ಬೆತ್ತಲೆ ವೃಕ್ಷ
“ಬೆತ್ತಲೆ ವೃಕ್ಷ ಎಂಬ ಕೃತಿಯನ್ನು ರಚಿಸಿದ್ದಾರೆ ಸಿ.ಜಿ.ಲಕ್ಷ್ಮೀಪತಿ ಅವರು. ಇವರ ಈ ಪ್ರಬುದ್ಧ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕಿಯಾದ ಎಂ ಎಸ್ ಆಶಾದೇವಿ ಇವರು. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳು ಇಲ್ಲಿವೆ...
“ಎರಡು ದಶಕಗಳ ಹಿಂದೆ ಬೆತ್ತಲೆ ವೃಕ್ಷ ಕೃತಿಯನ್ನು ಓದಿದಾಗ ವಾಸ್ತವದ ಕಟುತ್ವವನ್ನು ನೋಡಿ, ಕೋಪ, ವಿಷಾದ, ವ್ಯಗ್ರತೆಗಳು ಹುಟ್ಟಿದಂತೆಯೇ ಸ್ತ್ರೀ ವಾದವು ಹೇಳುತ್ತಿರುವ ಅಂಶಗಳನ್ನು ಈ ಕೃತಿ ಇನ್ನೊಂದು ದಿಕ್ಕಿನಿಂದ ಸಮರ್ಥಿಸುತ್ತಿದೆಯಲ್ಲವೆ ಎನ್ನುವ ಭಾವವೂ ಹುಟ್ಟಿತ್ತು. ಈ ಎರಡು ದಶಕಗಳಲ್ಲಿ ಕಾವೇರಿಯಲ್ಲಿ ಬೇಕಾದಷ್ಟು ನೀರು ಹರಿದಿದೆ. ಆದರೆ, ಬೆತ್ತಲೆ ವೃಕ್ಷ ಕೃತಿ ಪ್ರಸ್ತಾಪಿಸುತ್ತಿರುವ ಸಂಗತಿಗಳಲ್ಲಿ ಏನಾದರೂ ಬದಲಾವಣೆಗಳಾಗಿವೆಯೆ?
ಈ ಲೇಖನ ಮಾಲೆಯನ್ನು ಲಕ್ಷ್ಮೀ ಪತಿಯವರು ಅಗ್ನಿಪತ್ರಿಕೆಗೆ ಬರೆಯುತ್ತಿರುವಾಗಲೇ, ಜಾಗೃತಿಯವರು ಪ್ರತಿಭಟಿಸಿದ್ದ ಸನ್ನಿವೇಶದಿಂದಲೇ ಈ ಲೇಖನವನ್ನು ಆರಂಭಿಸಬಹುದು. ಜಾಗೃತಿಯವರು ಎತ್ತುತ್ತಿರುವ ಪ್ರಶ್ನೆಗಳು ಮತ್ತು ಅದಕ್ಕೆ ಇವರು ಕೊಟ್ಟಿರುವ ಉತ್ತರಗಳು ಎರಡೂ ಸತ್ಯದ ಎರಡು ಮುಖಗಳನ್ನು ದಾಖಲಿಸುತ್ತಿವೆ. ಸತ್ಯಕ್ಕೆ ಈ ಎರಡಲ್ಲದೆ ಇನ್ನೂ ಹಲವಾರು ಮಗ್ಗುಲುಗಳಿವೆ. ಇದೇ ನಮ್ಮ ಕಾಲದ ಸತ್ಯವನ್ನು ಬಿಡಿಸಲು, ವಿವರಿಸಿಕೊಳ್ಳಲು ಕಷ್ಟಸಾಧ್ಯವಾದ ಸಂಕೀರ್ಣ ಹೆಣಿಗೆಯ ಎದುರಿಗೆ ನಮ್ಮನ್ನು ನಿಲ್ಲಿಸುತ್ತವೆ.
ಈ ಕೃತಿ ಆರಂಭವಾಗುವುದೇ ಭಾರತೀಯ ಸಾಮಾಜಿಕ ಸಂರಚನೆಯ ಬಹುದೊಡ್ಡ ಕೊರತೆಯೊಂದನ್ನು ತೋರಿಸುವುದರಲ್ಲಿ ಮತ್ತು ಅದನ್ನು ಮೀರಿಕೊಳ್ಳಲು ಬೇಕಾಗಿರುವ ದಾರಿಗಳ ಹುಡುಕಾಟವೇ ಈ ಕೃತಿಯ ಉದ್ದೇಶ ಎನ್ನುವುದನ್ನು ಆರಂಭದಲ್ಲಿಯೇ ಇವರು ಸ್ಪಷ್ಟ ಪಡಿಸುತ್ತಾರೆ. ಲೈಂಗಿಕತೆಯು ಮಾನವ ಜೀವಿಯ ಆದಿಮ ಪ್ರವೃತ್ತಿಗಳಲ್ಲೊಂದಾಗಿರುವಂತೆಯೇ ಅದು ಸಮುದಾಯ ವ್ಯವಸ್ಥೆಯ ಅವಿಭಾಜ್ಯ ಅಂಗವೂ ಹೌದು. ಇಂಥ ಮೂಲಭೂತ ಸಂಗತಿಯೊಂದನ್ನು ಭಾರತೀಯ ಸಮಾಜವು ಅಸಹಜವಾಗಿ ನಿರ್ವಹಿಸುತ್ತಾ ಬಂದಿದೆ. ಇಂಥ ನಿರ್ವಹಣೆಯ ಹಿಂದಿನ ಮನಃಸ್ಥಿತಿ ಮತ್ತು ಸಾಮಾಜಿಕ ಹುನ್ನಾರಗಳನ್ನು ಉದ್ದಕ್ಕೂ ಈ ಕೃತಿ ಬಿಚ್ಚಿಡುತ್ತಾ ಹೋಗುತ್ತದೆ. ಶಿಲ್ಪಕಲೆಯಲ್ಲಿ, ಕಾಮಸೂತ್ರದಂತಹ ಕೃತಿಗಳಲ್ಲಿ ಐರೋಪ್ಯರಿಗಿಂತ ಹೆಚ್ಚು ಮುಕ್ತವಾಗಿ ಲೈಂಗಿಕತೆಯನ್ನು ಪ್ರಕಟಿಸುವ, ಚರ್ಚಿಸುವ ಭಾರತೀಯ ಮನಸ್ಸು ಸಾಮಾಜಿಕವಾಗಿ ಅದನ್ನು ಏಕಾಗಿ ಅಶ್ಲೀಲ, ಬಹಿಷ್ಕೃತ, ಕೀಳು ಸಂಗತಿಯೆಂಬತೆ ಬಂತೆ ನೋಡುತ್ತದೆ.
ಅದನ್ನು ಕುರಿತ ತಿಳುವಳಿಕೆಯನ್ನು ಸಾಮಾಜಿಕವಾಗಿ ನೀಡುವುದರಲ್ಲಿ ಸಾಮಾಜಿಕ ಸಂರಚನೆಗೆ ಯಾವ ಅವಕಾಶವನ್ನು ಯಾಕೆ ಕೊಡಲಾಗಿಲ್ಲ ಎನ್ನುವ ಪ್ರಶ್ನೆ ಈ ಕೃತಿಯುದ್ದಕ್ಕೂ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ಈ ಮೂಲಭೂತ ಸಂಗತಿಯು ಬಹುತೇಕ ಸಂದರ್ಭಗಳಲ್ಲಿ ಭಾರತೀಯ ಮನಸ್ಸನ್ನೇ ವಿಕೃತಗೊಳಿಸಿ, ಸಂಕುಚಿತಗೊಳಿಸಿ ಏನೆಲ್ಲಾ ಅಪಾಯಗಳಿಗೆ ಕಾರಣವಾಗಿದೆ ಎನ್ನುವುದನ್ನೂ ಸೋದಾಹರಣವಾಗಿ ಲಕ್ಷ್ಮೀ ಪತಿಯವರು ವಿವರಿಸುತ್ತಾರೆ.
ಹೀಗೆ ಲೈಂಗಿಕತೆಯ ಮುಚ್ಚಿಟ್ಟ ಇತಿಹಾಸವನ್ನು ಬೆಳಕಿಗೆ ತರುವ ಸಂದರ್ಭದಲ್ಲಿ ಇವರೂ ಕೂಡ ಮಹಿಳೆಯನ್ನು ಮಾರುಕಟ್ಟೆಯಾಗಿಸುವ ಕಡೆಗೆ ಚಲಿಸುತ್ತಾರೆ ಎನ್ನುವುದು ಜಾಗೃತಿಯವರ ಆರೋಪ. ಈ ಆರೋಪವನ್ನು ನಾವು ಇಡಿಯಾಗಿ ಹೇಗೆ ಒಪ್ಪಲಾಗುವುದಿಲ್ಲವೋ? ಹಾಗೆಯೇ ಲಕ್ಷ್ಮೀ ಪತಿಯವರ ಈ ಬರವಣಿಗೆಯನ್ನು ಮಾರುಕಟ್ಟೆ ಬಳಸಿಕೊಳ್ಳುವ ಸಾಧ್ಯತೆಗಳೇ ಇಲ್ಲ ಎಂದೂ ಹೇಳಲಾಗುವುದಿಲ್ಲ.
ಈ ಪ್ರಶ್ನೆ ಲೈಂಗಿಕತೆ ಮತ್ತು ಹೆಣ್ಣಿನ ವಿಷಮ ಸಂಬಂಧವನ್ನು ಕುರಿತದ್ದು. ಅದು ಮುಚ್ಚಿದ ಸಮಾಜವಾಗಿರಲಿ, ಮುಕ್ತ ಸಮಾಜವಾಗಿರಲಿ ಕೊನೆಗೂ ಹೆಣ್ಣಿಗೆ ಲೈಂಗಿಕತೆಯನ್ನು ತನ್ನ ಪ್ರಾಥಮಿಕ ಹಕ್ಕಾಗಿ ಸ್ಥಾಪಿಸಿಕೊಳ್ಳುವುದು ಬಲು ಕಷ್ಟ. ಸಾಮಾಜಿಕ ವ್ಯವಸ್ಥೆ ಎಂಥದ್ದೇ ಆಗಿದ್ದಾಗಲೂ ಶೋಷಣೆಗೆ ಒಳಗಾಗುವವಳು, ಬಲಿಪಶುವಾಗುವವಳು ಹೆಣ್ಣೇ ಆಗಿರುತ್ತಾಳೆ. ಈ ಕೃತಿಯೇ ಚರ್ಚಿಸುವ ಹಾಗೆ ಮೊನಿಕಾ ಲೆವೆನ್‌ಸ್ಕಿ ಮತ್ತು ಬಿಲ್‌ಕ್ಲಿಂಟನ್‌ರ ಉದಾಹರಣೆಯನ್ನೇ ನೋಡಿ. ಬಿಲ್‌ಕ್ಲಿಂಟನ್‌ರ ಮೋನಿಕಾ ಜೊತೆಗಿನ ಸಂಬಂಧವನ್ನು ಅಲ್ಲಿನ ರಾಜಕೀಯ ಪಕ್ಷಗಳು ರಾಜಕಾರಣಕ್ಕಾಗಿ ಬಳಸಿಕೊಂಡವು ಎನ್ನುವುದು ನಿಜ. ಆದರೆ, ಇಬ್ಬರೂ ಅದನ್ನು ಎದುರಿಸಿದ ಬಗೆ ಹೇಗಿತ್ತು? ಬಿಲ್ ಕ್ಲಿಂಟನ್ ಗಂಡಿನ ಹುಟ್ಟುಗುಣವೆನ್ನಬಹುದಾದ ಭಂಡತನದಲ್ಲಿ ಅದನ್ನು ಎದುರಿಸಿದರೆ, ಮೋನಿಕಾ ಮಾಧ್ಯಮದವರ ಕಣ್ಣುತಪ್ಪಿಸಿ ಓಡಾಡಬೇಕಾಯಿತು. ಕೆಲವು ಪತ್ರಿಕೆಗಳಂತೂ ಆಕೆಯನ್ನು ಭಾರತದ ರಾಜಕಾರಣದಲ್ಲಿ ಹೆಣ್ಣನ್ನು ಬಳಸಲಾಗುತ್ತಿದ್ದ ಒಂದು ವಿಧಾನದ ಮೂಲಕ ಹೇಳುವುದಾದರೆ, ವಿಷಕನ್ಯೆಯಂತೆಯೇ ಚಿತ್ರಿಸಿದವು. ಆಧುನಿಕ ಜಗತ್ತು ಮತ್ತೆ ಮತ್ತೆ ಹೇಳುತ್ತಿರುವ ‘ಸಹಮತದ ಲೈಂಗಿಕತೆಯ’ ಪ್ರಶ್ನೆ ಆ ಸಂದರ್ಭದಲ್ಲಂತೂ ಎಲ್ಲೂ ಚರ್ಚೆಯಾಗಲಿಲ್ಲ. ಬಿಲ್‌ಕ್ಲಿಂಟನ್‌ನ ಪತ್ನಿ ಹೆಲೇರಿ ಕ್ಲಿಂಟನ್ ಅವಳ ಆತ್ಮಚರಿತ್ರೆಯಲ್ಲಿ ಈ ಪ್ರಸಂಗವನ್ನು ಸುದೀರ್ಘವಾಗಿ ಚರ್ಚಿಸುತ್ತಾಳೆ. ಆ ಮನುಷ್ಯನಿಂದ ಬಿಡುಗಡೆ ಪಡೆಯಬೇಕೆಂದು ಪ್ರತಿ ಬಾರಿ ಯೋಚಿಸಿದಾಗಲೂ ನನ್ನ ಕಣ್ಣೆದುರಿಗೆ ಬರುತ್ತಿದ್ದುದು ನನ್ನ ಮುದ್ದು ಮಗಳು ಚೆಲ್ಸಿ. ಅವಳಿಗೋಸ್ಕರ ನಾನು ಇದನ್ನು ಉಳಿಸಿಕೊಂಡೆ. ಮೋನಿಕಾಳ ಲೈಂಗಿಕ ಹಕ್ಕು ಇನ್ನೊಂದು ಹೆಣ್ಣಿನ ದಾಂಪತ್ಯದ ಅಳಿವು-ಉಳಿವಿನೊಂದಿಗೆ ತಳುಕು ಹಾಕಿಕೊಂಡಿರುವ ಪ್ರಶ್ನೆ ತೀವ್ರವಾಗಿ ಕಾಡುತ್ತದೆ ಎನ್ನುವ ಅಂಶ ಏನನ್ನು ಹೇಳುತ್ತದೆ? ಲೈಂಗಿಕತೆಯೂ ಸೇರಿದಂತೆ ನಮ್ಮ ಸಾಮಾಜಿಕ ಸಂಸ್ಥೆಗಳಾದ ದಾಂಪತ್ಯ, ಕುಟುಂಬ ಈ ಎಲ್ಲದರಲ್ಲೂ ಮೊದಲ ಮತ್ತು ಕೊನೆಯ ಏಟು ಬೀಳುವುದು ಹೆಣ್ಣಿಗೇ?
ಈ ಕೃತಿಯ ಹಾಸು ಮತ್ತು ಬೀಸು ಎರಡೂ ದೊಡ್ಡದು. ಕ್ರಿಸ್ತಪೂರ್ವದಿಂದ ಸಮಕಾಲೀನ ಜಗತ್ತಿನ ತನಕ ಇದರ ಬೀಸಿದೆ. ಅಲ್ಲಿಂದ ಇಲ್ಲಿಯ ತನಕ ಮಾನವ ದೇಹ, ಕಾಮ, ಲೈಂಗಿಕ ಸಂಬAಧಗಳು ಅವುಗಳನ್ನು ಎದುರಿಸಲು ಮನುಷ್ಯ ಕೆಲವೊಮ್ಮೆ ಸಹಜವಾಗಿ ಮತ್ತೆ ಕೆಲವೊಮ್ಮೆ ನಿಯಂತ್ರಕ ಪ್ರಭುವಾಗಿ ನಡೆಸಿರುವ ವಿಲಕ್ಷಣ ಇತಿಹಾಸದ ಪಕ್ಷಿನೋಟವೇ ಇಲ್ಲಿ ಕಾಣಸಿಗುತ್ತದೆ. ಲಕ್ಷ್ಮೀ ಪತಿಯವರು ಈ ಕೃತಿಯುದ್ದಕ್ಕೂ ಸಮಾಜ ವಿಜ್ಞಾನಿಯ ವಿಶ್ಲೇಷಣಾ ಶಕ್ತಿ, ಅಧ್ಯಯನ ಶೀಲತೆಗಳ ಜೊತೆಗೆ ಸಾಹಿತ್ಯದ ವಿದ್ಯಾರ್ಥಿಯ ಸೂಕ್ಷ್ಮ ಮನಃಸ್ಥಿತಿಯನ್ನೂ ಪಡೆದುಕೊಂಡಿರುವುದು ಕಾಣಿಸುತ್ತದೆ. ಈ ಎರಡಕ್ಕಿಂತ ಹೆಚ್ಚಾಗಿ ಮಾನವ ಜಗತ್ತು ಮತ್ತು ದೇಹದ ಬಗೆಗಿನ ಆಸ್ತಿಯಿಂದಲೂ ಈ ಕೃತಿಯನ್ನು ಅವರು ನಿರೂಪಿಸಿದ್ದಾರೆ. ಅಲ್ಲಲ್ಲಿ ಇದನ್ನು ರಂಜಕಗೊಳಿಸುವ ಪ್ರಯತ್ನಗಳು ಇವೆ. ಅಂಥ ರಂಜಕತೆಯ ಪ್ರಯತ್ನಗಳನ್ನು ಇವರು ಕೈಬಿಡಬಹುದಿತ್ತು ಎಂದೂ ಅನಿಸುತ್ತದೆ. ಆದರೆ, ಇವುಗಳನ್ನು ಅವರು ಬರೆದದ್ದು ಜನಪ್ರಿಯ ಪತ್ರಿಕೆಯೊಂದರ ಅಂಕಣಕ್ಕಾಗಿ ಎನ್ನುವಾಗ ಇವು ಅನಿವಾರ್ಯವಾಗಿತ್ತೇನೋ. ಆದರೆ ಇಂಥ ಅನಿವಾರ್ಯತೆಗಳನ್ನು ದಾಟುವುದೂ ನಮ್ಮ ಸಾಮಾಜಿಕ ಹೊಣೆಗಾರಿಕೆಯ ಒಂದು ಭಾಗ ಎನ್ನುವುದನ್ನು ನಾವು ಮರೆಯಲಾಗುವುದಿಲ್ಲ.
ಈ ಕೃತಿ ಮುಖ್ಯವಾಗಿ ನಮ್ಮ ಕಣ್ತೆರೆಸುವುದು ಭಾರತೀಯರ ಇಬ್ಬಂದಿ ಧೋರಣೆಯ ಬಗ್ಗೆ. ದೇವಸ್ಥಾನದಲ್ಲಿ ಮಿಥುನ ಶಿಲ್ಪಗಳಿರಬಹುದು, ವಾತ್ಸಾಯನನ ಕಾಮಸೂತ್ರವು ಅಣು ಅಣುವಾಗಿ ಲೈಂಗಿಕತೆಯ ವಿವರಗಳನ್ನು ಕೊಡಬಹುದು. ಆದರೆ, ಮನೆಯಲ್ಲಿ, ಗೆಳೆಯ-ಗೆಳತಿಯರ ನಡುವೆ, ಗಂಡ-ಹೆಂಡತಿಯರ ನಡುವೆ ಲೈಂಗಿಕತೆಯನ್ನು ಕುರಿತ ಚರ್ಚೆಗಳು ಅಪರಾಧ ಎನ್ನುವಂತೆ ಪರಿಗಣಿತವಾಗುತ್ತವೆ. ಇಂಥ ಬಲವಂತವಾದ ಮುಚ್ಚಿಡುವಿಕೆಯು ಲೈಂಗಿಕ ಅಪರಾಧಗಳನ್ನು ಹೆಚ್ಚು ಮಾಡುತ್ತಿದೆಯೆ ಹೊರತು, ಇವುಗಳ ಉದ್ದೇಶ ಎಂದು ಹೇಳಲಾಗುವ ಸ್ವಸ್ಥ ಸಮಾಜವನ್ನು ಕಟ್ಟುವುದರಲ್ಲಿ ಇವು ಸೋಲುತ್ತವೆ. ಕೆಲವು ವಿವರಗಳಂತೂ ನಮ್ಮನ್ನು ಬೆರಗುಗೊಳಿಸುತ್ತವೆ. ಕೆಲವು ಸಮುದಾಯಗಳಲ್ಲಿ ವಯಸ್ಸಿಗೆ ಬಂದ ತಂಗಿಯರನ್ನು ಅಣ್ಣಂದಿರು ನೋಡಲೂಬಾರದು, ಮಾತನಾಡಿಸಲೂ ಬಾರದು ಎನ್ನುವ ನಿಷೇಧಗಳಿವೆಯಂತೆ. ಲೈಂಗಿಕತೆಯನ್ನು ಕುರಿತ ಭಯ ಅದೆಷ್ಟು ಕಾಡಿರಬೇಕು ಮನುಷ್ಯರನ್ನು? ಎರಡು ಮೂರು ವರ್ಷ ಮಾತ್ರ ಅಂತರವಿರುವ ಅಣ್ಣ-ತಂಗಿಯರ ನಡುವೆ ಎಲ್ಲಿ ಲೈಂಗಿಕತೆ ಹುಟ್ಟಿಬಿಡುತ್ತದೋ ಎನ್ನುವ ಭಯಕ್ಕೆ ಇಂಥ ನಿಷೇಧಗಳನ್ನು ಹೇರಲಾಗುತ್ತದೆ.
ಲಕ್ಷ್ಮೀ ಪತಿಯವರ ಈ ಕೃತಿಯು ಶೈಕ್ಷಣಿಕವಾಗಿ ಮಾತ್ರ ‘ನಿರಚನವಾದ’ ಮಾದರಿಗೆ ಸೇರುವುದಿಲ್ಲ. ಇದು ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ ನಿರಚನವಾದದ ಮಾದರಿಯನ್ನು ಕಟ್ಟಲು ಸಾಮಾಜಿಕ ಹೊಣೆಗಾರಿಕೆಯ ಒಂದು ಭಾಗವಾಗಿ ತನ್ನ ಪ್ರಯತ್ನಗಳನ್ನು ಇಲ್ಲಿ ನಡೆಸುತ್ತಿದೆ. ಈ ಕೃತಿಗೆ ಅಖಿಲ ಭಾರತ ವ್ಯಾಪ್ತಿ ಸಿಕ್ಕುವುದು ಈ ಕಾರಣಕ್ಕಾಗಿ. ಈ ಕೃತಿಯನ್ನು ಓದುವ ಸಾಮಾನ್ಯರಿಂದ ಹಿಡಿದು, ಗಂಭೀರ ಶೈಕ್ಷಣಿಕ ಆಸಕ್ತಿಯವರೆಗೂ ಕೂಡ ಇದು ಹಲವು ವಿಷಯಗಳಲ್ಲಿ ಕಣ್ತೆರೆಸುವ ಪ್ರಯತ್ನವನ್ನು ಮಾಡುತ್ತದೆ. ಈ ಕೃತಿಯನ್ನು ಕುರಿತು ಬಂದ ಆಕ್ಷೇಪಗಳು ಈ ಕೃತಿಯ ಪ್ರಬಂಧ ಧ್ವನಿಯನ್ನು ಅರಿತುಕೊಳ್ಳದೇ ಬಂದ ಆಕ್ಷೇಪಗಳೋ ಎಂದು ನನಗನ್ನಿಸುತ್ತದೆ. ಅಂಕಣ ಬರಹವಾಗಿ ಬಂದ ಈ ಕೃತಿಯ ಬಿಡಿ ಬಿಡಿ ಲೇಖನಗಳನ್ನು ಓದಿದಾಗ ಇವರೂ ಮತ್ತೆ ಹೆಣ್ಣನ್ನು ಸರಕಾಗಿಸುವ ತಂತ್ರಗಾರಿಕೆಯನ್ನು ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ ಅಥವಾ ಆ ಕಾರ್ಯತಂತ್ರದ ಒಂದು ಭಾಗವಾಗಿ ಬಿಟ್ಟಿದ್ದಾರೆ ಎನ್ನುವ ಅನಿಸಿಕೆ ಮೂಡುವುದು ಸಹಜ.
ಆದರೆ ಕೃತಿಯ ಇಡಿಯಾದ ಓದು ಲಕ್ಷ್ಮೀ ಪತಿಯವರ ಕಾಳಜಿ ಮತ್ತು ಉದ್ದೇಶಗಳನ್ನು ನಮಗೆ ಸ್ಪಷ್ಟವಾಗಿ ಮನದಟ್ಟು ಮಾಡಿಸುತ್ತದೆ. ಹೆಣ್ಣಾಗಲಿ, ಕಾಮವಾಗಲಿ ಪ್ರಕೃತಿಯ ಒಂದು ಭಾಗವಾಗಿರುವಾಗ ಅದನ್ನು ಪ್ರಾಕೃತಿಕ ನೆಲೆಯಲ್ಲಿಯೇ ನಿಭಾಯಿಸುವುದರ ಹೊರತು, ಅನ್ಯದಾರಿಗಳಿಲ್ಲ. ಇದರ ಹೊರತಾಗಿ ಸ್ಥಾಪಿಸುವ ಯಾವುದೇ ಕಾರ್ಯಮಾದರಿಗಳು ಗಂಡಾಳಿಕೆಯ ಸ್ವಾರ್ಥ ಮತ್ತು ದುರಾಸೆಯ ಮಾತ್ರವಲ್ಲದೆ, ಅದರ ಕ್ರೌರ್ಯದ ವಿನ್ಯಾಸಗಳು ಮಾತ್ರವಾಗಿರಲು ಸಾಧ್ಯ ಎನ್ನುವುದನ್ನು ನೂರಾರು ಉದಾಹರಣೆಗಳ ಮೂಲಕ ಈ ಕೃತಿ ಉದ್ದಕ್ಕೂ ನಿರೂಪಿಸುತ್ತಾ ಹೋಗುತ್ತದೆ.
ಓಷೋನಂತಹ ವ್ಯಕ್ತಿತ್ವದ ಇತರ ಮಗ್ಗುಲುಗಳನ್ನು ತೋರಿಸುವುದರ ಮೂಲಕ ಕಾಮವನ್ನು ಕುರಿತ ಶ್ರೀಸಾಮಾನ್ಯರ ನಿಲುವುಗಳ ಟೊಳ್ಳುತನವನ್ನೂ ಈ ಕೃತಿ ಅನಾಯಾಸವಾಗಿ ನಮ್ಮ ಮುಂದಿಡುತ್ತದೆ. ಓಷೋ ವ್ಯಕ್ತಿತ್ವದ ಮಿತಿಗಳನ್ನು ಗುರುತಿಸುತ್ತಲೇ ಓಷೋ ಕಟ್ಟಬಯಸಿದ ಮುಕ್ತತೆಯ ವಿನ್ಯಾಸವನ್ನು ಇದು ಮನುಸ್ಮೃತಿಯ ವಿನ್ಯಾಸದ ಪಕ್ಕಕ್ಕಿಡುವ ಮೂಲಕವೇ ಸಾಧಿಸುತ್ತದೆ. ಹೀಗಾಗಿ ಈ ಕೃತಿಗೆ ಬಹುದೊಡ್ಡ ಭಿತ್ತಿಯೊಂದು ಲಭಿಸಿದೆ. ಅನಾದಿ ಕಾಲದಿಂದ ಆಧುನಿಕ ಕಾಲದ ತನಕದ ಹಲವು ಘಟ್ಟಗಳನ್ನು ಐತಿಹಾಸಿಕವಾಗಿ ಗುರುತಿಸುವ ಈ ಕೃತಿಯು ಎಲ್ಲ ಘಟ್ಟಗಳಲ್ಲಿಯೂ ವಂಚನೆಗೊಳಗಾಗಿರುವ ಹೆಣ್ಣಿನ ಹಕ್ಕುಗಳನ್ನು ಹಕ್ಕೊತ್ತಾಯದಲ್ಲಿ ಮಂಡಿಸುತ್ತಾರೆ. ಇದು ಈ ಕೃತಿಯ ಆಶಯವು ಸಾಧಿತವಾಗಿರುವ ಬಹುದೊಡ್ಡ ಸಂಗತಿಯೆಂದು ನಾನು ತಿಳಿದಿದ್ದೇನೆ.”