ಬೆಣ್ಣೆ ದೋಸೆ ಮತ್ತು ದಾವಣಗೆರೆ ಮಿರ್ಚಿ

ಬೆಣ್ಣೆ ದೋಸೆ ಮತ್ತು ದಾವಣಗೆರೆ ಮಿರ್ಚಿ

ಕವನ

ಬೆಣ್ಣೆ ದೋಸೆ

ದೋಸೆ ಎನ್ನಲು ತಿನ್ನಲು ಆಸೆ

ದಾವಣಗೆರೆಯ ಬೆಣ್ಣೆ ದೋಸೆ

ಹುಯ್ಯುವ ಬಗೆಯದೊ ಬಲು ಚೆಂದ

ಹೊರಡುವ ವ್ಯೆಖರಿಯು ಚೆಂದ.

 

ಕಟ್ಟಿಗೆಯೊಳಗಿನ ಬಿಸಿಬಿಸಿ ಕಾವು

ದಪ್ಪನೆ ಹೆಂಚನು ತಟ್ಟಲು ನೋವು

ರುಬ್ಬಿದ ಹಿಟ್ಟದು ಕಾವಲಿ ಮೇಲೆ

ಬೆಣ್ಣೆಯ ಮುದ್ದೆಯು ಕರಗಿತು ಅಲ್ಲಿ.

 

ಘಮಘಮ ಪರಿಮಳ ಎಲ್ಲೆಡೆ ಹರಡಿ

ತಿನ್ನುವ ಬಯಕೆಯು ಬೇಗನೆ ಮೂಡಿ

ಕಣ್ಣದು ನೆಟ್ಟಿತು ಅದರೆಡೆಗೆ ನೋಡಿ

ಗರಿಗರಿ ದೋಸೆಯು ಮಾಡಿತು ಮೋಡಿ.

 

ಘಮ್ಮೆನ್ನುವ ದೋಸೆ ಬಾಳೆಲೆಯ ಮೇಲೆ

ಆಲೂಪಲ್ಯ ಖಾರದ ಚಟ್ನಿ ಜೊತೆಗೆ

ಬಾಯಲ್ಲಿಡಲು ಕರಗೇ ಬಿಟ್ಟಿತು ಅಲ್ಲಿ

ಗೆದ್ದಿತು ದಾವಣಗೆರೆ ಬೆಣ್ಣೆ ದೋಸೆಯಿಲ್ಲಿ.

       ***   

ದಾವಣಗೆರೆ ಮಿರ್ಚಿ

ದಾವಣಗೆರೆಯ ಮೆಣಸಿನಕಾಯಿ

ತಿನ್ನಲು ಬೇಕು ಎರಡು ಬಾಯಿ

ಬಿಸಿಬಿಸಿಯಲ್ಲಿಹ ಮಸಾಲೆ ಮಿರ್ಚಿ

ಮೇಲೆಳುವರಾರು ಬಿಟ್ಟು ಕುರ್ಚಿ

 

ಹದದಲ್ಲದು ಕಲೆಸಿದ ಕಡಲೆಹಿಟ್ಟು

ತಿಳಿಸರು ಅವರು ಅದರ ಗುಟ್ಟು

ಖಾರವಿಲ್ಲದ ಹಸಿ ಮೆಣಸಿನ ಒಳಗೆ

ತುಂಬುವಂತೆ ಮಸಾಲೆ ಅದರೊಳಗೆ.

 

ತೊಟ್ಟನು ಹಿಡಿದು ಹಿಟ್ಟಲಿ ಉರುಳಿಸಿ

ಮೆಲ್ಲನೆ ಎತ್ತಿ ಬಿಸಿ ಎಣ್ಣೆಯಲಿಳಿಸಿ

ಹೊಂಬಣ್ಣದಲದನು ಕರಿದರೆ ಅಲ್ಲಿ

ಘಮಘಮ ಪರಿಮಳ ಹರಡುವುದಲ್ಲಿ.

 

ವರ್ಷಧಾರೆಯು ಬರಲು ಸಂಜೆಯಲಿ

ಬಿಸಿಬಿಸಿ ಮಿರ್ಚಿ, ಕಾಫಿ ಎದುರಲ್ಲಿ

ಮಂಡಕ್ಕಿ ಖಾರ ಜೊತೆಗಿರಲು ಕಾಂದ

ತಿನ್ನಲು ಮನಕೆ ಬಲು ಆನಂದ.

  - ವೀಣಾ ಕೃಷ್ಣಮೂರ್ತಿ ದಾವಣಗೆರೆ

 

ಚಿತ್ರ್