ಬೆಕ್ಕಿನ ಮೀಸೆ ಮತ್ತು ಹಸುಗಳ ದಿಕ್ಕು !

ಬೆಕ್ಕಿನ ಮೀಸೆ ಮತ್ತು ಹಸುಗಳ ದಿಕ್ಕು !

ಪ್ರಾಣಿಗಳ ಪ್ರಪಂಚ ಬಹಳ ರೋಚಕ ಹಾಗೂ ನಿಗೂಢ. ನಾವೆಷ್ಟೇ ಆಧುನಿಕತೆಯ ಭರಾಟೆಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದು, ಅವುಗಳಿಂದ ನಮ್ಮ ಜೀವನವನ್ನು ಸುಲಭವಾಗಿಸಿದರೂ, ಪ್ರಾಣಿಗಳ ಸಹಜ ಜ್ಞಾನದ ಎದುರು ನಮ್ಮದೇನೂ ಇಲ್ಲ. ಪ್ರತಿಯೊಂದು ಪ್ರಾಣಿ ಅಥವಾ ಪಕ್ಷಿಗೆ ಅದರದ್ದೇ ಆದ ವೈಶಿಷ್ಟ್ಯತೆ ಇದೆ. ಪಕ್ಷಿಗಳಂತೆ ಗೂಡು ಕಟ್ಟಲು ನಮಗೆ ಏಳು ಜನ್ಮವೆತ್ತಿ ಬಂದರೂ ಆಗಲಾರದು. ಹಮ್ಮಿಂಗ್ ಬರ್ಡ್ ಎಂಬ ಪುಟ್ಟ ಹಕ್ಕಿಯು ಹಾರುತ್ತಲೇ ಹೂವಿನಿಂದ ಮಕರಂದವನ್ನು ಹೀರುತ್ತದೆ. ಹುಟ್ಟುವಾಗ ಕೇವಲ ೨ ಸೆಂ. ಮೀ. ಇರುವ ಕಾಂಗರೂ ಎಂಬ ಪ್ರಾಣಿಯ ಮರಿ ನಿಧಾನವಾಗಿ ಚಲಿಸಿ, ತಾಯಿಯ ಚೀಲದೊಳಗೆ ಸೇರಿ, ಅಲ್ಲಿ ಬೆಳೆದು ದೊಡ್ದದಾಗುವುದು ಯಾವ ವಿಸ್ಮಯಕ್ಕೆ ಕಮ್ಮಿ? ನಾವಿಲ್ಲಿ ಬೆಕ್ಕಿನ ಮೀಸೆಯ ಬಗ್ಗೆ ಹಾಗೂ ಹಸುಗಳಿಗೆ ದಿಕ್ಕುಗಳ ಪರಿಚಯವಿದೆಯೇ ಎಂಬ ವಿಷಯಗಳ ಬಗ್ಗೆ ಒಂದಿಷ್ಟು ಗಮನಹರಿಸುವ…

ಬೆಕ್ಕಿನ ಮೀಸೆಯ ಕಥೆ: ನಾಯಿಯಂತೆಯೇ ಬೆಕ್ಕನ್ನು ಮನೆಯಲ್ಲಿ ಸಾಕುತ್ತಾರೆ. ಹುಲಿಯ ಕುಟುಂಬಕ್ಕೆ ಸೇರಿದ ಈ ಪ್ರಾಣಿ ನೋಡಲು ಪುಟ್ಟ ಹುಲಿಯಂತೆಯೇ ಕಾಣಿಸುತ್ತದೆ. ಕದ್ದು ತಿನ್ನುವುದರಲ್ಲಿ ಮಹಾ ಚಾಣಾಕ್ಷ ಇದು. ಬೆಕ್ಕನ್ನು ನೀವು ಗಮನಿಸಿದರೆ ಅದರ ಮುಖದ ಮೇಲೆ ಬಾಯಿಯ ಇಕ್ಕೆಲಗಳಲ್ಲಿ ಸಣ್ಣನೆಯ, ಉದ್ದನೆಯ ಮೀಸೆಯಂಥಹ ಬೆಳವಣಿಗೆಗಳು ಇರುತ್ತವೆ. ಬೆಕ್ಕಿಗೆ ಗಂಡಸರಂತೆ ಬೆಳೆದು ಪ್ರಾಯಕ್ಕೆ ಬರುವಾಗ ಮೀಸೆ ಬರುವುದಲ್ಲ, ಹುಟ್ಟಿನಿಂದಲೇ ಮೀಸೆಯನ್ನು ಹೊತ್ತುಕೊಂಡೇ ಬಂದಿರುತ್ತದೆ. ಈ ಮೀಸೆಯ ಉಪಯೋಗವೇನೆಂದು ನಿಮಗೆ ಗೊತ್ತೇ? ಈ ಮೀಸೆಗಳು ಬೆಕ್ಕಿನ ದೈನಂದಿನ ದಿನಚರಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.  

ನಾವು ಮನೆಗಳಲ್ಲಿ ಸಾಕುವ ಪುಟ್ಟ ಬೆಕ್ಕುಗಳಿಂದ ಹಿಡಿದು, ಕಾಡಿನ ದೊಡ್ಡ ಬೆಕ್ಕುಗಳು ಹಾಗೂ ಸೈಬೀರಿಯಾದಲ್ಲಿ ಕಂಡು ಬರುವ ಸುಮಾರು ೨೦ ಕೆ ಜಿ ಗೂ ಅಧಿಕ ತೂಕದ ಸೈಬೀರಿಯನ್ ದೈತ್ಯ ಬೆಕ್ಕುಗಳು ಇವೆ. ಬೆಕ್ಕುಗಳು ಯಾವ ಸ್ಥಳದಲ್ಲಿ ವಾಸಿಸಿದರೂ ಅವುಗಳು ಅಲ್ಲಿಯ ವಾತಾವರಣಕ್ಕೆ ತಕ್ಕುದಾದ ಮೈರಚನೆಯನ್ನು ಹೊಂದಿರುತ್ತದೆ. ಅವುಗಳು ಬೇಟೆಯಾಡಲು ಅನುಕೂಲವಾದ ಸಾಮರ್ಥ್ಯವನ್ನೂ ಹೊಂದಿರುತ್ತವೆ. 

ಬೆಕ್ಕುಗಳ ಕಳ್ಳ ಬುದ್ದಿ ಮನೆಯಲ್ಲಿ ಇದನ್ನು ಸಾಕುವವರಿಗೆ ತಿಳಿದೇ ಇರುತ್ತದೆ. ಹೆಜ್ಜೆಯ ಸಪ್ಪಳವಾಗದಂತೆ ಅಡುಗೆ ಮನೆ ಹೊಕ್ಕು ಅಲ್ಲಿದ್ದ ಹಾಲನ್ನು ಕುಡಿದು ಮುಗಿಸುವುದರಲ್ಲಿ ಬೆಕ್ಕು ಎತ್ತಿದ ಕೈ. ಕತ್ತಲಿನಲ್ಲೂ ಅವುಗಳು ಆಹಾರವನ್ನು ಹುಡುಕುತ್ತವೆ. ಈ ಸಮಯದಲ್ಲಿ ಅವುಗಳ ಮೀಸೆಗಳು ಉಪಯೋಗಕ್ಕೆ ಬರುತ್ತವೆ. ಬಹುತೇಕ ಬೆಕ್ಕುಗಳ ಗ್ರಹಣ ಶಕ್ತಿ ಹಾಗೂ ದೃಷ್ಟಿಯು ಚುರುಕಾಗಿರುತ್ತವೆ. ಗಾಢ ಕತ್ತಲು ಇರುವಾಗ ಅದರ ಕಿವಿಗಳು ಹಾಗೂ ಕಣ್ಣುಗಳು ಯಾವ ವಿಷಯವನ್ನೂ ಗ್ರಹಿಸಲು ಅಸಮರ್ಥವಾದಾಗ ಅವುಗಳಿಗೆ ಮೀಸೆಗಳು ಉಪಯೋಗಕ್ಕೆ ಬರುತ್ತವೆ. ಈ ಮೀಸೆಗಳ ಮೂಲಕ ಅವುಗಳು ತಮ್ಮ ಸುತ್ತಮುತ್ತಲಿನ ಸಂಗತಿಗಳನ್ನು ಗ್ರಹಿಸಿಕೊಳ್ಳುತ್ತವೆ. ಕಣ್ಣು ಕಾಣದ ಅಂಧರು ತಮ್ಮ ಕೈಯಲ್ಲಿರುವ ಕೋಲಿನ ಮೂಲಕ ದಾರಿಯನ್ನು ಕಂಡುಕೊಂಡಂತೆ ಬೆಕ್ಕುಗಳು ತಮ್ಮ ಮೀಸೆಯ ಸ್ಪರ್ಷದಿಂದ ಹತ್ತಿರದ ವಸ್ತು ಅಥವಾ ಪ್ರದೇಶದ ವಿಷಯಗಳನ್ನು ಗ್ರಹಿಸುತ್ತವೆ.

ಬೆಕ್ಕು ಒಂದು ಬಿಲದಲ್ಲಿ ತಲೆಯನ್ನು ತೂರಿಸಿದಾಗ, ಅಲ್ಲಿ ಗಾಢಾಂಧಕಾರವಿದ್ದರೆ ಅದರ ಕಣ್ಣು, ಕಿವಿಗಳು ಕೆಲಸ ಮಾಡಲಾರವು. ಆ ಸಮಯದಲ್ಲಿ ತನ್ನ ಉದ್ದವಾದ ಮೀಸೆಗಳಿಂದ ಆ ಬಿಲದ ಇಕ್ಕೆಲಗಳಲ್ಲಿರುವ ಗೋಡೆಯನ್ನು ಸ್ಪರ್ಶಿಸಿ ಅದರ ಅಗಲವನ್ನು ತಿಳಿದುಕೊಳ್ಳುತ್ತದೆ. ಆ ಬಿಲದ ಒಳಗಿನ ಸ್ಥಳಾವಕಾಶವನ್ನೂ ಅಂದಾಜು ಮಾಡಿಕೊಳ್ಳುತ್ತದೆ. ಇಲಿ, ಹೆಗ್ಗಣ ಮುಂತಾದ ಪ್ರಾಣಿಗಳು ಇದ್ದರೆ ಅವುಗಳ ಇರುವಿಕೆಯೂ ಈ ಮೀಸೆಯ ಸ್ಪರ್ಶದಿಂದ ತಿಳಿದು ಬಿಡುತ್ತದೆ. 

ಹೀಗೆ ಬೆಕ್ಕಿಗೆ ಇರುವ ಮೀಸೆಯು ಅಲಂಕಾರಕ್ಕೆ ಮಾತ್ರವಲ್ಲದೇ, ಯಾವ ವಸ್ತು ಎಷ್ಟು ದೂರದಲ್ಲಿದೆ ಎಂಬ ಬಗ್ಗೆ ತಿಳಿಯಲು ಅನುಕೂಲಕರವಾಗಿದೆ. ಅದರೆ ಈ ಮೀಸೆಯಿಂದ ಬೆಕ್ಕಿಗೆ ವಾಸನೆ ಹಾಗೂ ಶಬ್ದಗಳಂತಹ ಸಂಗತಿಗಳು ತಿಳಿಯಲಾರವು. ಹೀಗಿದೆ ಮೀಸೆ ಹೊತ್ತ ಬೆಕ್ಕಿನ ಕಥೆ.

ದನಗಳಿಗೆ ದಿಕ್ಕುಗಳು ತಿಳಿಯುತ್ತವೆಯೇ?: ದಿಕ್ಕುಗಳನ್ನು ಗಮನಿಸಿ ಹಲವಾರು ಪ್ರಾಣಿ ಪಕ್ಷಿಗಳು ವಲಸೆ ಹೋಗುವುದನ್ನು ನೀವೆಲ್ಲಾ ಕಂಡಿರುತ್ತೀರಿ. ಅವುಗಳಿಗೆ ಈ ಜ್ಞಾನ ಜನ್ಮತಃ ಬಂದಿರುತ್ತವೆ. ನಾವಾದರೆ ಸೂರ್ಯ ಹುಟ್ಟುವ ದಿಕ್ಕು ಪೂರ್ವ ಎಂದು ಗಮನಿಸಿ ಉಳಿದ ದಿಕ್ಕನ್ನು ಗುರುತು ಮಾಡುತ್ತೇವೆ. ಈಗಂತೂ ನೆವಿಗೇಟರ್ (ದಿಕ್ಸೂಚಿ) ಎಂಬ ವ್ಯವಸ್ಥೆ ಮೊಬೈಲ್ ನಲ್ಲಿದೆ. ಇದನ್ನು ಬಳಸಿ ದಿಕ್ಕುಗಳನ್ನು ತಿಳಿದುಕೊಳ್ಳಬಹುದು. ನಮ್ಮ ಭೂಮಿಯೇ ಒಂದು ರೀತಿಯಲ್ಲಿ ದೊಡ್ದ ಅಯಸ್ಕಾಂತ. ಆದುದರಿಂದ ಯಾವುದೇ ಅಯಸ್ಕಾಂತವನ್ನು ತೆಗೆದುಕೊಂಡಲ್ಲಿ ಅದು ಉತ್ತರ-ದಕ್ಷಿಣ ದಿಕ್ಕಿನ ಕಡೆಗೇ ಮುಖಮಾಡುತ್ತದೆ.

ಈಗ ದನಗಳು ಹಾಗೂ ಜಿಂಕೆಗಳಂತಹ ಹುಲ್ಲು ಮೇಯುವ ಪ್ರಾಣಿಗಳ ದಿಕ್ಕುಗಳ ಜ್ಞಾನದ ಬಗ್ಗೆ ಗಮನಿಸುವ. ಅಧಿಕಾಂಶ ಈ ಪ್ರಾಣಿಗಳು ಹುಲ್ಲು ಮೇಯುವಾಗ ಅಥವಾ ವಿಶ್ರಾಂತಿಯನ್ನು ತೆಗೆದುಕೊಳ್ಳುವಾಗ ಸಾಧಾರಣವಾಗಿ ಉತ್ತರ-ದಕ್ಷಿಣ ದಿಕ್ಕುಗಳತ್ತಲೇ ಕುಳಿತುಕೊಳ್ಳುತ್ತವೆ ಎಂದು ಹಲವಾರು ಸಂಶೋಧನೆಗಳಿಂದ ಸಿದ್ಧವಾಗಿದೆಯಂತೆ. ಈ ಪ್ರಯೋಗಕ್ಕೆ ವಿಜ್ಞಾನಿಗಳು ಸುಮಾರು ೩೦೦ಕ್ಕೂ ಅಧಿಕ ಪಶು ಸಾಕಣೆ ಕೇಂದ್ರಗಳನ್ನು ಗುರುತಿಸಿ ಅಲ್ಲಿಯ ೮೫೦೦ಕ್ಕೂ ಅಧಿಕ ಗೋವುಗಳನ್ನು ಸೂಕ್ಷ್ಮವಾಗಿ ಗಮನಿಸಿ ಶೇ ೭೫ರಷ್ಟು ಹಸುಗಳು ಯಾವಾಗಲೂ ಉತ್ತರ ಅಥವಾ ದಕ್ಷಿಣ ದಿಕ್ಕಿನತ್ತವೇ ಮುಖ ಮಾಡಿ ಹುಲ್ಲು ಮೇಯುತ್ತವೆ ಹಾಗೂ ವಿಶ್ರಾಂತಿ ಪಡೆದುಕೊಳ್ಳುತ್ತವೆ ಎಂದು ಗಮನಿಸಿದರು. ಆದರೆ ಅವುಗಳು ಈ ರೀತಿಯಾಗಿ ಯಾಕೆ ವರ್ತಿಸುತ್ತವೆ ಎಂಬುವುದು ಇನ್ನೂ ನಿಗೂಢವಾಗಿಯೇ ಉಳಿದ ಸಂಗತಿ.

ಭೂಮಿಯ ಗರ್ಭದಲ್ಲಿರುವ ಅಯಸ್ಕಾಂತವನ್ನು ಹೊಂದಿಕೊಂಡು ದನಗಳೂ ತಮ್ಮ ದಿಕ್ಕನ್ನು ಉತ್ತರ ದಕ್ಷಿಣವಾಗಿಯೇ ಗುರುತಿಸಿಕೊಂಡಿವೆಯೇ ಎನ್ನುವ ಬಗ್ಗೆ ವಿಜ್ಞಾನಿಗಳಲ್ಲಿ ಜಿಜ್ಞಾಸೆ ಕಾಡುತ್ತಿದೆ. ಹೀಗೆ ವರ್ತಿಸುವುದರಿಂದ ಅವುಗಳ ದೇಹ ಪರಿಸ್ಥಿತಿಗೆ ಅನುಕೂಲಕರವಾಗಿದೆಯೇ ಎಂಬ ವಿಷಯ ಇನ್ನಷ್ಟೇ ತಿಳಿಯಬೇಕಾಗಿದೆ.

ಮಾಮೂಲಾಗಿ ಹಸುಗಳ ಶರೀರದ ಉಷ್ಣಾಂಶವು ೧೦೨ ಡಿಗ್ರಿ ಫ್ಯಾರನ್ ಹೀಟ್ ಆಗಿರುತ್ತದೆ. ಕೆಲವೊಮ್ಮೆ ವಾತಾವರಣ ಏರುಪೇರಿನಿಂದ ಅವುಗಳ ಶರೀರದ ಉಷ್ಣಾಂಶವು ವಿಪರೀತ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆ ಕಾರಣದಿಂದ ಅವುಗಳು ದಿಕ್ಕುಗಳನ್ನು ಬದಲಾಯಿಸುವುದರ ಮೂಲಕ ಉಷ್ಣಾಂಶವನ್ನು ಸಮತೋಲನದಲ್ಲಿಡಲು ಪ್ರಯತ್ನಿಸುತ್ತವೆ. ವೇಗವಾಗಿ ಗಾಳಿಯು ಬೀಸುವಾಗ ದನಗಳು ತಮ್ಮ ಮುಖವನ್ನು ಆ ದಿಕ್ಕಿಗೇ ತಿರುಗಿಸಿಕೊಳ್ಳುತ್ತವೆ. ಅದೇ ವಾತಾವರಣವು ತಂಪಾಗಿರುವ ಸಮಯದಲ್ಲಿ ಸೂರ್ಯನಿಗೆ ಅಭಿಮುಖವಾಗಿ ತಮ್ಮ ಶರೀರಗಳನ್ನು ತಿರುಗಿಸಿಕೊಳ್ಳುತ್ತವೆ. ಉತ್ತರ -ದಕ್ಷಿಣ ದಿಕ್ಕಿನತ್ತ ತಮ್ಮ ಶರೀರವನ್ನು ತಿರುಗಿಸಿಕೊಳ್ಳುವ ಬಗ್ಗೆಯೂ ಇದೇ ರೀತಿಯ ಅಂದಾಜು ಇರಲೂ ಬಹುದು ಎನ್ನುತ್ತಾರೆ ವಿಜ್ಞಾನಿಗಳು. ಹೀಗೆ ಮಾಡುವುದರಿಂದ ಹಸುವಿನಂತಹ ಪ್ರಾಣಿಗಳು ತಮ್ಮ ಉಷ್ಣಾಂಶವನ್ನು ಹತೋಟಿಯಲ್ಲಿಡುತ್ತವೆ ಎಂದು ಅಂದಾಜಿಸಲಾಗಿದೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣಗಳಿಂದ