ಬೆಕ್ಕು ಬಂತು ಗುಬ್ಬಿ ಹೋಯ್ತು ಡುಂ ಡುಂ.

ಬೆಕ್ಕು ಬಂತು ಗುಬ್ಬಿ ಹೋಯ್ತು ಡುಂ ಡುಂ.

ಬರಹ

ನನ್ನ ಮಗಳಿಗೆ ಪ್ರಾಣಿ ಪಕ್ಷಿಗಳೆಂದರೆ ಬಹಳ ಇಷ್ಟ. ಅವಳನ್ನು ಒಂದು ದಿನ ಪ್ಲೇ ಹೋಮ್ಗೆ ಕರೆದು ಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ಕರುವೊಂದು ಅರಚುತಿತ್ತು. ಅದರ ತಾಯಿ ಹಸು ಅಲ್ಲೆಲ್ಲೂ ಇರಲಿಲ್ಲ. "ಅಪ್ಪಾ. ನೋಡು ಆ ಮರಿ ಹಸು ಅವರಮ್ಮನ್ನ ಕರೀತಿದೆ. ಅಮ್ಮ ಹಸು ಆಫಿಸ್ಗೆ ಹೋಗಿದ್ಯಾ?" ಅಂತ ಕೇಳಿದ್ದಳು. ಅಕ್ಕ ಪಕ್ಕದ ಮನೆಯವರ ಸಾಕು ಪ್ರಾಣಿಗಳೂ ಸಹ ಇವಳ ಸ್ನೇಹಿತರ ಲಿಸ್ಟ್ನಲ್ಲಿದ್ದುವು. ನಾವು ಪುಟಾಣಿ ಸೈಟಿನಲ್ಲಿ ಮನೆ ಕಟ್ಟಿಕೊಂಡಾಗ ಬಾಡಿಗೆ ಮನೆಗಳ ಕಿಷ್ಕಿಂಧಾ ಅನುಭವದಿಂದಾಗಿ ಗಾಳಿ ಬೆಳಕು ಯಥೇಚ್ಛವಾಗಿರಲಿ ಎಂಬ ಕಾರಣಕ್ಕೆ ಹಾಲಿನ ಛಾವಣಿಯ ಎತ್ತರವನ್ನು ಹದಿನೆಂಟು ಅಡಿ ಇರಿಸಿದ್ದೇವೆ. ಸೀಲಿಂಗ್ ಫ್ಯಾನ್ಗೆ ಅಂತ ರೂಫಿನಲ್ಲಿ ವೈರ್‍ಗಳನ್ನು ಎಳೆದು ಪೊಟರೆಯೊಂದನ್ನು ಮಾಡಿರುತ್ತೇವಲ್ಲ ಅಲ್ಲಿಗೆ ಈಗಲೂ ಫ್ಯಾನನ್ನು ಹಾಕಿಸಿಲ್ಲ. ನಾವು ಮನೆಗೆ ಬಂದ ವಾರ ಒಪ್ಪತ್ತರಲ್ಲಿ ಆ ಪೊಟರೆಯನ್ನು ಎರಡು ಗುಬ್ಬಚ್ಚಿಗಳು ತಮ್ಮ ಗೂಡನ್ನಾಗಿ ಮಾಡಿಕೊಂಡುವು. ನನ್ನ ಮಗಳಿಗಂತೂ ಅಪರೂಪದ ಸ್ಪೆಷಲ್ ಸ್ನೇಹಿತರು ಸಿಕ್ಕ ಹಾಗಾಯಿತು. ಆಗ ಅವಳಿಗೆ ಎಂಟು ವರ್ಷ. ಪ್ರತಿ ದಿನ ಶಾಲೆಯಿಂದ ಬಂದವಳೆ ಬ್ಯಾಗನ್ನು ಹೆಗಲಿನಿಂದ ಇಳಿಸುತ್ತಲೇ ಪೊಟರೆಯ ಕಡೆ ಕತ್ತೆತ್ತಿ ನೋಡುತ್ತಾ ಅವು ಇದ್ದಾವೋ ಇಲ್ಲವೋ, ಎಷ್ಟೊತ್ತಾಯಿತು ಹೋಗಿ, ಇತ್ಯಾದಿಯಾಗಿ ಆ ಗುಬ್ಬಚ್ಚಿಗಳ ಕ್ಷೇಮ ಸಮಾಚಾರವನ್ನು ವಿಚಾರಿಸುತ್ತಿದ್ದಳು. ಅವು ಒಂದೊಂದೇ ಹುಲ್ಲು, ಕಡ್ಡಿ, ದಾರದ ತುಂಡುಗಳನ್ನು ತಂದಾಗೆಲ್ಲ ತಾನೇ ಅವನ್ನೆಲ್ಲಾ ಹೆಕ್ಕಿಕೊಂಡು ಬಂದು ಗೂಡು ಕಟ್ಟುತ್ತಿದ್ದವಳ ಹಾಗೆ ಖುಷಿ ಪಡುತ್ತಿದ್ದಳು. ನನಗೂ ಖುಷಿಯೇ. ಅವುಗಳ ಕಿಚ ಕಿಚ ಸದ್ದು, ಪುರ್ರನೆ ಹಾರಿ ಹೋಗಿ ಪುರ್ರನೆ ಹಾರಿ ಬರುವ ಸಂಭ್ರಮ. ಹರುತ್ತಲೆ ಅವು ಆಡುವ ಜೂಟಾಟ. ಎಲ್ಲ ಮನಸ್ಸಿಗೆ ಮುದ ನೀಡುತ್ತಿತ್ತು.

ಇದೆಲ್ಲದರ ಜೊತೆಗೆ ಎಲ್ಲರೂ ಬೆಂಗಳೂರಿನಿಂದ ಗುಬ್ಬಿಗಳು ಮಾಯವಾಗುತ್ತಿವೆ ಎನ್ನುತ್ತಿದ್ದರೆ ಇವೆರಡು ನಮ್ಮ ಮನೆಯಲ್ಲೇ ಗೂಡು ಕಟ್ಟಿಕೊಂಡಿವೆ ಎಂಬ ಹೆಮ್ಮೆ. ತಪಸ್ಸು ಮಾಡಿದ ಮಹಾನುಭಾವರಿಗೆಲ್ಲ ಸಿಕ್ಕದ ಭಗವಂತ ನಮ್ಮ ಮನೆಯಲ್ಲೇ ಪ್ರತ್ಯಕ್ಷನಾಗಿಬಿಟ್ಟಿದ್ದಾನೆ ಅನ್ನುವಂತ ಜಂಬ ಬೇರೆ.

ಆದರೆ ಒಂದು ಹೊಸ ತೊಂದರೆ ಶರುವಾಯಿತು. ನಮ್ಮ ಹಾಲಿನಲ್ಲಿ ಆರಾಮವಾಗಿ ಕುಳಿತು ಟಿವಿ ನೋಡಲು ಒಂದು ಪ್ರಶಸ್ತವಾದ ಸ್ಥಳವಿದೆ. ಬೇರೆಲ್ಲಾ ಸ್ಥಳಗಳಿಗಿಂತ ಇದು ಆರಾಮಾಗಿತ್ತು. ನಮ್ಮ ಮನೆಯಲ್ಲಿ ಪರಂಪರಾಗತವಾದ ಅಥವಾ ಯಾವುದೇ ರೀತಿಯ ಹೈರಾರ್ಕಿ ಇಲ್ಲದಿರುವುದರಿಂದ ಆ ಸ್ಥಳ ಯಾರಿಗೂ ಮೀಸಲೆಂದಿಲ್ಲ. ಯಾರು ಮೊದಲು ಅಲ್ಲಿ ಕೂರುತ್ತಾರೋ ಅವರು ಆ ದಿನದ ಸೌಲಭ್ಯಪೂರ್ಣ ಟಿವಿ ವೀಕ್ಷಣೆಗೆ ಭಾಜನರು. ಈ ಗುಬ್ಬಚ್ಚಿಗಳು ಬರುವ ಮೊದಲಿಂದಲೂ ಸಾಮಾನ್ಯವಾಗಿ ಅಲ್ಲಿ ಕುಳಿತು ಒಂದು ಕೈಯಲ್ಲಿ ತಟ್ಟೆಯನ್ನು ಹಿಡಿದುಕೊಂಡು ಊಟ ಮಾಡುವುದು ರೂಢಿ. ದುರಾದೃಷ್ಟವಶಾತ್ ಆ ಸ್ಥಳ ನೇರವಾಗಿ ಗುಬ್ಬಚ್ಚಿ ಗೂಡಿನ ಕೆಳಗೇ ಇದೆ. ಮೊದಮೊದಲು ಆ ಗುಬ್ಬಚ್ಚಿಗಳು ಹಾಕಿದ ಪಿಕ್ಕೆ ನೇರವಾಗಿ ನಮ್ಮ ತಟ್ಟೆಗೆ! ಅಲ್ಲಿ ಕುಳಿತು ತಿನ್ನುವುದನ್ನು ಬಿಟ್ಟ ಮೇಲೆ ನಮ್ಮ ಮೇಲೇ!

ಆ ಸ್ಥಳದಲ್ಲೇ ಏನೋ ಮಹಿಮೆ ಇದ್ದ ಹಗಿದೆ. ಯಾಕೆಂದರೆ ಈ ಪಿಕ್ಕೆಯ ಕಾರಣದಿಂದಾಗಿ ನಾವು ಎಷ್ಟೇ ಎಚ್ಚರ ವಹಿಸಿ ನಮ್ಮ ಮೇಲೆ ಮೇಲಿನಿಂದ ಏನೂ ಬೀಳದಂತೆ ಅತ್ತಿತ್ತ ಸರಿಸಿ ಕುಳಿತುಕೊಂಡಿದ್ದರೂ ಯಾವ ಜ್ಞಾನದಲ್ಲೋ ನಮಗೇ ಗೊತ್ತಿಲ್ಲದೆ ನೇರವಾಗಿ ಗುಬ್ಬಚ್ಚಿ ಗೂಡಿನ ನೇರಕ್ಕೇ ಸರಿಸಿಕೊಂಡು ಕೂತಿರುತ್ತಿದ್ದೆವು. ನಾವು ಮೈ ಮರೆತು ಮಾತುಕತೆಯಲ್ಲಿ ತೊಡಗಿದ್ದಾಗ ಅಥವಾ ಮಗ್ನರಾಗಿ ಟಿವಿಯನ್ನು ವೀಕ್ಷಿಸುವಾಗ ಆ ಕುರ್ಚಿಗೂ ಆ ಸ್ಥಳಕ್ಕೂ ಏನೋ ನಂಟು ಇದೆ ಎಂಬಂತೆ ಇದು ನಡೆಯುತ್ತಿತ್ತು. ಆ ಕ್ಷಣಕ್ಕೇ ಕಾಯುತ್ತಿದ್ದಂತೆ ಆ ಜೋಡಿಗುಬ್ಬಿಗಳಲ್ಲಿ ಒಂದು (ಯಾರಿಗೆ ಗೊತ್ತು ಎರಡೂ ಇರಬಹುದು. ಪರೀಕ್ಷಿಸಲು ಹೋಗಿ ಕತ್ತೆತ್ತಿ ನೋಡುವಾಗ ಬಾಯೊಳಕ್ಕೇ ಬಿದ್ದು ಬಿಟ್ಟರೆ ಎಂಬ ಕಾರಣದಿಂದ ಯಾರೂ ಆ ಪ್ರಯತ್ನ ಮಾಡಿಲ್ಲ.) ಪಿಕ್ಕೆ ಹಾಕಿಬಿಡುತ್ತಿತ್ತು. ಉಳಿದವರು ಇಂಗು ತಿಂದ ಮಂಗನನ್ನು ಕಂಡಂತೆ ಹೋ ಎಂದು ಕೇಕೆ ಹಾಕಿಕೊಂಡು ನಗುವುದು. ಎಲ್ಲರೂ ಒಂದಲ್ಲಾ ಒಂದು ಸಲ ಬಲಿ ಪಶುವಾದವರೆ. ಆದರೆ ಆ ಕ್ಷಣದ ಬಲಿಪಶುವನ್ನು ಅಪಹಾಸ್ಯ ಮಾಡುವುದು ನಮ್ಮ ಹುಟ್ಟು ಗುಣ ತಾನೆ.

ಇದು ಎಲ್ಲಿವರೆಗೆ ಹೋಯಿತೆಂದರೆ, ನಮ್ಮ ಮನೆಗೆ ಬಂದವರನ್ನು ಆ ಸ್ಥಳ ಮೋಹಿನಿ ಥರ (ಹೆಂಗಸರಾದರೆ ಮೋಹನ ಥರ ಅಂದುಕೊಳ್ಳಿ) ಆಕರ್ಷಿಸುತ್ತಿತ್ತು. ಬಂದವರು ಅಲ್ಲಿ ಎಂಥದೋ ಆಯಸ್ಕಾಂತ ಇದೆ ಎಂಬಂತೆ ನೇರವಾಗಿ ಅಲ್ಲಿಗೇ ಹೋಗಿ ಇನ್ನೇನು ಕೂರ ಬೇಕು ನಾವೆಲ್ಲರೂ ಏಕ ಕಂಠದಲ್ಲಿ ಅಲ್ಲಿ ಯಾವುದೋ ಆಳವಾದ ಅಗೋಚರ ಬಾವಿಯೋ ದೋಸೆ ಕ್ಯಾಂಪಿನ ದೋಸೆ ಹುಯ್ಯುವ ಕಾದ ಕಲ್ಲೋ ಇದೆ ಎಂಬಂತೆ ಅವರನ್ನು ಅಲ್ಲಿ ಕೂರಲು ಬಿಡದೆ ಬೇರೆ ಕಡೆ ಕೂರಿಸುತ್ತಿದ್ದೆವು. ನಮ್ಮ ವರ್ತನೆಯಿಂದ ಗಲಿಬಿಲಿಗೊಂಡ ಅವರು ಅಂಥಾದ್ದು ಅಲ್ಲೇನಿದೆ ಎಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಏನೂ ಗೋಚರಿಸದೆ ನಮಗೇ ಏನೋ ಆಗಿರಬಹುದು ಅಥವಾ ನಾವು ಏನೋ ಹುನ್ನಾರ ನಡೆಸಿದ್ದೇವೆ ಎಂಬಂತೆ ಅನುಮಾನದಿಂದ ನಮ್ಮನ್ನು ನೋಡಬೇಕು. ನಾವು ಆಪಾಯ ಇರುವುದು ಕುರ್ಚಿಯಲ್ಲಲ್ಲ. ಮೇಲೆ ಗುಬ್ಬಚ್ಚಿ ಗೂಡಿನಲ್ಲಿ ಎಂದು ಶುರು ಮಾಡಿ ಇಡೀ ಬೆಂಗಳೂರಿನಲ್ಲಿ ಗುಬ್ಬಚ್ಚಿಗಳಿರುವುದು ನಮ್ಮ ಮನೆಯಲ್ಲಿ ಮಾತ್ರ. ನಶಿಸಿ ಹೋಗುತ್ತಿರುವ ಗುಬ್ಬಚ್ಚಿ ಸಂತತಿಯ ಸಂರಕ್ಷಣೆ ಮತ್ತು ಮುಂದುವರಿಕೆ ನಮ್ಮ ಮನೆಯಲ್ಲೇ ಹೇಗೆ ನಡೆಯುತ್ತಿದೆ ಅನ್ನೋದನ್ನೆಲ್ಲ ವಿವರಿಸಿ ಧನ್ಯತೆಯನ್ನ ಅನುಭವಿಸುತ್ತ ಇದ್ದೆವು.

ಆದರೆ ನಿಧಾನವಾಗಿ ನಮ್ಮ ಮನೆಯ ಪರಿಸ್ಥಿತಿ ಹದಗೆಡಲಾರಂಭಿಸಿದ್ದು ನಮ್ಮ ಗಮನಕ್ಕೆ ಬರಲಿಲ್ಲ. ಮೊದಲು ಮನೆ ಕೆಲಸದವಳು ನೆಲ ಒರೆಸುವಾಗ ಪಿಕ್ಕೆಯನ್ನು ಉಜ್ಜಿ ತೆಗೆಯ ಬೇಕಲ್ಲ. ಗೊಣಗಲು ಶುರು ಮಾಡಿದಳು. ಕ್ರಮೇಣ ಅವುಗಳಿಗೆ ಶಾಪ ಹಾಕಲು ಶುರು ಮಾಡಿದಳು. ಇದು ನನ್ನ ಮಗಳನ್ನು ಸಂದಿಗ್ಧಕ್ಕೆ ತಳ್ಳಿತು. ಕೆಲಸದವಳು ಗುಬ್ಬಚ್ಚಿಗಳಿಗೆ ಸಾಯಲಿ ಎಂದು ಶಾಪ ಹಾಕಿದರೆ ಅವು ಸತ್ತೇ ಹೋಗುತ್ತವೆ ಅಂದು ಕೊಂಡು ಕಣ್ಣೀರಿಡುತ್ತಿದ್ದಳು. ಪಾಪ ಕೆಲಸದ ಆಂಟಿಗೂ ಆ ಪಿಕ್ಕೆ ಕೆರೆದು ತೆಗೆಯಲು ಅಸಹ್ಯವಾಗುತ್ತದಲ್ಲವಾ ಅಂದುಕೊಳ್ಳುವಳು. ಅವಳಿಗೆ ಬಹಳಷ್ಟು ಸಾರಿ ಹೇಳಿದ್ದೇನೆ. ಮಗಳೇ ಇಷ್ಟೊಂದು ಮೃದುತನ ಮರುಗುಗವಿಕೆ ರೂಢಿಸಿಕೊಳ್ಳ ಬೇಡ. ಬದುಕುವುದು ಕಷ್ಟವಾಗುತ್ತದೆ ಎಂದು. ಯಾರಾದರೂ ಅವಳಿಗೆ ಹೊಡೆದರೆ ನೋವಾಗಿದ್ದಕ್ಕೆ ಮೊದಲು ದುಃಖ ಪಟ್ಟು ಆಮೇಲೆ ಅವರ ಕೈಗೂ ನೋವಾಗಿರ ಬಹುದಲ್ಲವಾ ಅಂತ ಮರುಗುತ್ತಾಳೆ. ಏನು ಮಾಡುವುದು. ಹುಟ್ಟು ಗುಣ. ಕೊನೆಗೆ ಅವಳೇ ಒಂದು ಪರಿಹಾರ ಕಂಡುಕೊಂಡಳು. ಪಿಕ್ಕೆ ಬೀಳುವ ಸ್ಥಳದಲ್ಲಿ ಒಂದು ಕಾಗದದ ಹಾಳೆಯನ್ನಿಡುವುದು. ದಿನಾ ಬೆಳಿಗ್ಗೆ ಸಂಜೆ ಪಿಕ್ಕೆಯಿಂದ ಚಿತ್ತಾರವಾಗಿರುವ ಆ ಹಾಳೆಯನ್ನು ಅವಳೇ ಎತ್ತಿ ಬಿಸಾಡುವುದು. ಹಾಳೆಯೇನಾದರೂ ಗಾಳಿ ಬೀಸಿ ಸ್ಥಳ ಪಲ್ಲಟವಾದ ದಿನ ಅವಳೇ ಕೆರೆದು ಹಾಕುವುದು. ಇದರಿಂದ ಕರುಣೆಗೊಂಡ ನಮ್ಮ ಮನೆ ಕೆಲಸದವಳು ಹಾಗೇನಾದರು ನೆಲದ ಮೇಲೆ ಪಿಕ್ಕೆ ಬಿದ್ದ ದಿನ ತಾನೇ ಕೆರೆದು ಸ್ವಚ್ಛ ಮಾಡುತ್ತೇನೆ ಎಂದು ಸ್ವಯಂ ಘೋಷಣೆ ಮಾಡಿದಳು.

ನನ್ನ ಹೆಂಡತಿ ಬಹಳ ಅನುಕಂಪ ಉಳ್ಳವಳು. ಆ ಗುಬ್ಬಿಗಳು ಮನೆಯಲ್ಲಿ ಹಾರಾಡುತ್ತ ಜೂಟಾಟ ಆಡುವುದನ್ನು, ಬೆಳಿಗ್ಗೆ ಬೆಳಕಾಗುತ್ತಿದ್ದ ಹಾಗೆ ಅವುಗಳು ಮಾಡುತ್ತಿದ್ದ ಕಲರವವನ್ನು ಮುದದಿಂದ ಅನುಭವಿಸುತ್ತಿದ್ದಳು. ಮಗಳು ಅವುಗಳೊಂದಿಗೆ ಮಾತನಾಡುವುದನ್ನು ಖುಷಿಯಿಂದಲೇ ಎಂಜಾಯ್ ಮಾಡುತ್ತಿದ್ದಳು. ಅವೂ ನಮ್ಮ ಮನೆಯ ಸದಸ್ಯರಾಗಿಬಿಟ್ಟಿದ್ದವು.

ನನ್ನ ಹೆಂಡತಿಗೆ ಎಲ್ಲವನ್ನೂ ಸ್ವಚ್ಛವಾಗಿ ಚೊಕ್ಕಟವಾಗಿಟ್ಟುಕೊಳ್ಳಬೇಕೆಂಬ ಹಂಬಲ. ಆದರೆ ನನ್ನ ಸೋಂಬೇರಿತನ ಮತ್ತು ಉಡಾಫೆಗಳಿಂದ ಇನ್ನೂ ಅದು ಅವಳ ಕನಸಾಗಿಯೇ ಉಳಿದಿದೆ. ಆದರೂ ಸಹಿಸಿಕೊಂಡಿದ್ದಾಳೆ. ಗುಬ್ಬಚ್ಚಿಯ ಪಿಕ್ಕೆಯಂಥ ಪ್ರಸಂಗಗಳು ಅವಳ ಬತ್ತಳಿಕೆಯೊಳಗೆ ಸೇರಿಕೊಂಡು ಒಮ್ಮೊಮ್ಮೆ ನನ್ನನ್ನು ರಿಪೇರಿ ಮಾಡುವ ಅಸ್ತ್ರಗಳಾಗಿ ಪ್ರಯೋಗವಾಗುತ್ತವೆ. ನಾನು ನನ್ನದೇ ಬಂಡ ಫಿಲಾಸಫಿಗಳನ್ನು ಗುರಾಣಿ ಮಾಡಿಕೊಳ್ಳುತ್ತೇನೆ. ಅವಳ ಪಿತ್ಥ ಕೆರಳುತ್ತದೆ. ಸಾಕಲ್ಲ?

ನಮ್ಮದೆಲ್ಲಾ ಚಿಕ್ಕ ಚಿಕ್ಕ ಸೈಟುಗಳಲ್ಲಿ, ಅರ್ಧ ಸೈಟುಗಳಲ್ಲಿ (ಒಂದನ್ನೊಂದು ಮೀರಿ ಪೈಪೋಟಿಯಲ್ಲಿ ಬೆಳೆದು ಆಕಾಶದಲ್ಲಿ ಚಾಚಿಕೊಂಡಿದ್ದುವು ಅಂತಾ ಏನೋ ಕಾಡಿನಮರಗಳನ್ನು ವರ್ಣಿಸುತ್ತಾರಲ್ಲ ಹಾಗೆ) ಒತ್ತೊತ್ತಾಗಿ ಊರ್ಧ್ವ ಮುಖವಾಗಿ ನಿಂತಿರುವ ಮನೆಗಳು. ನಮ್ಮ ಜೊತೆ ಚೆನ್ನಾಗಿಯೇ ಇದ್ದ ಪಕ್ಕದ ಮನೆಯವನು ಒಂದು ದಿನ ಅವನ ತಾರಸಿಯಿಂದ ಕೈಗೆಟುಕುವಂತಿದ್ದ ನಮ್ಮ ಗವಾಕ್ಷಿಯ ಗಾಜನ್ನು ಹೊಡೆದು ಹಾಕಿದ. ಮತ್ತೊಂದು ದಿನ ಕುದುರೆ ಲದ್ದಿಯನ್ನು ಒಡೆದ ಗಾಜಿನ ಮೂಲಕ ಎಸೆದ. ವಿಚಾರಿಸಿದೆವು. ಪುರಾವೆ ಇಲ್ಲ. ಅವನೇ ಎಂದು ದೂರು ಕೊಡಿ ಎಳೆದುಕೊಂಡು ಬಂದು ಒದೀತೇವೆ ಅಂದರು. ಅದು ನಮಗೆ ಅಪಥ್ಯ. ಮಾತನಾಡಿಸಲು ಪ್ರಯತ್ನಿಸಿದರೆ ಕೆಟ್ಟದಾಗಿ ಮಾತನಾಡಿದ. ನಮಗೆ ಜಗಳ ಮಾಡುವುದು ಗೊತ್ತಿಲ್ಲ. ಇನ್ನೇನು ಮಾಡುವುದು? ನಾವು ಮನೆ ಮಾಡಿರುವ ಪ್ರದೇಶ ಸಂತೆ, ಬೆಟ್ಟದ ತುದಿ, ಸಮುದ್ರದ ತಡಿಗಳ ಎಲ್ಲ ಗುಣಗಳನ್ನು ಹೊಂದಿದೆ. ಅಂಜಲಿಲ್ಲ. ಆ ಬದಿಯ ಗವಾಕ್ಷಿಗೆ ಪಾರದರ್ಶಕ ಆಸ್ಬೆಸ್ಟಾಸ್ ಹಾಳೆಯನ್ನು ಹಾಕಿಸಿದೆವು. ಅದು ಬೇಕಿರಲಿಲ್ಲವೇನೋ. ಯಾಕೆಂದರೆ ಪಕ್ಕದ ಮನೆಯವನಿಂದ ಆಮೆಲೆ ಯಾವ ಉಪಟಳವೂ ಇನ್ನೂ ಆಗಿಲ್ಲ.

ಮೊದಲು ಆ ಗುಬ್ಬಚ್ಚಿಗಳು ಹೆಚ್ಚಾಗಿ ಗವಾಕ್ಷಿಯ ಮೂಲಕವೇ ಓಡಾಡುತ್ತಿದ್ದರೂ ಬಾಗಿಲು ಕಿಟಕಿಗಳ ಮೂಲಕವೂ ಆಗೊಮ್ಮೆ ಈಗೊಮ್ಮೆ ಹಾರಾಡುತ್ತಿದ್ದವು. ಅವುಗಳ ವಿಷಯವಾಗಿಯೇ ನಮ್ಮ ಮನೆಯಲ್ಲಿ ವಾದ ವಿವಾದ, ಚರ್ಚೆ, ಜಗಳ ಎಲ್ಲಾ ನಡೀತಿತ್ತಲ್ಲ. ಗವಾಕ್ಷಿ ಬಂದಾಗಿದೆ ಅಂದ್ರೆ ಈ ಮನೆಗೆ ನಮ್ಮ ಪ್ರವೇಶವೇ ಬಂದಾಗಿದೆ ಅಂದುಕೊಂಡವೋ ಏನೋ. ಬರೋದೇ ನಿಲ್ಲಿಸಿ ಬಿಟ್ಟವು. ಮನೆಯೆಲ್ಲ ಬಣ ಬಣ. ಎರಡು ದಿನ ಆಯಿತು. ನನ್ನ ಮಗಳು ಶಾಲೆಯಿಂದ ಬಂದವಳೆ ಗೊಳೋ ಎಂದು ಅಳೋಕೆ ಶುರು ಮಾಡಿದಳು. ಗಾಬರಿಯಿಂದ ಶಾಲೆಯಲ್ಲೋ ರಸ್ತೆಯಲ್ಲೋ ಏನೋ ಆಗಿರಬಹುದು ಎಂದು ವಿಚಾರಿಸಿದರೆ. ಬಿಕ್ಕುತ್ತಲೇ ಆ ಗುಬ್ಬಚ್ಚಿಗಳು ಬರದೇ ಇರಲಿ ಅಂತ ನೀನು ಆ ಗವಾಕ್ಷಿ ಮುಚ್ಚಿಸಿದ್ದೀಯ ಅಂದಳು. ತಕ್ಷಣ ಗುಬ್ಬಚ್ಚಿಗಳು ಓಡಾಡೋಷ್ಟು ಗಾತ್ರದ ತೂತನ್ನ ಆಸ್ಬೆಸ್ಟಾಸ್ ಶೀಟ್ನಲ್ಲಿ ಕೊರೆಸಿದ್ದಾಯ್ತು. ಓಹೋ ನಮಗಿನ್ನೂ ಆಹ್ವಾನ ಇದೆ ಈ ಮನೇಗೆ ಅಂದುಕೊಂಡು ಅವು ನಮ್ಮನೆಗೆ ಪುನ: ಬಂದುವು.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿದಾಗೆಲ್ಲ ಆಗುತ್ತದಲ್ಲ. ಹಾಗೇ ಒಂದು ಸಾರಿ ಬೇಂಗಳೂರೆಲ್ಲ ಆಕಾಶಕ್ಕೇ ತೂತು ಬಿದ್ದ ಹಾಗೆ ಎರಡು ಮೂರು ದಿನ ಧಾರಾಕಾರ ಮಳೆಗೆ ಈಡಾಯಿತು. ಹೊರವಲಯದ ಬಡಾವಣೆಯೊಂದರಲ್ಲಿ ದೊಡ್ಡ ಮೋರಿಗೆ ಕಟ್ಟಿದ್ದ ಸೇತುವೆಗೆ ಅಕ್ಕ ಪಕ್ಕ ತಡೆ ಕಟ್ಟರಲಿಲ್ಲ. ರಾತ್ರಿ ಮಳೇಲಿ ಮನೇಗೆ ಹಿಂತಿರುಗುತ್ತಿದ್ದ ತರುಣ ದಂಪತಿಗಳ ಕಾರು ಸೇತುವೆಯಿಂದ ಮೋರಿಗೆ ಬಿದ್ದು ಮಳೆ ನೀರಿನ ರಭಸಕ್ಕೆ ಕೆಲವು ಕಿಲೋಮೀಟರಷ್ಟು ದೂರ ಕೊಚ್ಚ್ಕೊಂಡು ಹೋಗಿ ಮೋರಿಯ ಅಗಲ ಕಾರಿನ ಬಾಗಿಲು ತೆಗೆಯಲಾರದಷ್ಟು ಕಿರಿದಾಗಿದ್ದರಿಂದ ಮುಚ್ಚಿದ ಕಾರಿನೊಳಗೇ ಜಲ ಸಮಾಧಿ ಆಗಿದ್ರು.

ಆ ಮಳೆ ಬಿದ್ದ ಸಮಯದಲ್ಲಿ ಮನೆಯವರೆಲ್ಲಾ ಊರಿಗೆ ಹೋಗಿದ್ರು. ನಾನೊಬ್ನೆ ಮನೇಲಿ. ಎರಡನೇ ದಿನ ಬೆಳಕರೀತು. ಇನ್ನೂ ಧೋ ಅಂತಾನೇ ಮಳೆ ಸುರೀತಿದೆ. ಬೆಳಕರೀತು ಅನ್ನೋದು ಹೆಸರಿಗಷ್ಟೆ. ಎಲ್ಲ ಮಬ್ಬು ಮಬ್ಬು. ಎದ್ದು ನೋಡಿದ್ರೆ ನನಗೆ ಗಾಬರಿ ಆಗೋಯ್ತು. ಮನೆಯೆಲ್ಲಾ ನೆಲಗಡಲೆ ಮತ್ತಿನ್ನಾವುದೋ ಬೀಜಗಳ ಸಿಪ್ಪೆಗಳು. ಮನಷ್ಯರು ತಿಂದು ಬಿಸಾಕಿದ ಹಾಗಿರಲಿಲ್ಲ. ಕೇಡಿಗರಾರೋ ಉದ್ದೇಶಪೂರ್ವಕವಾಗೇ ಬೇರೆ ಎಲ್ಲೋ ತಿರುಳು ತಿಂದು ತಾವು ತಿಂದದ್ದಲ್ಲದೆ ಬೇರೆಯವರು ತಿಂದು ಬಿಸಾಕಿದ್ದ ಸಿಪ್ಪೇನೆಲ್ಲ ಗೋರಿಕೊಂಡು ಬಂದು ನಮ್ಮನೇನಲ್ಲಿ ಎರಚಾಡಿದ್ದ ಹಾಗಿತ್ತು. ರಾತ್ರೆ ನಿದ್ದೆಗಣ್ಣಲ್ಲಿ ಮನೆಯೆಲ್ಲಾ ಯಾರೋ ಓಡಾಡ್ತಿರೊ ಸದ್ದು ಕೇಳಿಸಿದಂತಾಗಿತ್ತು. ಬೇರೆಲ್ಲೋ ಕೊಲೆ ಮಾಡಿ ಹೆಣಾನ ತಂದು ನಮ್ಮನೇಲಿ ಬಿಸಾಕಿದ್ರೆ ಎಷ್ಟು ಗಾಬರಿ ಆಗುತ್ತೋ ಅಷ್ಟು ಗಾಬರಿ ಆಗಿತ್ತು ನನಗೆ.

ಧೋ ಅಂತ ಬಿದ್ದ ಆ ರಾಕ್ಷಸ ಮಳೆಯ ನೀರೆಲ್ಲ ಭೂಮಿಯಳಕ್ಕೆ ಇಳಿದು ಸಂದಿಗೊಂದಿ ಎಲ್ಲ ತುಂಬಿ ಹೋಗಿ ನೆಲದಲ್ಲಿದ್ದ ಇಲಿ ಬಿಲಗಳೆಲ್ಲ ನೀರುಮಯ ಆಗಿತ್ತು ಅಂತ ಅನಿಸುತ್ತೆ. ಬಿಗಳಿಂದ ಹೊರ ಬರುತ್ತಾ ಶೇಖರಿಸಿದ್ದ ಕಾಳು ಕಡ್ಡೀನೆಲ್ಲ ಜೊತೇಲೇ ತಗೋಂಡ್ ಬಂದು ಅವು ನಮ್ಮನೇಲಿ ಒಳ್ಳೇ ಭೋಜನ ಮಾಡಿದ್ವು. ಮಾರನೇ ರಾತ್ರೀನೂ ರಿಪೀಟ್ ಮಾಡಿದ್ವು.

ನಾನು ಚಿಕ್ಕಂದಿನಲ್ಲಿ ಕುವೆಂಪುರವರ ಕಿಂದರಿ ಜೋಗಿಯ ಪದ್ಯ ಓದಿದ್ದೆ. ನನ್ನ ಮಗಳು ಹುಟ್ಟೋಕೆ ಬಹಳ ಮೊದಲು ರಂಗಾಯಣದವರು ಆಡಿದ್ದ ಕಿಂದರಿ ಜೋಗಿ ನಾಟಕಾನ ನಾನು ನನ್ನ ಹೆಂಡತಿ ನೋಡ್ತಾ ಬಿದ್ದು ಬಿದ್ದು ನಕ್ಕಿದ್ದೆವು. ಈಗ ನಾವೇ ಇಲಿ ಕಾಟಕ್ಕೆ ಈಡಾಗದ್ವು. ನಗೋಕ್ಕಾಗುತ್ತಾ. ಜಗಳ ಮಾಡ್ತಿದ್ವು. ಹೇಗೋ ಗುಬ್ಬಚ್ಚಿಗಳಿಗೆ ಅಡ್ಜಸ್ಟ್ ಆಗಿದ್ವು. ಇಲಿಗಳಿಗೆ ಅಡ್ಜಸ್ಟ್ ಆಗೋದು ಹೇಗೇ? ಮೊದಲು ಮೊದಲು ಹಗಲೊತ್ತಲ್ಲಿ ಕಾಣಿಸಿಕೊಳ್ಲದೆ ಇದ್ದವು. ಅಂಜುತ್ತ ಅಂಜುತ್ತ ಬಂದು ಓಡೋಗ್ತಿದ್ವು. ಬರ್ತಾ ಬರ್ತಾ ನಾವೇ ಅವುಕ್ಕೆ ಅಂಜೋ ಹಾಗೆ ರಾಜಾ ರೋಷಿಂದ ಮನೆಯನ್ನ ಆಕ್ರಮಿಸಿಕೊಂಡಿದ್ವು. ಕಂಪ್ಯೂಟರ್‍ ಕೆಟ್ಟೋಯ್ತು. ರಿಪೇರಿ ಮಾಡಿಕೊಟ್ಟವ್ರು ವೈರ್‍ಗಳ್ನೆಲ್ಲ ಕಚ್ಚಿ ತುಂಡು ಮಾಡಿ ಕಿತ್ತಾಕಿರೋದಲ್ದೆ ಮದರ್‍ ಬೋರ್ಡ್ ಮೇಲೆ ಉಚ್ಚೆ ಹುಯ್ದಿರೋದ್ರಿಂದ ಸರ್ಕ್ಯೂಟ್ ಎಲ್ಲಾ ಡ್ಯಾಮೇಜ್ ಆಗಿದೆ ಅಂದ್ರು. ಕೊನೆಗೆ ನಮ್ಮ ಪುಸ್ತಕಗಳಿಗೆ ಬಾಯಿ ಹಾಕಿದಾಗ ಏನಾದ್ರೂ ಮಾಡ್ಲೇ ಬೇಕಾಗಿ ಬಂತು. ಆಶ್ಚರ್ಯ ಅಂದ್ರೆ ಮನೆಯೆಲ್ಲಾ ದಾಂಧಲೆ ಮಾಡಿ ರೌಡಿಗಳ ತರಾ ನಡ್ಕೋತಿದ್ರೂ ಅವು ಸುಮಾರು ದಿನ ಪುಸ್ತಕಗಳ ತಂಟೇಗೇ ಹೋಗಿರಲಿಲ್ಲ. ಪ್ರತೀ ದಿನ ಪುಸ್ತಕದ ಶೆಲ್ಫ್ ಗಳನ್ನ ಚೆಕ್ ಮಾಡಿತಿದ್ದೆ. ಇವೆಲ್ಲೋ ಸಾಕ್ಷರ ಇಲಿಗಳಿರಬೇಕು, ಅದಕ್ಕೇ ಪುಸ್ತಕಗಳ ಮೇಲೆ ದಾಳಿ ಮಾಡಿಲ್ಲ ಅಂದುಕೋತಿದ್ದೆ. ಪರ್‌ವಾಗಿಲ್ವೆ ಕಾಲ ಬದಲಾಗಿದೆ. ಇಲಿಗಳೂ ವಿದ್ಯಾವಂತರಾಗಿದ್ದಾವೆ. ಪುಸ್ತಕಗಳ ಬಗ್ಗೆ ಗೌರವ ಇಟ್ಟುಕೊಂಡಿದ್ದಾವೆ ಅಂತ್ಲೇ ನಂಬಿದ್ದೆ.

ಈಗೇನಾದ್ರೂ ಮಾಡ್ಲೇ ಬೇಕಿತ್ತು.

...........ಮುಂದುವರೆಯುತ್ತದೆ.