ಬೆಟ್ಟದ ಜೀವಕ್ಕೆ ಮರು ಜೀವ… (ಭಾಗ 2)

ಬೆಟ್ಟದ ಜೀವಕ್ಕೆ ಮರು ಜೀವ… (ಭಾಗ 2)

ಸಾಹಿತ್ಯದಲ್ಲಿರುವ ವಸ್ತುವನ್ನು ದೃಶ್ಯ ಮಾಧ್ಯಮಕ್ಕೆ ತರುವಾಗ ಮಾಡಿಕೊಂಡ ಇಂತಹ ಬದಲಾವಣೆಗಳು ಬೆಚ್ಚಗಿನ ದೇಶಭಕ್ತಿಯೊಂದಿಗೆ ಕೆಳಬೈಲಿನ ಪರಿಸರವನ್ನು ಸುತ್ತಾಡಿಸುತ್ತದೆ. ಶಿವರಾಮ ಕಾಡಿನ ನಡುವೆ ನಡೆಯುತ್ತಿರುವಾಗ ದೇರಣ್ಣ ಮತ್ತು ಬಟ್ಯಾ ಎನ್ನುವ ಒಕ್ಕಲಿಗರು ಸಿಕ್ಕು ಅವನನ್ನು ಗೋಪಾಲಯ್ಯನ ಮನೆಗೆ ತಲುಪಿಸುತ್ತಾರೆ. ನಡುವೆ ಅವರು ಮಾತನಾಡಿಕೊಳ್ಳುವ ತುಳು ಭಾಷೆ ತುಳು ಜಾನಪದ ಹಾಡು ಇವೆಲ್ಲವೂ ಚಲನಚಿತ್ರ ಮುಗಿದ ಬಳಿಕವೂ ಕಿವಿಯಲ್ಲಿ ಅನುರಣಿಸುತ್ತಲೇ ಇರುವಷ್ಟು ನೈಜವಾಗಿದೆ. ಯಾವುದೇ ಹೊರಸಂಪರ್ಕವಿರದ ಗೊಂಡಾರಣ್ಯದಲ್ಲಿ ಪ್ರಾದೇಶಿಕ ಜನ ಸಮುದಾಯವು ಹೇಗೆ ಪ್ರಕೃತಿಯೊಡನೆ ಬೆರೆತು ಬಾಳುತ್ತಿದೆ, ಎದುರಾಗುವ ಸಮಸ್ಯೆಗಳನ್ನು ನಿವಾರಿಸಿಕೊಂಡು ಪ್ರಕೃತಿ ಒಡ್ಡುವ ಸವಾಲುಗಳನ್ನು, ರೋಗ ರುಜಿನಗಳನ್ನು ಎದುರಿಸಿಯೂ ಬೆಟ್ಟವನ್ನೇ ಜಯಿಸಿದಂತಹ ಸಂತೃಪ್ತಿಯಿಂದ ಬಾಳುವೆ ನಡೆಸುತ್ತಿದೆ ಎಂಬುದಕ್ಕೆ ಒಂದು ಉತ್ತಮ ಮಾದರಿಯಾಗಿದೆ. ಕಾಡಿನ ಕೊಂಪೆಯಲ್ಲಿ ವಾಸಿಸುವ ನಿರ್ಲಕ್ಷ್ಯಕ್ಕೆ ಒಳಗಾದ ಕುಟುಂಬಗಳ ಕತೆಯನ್ನು ಬೆಟ್ಟದ ಜೀವ ಚರ್ಚಿಸುತ್ತದೆ. ಗ್ರಾಮೀಣ ಪ್ರದೇಶದ ಸಾಂಪ್ರದಾಯಿಕ ಜೀವನ ವಿಧಾನವನ್ನು ವಾಸ್ತವದ ನೆಲೆಯಲ್ಲಿ ಚಿತ್ರಿಸುವ ಪ್ರಯತ್ನವೂ ಈ ಚಲನಚಿತ್ರದಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬೇಕು.

ಇಲ್ಲಿ ಮನುಷ್ಯ ಸಂಬಂಧಗಳು ಹಾಗೂ ಸ್ವಾತಂತ್ರ್ಯ ಚಳುವಳಿಯ ಹಸಿ ಬಿಸಿಯ ಕಾವಿನ ಅನುಭವವು ನಯವಾಗಿ ತಟ್ಟುತ್ತವೆ. ಆಗಿನ ಪರಿಸ್ಥಿತಿಗೆ ಅನುಗುಣವಾಗಿ ಸ್ವಾತಂತ್ರ್ಯ ಚಳವಳಿಯ ತಾಪ ಜನರಲ್ಲಿ ಹೆಚ್ಚಾಗಿದ್ದ ಸಮಯದಲ್ಲಿ ಹಳ್ಳಿಯ ವಿದ್ಯಾವಂತ ಯುವಕರು ಕರಪತ್ರ ಇತ್ಯಾದಿಗಳನ್ನು ಹಂಚುವ ಹಾಗೂ ಚಳವಳಿಯ ಮುಖ್ಯಸ್ಥರಿಗೆ ನೆರವಾಗುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಶಿವರಾಮನೂ ಅದೇ ಕಾರಣಕ್ಕೆ ಮನೆ ಬಿಟ್ಟು ಬಂದವನೇ. ಅಂತೆಯೇ ಶಂಭುವೂ ಎನ್ನುವ ಮಾರ್ಪಾಟು ಚಲನಚಿತ್ರಕ್ಕೆ ಗೆಲುವು ನೀಡಿದೆ. ಪರಕೀಯರ ಆಕ್ರಮಣ ದೇಶದ ಮೇಲೆ, ಕಾಡುಪ್ರಾಣಿಗಳ ಆಕ್ರಮಣ ಕಾಡನ್ನು ಕಡಿದು ತೋಟಗದ್ದೆಯ ಸಾಗುವಳಿ ಮಾಡುವ ಮನುಷ್ಯರ ಮೇಲೆ. ಇವೆರಡೂ ಅಯಾಚಿತ ಆಕ್ರಮಣಗಳೇ. ಆದರೂ ಒಂದು ವಸಾಹತುಶಾಹಿ ಇನ್ನೊಂದು ಜೀವಿಗಳ ಬದುಕಿನ ಸಹಜ ಧರ್ಮ. ನಿರ್ಧಾರ ಸಹೃದಯರ ಪಾಲಿಗೆ. ಕಾರಂತರ ಮಾನಸಿಕ ತರ್ಕಕ್ಕೆ ನಿಲುಕುವಂತಹ ಇಂತಹ ಮಾರ್ಪಾಟುಗಳು ಚಲನಚಿತ್ರಕ್ಕೂ ಶೋಭಾಯಮಾನವಾಗಿದೆ. ಅಂತೆಯೇ ಮೂಲ ಕತೆಗೆ ಇನ್ನಷ್ಟು ಮೆರುಗು ನೀಡಿದೆ ಎನ್ನಬಹುದು.

ದೇರಣ್ಣ ಮತ್ತು ಬಟ್ಯಾ ಎನ್ನುವ ಒಕ್ಕಲಿಗರು ಸಿಕ್ಕು ಅವನನ್ನು ಗೋಪಾಲಯ್ಯನ ಮನೆಗೆ ತಲುಪಿಸುವಾಗ ಅವರ ತುಳು ಭಾಷೆಯ ಸಂವಾದ, ತುಳು ಜಾನಪದ ಹಾಡು ಇವೆಲ್ಲವೂ ಅತ್ಯಂತ ನೈಜವಾಗಿದೆ. ದಕ್ಷಿಣ ಕನ್ನಡದ ಕಾಡು ಪ್ರದೇಶದ ಜನಜೀವನದ ಸ್ಪಷ್ಟ ಚಿತ್ರಣ, ಭಾಷಾ ವಿಲಾಸ, ತುಳು ಜಾನಪದ ಸೊಗಡು, ಗಾಂವ್ಟಿ ಮದ್ದಿನ ಶುಶ್ರೂಷೆ, ಹಂಡೆ ನೀರಿನಿಂದ ಎಣ್ಣೆ ಸ್ನಾನ, ಅಡಿಗೆ, ತಾಂಬೂಲ, ನಶ್ಯ ಸೇವನೆ ಇತ್ಯಾದಿಗಳನ್ನು ತೆರೆಯ ಮೇಲೆ ನೋಡುವಾಗ ವಿಶೇಷವಾದ ಹಿತವನ್ನು ನೀಡುತ್ತವೆ. ‘ತಾನ ತಂದಾನ ಬೈರಿ’ ಎನ್ನುವ ಬಟ್ಯನ ಜಾನಪದ ಹಾಡು ರಂಜನೀಯವಾಗಿದೆ. ಪಂಜುರ್ಲಿ ಕೋಲದ ತಯಾರಿ, ಸನ್ನಿವೇಶ, ಅದರ ಕುರಿತು ಅಪಾರ ನಂಬಿಕೆ ಇವೆಲ್ಲವೂ ಚಿತ್ರದಲ್ಲಿ ದಾಖಲಾಗಿವೆ.

ಪರಿಸರ ಕಾಳಜಿಯು ಇಲ್ಲಿ ಯಥೇಚ್ಚವಾಗಿ ಕಾಣಸಿಗುತ್ತದೆ. ಆಗಾಗ ಶಿವರಾಮ ಈ ಕಾಡನ್ನು ಕಡಿದು ತೋಟ ಮಾಡಿಕೊಂಡು ಜೀವಿಸಲಿಕ್ಕೆ ಬೇಸರವೆನಿಸುವುದಿಲ್ಲವೇ ಎಂದು ಕೇಳುವುದು, ಹಸಿವನ್ನು ನೀಗಿಸಿಕೊಳ್ಳಲು ಪ್ರಾಣಿಗಳು ಸಸ್ಯವನ್ನು ಕಾಡುಪ್ರಾಣಿಯನ್ನು ತಿನ್ನುವುದು ತಪ್ಪೇ? ಅದಕ್ಕಾಗಿ ಅವುಗಳನ್ನು ಕೊಲ್ಲುವುದು ಯಾಕೆ? ಎಂದು ಕೇಳುವಂತಹ ಪ್ರಶ್ನೆಗಳು ನಿಸರ್ಗದತ್ತವಾದ ಚಟುವಟಿಕೆಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವುದರ ಬಗೆಗೆ ಯೋಚಿಸುವಂತೆ ಮಾಡಿವೆ. ನಾರಾಯಣನು ಶಿವರಾಮನಿಗೆ ಗದ್ದೆ ತೋರಿಸಲು ಬಂದಾಗ ಗೋಪಾಲಯ್ಯನವರ ಮಾತನ್ನು ಶಿವರಾಮನಿಗೆ ಹೇಳುತ್ತಾ “ಮರುಳು ಕಣೋ ನಾರಾಯಣ.. ದುಡ್ಡನ್ನು ಯಾರು ಒಯ್ತಾರೆ, ತೋಟ ಗದ್ದೆ ಮಾಡಿದರೆ ಇದ್ದಷ್ಟು ದಿನ ಅದನ್ನು ನೋಡಿಕೊಂಡು ಖುಷಿಪಡಬಹುದಲ್ಲವೋ? ಇನ್ನೆಂತಾ ಬೇಕು?” ಅಂತ ನಗುತ್ತಾರೆ. “ಹೋ! ನೀವೀಗ ನಿಲ್ಲುತ್ತೇನೆಂದು ಖಂಡಿತ ಮಾತು ಕೊಡಿ ನಿಮಗಾಗಿ ಇನ್ನೊಂದು ಕಾಟು ಮೂಲೆ ತಯಾರಿಸುತ್ತೇನೆ” ಮನುಷ್ಯ ಪ್ರಕೃತಿಯೊಂದಿಗೆ ಹೇಗೆಲ್ಲಾ ಅನುಸಂಧಾನ ಮಾಡಿಕೊಳ್ಳಬಹುದು ಆ ಮೂಲಕ ಜೀವನ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬಹುದು ಎನ್ನುವುದಕ್ಕೆ ಚಲನಚಿತ್ರದಲ್ಲಿ ಕಂಡು ಬರುವ ಇಂತಹ ಸಂಭಾಷಣೆಗಳು ಉದಾಹರಣೆಗಳಾಗಿವೆ.

ಗೋಪಾಲಯ್ಯನವರ ವಿಶಾಲ ಹೃದಯವಂತಿಕೆಯನ್ನು ಚಲನಚಿತ್ರದುದ್ದಕ್ಕೂ ತೋರಿಸಿರುವುದು ಅಪ್ಯಾಯಮಾನವಾಗಿದೆ. ವಿನೋದ ಪ್ರಸಂಗಗಳು ಬೆಟ್ಟದ ಜೀವದಲ್ಲಿ ಬಹಳ ಸೊಗಸಾಗಿ ಚಿತ್ರತವಾಗಿದೆ. ಭಟ್ಟರು ರಾತ್ರಿ ಊಟವಾದ ಬಳಿಕ ಹೆಂಡತಿಯ ಬಾಯಿಗೆ ತಾಂಬೂಲವನ್ನು ಇಡುವ ದೃಶ್ಯವು ರಂಜನೀಯ. ‘ಮಂಗಳಂ ರಾಮಚಂದ್ರಗೆ..’ ಎಂದು ಸುಪ್ರಭಾತ ಹಾಡುತ್ತಾ ಹೊರಗೆ ಬರುವ ಶಂಕರಮ್ಮನಿಗೆ ಗೋಪಾಲಯ್ಯನವರು ತೊಳೆದಿಟ್ಟ ತನ್ನ ಸೀರೆಯನ್ನು ಒಣಗಿಸುತ್ತಿರುವರೆಂದು ಮುಜುಗರವಾಗುತ್ತದೆ. ಅದು ತನ್ನ ಕೆಲಸವೆಂದು ಆಕೆ ತಾನೇ ಒಣಗಿಸಲು ಮುಂದಾದಾಗ ಅಂದಿನ ಕುಟುಂಬದಲ್ಲಿ ಹೆಣ್ಣಿನ ಸ್ಥಿತಿ ಹೀಗಿತ್ತು ಎನ್ನುವುದು ಒಳಗಣ್ಣಿಗೆ ಕಾಣುತ್ತಿರುವಾಗಲೇ ಗೋಪಾಲಯ್ಯ “ಅದರಲ್ಲಿ ತಪ್ಪೇನಿದೆ?” ಎಂದು ಕೇಳುತ್ತಾ ತಮ್ಮ ಮದುವೆಯ ದಿನಗಳ ನೆನಪಿನೊಂದಿಗೆ ಬಟ್ಟೆಯ ಹಾರವನ್ನೇ ಹಾಕಿಕೊಳ್ಳುವ ಸರಸ ಸಲ್ಲಾಪವು ಪ್ರೌಢ ನಟನೆಯಿಂದಾಗಿ ಬೇಂದ್ರೆಯವರ ‘ಒಲವೆ ನಮ್ಮ ಬದುಕು’ ಎನ್ನುವುದನ್ನು ನೆನಪಿಸುತ್ತದೆ.

ಕುಮಾರ ಪರ್ವತದ ರಮಣೀಯ ನೋಟಗಳು ಒಂದೆಡೆಯಾದರೆ ಅಡಿಕೆ ತೋಟಗಳ, ಹೊಲ ಗದ್ದೆಗಳ ಹಸಿರು ವೈಭವ ಮತ್ತೊಂದೆಡೆಗೆ. ಚಿತ್ರದುದ್ದಕ್ಕೂ ಗಮನ ಸೆಳೆಯುವ ವೃದ್ಧ ದಂಪತಿಗಳಾಗಿ ಅಭಿನಯಿಸಿರುವ ದತ್ತಣ್ಣ ಮತ್ತು ರಾಮೇಶ್ವರಿ ವರ್ಮಾ ಅವರ ಅಭಿನಯವು ಮನಕಲಕುತ್ತದೆ. ಹಲವು ದೃಶ್ಯಗಳಲ್ಲಿ ರಾಮೇಶ್ವರಿ ವರ್ಮ ಅವರು ಕಳೆದು ಹೋದ ಮಗನಿಗಾಗಿ ಹಂಬಲಿಸುವಿಕೆ, ಬಂದ ಅತಿಥಿಯಲ್ಲಿ ಮಗನನ್ನು ಕಾಣುವ ಮುಗ್ಧ ಭಾವ ಇವೆಲ್ಲವನ್ನೂ ತೆರೆಯ ಮೇಲೆ ನೋಡಿದರೇನೇ ಸೊಗಸು. ಇನ್ನು ಸ್ಥಳೀಯ ಕಲಾವಿದರಿಂದ ಮಾಡಿಸಿರುವ ಪಾತ್ರಗಳ ನಟನೆಯು ಸಹಜವಾಗಿ ಮೂಡಿ ಬಂದಿವೆ. ಎಣ್ಣೆ ಸ್ನಾನದ ದೃಶ್ಯವಂತೂ ನಮ್ಮನ್ನು ತವರಿನ ಸುಖದ ನೆನಪಿನ ಕಡೆಗೆ ಮುಖ ಮಾಡಿಸುತ್ತದೆ. ಕುವೆಂಪುರವರ 'ಅಜ್ಜಯ್ಯನ ಅಭ್ಯಂಜನ' ದಲ್ಲಿರುವ ವರ್ಣನೆಯನ್ನು ನೆನಪಿಗೆ ತರುತ್ತದೆ. ಪರಕೀಯನಾದ ಶಿವರಾಮುವಿನ ಮಾತಿನ ಶೈಲಿ, ದಕ್ಷಿಣ ಕನ್ನಡದ ಮಾತು, ತುಳು ಮಾತು, ಹವ್ಯಕ ಕನ್ನಡ ಮಾತು ಇವೆಲ್ಲವನ್ನೂ ಸಂವಹನದಲ್ಲಿ ಬಳಸಿಕೊಂಡಿರುವುದರಿಂದ ಅಗತ್ಯಕ್ಕೆ ತಕ್ಕದಾದ ಭಾವ ಸಾಂದ್ರತೆಯನ್ನು ಕಾಯ್ದುಕೊಳ್ಳುವಲ್ಲಿ ಚಿತ್ರವು ಯಶಸ್ವಿಯಾಗಿದೆ.

ಮುಂಬಯಿಯಂತಹ ಜನಾರಣ್ಯದಲ್ಲಿ ಕುಳಿತು ಕಿರುತೆರೆಯ ಮೇಲೆ ಈ ಬೆಟ್ಟದ ಜೀವದ ಕಥೆಯನ್ನು ವೀಕ್ಷಿಸುವಾಗ ‘ಸಿನೆಮಾನುಭೂತಿ ಎಂಬ ಪಬ್ಲಿಕ್ ಪ್ರಾಪರ್ಟಿ’ಯಿಂದ ವಂಚಿತ; ಅಂದರೆ ಥಿಯೇಟರ್ ನಲ್ಲಿ ಜನಸಮೂಹದೊಡನೆ ಕುಳಿತು ನೋಡುವ ಅವಕಾಶದಿಂದ ವಂಚಿತ ಎನ್ನುವ ಭಾವವು ಆವರಿಸಿದರೂ ಅದರೆದುರಿಗೆ ಒಟ್ಟಾರೆ ಚಲನಚಿತ್ರವು ನೀಡಿದ ವಿಶೇಷ ಅನುಭೂತಿಯು ಗೆಲುವನ್ನು ಸಾಧಿಸಿದೆ. ಇದರ ಹಿಂದೆ ಇಡೀ ಚಿತ್ರತಂಡದ ಶ್ರಮವನ್ನು ಮರೆಯಲಿಕ್ಕಾಗದು. ಪಿ ಶೇಷಾದ್ರಿ ಅವರಿಗೆ ಹೆಮ್ಮೆಯ ಅಭಿನಂದನೆಗಳು.

(ಮುಗಿಯಿತು)

-ಕಲಾ ಭಾಗ್ವತ್, ಮುಂಬಯಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ