ಬೆರಳ ತುದಿಯಲ್ಲಾಡುವ ದೇವತೆಗಳು

ಬೆರಳ ತುದಿಯಲ್ಲಾಡುವ ದೇವತೆಗಳು

ಬರಹ

ಬೆರಳ ತುದಿಯಲ್ಲಾಡುವ ದೇವತೆಗಳು
ತೇನ ವಿನಾ ತೃಣಮಪಿ ನ ಚಲತಿ, ಅವನಿಲ್ಲದೆ ಒಂದು ಹುಲ್ಲೂ ಅಲ್ಲಾಡದು, ನೀನಾಡಿಸಿದಂತೆ ಆಡುವೆನಯ್ಯ, ನಾನೊಂದು ಬೊಂಬೆಯು ನೀ ಸೂತ್ರ ಧಾರಿ ಎಂಬಿತ್ಯಾದಿಯಾಗಿ ದೇವರ ಮತ್ತು ಭಕ್ತನ ಸಂಬಂಧವನ್ನು ಒಬ್ಬೊಬ್ಬರು ಒಂದೊಂದೆಡೆ ಬಣ್ಣಸಿದರೂ ಎಲ್ಲವುಗಳ ತಾತ್ಪರ್ಯ ಮಾತ್ರ ಅನೇಕರು ಕಂಡಂತೆ ಒಂದೇ ಅದೇ ದೇವರ ಬೆರಳ ತುದಿಯ ಬೊಂಬೆಗಳು ನಾವು, ಅವನಾಡಿಸಿದಂತೆ ಆಡುವವರು. ಆದರೆ, ಈ ಮಾತಿಗೆ ವಿರುದ್ಧವಾಗಿ ಇಲ್ಲೊಬ್ಬರು ವಿವಿಧ ದೇವರನ್ನೇ ತಮ್ಮ ಬೆರಳುಗಳ ತುದಿಯಲ್ಲಿ ನಿಲ್ಲಿಸಿಕೊಂಡು ತಮಗೆ ಬೇಕಾದಂತೆ ಬೆರಳಾಡಿಸುತ್ತಿದ್ದಾರೆ. ಹಾಗಾಗಿ ದೇವರೇ ಇವರಲ್ಲಿ ನೀನಾಡಿಸಿದಂತೆ ಆಡುವೆನಯ್ಯ ಎಂಬಂತಾಗಿದೆ.
ಇದು ಜೋಗದ ಕೆ.ಪಿ.ಟಿ.ಸಿಎಲ್ ಉದ್ಯೋಗಿ ಕಲಾವಿದ ಲಕ್ಷ್ಮೀನಾರಾಯಣ ಇವರ ಬಳಿ. ಹೇಗೆಂದರೆ, ಇವರು ತಮ್ಮ ಕೈ ಉಗುರುಗಳ ಮೇಲೆ ನಾಟ್ಯ ಗಣಪತಿ, ರಾಮ, ಲಕ್ಷ್ಮಣ, ಸೀತೆ ಹನುಮಂತ ದೇವರುಗಳನ್ನು ಬಣ್ಣಗಳಲ್ಲಿ ರಚಿಸಿಕೊಂಡು ಕೈ ಬೆರಳುಗಳನ್ನು ಆಡಿಸುತ್ತಿದ್ದಾರೆ. ಉದ್ದವಾಗಿ ಬೆಳೆಸಿಕೊಂಡಿರುವ ತಮ್ಮ ಕೈ ಉಗುರುಗಳ ಮೇಲೆ ಇನ್ನೂ ಬೆಳೆಯುತ್ತಿರುವ ಉಗುರು ಬೆಳೆದಂತೆ ಬೆಳೆದ ಭಾಗದಲ್ಲಿ ದೇವಾಲಯದ ಚಿತ್ರ ಸಹ ಬರೆಯುವುದು ಇವರ ಮಹದಾಸೆ.
ಭೂತಕನ್ನಡಿ ಬಳಸಿ ಈ ಸೂಕ್ಷ್ಮ ಚಿತ್ರಗಳನ್ನು ಬರೆಯುತ್ತಿರುವ ಇವರು ಎಳೆಯರಿಗಾಗಿ ರಾಮಾಯಣ ಕಥೆಯ ಸನ್ನಿವೇಶಗಳನ್ನು ಆಧರಿಸಿ ಚಿತ್ರಗಳನ್ನು ಹೆಗ್ಸಾ ಬ್ಲೇಡ್ ಗಳ ಮೇಲೆ ಚಿತ್ರ ಬರೆದು ಸವಿವರಗಳನ್ನು ಕಾವ್ಯಮಯವಾಗಿ ರಚಿಸಿ ಪ್ರಸ್ತುತ ಪಡಿಸಿದ್ದಾರೆ.
ಪ್ರಸ್ತುತ ಇವರು ಜೋಗ್ನಲ್ಲಿ ಕೆ.ಪಿ.ಸಿ.ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.