ಬೆಳಕಿನ ದಾರಿ ತೋರುವವರಾರು...?
ಸ್ವಾತಂತ್ರ್ಯ ಬಂದು ಸುಮಾರು 74 ವರ್ಷಗಳ ನಂತರ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ನಿಜವಾದ ಉಪಯೋಗ/ ದುರುಪಯೋಗ… ರಾಜಕಾರಣಿಗಳು - ಧರ್ಮಾಧಿಕಾರಿಗಳು - ಸಾಹಿತಿಗಳು - ಪತ್ರಕರ್ತರು - ವಿಚಾರವಾದಿಗಳು - ಸಂಸ್ಕಾರವಂತರು ಮುಂತಾದವರಿಂದ ಸ್ವಚ್ಚಂದ ಭಾಷಾ ಪ್ರಯೋಗ… ಭಾಷೆಯಲ್ಲಿ ಇದ್ದ ಕೆಟ್ಟ ಮತ್ತು ಒಳ್ಳೆಯ ಪದಗಳ ಅಂತರ ಇಲ್ಲವಾಗಿಸಿದ ಮಹತ್ಸಾಧನೆ.
ಸಂಪರ್ಕ ಕ್ರಾಂತಿಯ ಈ ದಿನಗಳಲ್ಲಿ ನಮ್ಮ ಮಕ್ಕಳು ಇದರಿಂದ ಪ್ರಭಾವ ಹೊಂದಿ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಎಲ್ಲಾ ಸಾಧ್ಯತೆ ಇದ್ದರೂ, ಒಬ್ಬ ಹುಚ್ಚ ಮಂತ್ರಿ ಸಾರ್ವಜನಿಕವಾಗಿ ಒಂದು ಅತ್ಯುತ್ತಮ ಭಾಷಾ ಪ್ರಯೋಗ. ಅದಕ್ಕೆ ಮತ್ತಷ್ಟು ನಾಯಕರ ಇನ್ನೊಂದಿಷ್ಟು ಹುಚ್ಚು ಭಾಷಾ ವಿರೋಧ. ಅದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಉತ್ಕೃಷ್ಟ ಭಾಷಾ ಪ್ರಯೋಗದ ಪ್ರತಿಕ್ರಿಯೆ. ಅದನ್ನು ಮಾಧ್ಯಮಗಳು ಜನರಿಗೆ ಮತ್ತಷ್ಟು ಸ್ಪಷ್ಟವಾಗಿ ಅರ್ಥಮಾಡಿಸಲು ಸಾವಿರಾರು ಸಲ ಮತ್ತೆ ಮತ್ತೆ ಪ್ರಸಾರ.
ನಾವು ಚಿಕ್ಕ ವಯಸ್ಸಿನಿಂದ ಕಲಿತುಕೊಂಡು ಬಂದಿದ್ದ ಭಾಷಾ ಸಂಸ್ಕಾರದ ಸಭ್ಯತೆ ಸಂಯಮ ತಟ್ಟನೆ ಮಾಯಾ. ಕೂಗಾಟ ಹಾರಾಟ ಒದರಾಟಗಳೇ ಮಾಧ್ಯಮ ಲೋಕದ ಹೊಸ ಆಕರ್ಷಕ ಭಾಷೆ. ಕೋಗಿಲೆಯ ಕುಹೂ ಕುಹೂ ಗಾನ ಕೇಳಿ ಆನಂದಿಸುವವರಿಲ್ಲ. ಹುಚ್ಚು ನಾಯಿ ಬೊಗಳಿದರೆ ಸಾವಿರಾರು ನಾಯಿಗಳು ಅದಕ್ಕಿಂತಲೂ ಜೋರಾಗಿ ಬೊಗಳುವ ಹೊಸ ವ್ಯವಸ್ಥೆಯಲ್ಲಿ ನಾವಿದ್ದೇವೆ. ಹುಚ್ಚು ನಾಯಿಗೆ ಮಹತ್ವ ಕೊಡಬೇಕೋ ಅಥವಾ ಕೋಗಿಲೆಗೋ ಎಂಬ ಸೂಕ್ಷ್ಮ ಈಗ ಉಳಿದಿಲ್ಲ. ಸಂಜೆಯ ಚರ್ಚಾ ಕಾರ್ಯಕ್ರಮಕ್ಕೆ ಹುಚ್ವು ನಾಯಿಯೇ ಆಹಾರ. ಕೋಗಿಲೆಯ ಧ್ವನಿ ಕರ್ಕಶ. ಅಗೋ ಅಲ್ಲಿ ನೋಡಿ, ನಿಮ್ಮ ಪಕ್ಕದಲ್ಲೇ ಆ ಎಳೆಯ ಕಂದ ತಾಯ ಎದೆ ಹಾಲು ಚೀಪುತ್ತಾ ಪಿಳಿಪಿಳಿ ಕಣ್ಣು ಬಿಡುತ್ತಾ ನಿಮ್ಮನ್ನು ನೋಡುತ್ತಿದೆ. ಅದಕ್ಕಿನ್ನೂ ಮಾತು ಬರುತ್ತಿಲ್ಲ. ಅದಕ್ಕೆ ಯಾವ ಭಾಷೆ ಕಲಿಸುತ್ತೀರಿ.
ಒಂದು ಮಾತನ್ನು ಸ್ಪಷ್ಟವಾಗಿ ನೆನೆಪಿಡಿ. ಯಾರದೇ ಆಗಲಿ " ಬೈಗುಳದ ಭಾಷೆ ಆಡುವವನ ಯೋಗ್ಯತೆಯನ್ನು ಪ್ರತಿನಿಧಿಸುತ್ತದೆಯೇ ಹೊರತು ಹೇಳಿಸಿಕೊಂಡವನ ಯೋಗ್ಯತೆಯನ್ನಲ್ಲ." ವೇಶ್ಯೆ ಎಂಬ ತಾಯ್ತನದ ಹೆಣ್ಣು ತನ್ನ ಅನಿವಾರ್ಯತೆಗೆ ತನ್ನ ದೇಹವನ್ನು ದುಡಿಸಿಕೊಂಡು ಜೀವಿಸಬಹುದು. ಅದು ಸೃಷ್ಟಿಯ ಮೂಲದಿಂದ ಆಕೆಯ ಸ್ವಾತಂತ್ರ್ಯವೂ ಹೌದು. ಆದರೆ ಇದೇ ಸಮಾಜದಲ್ಲಿ ಬೇರೆಯವರ ದೇಹವನ್ನು ತನ್ನ ಸುಖಕ್ಕಾಗಿ ಅಡವಿಟ್ಟು ಜೀವಿಸುತ್ತಿರು ಕಿರಾತಕರು ನಮ್ಮ ನಡುವೆಯೇ ಇದ್ದಾರೆ ಮತ್ತು ನಮ್ಮಿಂದಲೇ ಗೌರವವನ್ನೂ ಪಡೆಯುತ್ತಿದ್ದಾರೆ.
ಆದ್ದರಿಂದ ಹುಚ್ಚು ನಾಯಿಗಳು ಬೊಗಳುವುದನ್ನು ತಡೆಯುವ ಸಾಮರ್ಥ್ಯ ಸದ್ಯ ನಮಗಿಲ್ಲ. ಅದನ್ನು ನಾಶ ಮಾಡಲೂ ಈ ಕ್ಷಣಕ್ಕೆ ಸಾಮಾನ್ಯರಾದ ನಮಗೆ ಆಗುವುದಿಲ್ಲ. ಏಕೆಂದರೆ ಇಡೀ ವ್ಯವಸ್ಥೆಯೇ ಹುಚ್ಚು ಹಿಡಿದಂತೆ ಆಡುತ್ತಿದೆ. ಆದರೆ ನಾಗರಿಕ ಪ್ರಜ್ಞೆಯ ಸಭ್ಯತೆ ಸಂಯಮ ನಮ್ಮಲ್ಲಿ ಅಳವಡಿಸಿಕೊಂಡರೆ ಅದೇ ಹುಚ್ಚು ನಾಯಿ ಕಚ್ಚುವುದಕ್ಕೆ ನಾವು ತೆಗೆದುಕೊಳ್ಳಬಹುದಾದ ಎಚ್ಚರಿಕೆಯ ರೇಬೀಸ್ ಚುಚ್ಚುಮದ್ದಿನ ಚಿಕಿತ್ಸೆ. ಅದರಿಂದ ನಾವು ಸುರಕ್ಷಿತವಾಗುತ್ತೇವೆ.
ಹುಚ್ಚು ನಾಯಿ ದೀರ್ಘಕಾಲ ಬದುಕದೇ ತನ್ನಿಂದ ತಾನೇ ಸಾಯುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯ - ಮಾಧ್ಯಮ ಸ್ವಾತಂತ್ರ್ಯ ಮತ್ತು ಚರ್ಚಾ ವಿಧಾನಗಳನ್ನು ಪುನರ್ ರೂಪಿಸಬೇಕಾದ ಅವಶ್ಯಕತೆ ಕಾಣುತ್ತಿದೆ. ಅದು ಸಾಂವಿಧಾನಿಕ ನೆಲೆಯಲ್ಲಿ ಅಲ್ಲ. ನೈತಿಕ ನಾಗರಿಕ ಪ್ರಜ್ಞೆಯ ಆಧಾರದಲ್ಲಿ. ಏಕೆಂದರೆ,
ಎಲ್ಲಿ ಪ್ರಜ್ಞಾವಂತ ಬುದ್ದಿವಂತ ಮತದಾರರು ಇರುತ್ತಾರೋ ಅಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಹಾಗೆಯೇ ವಾಕ್ ಸ್ವಾತಂತ್ರ್ಯ ಯಶಸ್ವಿಯಾಗಲೂ ಇದು ಮುಖ್ಯ. ಪ್ರಜ್ಞಾವಂತ ನಾಗರಿಕರಿಗೆ ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳು ಮತ್ತು ಜವಾಬ್ದಾರಿಯ ಅರಿವಿರುತ್ತದೆ. ಅದು ಇಲ್ಲದೇ ಇದ್ದಾಗ ಆ ನೆಲ ಭಾರತವಾಗುತ್ತದೆ. ಭಾರತದಲ್ಲಿ ಅಪ್ರಬುದ್ದ ಅನಾಗರಿಕ ಅಜ್ಞಾನಿಗಳ ಸಂಖ್ಯೆಯೇ ಹೆಚ್ಚಾಗಿರುವುದರಿಂದ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಪರಿವರ್ತನೆಯಾಗಿದೆ. ಬೇಕಾದರೆ ಗಮನಿಸಿ,
ಹಣ ಜಾತಿ ಧರ್ಮ ಮತ್ತು ತೋಳ್ಬಲದ ಆಧಾರದಲ್ಲಿ ಒಬ್ಬ ನಟೋರಿಯಸ್ ಕ್ರಿಮಿನಲ್ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಬಹುದು. ಅದೇ ಒಬ್ಬ ದಕ್ಷ ಸಂಭಾವಿತ ನಿಸ್ವಾರ್ಥ ಸಮಾಜ ಸೇವಕ ಅದ್ಯಾವುದೂ ಇಲ್ಲದೆ ಠೇವಣಿ ಉಳಿಸಿಕೊಳ್ಳುವುದೂ ಸಾಧ್ಯವಿಲ್ಲ. ಅದೇ ರೀತಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಬುದ್ದತೆ ಮತ್ತು ಅರಿವಿನ ಕೊರತೆಯಿಂದ ಅತ್ಯಂತ ಅಪಾಯಕಾರಿ ಮತ್ತು ಹಾನಿಕಾರಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಸಮಾಜಕ್ಕೆ ಮತ್ತು ಸ್ವತಃ ತಮ್ಮಹಿತಕ್ಕೇ ವಿನಾಶಕಾರಿಯಾಗಿ ವರ್ತಿಸುತ್ತಾರೆ.
ನಮ್ಮ ಇನ್ನೊಂದು ವೈಶಿಷ್ಟ್ಯವೆಂದರೆ ಇಲ್ಲಿನ ವಿಭಿನ್ನತೆ ವೈವಿಧ್ಯತೆ ಮತ್ತು ಅಸಮಾನತೆ. ಆ ಕಾರಣಕ್ಕಾಗಿ ಇಡೀ ದೇಶಕ್ಕೆ ಅನ್ವಯಿಸುವ ಸಾಮಾನ್ಯ ನಿಯಮಗಳೂ ಅಷ್ಟೊಂದು ಪರಿಣಾಮಕಾರಿಯಾಗಿ ಜಾರಿಯಾಗುವುದಿಲ್ಲ. ಅದರ ದುರುಪಯೋಗವೇ ಹೆಚ್ಚು. ಅಪಾರ್ಥಗಳು ಇನ್ನೂ ಹೆಚ್ಚು.
ಒಂದು ಸಣ್ಣ ಉದಾಹರಣೆ. ಒಬ್ಬನು ಸಕ್ಕರೆ ಸಿಹಿ ಎಂದರೆ ಮತ್ತೊಬ್ಬ ಇಲ್ಲ ಅದು ಕಹಿ ಎನ್ನುತ್ತಾನೆ. ಸ್ವಲ್ಪ ತಿಳುವಳಿಕೆ ಮೂಡಿಸಲು ಪ್ರಯತ್ನಿಸಿದರೆ ನನಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ನಮ್ಮ ಮನೆಯ ಸಕ್ಕರೆ ಕಹಿಯೇ ಎಂದು ವಾದಿಸುತ್ತಾನೆ. ಅಲ್ಲಿಂದ ಮುಂದೆ ಮಾತನಾಡುವುದು ಕಷ್ಟ. ಏನು ಮಾಡುವುದು. ಎಲ್ಲರಿಗೂ ಶಾಂತಿ ಬೇಕು ಎಲ್ಲರಿಗೂ ನೆಮ್ಮದಿ ಬೇಕು ಎಲ್ಲರಿಗೂ ಸುಖ ಸಂತೋಷ ಬೇಕು. ಆದರೆ ಅದನ್ನು ಪಡೆಯುವ ಮಾರ್ಗ ಅರಿಯದೆ ಕತ್ತಲಲ್ಲೇ ಅದನ್ನು ಹುಡುಕುತ್ತಾ ದಾರಿ ತಪ್ಪಿ ಪ್ರಪಾತಕ್ಕೆ ಬೀಳುತ್ತಿದ್ದೇವೆ. ಬೆಳಕಿನ ದಾರಿ ತೋರುವವರಾರು..?.
- ಜ್ಞಾನ ಭಿಕ್ಷಾ ಪಾದಯಾತ್ರೆಯ 267 ನೆಯ ದಿನ ಉಡುಪಿ ಜಿಲ್ಲೆಯ ನಾವುಂದ ಗ್ರಾಮದಲ್ಲಿಯೇ ಗೆಳೆಯರೊಂದಿಗೆ ಚರ್ಚಿಸುತ್ತಾ ಕಳೆಯಿತು. ಆ ಸಮಯದಲ್ಲಿ ಬರೆದ ಬರಹ.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ