ಬೆಲೆ ಏರಿಕೆಯ ಭಾರ

ಹಾಲು, ವಿದ್ಯುತ್, ನೀರು, ಸಾರಿಗೆ ಪ್ರಯಾಣ, ಮೆಟ್ರೋ ದರ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ಸರಣಿಯಾಗಿ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಈಗ ಸ್ಥಿರಾಸ್ತಿಗಳ ಮೇಲಿನ ನೋಂದಣಿ ಶುಲ್ಕವನ್ನು ದಿಢೀರನೆ ಹೆಚ್ಚಿಸಿದ್ದು, ಈ ನಿರ್ಧಾರ ಆಗಸ್ಟ್ ೩೧ರಿಂದಲೇ ಜಾರಿಗೆ ಬಂದಿದೆ. ಬಡವರು, ಕೆಳ ಮಧ್ಯಮವರ್ಗದವರು ಮತ್ತು ಮಧ್ಯಮ ವರ್ಗದವರು ಒಂದು ಸಣ್ಣ ನಿವೇಶನ ಅಥವಾ ಪುಟ್ಟಮನೆಯನ್ನು ಕೊಂಡುಕೊಳ್ಳಲು ಜೀವಮಾನದ ದುಡಿಮೆಯ ಉಳಿತಾಯವನ್ನೆಲ್ಲ ವಿನಿಯೋಗಿಸುತ್ತಾರೆ. ಜತೆಗೆ ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಯಲ್ಲಿ ಸಾಲ ಪಡೆದು ಹಣವನ್ನು ಹೊಂದಿಸುತ್ತಾರೆ. ಬದುಕಿನ ಭದ್ರತೆಗಾಗಿ ಸಣ್ಣ ಆಸ್ತಿಯಾದರೂ ಇರಲಿ ಎಂಬ ದೃಷ್ಟಿಯಿಂದ ಇಷ್ಟೆಲ್ಲ ಕಸರತ್ತು ನಡೆಸುತ್ತಾರೆ. ಆದರೆ, ಈಗ ದಿಢೀರನೆ ನೋಂದಣಿ ಶುಲ್ಕವನ್ನು ಹೆಚ್ಚಿಸಿರುವುದು ಜನರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾರ್ವಜನಿಕರಿಗೆ ಮತ್ತು ವಿಪಕ್ಷಗಳಿಗೆ ಯಾವುದೇ ಮುನ್ಸೂಚನೆ ಇಲ್ಲದಂತೆ ಶುಲ್ಕವನ್ನು ಪರಿಷ್ಕರಿಸಲಾಗಿದೆ ಎಂಬ ಅಂಶ ಸರ್ಕಾರ ಈ ನಿಟ್ಟಿನಲ್ಲಿ ಸಾಕಷ್ಟು ಅವಧಿಯಿಂದಲೇ ತಯಾರಿ ನಡೆಸುತ್ತಿತ್ತು ಎಂಬುದು ಸ್ಪಷ್ಟ. ಕೆಲ ತಿಂಗಳ ಹಿಂದಷ್ಟೇ ಸ್ಥಿರಾಸ್ಥಿಗಳ ಮೇಲಿನ ಮಾರ್ಗಸೂಚಿ ದರವನ್ನು ಏರಿಕೆ ಮಾಡಲಾಗಿತ್ತು.
ಸ್ಥಿರಾಸ್ತಿಗಳ ಮೇಲಿನ ನೋಂದಣಿ ಶುಲ್ಕವನ್ನು ಶೇ.೧ರಿಂದ ೨ಕ್ಕೆ ಹೆಚ್ಚಿಸಲಾಗಿದ್ದು, ಪರಿಷ್ಕೃತ ದರದ ಪ್ರಕಾರ ಮುದ್ರಾಂಕ ಶುಲ್ಕ ಶೇ.೫, ನೋಂದಣಿ ಶುಲ್ಕ ಶೇ.೨, ಇತರ ಸೆಸ್ ಶೇ.೦.೬೫ ಸೇರಿ ಒಟ್ಟು ಶೇ.೭.೬೫ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರಿಂದ ಸರ್ಕಾರ ಹೆಚ್ಚುವರಿಯಾಗಿ ೨,೫೦೦ ಕೋಟಿ ರೂ. ಆದಾಯ ನಿರೀಕ್ಷಿಸುತ್ತಿದೆ. ಈ ಶುಲ್ಕ ಪರಿಷ್ಕರಣೆಯ ಬಳಿಕ ದಕ್ಷಿಣ ಭಾರತದ ರಾಜ್ಯಗಳ ಪೈಕಿ ಸ್ಥಿರಾಸ್ತಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಟ್ಟಿಯಲ್ಲಿ ಕರ್ನಾಟಕ ೩ನೇ ದುಬಾರಿ ರಾಜ್ಯವಾಗಿ ಹೊರಹೊಮ್ಮಿದೆ. ಕ್ರಯ ಪತ್ರ, ಸಾಗಣೆ ಪತ್ರ, ಪಾಲುದಾರಿಕೆ ಪತ್ರ ಸೇರಿದಂತೆ ಎಲ್ಲ ನೋಂದಣಿಗೂ ಈ ಶುಲ್ಕ ಅನ್ವಯವಾಗಲಿದೆ. ೧೫ ಮಾದರಿ ನೋಂದಣಿ ಪತ್ರಗಳ ಮೇಲೆ ಪರಿಣಾಮ ಉಂಟಾಗಲಿದೆ. ಅಂದರೆ ಇದು ನಿವೇಶನ, ಭೂಮಿ, ಫ್ಲ್ಯಾಟ್ ಹಾಗೂ ಮನೆ ಖರೀದಿಗೆ ಅನ್ವಯವಾಗಲಿದೆ. ಬೊಕ್ಕಸಕ್ಕೆ ಹೆಚ್ಚುವರಿ ಆದಾಯ ಹರಿದು ಬರುವುದು ಹೌದಾದರೂ, ಜನರ ಮೇಲೆ ಒಂದಾದ ಬಳಿಕ ಒಂದು ಭಾರವನ್ನು ಹೇರುತ್ತಿರುವುದು ಸೂಕ್ತವಲ್ಲ. ಸರ್ಕಾರ ಬರೀ ಆದಾಯ ಹೆಚ್ಚಳಕ್ಕೆ ಗಮನ ನೀಡಿದರೆ ಜನಹಿತದ ಗತಿಯೇನು? ಜನಹಿತವನ್ನು ರಕ್ಷಿಸುವವರಾರು? ಪ್ರತಿಪಕ್ಷಗಳು ಕೂಡ ಈ ನೀತಿಯನ್ನು ವಿರೋಧಿಸಿದ್ದು, 'ಬೆಲೆ ಏರಿಕೆ, ಭ್ರಷ್ಟಾಚಾರ ಸರ್ಕಾರದ ನಿತ್ಯ ಗ್ಯಾರಂಟಿಯಾಗಿದೆ' ಎಂದು ಆರೋಪಿಸಿವೆ. ಅದೇನಿದ್ದರೂ, ಇಂಥ ಮಹತ್ವದ ನಿರ್ಣಯ ತಳೆಯುವ ಮುನ್ನ ಸರ್ಕಾರ ಅದರ ಸಾಧಕ-ಬಾಧಕಗಳನ್ನು ಅವಲೋಕಿಸಬೇಕಿತ್ತು. ಬಡವರ, ಮಧ್ಯಮವರ್ಗದವರ ಹಿತ ಕಾಪಾಡುತ್ತೇವೆ ಎಂದು 'ಭರವಸೆ ನೀಡುತ್ತ ಮತ್ತೊಂದು ಕಡೆ ಅವರಿಗೆ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತಿರುವುದು ವಿಷಾದನೀಯ. ಇನ್ನೂ ಕಾಲ ಮಿಂಚಿಲ್ಲ. ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಿ, ಜನರಿಗೆ ಹೊರೆಯಾಗದಂತೆ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ನಿಗದಿ ಪಡಿಸುವುದು ಸೂಕ್ತ.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೦೩-೦೯-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ