ಬೆಟ್ಟದ ಮೇಲೊಂದು ಮನೆಯ ಮಾಡಿ

ಬೆಟ್ಟದ ಮೇಲೊಂದು ಮನೆಯ ಮಾಡಿ

"ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗೆ ಅಂಜಿದಡೆ ಎಂತಯ್ಯ "

ಇದು ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ನಮಗೆ ಬಾಯಿ ಪಾಠವಾಗಿದ್ದ ವಚನ. ಅಕ್ಕ ಮಹಾದೇವಿ ಮನುಷ್ಯನ ಸ್ವಭಾವವನ್ನು ಪ್ರಶ್ನಿಸುವ ರೀತಿ, ವಚನದಲ್ಲಿನ ಸರಳತೆ ಮತ್ತು ಜಾಣ್ಮೆ ನಮಗೆ ಅರ್ಥವಾಗುವ ವಯಸ್ಸು ಅದಾಗಿರಲಿಲ್ಲವೇನೋ. ಆದರೂ ಅದರ ಪದಗಳ ಜೋಡಣೆ, ರಾಗದಲ್ಲಿ ಹಾಡಿದಾಗ ಹೊಮ್ಮುವ ಭಾವ ಮತ್ತು ಕೇಳುಗರು ತಲೆ ತೂಗುವ ರೀತಿ ಕಂಡಾಗ ಅದು ಒಂದು ಮಹತ್ವದ ವಚನ ಎಂದೆನಿಸಿತ್ತು. ನಾವು ಶಾಲೆ ಮುಗಿಸುವವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೇಳಿ ಬರುತ್ತಿದ್ದ ಈ ಹಾಡು ಇಂದು ಏಕೆ ಜನಪ್ರಿಯತೆ ಕಳೆದುಕೊಂಡಿದೆಯೇನೋ.

ನಾನು ಬೆಂಗಳೂರು ಮಹಾನಗರಿಗೆ ಜೀವನೋಪಾಯ ಕಂಡುಕೊಳ್ಳಲು ಬಂದು ಹಲವು ವರ್ಷಗಳೇ ಆದವು. ಇಲ್ಲಿ ಯಾರನ್ನಾದರೂ ಕುಶಲೋಪರಿಗೆ ಮಾತನಾಡಿಸಿದಾಗ, ಕೇಳಿ ಬರುವ ಸಾಮಾನ್ಯ ಮೂದಲಿಕೆ ಎಂದರೆ ಇಲ್ಲಿನ ಟ್ರಾಫಿಕ್ ಸಮಸ್ಯೆ. ಅರೇ, ಇದನ್ನೇ ಅಲ್ಲವೇ ಅಕ್ಕ ಮಹಾದೇವಿ ಕೇಳಿದ್ದು? ನೀವು ಟ್ರಾಫಿಕ್ ಗೆ ಅಂಜಿದಡೆ, ಬೆಂಗಳೂರಿನಲ್ಲಿ ಏಕೆ ಮನೆ ಮಾಡಿದ್ದು? ಅಂದರೆ ಅಕ್ಕನ ಕಾಲದಲ್ಲಿನ ಮನುಷ್ಯನಿಗೂ ಇಂದಿನವರಿಗೂ ಸ್ವಭಾವದಲ್ಲಿ ಯಾವುದೇ ವ್ಯತ್ಯಾಸವಿಲ್ಲ!

ಹನ್ನೊಂದನೇ ಶತಮಾನದಲ್ಲಿ ಅಕ್ಕ ರಚಿಸಿದ ಈ ವಚನ ಇಂದಿಗೂ ಪ್ರಸ್ತುತ ಎಂದರೆ ನಮ್ಮ ಉಡುಗೆ ತೊಡುಗೆ ಬದಲಾಗಿದೆಯೇ ಹೊರತು ನಮ್ಮ ವಿಚಾರ ಶೈಲಿಯಲ್ಲ. ಇದು ಬಹುಶ ಅಕ್ಕನಿಗೂ ಗೊತ್ತಿತ್ತು. ಆದರೂ ಸಮಾಜ ಸುಧಾರಣೆಯ ಪ್ರಯತ್ನವಾಗಿ ಈ ವಚನವನ್ನು ರಚಿಸಿದಳೋ ಅಥವಾ ಬದಲಾಗದ ಸಮಾಜದ ಧೋರಣೆಯನ್ನು ವ್ಯಂಗ್ಯವನ್ನಾಗಿಸಿ ನೀವಿರುವುದೇ ಹೀಗೆ ಎನ್ನುವ ಸಂದೇಶ ಆಕೆಯದಾಗಿತ್ತೋ ಇಂದು ಊಹಿಸುವುದು ಕಷ್ಟ.

ನಮಗೆ ಬೆಟ್ಟದ ಮೇಲಿನ ಏಕಾಂತ ಬೇಕು ಆದರೆ ಅದು ತಂದೊಡ್ಡುವ ಅಪಾಯಗಳು, ಅವು ಎಷ್ಟೇ ಸಹಜವಾದರೂ ಬೇಡ. ಸಂತೋಷ ಬೇಕು ಆದರೆ ಸಮಸ್ಯೆ ಬೇಡ. ಈ ತರಹದ ವಿಪರ್ಯಾಸಗಳಿಗೆ ಮನುಷ್ಯ ಯಾವ ಕಾಲದಲ್ಲೂ ಹೊರತಾಗಿಲ್ಲ. ಅವನಿಗೆ ಪ್ರತಿಯೊಂದರಲ್ಲಿ ಕೊರತೆ ಎದ್ದು ಕಾಣುತ್ತದೆ.ಸಂಪೂರ್ಣವಾಗಿ ಯಾವುದನ್ನು ಅವನು ಆನಂದಿಸಲಾರ. ಅವನು ಒಂದು ಸಮಸ್ಯೆಯಿಂದ ಇನ್ನೊಂದು ಸಮಸ್ಯೆಗೆ ಸಾಗುತ್ತ ಬಂದಿದ್ದಾನೆ. ಇದನ್ನೇ ನಾವು ನಾಗರಿಕತೆ ಎಂದು ಕರೆದರೂ ನಮ್ಮಲ್ಲಿನ ಮೂಲ ಸ್ವಭಾವದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈ ಬೇವು-ಬೆಲ್ಲವನ್ನು ಬೇರ್ಪಡಿಸುವ ಸತತ ಪ್ರಯತ್ನದಲ್ಲಿ ಮಾನವ ನಿರತನಾಗಿದ್ದಾನೆ. ಇದು ಎಲ್ಲ ಸಾಮಾನ್ಯ ಮನುಷ್ಯರ ಕಥೆಯಾದರೆ, ಅಕ್ಕನಂತವರಿಗೆ ಇದರಿಂದ ಹೊರ ಬರಲು ಸಾದ್ಯವಾಗಿತ್ತು. ಹಾಗಾಗಿ ಸಾಧಾರಣ ಮನುಷ್ಯನ ನಿಲುವನ್ನು ವಿಮರ್ಶಿಸಲು ಸಾಧ್ಯವಾಯಿತು. ಆಗ ಸೃಷ್ಟಿಯಾದದ್ದು ಈ ವಚನ. ಅದರ ಜನಪ್ರಿಯತೆಯೇ ಸಾರಿ ಹೇಳುತ್ತದೆ ಅದರ ಸಾರವನ್ನು ಯಾರೂ ಅಲ್ಲಗೆಳೆದಿಲ್ಲ ಎಂದು. 

ಆದರೂ ನಮಗೇಕೆ ಮರೆವು? ಮನಸ್ಸು ಯಾವಾಗಲೂ ಹಿತವನ್ನೇ ಬಯಸುತ್ತದೆ. ಆದರೆ ಅದು ಸಂಪೂರ್ಣ ದೊರಕದಿದ್ದಾಗ ನಾವು ಗೊಣಗುತ್ತೇವೆ, ಇದೊಂದು ಸರಿಯಿದ್ದರೆ ಚೆನ್ನಾಗಿರುತ್ತಿತ್ತು ಎಂದು. ನೋವು ನಲಿವಿನಲ್ಲಿ ಸಮಾನತೆ ಕಾಣಲು ನಮಗೆ ಅಕ್ಕಳಿಗಿದ್ದ ಪ್ರಬುದ್ಧತೆ ಬೇಕಾಗಿಲ್ಲ. ಅವಳ ವಚನ ನೆನಪಿಸಿಕೊಂಡರೆ ಸಾಕು. ನಮ್ಮ ಮಾನಸಿಕ ಕಿರಿಕಿರಿ ತಗ್ಗುತ್ತದೆ.

ಮತ್ತೆ ಯಾರಾದರೂ ಜೊತೆ ಮಾತಾಡುವಾಗ, ಯಾವುದಾದರೂ ಸಮಸ್ಯೆ ಪ್ರಸ್ತಾಪಿಸುವ ಮುನ್ನ, ಒಮ್ಮೆ ಅಕ್ಕನ ಪ್ರಶ್ನೆ ನಿಮಗೆ ನೀವೇ ಕೇಳಿಕೊಳ್ಳಿ. ಈ ಸಮಸ್ಯೆಯನ್ನು ಸಂತೋಷದಿಂದ ಬೇರ್ಪಡಿಸಲು ಸಾಧ್ಯವೇ? ಅಷ್ಟಕ್ಕೇ ಸುಮ್ಮನಾಗಬೇಡಿ. ನಿಮ್ಮ ಮಗುವಿಗೂ ಅಕ್ಕನ ವಚನ ಕೇಳಿಸಿ. ಅದಕ್ಕೆ ಇಂದು ಅರ್ಥವಾಗದೆ ಹೋಗಬಹುದು. ಆದರೆ ಸರಿ ಸಮಯದಲ್ಲಿ ಅದರ ಪ್ರಯೋಜನವಾಗಬಹುದು.

Comments