗೂ ತಿಳಿಯುತ್ತದೆ.ಲೇಖನಕ್ಕೆ ಇತರರು ರೇಟಿಂಗ್ ಕೊಡಬಹುದು.ಲೇಖಕ ಬಯಸಿದರೆ,ಆತನ ಲೇಖನದ ಜತೆ ಜಾಹೀರಾತುಗಳು ಪ್ರಕಟವಾಗುತ್ತವೆ.ಲೇಖನ ಜನಪ್ರಿಯವಾದರೆ,ಲೇಖಕನಿಗೆ ಜಾಹೀರಾತಿನ ಮೂಲಕ ಆದಾಯ ಕೂಡಾ ಬರಬಹುದು.
*ಅಶೋಕ್‍ಕುಮಾರ್ ಎ