ಬೆತ್ತಲೆ ಜಗತ್ತು 8
ಪತ್ರಕರ್ತ ಪ್ರತಾಪ್ ಸಿಂಹ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಗಳಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹವೇ ಬೆತ್ತಲೆ ಜಗತ್ತು. ಈಗ ಇಲ್ಲಿರುವುದು ಅದರ ಎಂಟನೇ ಭಾಗ. ಪ್ರತಿ ಶನಿವಾರ ಪ್ರತಾಪ್ ಸಿಂಹ ಅವರ ಅಂಕಣವನ್ನು ಕಾಯುತ್ತಿದ್ದ ದೊಡ್ಡದಾದ ಓದುಗ ಸಮೂಹ ಇತ್ತೆಂದರೆ ಸುಳ್ಳಲ್ಲ. ತೀಕ್ಷ್ಣವಾಗಿ ಚಾಟಿ ಬೀಸುವಂತಹ ರಾಜಕೀಯ ಲೇಖನಗಳಿಂದ ಹಿಡಿದು. ಕ್ರೀಡೆ, ಸಾಹಿತ್ಯ, ಸಿನೆಮಾ ಮುಂತಾದ ಎಲ್ಲಾ ವಿಚಾರಗಳನ್ನು ಅಧ್ಯಯನ ಮಾಡಿ ಬರೆಯುತ್ತಿದ್ದರು. ಪ್ರತಿಯೊಂದು ಲೇಖನಗಳಿಗೆ ಸೂಕ್ತ ಆಧಾರ ಒದಗಿಸುತ್ತಿದ್ದುದು ಇವರ ಹೆಗ್ಗಳಿಕೆ.
ಬೆತ್ತಲೆ ಜಗತ್ತು ೮ನೇ ಭಾಗಕ್ಕೆ ಮುನ್ನುಡಿ ಬರೆದಿದ್ದಾರೆ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾಗಿರುವ ಸುಧಾ ಮೂರ್ತಿಯವರು. ಇವರು ಪ್ರತಾಪ್ ಸಿಂಹ ಅವರ ಬರಹಗಳ ಬಗ್ಗೆ ವಸ್ತುನಿಷ್ಟವಾದ ಭಾವನೆಗಳನ್ನು ವ್ಯಕ್ತ ಪಡಿಸಿದ್ದು ಹೀಗೆ “ಪ್ರತಾಪ್ ಅವರ ಎಲ್ಲ ಕಾಲಂಗಳನ್ನೂ ನಾನು ಒಪ್ಪುವುದಿಲ್ಲ. ಕೆಲವು ವೇಳೆ ನನ್ನದೇ ಆದ ಅನುಭವ ಮತ್ತು ಕಾರಣಗಳಿಂದ ಬೇರೆಯಾಗಿ ವಿಚಾರ ಮಾಡಿದರೂ ಅಂಥ ಪ್ರಸಂಗಗಳು ತೀರಾ ವಿರಳ. ಅವರಲ್ಲಿ ಸತ್ಯವನ್ನು ಹೇಳುವ ಕ್ಷಾತ್ರತೇಜವಿದೆ. ಅದರೊಂದಿಗೆ ಓದುಗರನ್ನು ವಿಚಾರಕ್ಕೆ ಈಡು ಮಾಡುವ compulsion ಕೂಡಾ ಇದೆ. ನಾನೆಂದೂ ಪ್ರತಾಪ್ ಅವರ ಕಾಲಂ ಓದಿ, ಪೇಪರ್ ಬದಿಗೆ ಸರಿಸಿ ಬೇರೆ ಕೆಲಸ ಮಾಡಿಲ್ಲ. ಬದಲಿಗೆ ಮತ್ತೆ ವಿಚಾರ ಮಾಡಿ ಇನ್ನೊಂದು ಸಾರಿ ಓದದೇ ಎಂದೂ ವಿರಮಿಸಿಲ್ಲ. ಅದುವೇ ನಿಜವಾದ ಪತ್ರಕರ್ತನ ಲಕ್ಷಣ.”
“ಸತ್ಯವನ್ನು ಹೇಳುವ ಈ ಮನೋಭಾವದ ವ್ಯಕ್ತಿ ಅದರೊಂದಿಗೆ ಹಾಸ್ಯದ ತಿಳಿಯಾದ ಲೇಪನವನ್ನೂ ಸವರುತ್ತಾರೆ. ಅದರಡಿಯಲ್ಲಿ ಅವರಿಗೆ ಇರುವ ದೇಶಪ್ರೇಮ, ನಮ್ಮ ನಾಡಿನ ಬಗ್ಗೆ ಕಾಳಜಿಯನ್ನು ಗುರುತಿಸಿದಾಗ ಹೆಮ್ಮೆಯಾಗುತ್ತದೆ. ಹೆಚ್ಚಾಗಿ ರಾಜಕೀಯ ಬರಹವನ್ನು ಬರೆದರೂ, ಆಳುವ ಸರಕಾರವನ್ನಾಗಲಿ, ವ್ಯಕ್ತಿಯನ್ನಾಗಲೀ, ಅವರು ತಪ್ಪುಮಾಡಿದಾಗ ಟೀಕಿಸದೇ ಇರುವುದಿಲ್ಲ. ಆದರೆ ಇದೇ ಪ್ರತಾಪ್ ರ ಕೊನೆಯ ಅಭಿಪ್ರಾಯವೂ ಅಲ್ಲ. ಅದೇ ಸರಕಾರ ಅಥವಾ ವ್ಯಕ್ತಿ ಉತ್ತಮ ಕಾರ್ಯ ಮಾಡಿದಾಗ ಅವರನ್ನು ಸ್ತುತಿಸಿದ್ದನ್ನೂ ನೋಡಿದ್ದೇನೆ.”
ಪ್ರತಾಪ್ ಸಿಂಹ ಅವರು ಈ ಪುಸ್ತಕವನ್ನು ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಎಂ.ಎ.ಸುಬ್ರಹ್ಮಣ್ಯ ಅವರಿಗೆ ಅರ್ಪಿಸಿದ್ದಾರೆ. ಒಬ್ಬ ಲೇಖಕ ತನ್ನೊಂದು ಪುಸ್ತಕವನ್ನು ಪ್ರಕಾಶಕನಿಗೇ ಅರ್ಪಣೆ ಮಾಡಿದ ಅಪರೂಪದ ಉದಾಹರಣೆ ಇದು.
ಪುಸ್ತಕದ ಪರಿವಿಡಿಯಲ್ಲಿ ೩೨ ಬರಹಗಳಿವೆ. ದೇಶಪ್ರೇಮ, ರಾಜಕೀಯ, ಕ್ರೀಡೆ, ಇತಿಹಾಸ, ವ್ಯಕ್ತಿ ಚಿತ್ರ ಎಲ್ಲಾ ವಿಭಾಗಗಳಲ್ಲೂ ಕೈಯಾಡಿಸಿದ್ದಾರೆ ಪ್ರತಾಪ್. ಸುಮಾರು ೨೦೦ ಪುಟಗಳ ಈ ಪುಸ್ತಕವು ಓದಲು ಮಾಹಿತಿಯುಕ್ತ ವಿಷಯಗಳನ್ನು ಒಳಗೊಂಡಿದೆ.