ಬೆಳಕಿನ ಹಬ್ಬ ದೀಪಾವಳಿ...
ಎಷ್ಟೊಂದು ಸುಂದರ ಸಂದೇಶಗಳು,ಎಷ್ಟೊಂದು ಮನಮೋಹಕ ಶುಭಾಶಯಗಳು, ಎಷ್ಟೊಂದು ಅದ್ಭುತ ಕಾವ್ಯ ರಚನೆಗಳು, ಎಷ್ಟೊಂದು ಅರ್ಥಪೂರ್ಣ ವರ್ಣನೆಗಳು, ಆದರೆ,..
ಇವು ಪದಗಳಲ್ಲಿ ಮಾತ್ರ ಮೂಡಿದರೆ ಸಾಕೆ ? ಇವು ಮನಸ್ಸಿನಾಳಕ್ಕೆ ಇಳಿಯುವುದೆಂದು ? ವಾಸ್ತವ ನಡವಳಿಕೆಯಾಗಿ ಪರಿವರ್ತನೆ ಹೊಂದುವುದೆಂದು? ಅವು ಪ್ರಾಯೋಗಿಕ ಆಚರಣೆಗಳಾಗುವುದೆಂದು? ಇವು ಕೇವಲ ಉಪಯೋಗವಿಲ್ಲದ ಭಾವನಾತ್ಮಕ ಬರಹಗಳೇ ? ಅರ್ಥ ಕಳೆದುಕೊಂಡ ನಿರ್ಜೀವ ಅಕ್ಷರಗಳೇ ? ಕತ್ತಲನ್ನು ಅಜ್ಞಾನಕ್ಕೂ ಬೆಳಕನ್ನು ಜ್ಞಾನಕ್ಕೂ ಹೋಲಿಸಲಾಗುತ್ತದೆ, ಕತ್ತಲನ್ನು ದುಷ್ಟತನಕ್ಕೂ ಬೆಳಕನ್ನು ಒಳ್ಳೆಯತನಕ್ಕೂ ಉದಾಹರಿಸಲಾಗುತ್ತದೆ. ಹೌದು, ಆದರೆ ಅದು ಆಗುವುದು ಯಾವಾಗ?
ತಲತಲಾಂತರದಿಂದ ಆಚರಿಸುತ್ತಿರುವ ಈ ಹಬ್ಬದಲ್ಲಿ ನಾವು ನಮ್ಮ ಅಜ್ಞಾನವನ್ನು ತೊರೆದು ಜ್ಞಾನಿಗಳಾಗುತ್ತಿಲ್ಲವೇಕೆ ? ಒಂದು ವೇಳೆ ಯಾರಾದರೂ ನಾವು ಜ್ಞಾನಿಗಳಾಗಿದ್ದೇವೆ ಎಂದು ಭಾವಿಸುವುದಾದರೆ ಸಂತೋಷ. ನಿಮಗೆ ಧನ್ಯವಾದಗಳು. ಆದರೆ, ನಾನು ಈಗ ವಾಸಿಸುತ್ತಿರುವ ಸಮಾಜದ ಜನರ ಬದುಕನ್ನು ಗಮನಿಸಿದರೆ ನನಗೆ ಹಾಗೆ ಅನಿಸುತ್ತಿಲ್ಲ. ನಿಜ, ಕಂಪ್ಯೂಟರ್ ಬಂದಿದೆ, ವಾಟ್ಸಾಪ್ ಪೇಸ್ ಬುಕ್, ಟ್ವಿಟರ್ ಬಂದಿದೆ, ಮೆಟ್ರೋ ಬಂತು, ರಾಕೆಟ್ ಬಂತು,ಅತ್ಯುತ್ತಮ ಕಾರು ಬೈಕು ಮಾಲ್ ಗಳು ಎಲ್ಲಾ ಬಂದಿದೆ, ಇವೆಲ್ಲವೂ ಮನುಷ್ಯನೇ ಸಂಶೋದಿಸಿದ ತಾಂತ್ರಿಕ ಸಾಧನೆಗಳು. ಇದಕ್ಕಾಗಿ ಹೆಮ್ಮೆ ಪಡೋಣ. ಆದರೆ...
ನಿರ್ಜೀವ ವಸ್ತುಗಳ ವಿಜೃಂಭಣೆಯಲ್ಲಿ ಮರೆಯಾಗುತ್ತಿರುವ ಸಜೀವ ಮೌಲ್ಯಗಳ ನೆನಪಿದೆಯೇ, ವಿಷವಾಗುತ್ತಿರುವ ಗಾಳಿ ನೀರು ಆಹಾರ ಬಿಡಿ, ಮನುಷ್ಯ ಸಂಬಂದಗಳೇ ವ್ಯಾಪಾರಿಕರಣವಾಗುತ್ತಿವೆ. ಸ್ವಂತ ಅಣ್ಣ, ತಮ್ಮ, ಅಕ್ಕ, ತಂಗಿ, ಆಸ್ತಿ ಹಂಚಿಕೆಗಾಗಿ ಶತ್ರುಗಳಾಗಿ ಬಹಳ ಕಾಲವಾಯಿತು. ಜಮೀನುಗಳ ಬೆಲೆಯೇರಿಕೆಯೊಂದಿಗೆ ರಕ್ತಸಂಬಂಧಿಗಳ ವಿಶ್ವಾಸ ದ್ರೋಹಗಳು ದಿನನಿತ್ಯದ ಕಸುಬಾಯಿತು. ಹಣಕ್ಕಾಗಿ ಕೊಲೆ ಸುಲಿಗೆಗಳು, ಗಂಡು ಹೆಣ್ಣುಗಳೆಂಬ ಬೇದವಿಲ್ಲದೆ ಹವ್ಯಾಸಿ ವೃತ್ತಿಗಳಾದವು.
ಮಾಧ್ಯಮಗಳಲ್ಲಿ ಅಪರಾಧದ ಕಾರ್ಯಕ್ರಮಗಳೇ ಬಹುಬೇಡಿಕೆಯ ಬಹುಲಾಭದಾಯಕ ಸುದ್ದಿಗಳಾದವು. ಎಲ್ಲೋ ಯಾರೋ ಒಬ್ಬರೋ ಇಬ್ಬರೋ ಪ್ರಾಮಾಣಿಕರನ್ನು ಹಿಡಿದುಕೊಂಡು ಬಂದು ಹಾರ ಹಾಕಿ ಪ್ರಶಸ್ತಿ ನೀಡಿ ಹಾಡಿ ಹೊಗಳಿ ಸನ್ಮಾನಿಸಿ ಕಳಿಸುವ ಸ್ಥಿತಿ ಬಂದಿದೆ. ಆತ್ಮವಂಚಕ ಮನಸ್ಥಿತಿಯ ಲಫಂಗರೇ ಆಡಳಿತದ ಮುಖ್ಯವಾಹಿನಿಗೆ ಬಂದು ಎಲ್ಲವನ್ನೂ ಆಕ್ರಮಿಸಿಕೊಂಡಿದ್ದಾರೆ. ಹಾಗಾದರೆ ಈ ಬೆಳಕಿನ ಹಬ್ಬದ ಮಹತ್ವ ಕೇವಲ ಸಿಹಿತಿಂದು ಪಟಾಕಿ ಹಚ್ಚುವುದು ಮಾತ್ರವೇ. ಪರಿವರ್ತನೆ ಆಗದೆ ಜ್ಞಾನದ ಬೆಳಕನ್ನು ಕಾಣದೆ ಇನ್ನೆಷ್ಟುದಿನ ಹೀಗೆ ಕಾಟಾಚಾರದ ಹಬ್ಬ ಆಚರಿಸುವುದು. ಎಚ್ಚೆತ್ತುಕೊಳ್ಳೋಣ, ಈಗಲಾದರೂ...
ಹಬ್ಬಗಳನ್ನು ಅದರ ನಿಜ ಅರ್ಥದಲ್ಲಿ ಆಚರಿಸಿ ಅಳವಡಿಸಿಕೊಳ್ಳೋಣ. ಇದು ಅಸಾಧ್ಯವೇನಲ್ಲ. ಜೀವನ ಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಸಾಕು. ನುಡಿದಂತೆ ನಡೆಯುವ ಒಳ್ಳೆಯ ನಡವಳಿಕೆ ರೂಪಿಸಿಕೊಳ್ಳೋಣ. ಹಾಗೆಯೇ… ಪಟಾಕಿ ಮಾಲಿನ್ಯದ ಬಗ್ಗೆ ಎಚ್ಚರ. ನ್ಯೆಸರ್ಗಿಕವಾಗಿ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ ಪಟಾಕಿ. ನೈತಿಕವಾಗಿ ಅನಧಿಕೃತ ಕೊಲೆಗಡುಕನಂತೆ ಕೆಲಸ ಮಾಡುತ್ತದೆ ಪಟಾಕಿ. ಅತಿ ಹೆಚ್ಚು ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವ ಉದ್ಯಮ ಪಟಾಕಿ,
ಭಯಂಕರ ರೋಗಗಳಿಗಿಂತ ಬೇಗ ಅನಿರೀಕ್ಷಿತ ಸಾವು ತರುತ್ತದೆ ಪಟಾಕಿ. ಸಿಡಿಮದ್ದು ಸಿಡಿಸಿ, ಪರಿಸರ ನಾಶಪಡಿಸಿ, ಸಂಭ್ರಮಿಸಿ ಮಾಡಿಕೊಳ್ಳವ ಪರೋಕ್ಷ ಆತ್ಮಹತ್ಯೆ ಪಟಾಕಿ, ಬಗಲಲ್ಲಿ ಸಿಡಿಮದ್ದು ಇಟ್ಟುಕೊಂಡು, ಸುರಕ್ಷತೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ, ನಾಟಕ ಮಾಡುವ, ಆತ್ಮ ವಂಚನೆ ಮಾಡಿಸುತ್ತದೆ ಪಟಾಕಿ, ಚಿಕ್ಕಮಕ್ಕಳನ್ನು ಹೆದರಿಸುತ್ತದೆ, ವಯಸ್ಸಾದವರಿಗೆ ಕಿರಿಕಿರಿ ಮಾಡುತ್ತದೆ, ಮಹಿಳೆಯರಿಗೆ ಇಷ್ಟವಾಗುವುದಿಲ್ಲ. ಮೂಕ ಪ್ರಾಣಿಗಳನ್ನು ಓಡಿಸುತ್ತದೆ, ಪಕ್ಷಿಗಳಿಗೆ ಪ್ರಾಣಭಯ ಉಂಟು ಮಾಡುತ್ತದೆ ಪಟಾಕಿ...
ಕ್ಷಣಮಾತ್ರದಲ್ಲಿ ಯಾವುದೇ ಉಪಯೋಗವಿಲ್ಲದೆ ಕೋಟ್ಯಾಂತರ ಹಣ ನೀರ ಮೇಲಿನ ಹೋಮದಂತೆ ಕರಗಿಸಿ ಹೊಗೆ ಉಗುಳುವ ಶಕ್ತಿ ಇರುವುದೇ ಪಟಾಕಿ. ಪುಂಡ ಪೋಕರಿಗಳ ಚೆಲ್ಲಾಟಕ್ಕೆ ಬೇಕು ಪಟಾಕಿ, ಪುಢಾರಿಗಳ, ಬಕೆಟ್ ರಾಜಕಾರಣಿಗಳ ಪ್ರದರ್ಶನಕ್ಕೆ ಬೇಕು ಪಟಾಕಿ, ಹಬ್ಬ, ಉತ್ಸವ, ಕ್ರಿಕೆಟ್ ನ ಅಂಧಾಭಿಮಾನಿಗಳಿಗೆ ಬೇಕು ಪಟಾಕಿ, ಬಡತನ, ಶೊಷಣೆ, ಬೂಟಾಟಿಕೆಯ ಸಂಕೇತ ಪಟಾಕಿ, ಶಾಸ್ತ್ರ, ಸಂಪ್ರದಾಯ, ಸಂಸ್ಕೃತಿ ಹೆಸರಿನ ದುರುಪಯೋಗ ಪಟಾಕಿ, ಮೌಢ್ಯ, ಅಜ್ಞಾನ, ಡಾಂಬಿಕತನ, ಉಢಾಪೆಗಳ ಪ್ರದರ್ಶನ ಪಟಾಕಿ, ಕೇವಲ ಕೆಲವು ಜನರಿಗೆ ಉದ್ಯೋಗ ನೀಡಿದೆ ಮತ್ತು ಅವರ ಆರ್ಥಿಕ ಚ್ಯೆತನ್ಯಕ್ಕೆ, ದಾರಿ ಮಾಡಿಕೊಟ್ಟಿದೆ ಎಂಬು ಒಂದು ಒಳ್ಳೆಯ ಅಂಶ ಬಿಟ್ಟರೆ, ಅತ್ಯಂತ, ಅಪಾಯಕಾರಿ ಆಚರಣೆ ಈ ಪಟಾಕಿ ಸುಡುವುದು.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿ,ಇದಕ್ಕಾಗಿ ವಿಶೇಷ ಹೆಚ್ಚುವರಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಎಂದರೆ ಇದರ ಭಯಂಕರ ಹಾವಳಿ ಊಹಿಸಿ, ಮಕ್ಕಳು ಕಣ್ಣು ಕಳೆದುಕೊಳ್ಳುವ, ದೇಹ ಸುಟ್ಟುಕೊಳ್ಳುವ ದೃಶ್ಯ ನೆನಪಿಸಿಕೊಳ್ಳಿ. ಆದರೂ ಇದನ್ನು ಬಹಿಷ್ಕರಿಸಿಲ್ಲ ನಮ್ಮ ನಾಗರಿಕ ಸಮಾಜ, ಆದರೂ ಇದನ್ನು ನಿಷೇದಿಸಿಲ್ಲ ನಮ್ಮನ್ನಾಳುವ ಸರ್ಕಾರ,
ಮೊಸಳೆ ಕಣ್ಣೀರು ಮಾತ್ರ ಎಲ್ಲರಿಂದ, ಸಮರ್ಥನೆ ಬೇರೆ ಕೆಲವರಿಂದ, ಪಟಾಕಿ ವಿಷಯದಲ್ಲಿ ಸುರಕ್ಷತೆ ಎಂಬುದು ಸಧ್ಯಕ್ಕೆ ನಮ್ಮ ದೇಶದಲ್ಲಿ ಭ್ರಮೆ ಅಷ್ಟೆ, ಈ ಪಟಾಕಿ ಸಾವು ನಿನ್ನೆ ಮೊನ್ನೆಯದಲ್ಲ, ನಮ್ಮ ಮೂರ್ಖ ಸಂಭ್ರಮಕ್ಕೆ ಕಾರ್ಮಿಕರ ಬಲಿದಾನ ಪ್ರತಿವರ್ಷ ನಿರಂತರ, ಮಾನವೀಯ ದೃಷ್ಟಿಯಿಂದ ಪಟಾಕಿ ಅವಲಂಬಿತರಿಗೆ ಪರಿಹಾರ ನೀಡಿ ಇದನ್ನು ನಿಲ್ಲಿಸಿ, ಸತ್ತ ಮೇಲೆ ಪರಿಹಾರ ನೀಡುವ ಪರಿಪಾಠ ನಿಲ್ಲಿಸಿ.
ಬೆಳಕಿನ ಹಬ್ಬ ಕೆಲವರ ಪಾಲಿಗೆ ಕತ್ತಲಾಗುವುದು ಬೇಡ. ಹಬ್ಬದ ಸಂಭ್ರಮ ಎಲ್ಲರಿಗೂ ಸುಖ ಸಂತೋಷ ತರಲಿ. ಪಟಾಕಿಗೆ ಅನುಕೂಲಕರ ಪರ್ಯಾಯ ಮಾರ್ಗ ಹುಡುಕೋಣ. ಇದು ಧರ್ಮದ - ಸಂಪ್ರದಾಯದ ವಿಷಯ ಅಲ್ಲ. ನಮ್ಮದೇ ಪ್ರಕೃತಿಯ ರಕ್ಷಣೆಯ ವಿಷಯ. ಹಿಂದೆ ಜನಸಂಖ್ಯೆ ಕಡಿಮೆ ಇತ್ತು. ಜನರ ಕೊಳ್ಳುವ ಶಕ್ತಿ ಅಷ್ಟಾಗಿ ಇರಲಿಲ್ಲ. ಗಿಡಮರಗಳು ಯಥೇಚ್ಛವಾಗಿದ್ದವು. ಆಗ ಪಟಾಕಿ ಒಂದು ಸಂಭ್ರಮವಾಗಿತ್ತು. ಈಗ ಉಸಿರಾಡುವ ಗಾಳಿಯೇ ವಿಷವಾಗಿರುವಾಗ ಇದನ್ನು ಸಂಪ್ರದಾಯದ ಹೆಸರಲ್ಲಿ ಮುಂದುವರಿಸುವುದು ಬೇಡ, ಎಂದಿನಂತೆ ಮಣ್ಣಿನ ದೀಪ ಹಚ್ಚಿ ಆಚರಿಸೋಣ.
ಪಟಾಕಿ ನಿಷೇಧ ಕೇವಲ ದೀಪಾವಳಿಗೆ ಮಾತ್ರವಲ್ಲ, ಯಾವುದೇ ಧರ್ಮದ ಯಾವುದೇ ಆಚರಣೆಗಳ ಎಲ್ಲಾ ಸಂದರ್ಭಕ್ಕೂ ಅನ್ವಯಿಸಬೇಕು. ಇತರೆ ಧರ್ಮದ ಕೆಲವು ಆಚರಣೆಗಳು ಪರಿಸರ ನಾಶ ಎಂದಾದರೆ ಮುಲಾಜಿಲ್ಲದೆ ಅದನ್ನು ನಿಷೇಧಿಸಬೇಕು. ಪರಿಸರ ರಕ್ಷಣೆಯ ವಿಷಯ ಧರ್ಮ ರಕ್ಷಣೆಗಿಂತ ಬಹುಮಖ್ಯ. ನಾವು ಆರೋಗ್ಯವಾಗಿದ್ದರೆ ಮಾತ್ರ ಉಳಿದದ್ದೆಲ್ಲ ಅಲ್ಲವೇ. ಆದ್ದರಿಂದ ಈ ಬಾರಿ ಕನಿಷ್ಠ ನಮ್ಮ ಮಿತಿಯಲ್ಲಿ ಸಾಧ್ಯವಾದಷ್ಟು ಪಟಾಕಿ ನಿಯಂತ್ರಿಸಿಕೊಳ್ಳೋಣ. ನಮ್ಮದೇ ಹಿತಕ್ಕಾಗಿ...
- 367 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಬೆಂಗಳೂರು ಜಿಲ್ಲೆಯ ಕೋಣನಕುಂಟೆ ಗ್ರಾಮದಿಂದ ಜೆ ಪಿ ನಗರ ಜಯನಗರ ಚಾಮರಾಜಪೇಟೆ ಮಾರ್ಗವಾಗಿ ಬಸವನಗುಡಿ ಗಾಂಧಿ ಬಜಾರ್ ತಲುಪಿತು. ಸುಮಾರು 12 ಕಿಲೋಮೀಟರ್ ದೂರದ ಹಾದಿ ಕ್ರಮಿಸಿದಂತಾಯಿತು. ಇಂದು 3/11/2021 ಬುಧವಾರ 368 ನೆಯ ದಿನ ನಮ್ಮ ಕಾಲ್ನಡಿಗೆ ಬೆಂಗಳೂರು ನಗರದ ವಿಜಯನಗರ ಮಾಗಡಿ ರೋಡ್ ರಾಜಾಜಿನಗರ ಮಲ್ಲೇಶ್ವರಂ ಮಾರ್ಗವಾಗಿ ಯಶವಂತಪುರ ಮತ್ತು ಪೀಣ್ಯ ತಲುಪಲಿದೆ. ನಾಳೆ 4/11/2021 ಗುರುವಾರ 369 ನೆಯ ದಿನ ಯಲಹಂಕ ಕಡೆಗೆ...
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ: ಇಂಟರ್ನೆಟ್ ತಾಣದ ಕೃಪೆ