ಬೆತ್ತಲೆ ಜಗತ್ತು 15

ಬೆತ್ತಲೆ ಜಗತ್ತು 15

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರತಾಪ್ ಸಿಂಹ
ಪ್ರಕಾಶಕರು
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ -೫೮೦೦೨೦
ಪುಸ್ತಕದ ಬೆಲೆ
ರೂ.೧೫೦.೦೦, ಮುದ್ರಣ: ಜುಲೈ ೨೦೧೩

ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಹದಿನೈದನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ ದೊಡ್ಡದಾದ ಓದುಗ ಸಮೂಹ ಇತ್ತೆಂದರೆ ಸುಳ್ಳಲ್ಲ. ತೀಕ್ಷ್ಣವಾಗಿ ಚಾಟಿ ಬೀಸುವಂತಹ ರಾಜಕೀಯ ಲೇಖನಗಳಿಂದ ಹಿಡಿದು. ಕ್ರೀಡೆ, ಸಾಹಿತ್ಯ, ಸಿನೆಮಾ ಮುಂತಾದ ಎಲ್ಲಾ ವಿಚಾರಗಳನ್ನು ಅಧ್ಯಯನ ಮಾಡಿ ಬರೆಯುತ್ತಿದ್ದರು. ಪ್ರತಿಯೊಂದು ಲೇಖನಗಳಿಗೆ ಸೂಕ್ತ ಆಧಾರ ಒದಗಿಸುತ್ತಿದ್ದುದು ಇವರ ಹೆಗ್ಗಳಿಕೆ. 

ಈ ಪುಸ್ತಕದಲ್ಲಿ ೨೬ ಅಧ್ಯಾಯಗಳಿವೆ. ಎಸ್. ಎಲ್.ಭೈರಪ್ಪ, ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ, ನರಸಿಂಹ ರಾವ್, ವಿಶ್ವೇಶ್ವರಯ್ಯ, ಕವಿ ಮೊಹಮ್ಮದ್ ಇಕ್ಬಾಲ್, ಶ್ರೀ ನಾರಾಯಣ ಗುರುಗಳು, ಮನಮೋಹನ ಸಿಂಗ್ ಮೊದಲಾದ ವ್ಯಕ್ತಿಗಳ ಬಗ್ಗೆ, ವಿಕಲ ಚೇತನ ಕ್ರೀಡಾ ಪಟುಗಳ ಬಗ್ಗೆ ಮಾಹಿತಿಗಳಿವೆ.

ಈ ಪುಸ್ತಕದಲ್ಲಿರುವ ಬರಹಗಳನ್ನು ೨೦೧೧-೧೨ರ ವರ್ಷದಲ್ಲಿ ಪತ್ರಿಕೆಗಳಲ್ಲಿ ಅಂಕಣ ರೂಪದಲ್ಲಿ ಪ್ರತಾಪ್ ಸಿಂಹ ಬರೆದಿದ್ದಾರೆ. ಪ್ರತೀ ಲೇಖನಕ್ಕೆ ಪೂರಕ ಛಾಯಾ ಚಿತ್ರಗಳಿವೆ. ಪುಸ್ತಕಕ್ಕೆ ಜನ ಸಾಮಾನ್ಯ ಓದುಗರಾದ ರಾಯಚೂರಿನ ಪೋಲೀಸ್ ಪೇದೆಯಾದ ಶಂಕ್ರಪ್ಪ ಹಾಗೂ ಮಂಡ್ಯದ ಕಿರಗಂದೂರಿನ ಬರ್ಕಲಿ ರಮೇಶ್ ಇವರು ಬರೆದ ಪ್ರತಿಕ್ರಿಯೆಗಳನ್ನೇ ಬೆನ್ನುಡಿಯಾಗಿ ಬಳಸಿಕೊಂಡಿದ್ದಾರೆ . ಸುಮಾರು ೨೦೦ ಪುಟಗಳ ಈ ಪುಸ್ತಕವನ್ನು ಪ್ರತಾಪ್ ಸಿಂಹ ಇವರು ತಮ್ಮ ಪತ್ರಕರ್ತನ ವೃತ್ತಿ ಬದುಕಿಗೆ ಆರಂಭ ಹಾಗೂ ಅವಕಾಶ ನೀಡಿದ ಈಶ್ವರ್ ದೈತೋಟ ಇವರಿಗೆ ಅರ್ಪಿಸಿದ್ದಾರೆ.