ಬೆಥ್ಲಹೆಮ್ : ಯೇಸುಕ್ರಿಸ್ತ ಹುಟ್ಟಿದ ಸ್ಥಳದಲ್ಲಿ ಸ್ಮಶಾನ ಮೌನ...
ಶಾಂತಿದೂತನ ಜನ್ಮಸ್ಥಳದಲ್ಲಿ ರಕ್ತದೋಕುಳಿ. ಕ್ರಿಸ್ಮಸ್ ಬ್ರೇಕ್ ಪಾಸ್ಟ್, ಕ್ರಿಸ್ಮಸ್ ಲಂಚ್, ಕ್ರಿಸ್ಮಸ್ ಡಿನ್ನರ್, ಕ್ರಿಸ್ಮಸ್ ಟ್ರೀ, ಸಾಂತಕ್ಲಾಸ್ ಏನೂ ಇಲ್ಲದೇ ಸಾವಿನ ಭಯ ಆತಂಕದಲ್ಲಿ ಅಲ್ಲಿನ ಜನ ಜೀವನ. ಪ್ರತಿ ವರ್ಷ ನಕ್ಕು ನಲಿಯುತ್ತಾ ಕುಟುಂಬದೊಂದಿಗೆ ವರ್ಷಾಂತ್ಯದಲ್ಲಿ ಸಂಭ್ರಮಿಸುತ್ತಾ, ಸ್ಥಳೀಯರಿಗೆ ಒಳ್ಳೆಯ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡುತ್ತಾ ಇದ್ದ ಮಧ್ಯಪ್ರಾಚ್ಯದ ಮಹತ್ವದ ಸ್ಥಳ ಇಂದು ಯುದ್ದ ಭೂಮಿಯಾಗಿ ಮಾರ್ಪಟ್ಟಿದೆ.
ಇಸ್ರೇಲ್ - ಪ್ಯಾಲಿಸ್ಟೈನ್ ನಡುವಿನ ಯುದ್ಧದ ಸುದ್ದಿಗಳು ಮನುಷ್ಯ ಜನಾಂಗ ಬೆಚ್ಚಿ ಬೀಳಿಸುವಂತಿದೆ. ಬಹುಶಃ ಕಾಳ್ಗಿಚ್ಚಿಗೆ ಸಿಲುಕಿದ ಕೋಟ್ಯಾಂತರ ಜೀವಚರಗಳ ಮನಸ್ಥಿತಿ ಆ ಭಾಗದಲ್ಲಿ ಇದೆ. ಕಣ್ಣ ಮುಂದೆಯೇ ಸುಟ್ಟು ಕರಕಲಾಗುವ ಜಿಂಕೆಗಳ ಹಿಂಡು, ಬೆಂಕಿಯ ತಾಪಕ್ಕೆ ಮೈಸುಟ್ಟುಕೊಂಡು ಕಿರುಚುತ್ತಾ ಓಡುವ ಕೋತಿಗಳ ದಂಡು, ದಟ್ಟ ಹೊಗೆಯ ಕಾರಣ ಉಸಿರುಕಟ್ಟಿ ಚೆಲ್ಲಾಪಿಲ್ಲಿಯಾಗಿ ಹಾರುವ ಪಕ್ಷಿಗಳು, ಇವೆಲ್ಲವನ್ನೂ ಗಮನಿಸಿ ಹಾರಲಾಗದ, ಓಡಲಾಗದ ಪುಟ್ಟ ಪುಟ್ಟ ಮರಿಗಳು, ರೋಗಗ್ರಸ್ತ, ಗಾಯಗೊಂಡ ಅನೇಕ ಪ್ರಾಣಿಗಳು. ಬಹುತೇಕ ಇದೇ ದೃಶ್ಯಗಳು ಪ್ಯಾಲಿಸ್ಟೈನ್ ಭಾಗದಲ್ಲಿ ಈಗ ಮನುಷ್ಯ ಸಮಾಜದಲ್ಲಿ ದಿನನಿತ್ಯ ನಡೆಯುತ್ತಲೇ ಇದೆ.
ಯಾಕಾಗಿ ಈ ಹಿಂಸೆ. ದೊಡ್ಡವರೆನೆಸಿಕೊಂಡ ಕೆಲವೇ ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರು ಸ್ವಲ್ಪ ಯೋಚಿಸಿ ಇರುವುದರಲ್ಲಿ ಒಂದಷ್ಟು ಹೊಂದಾಣಿಕೆ ಮಾಡಿಕೊಂಡು ಜೀವನ ಮಾಡಿದ್ದರೆ ಇಂದು ಆ ಭಾಗದ ಎರಡೂ ಕಡೆಯ ಲಕ್ಷಾಂತರ ಜನ ಎಷ್ಟೊಂದು ಖುಷಿಖುಷಿಯಾಗಿ ನೆಮ್ಮದಿಯಿಂದ ಜೀವನ ಸಾಗಿಸಬಹುದಿತ್ತಲ್ಲವೇ? ತಮ್ಮ ಕುಟುಂಬವರೊಂದಿಗೆ ಎಷ್ಟೊಂದು ಅನ್ಯೋನ್ಯವಾಗಿ ಸಮಯ ಕಳೆಯಬಹುದಿತ್ತಲ್ಲವೇ. ಆದರೆ ಈಗ ನರಕಯಾತನೆ ಅನುಭವಿಸುತ್ತಿದ್ದಾರೆ. ಯಾಕಾಗಿ, ಯಾಕಾಗಿ ಎಂದು ಮತ್ತೆ ಮತ್ತೆ ಕೂಗಿ ಕೇಳಬೇಕೆನಿಸುತ್ತದೆ. ಆದರೆ ಯಾರನ್ನು? ಹೃದಯವಿಲ್ಲದ, ಮೆದುಳಿಲ್ಲದ, ಕೇವಲ ತಲೆ ಮತ್ತು ತೋಳುಗಳನ್ನು ಮಾತ್ರ ನಂಬಿ ಬದುಕುತ್ತಿರುವ ಈ ಮಾನವರಿಗೆ ನೊಂದವರ ಧ್ವನಿ ಕೇಳುವುದಾದರು ಹೇಗೆ?
ಪ್ರತಿನಿತ್ಯ ಬಾಂಬು ಬಂದೂಕಿನ ಸುರಿಮಳೆಗೆ ಅನೇಕ ಜೀವಗಳ ಬಲಿ. ಆಹಾರವಿಲ್ಲದೆ, ನೀರಿಲ್ಲದೆ ರೋಗರುಜಿನಗಳಿಂದ ಇನ್ನಷ್ಟು ಜನರ ಸಾವು. ದುರಂತವೆಂದರೆ ಎಷ್ಟೋ ಪರಿಹಾರ ಸಾಮಗ್ರಿಗಳು ಅಲ್ಲಿಯೇ ಕಾದು ಕುಳಿತಿವೆ. ಆದರೆ ಸರಿಯಾದ ಹಂಚಿಕೆಯೂ ಸಾಧ್ಯವಾಗುತ್ತಿಲ್ಲ. ಜೀಸಸ್, ಅಲ್ಲಾ ಎಂಬ ದೇವರುಗಳೇ ನಿಮ್ಮನ್ನು ಶತಶತಮಾನಗಳಿಂದ ನಂಬಿದ ಆ ಜನರನ್ನು ದಯವಿಟ್ಟು ಕಾಪಾಡು. ಈಗ ನೀವು ಅವರ ನೆರವಿಗೆ ಬರದಿದ್ದರೆ ಇನ್ನು ಯಾವಾಗ ಬರುತ್ತೀರಿ. ಎಲ್ಲವೂ ನಿರ್ನಾಮವಾದ ಮೇಲೆ ಬಂದು ಪ್ರಯೋಜನವೇನು? ಬೈಬಲ್ ಕುರಾನ್ ಗಳೇ ಕನಿಷ್ಠ ಆ ಜನಗಳಿಗೆ ನಿಮ್ಮ ತಿಳಿವಳಿಕೆಯನ್ನಾದರೂ ನೀಡಿ. ದಯೆ ಕ್ಷಮೆ ಕರುಣೆಯನ್ನು ದಯಪಾಲಿಸಿ. ಇಲ್ಲದಿದ್ದರೆ ನಿಮ್ಮ ಬೋಧನೆಗಳು ಯಾರಿಗಾಗಿ. ಕೇವಲ ಪ್ರಾರ್ಥನೆ ಮತ್ತು ನಮಾಜುಗಳಿಗೆ ಮಾತ್ರ ಸೀಮಿತವೇ. ಆಚರಣೆ ಬೇಡವೇ?
ನಿಜವಾಗಿಯೂ ದೇವರು ಇರುವುದಾದರೆ ತಕ್ಷಣವೇ ಇಸ್ರೇಲ್ - ಪ್ಯಾಲಿಸ್ಟೈನ್ ನಲ್ಲಿ ಶಾಂತಿ ನೆಲೆಸುವಂತೆ ಮಾಡಿ, ಮನುಷ್ಯರ ಮಾರಣಹೋಮ ತಡೆಯಲಿ. ಇಲ್ಲದಿದ್ದರೆ ಆತನನ್ನು ಪ್ರಶ್ನಿಸುತ್ತಲೇ ಇರೋಣ. ಇಲ್ಲವೇ ಅಲ್ಲಿ ಮನುಷ್ಯ ಜನಾಂಗ ಇದ್ದರೆ ಅವರಾದರೂ ಸಮಸ್ಯೆ ಬಗೆಹರಿಸಲಿ. ಇಲ್ಲದಿದ್ದರೆ ಅಲ್ಲಿ ಮನುಷ್ಯರಲ್ಲದ ನರರಾಕ್ಷಸರೇ ಇದ್ದಾರೆ ಎಂದು ಭಾವಿಸಬಹುದಲ್ಲವೇ? ಒಟ್ಟಿನಲ್ಲಿ ಭೂಮಿಯ ಮೇಲೆ ಮತ್ತೊಂದು ನರಮೇದ ನಡೆಯುತ್ತಿರುವುದು ನಮ್ಮ ಕಾಲದಲ್ಲೇ. ಅದಕ್ಕೆ ನಾವೆಲ್ಲರೂ ಸಾಕ್ಷಗಳು. ಅದಕ್ಕಾಗಿ ಏನೂ ಮಾಡದ ನಮ್ಮನ್ನು ಈ ಭೂಮಿಯ ಮುಂದಿನ ಜನಾಂಗ ನಮ್ಮನ್ನು ಕ್ರಮಿಸುವುದಿಲ್ಲ ಎಂದು ನೆನಪಿಸುತ್ತ… ಆದಷ್ಟು ಶೀಘ್ರವಾಗಿ ಅಲ್ಲಿ ಹಿಂಸೆ ನಿಲ್ಲಲಿ ಎಂದು ಆಶಿಸುತ್ತಾ...
-ವಿವೇಕಾನಂದ ಎಚ್ ಕೆ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ