ಬೆಟ್ಟದ ತುದಿಯಲಿ ಪುಟ್ಟ ಮರ
ಕವನ
ಅರಸಿನ ಪುಡಿಯನು ಬೆರೆಸುತ ಜಲದಲಿ
ಕರದಲಿ ಉಂಡೆಯ ಮಾಡಿದರೆ?
ತರುವಿನ ಕೊಂಬೆಗೆ ಮಾಡಿದ ಉಂಡೆಯ
ಸರದಿಯಲಂಟಿಸಿ ಇಟ್ಟಿಹರೇ?
ಬೆಟ್ಟದ ತುದಿಯಲಿ ಎತ್ತರ ಜಾಗದಿ
ಹುಟ್ಟಿದೆ ಗಿಡವಿದು ಚಂದದಲಿ
ಕೊಟ್ಟವರಾರದು ಬದುಕಲು ಜಲವನು
ಕಟ್ಟೆಯ ಕಟ್ಟಿದರಾರಲ್ಲಿ
ಏಣಿಯ ತರದಲಿ ಚಿಗುರಿದೆ ಎಲೆಗಳು
ಕಾಣಲು ಸುಂದರ ಎನಿಸುತಿದೆ
ಗೋಣನು ಗಗನಕೆ ಚಾಚಿದೆ ಗಿಡವಿದು
ಭಾನುವ ಕಿರಣದ ಆತುರದೆ
ಸ್ವಚ್ಛದ ಗುಡ್ಡಕೆ ಶೋಭೆಯ ತಂದಿದೆ
ಹಚ್ಚನೆ ಹಸುರಿನ ಪುಟ್ಟ ಮರ
ಪಚ್ಚೆಯ ಬಣ್ಣದ ಉದ್ದದ ಕಡ್ಡಿಯು
ಮೆಚ್ಚುಗೆ ಗಳಿಸಿದೆ ನೋಡುಗರ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್