ಬೆಳಕುಗಳ ಹಬ್ಬ ದೀಪಾವಳಿ

ಬೆಳಕುಗಳ ಹಬ್ಬ ದೀಪಾವಳಿ

 

     ಹಬ್ಬಗಳು ಜಾಗತಿಕ ಮತ್ತು ಸಾರ್ವಕಾಲಿಕ.ಇವು ಎಂದಿನಿಂದ ಆಚರಣೆಗೆ ಬಂದವು ಎಂದು ಖಚಿತವಾಗಿ ಹೇಳುವುದು ಕಷ್ಟ. ಇವುಗಳನ್ನು ಸಾಮಾಜಿಕ ದಾರ್ಮಿಕ ಪ್ರಾಕೃತಿಕ ಮತ್ತು ರಾಷ್ಟ್ರೀಯ ಹಬ್ಬಗಳೆಂದು ಸ್ಥೂಲವಾಗಿ ವಿಂಗಡಿಸ ಬಹುದು. ಇನ್ನು ನಮ್ಮ ದೇಶದ ಕುರಿತು ಹೇಳುವುದಾದರೆ  ಹಬ್ಬಗಳ ಆಚರಣೆಗೆ ಹಲವು ಸಹಸ್ರ ವರ್ಷಗಳ ಪರಂಪರೆಯಿದೆ.ಮಾನವ ಅನಾಗರೀಕತೆಯಿಂದ ನಾಗರೀಕತೆಯೆಡೆಗೆ ಸಾಗಿದಂತೆ ತನ್ನ ಸಂತಸಕ್ಕಾಗಿ ಮತ್ತು ಪ್ರಕೃತಿಯನ್ನು ಆರಾಧಿಸುವ ಕಾರಣಗಳಿಂದ ಹಬ್ಬಗಳ ಆಚರಣೆ ಮೊದಲಿಟ್ಟಿರಬವಹುದು. ನಮ್ಮಲ್ಲಿ ಋತುಮಾನಗಳನ್ನು ಅನುಸರಿಸಿ ಹಬ್ಬಗಳು ಆಚರಣೆಗೊಳ್ಳುತ್ತ ಬಂದಿವೆ ಎನ್ನ ಬಹುದು. ಅವುಗಳಲ್ಲಿ ಪ್ರಮುಖವಾದ ಹಬ್ಬಗಳೆಂದರೆ ನವರಾತ್ರಿ ದೀಪಾವಳಿ ಯುಗಾದಿ ಎಂದು ಹೆಸರಿಡಸಬಹುದು. ಇವುಗಳ ಆಚರಣೆಯಲ್ಲಿ  ಪ್ರಾದೇಶಿಕ ಭಿನ್ನತೆಗಳಿವೆ. ನವರಾತ್ರಿ ಹಬ್ಬಕ್ಕೆ ಪಶ್ಚಿಮ ಬಂಗಾಳ ಪ್ರಸಿದ್ಧವಾದರೆ, ದೀಪಾವಳಿ ಉತ್ತರ ಭಾರತದ ಪ್ರಸಿದ್ಧ ಹಬ್ಬ. 

     ಇನ್ನು ಹಬ್ಬಗಳ ಆಚರಣೆ ಕುರಿತು ಕರ್ನಾಟಕದ ಮಟ್ಟಿಗೆ ಯೋಚಿಸುವುದಾದರೆ ನವರಾತ್ರಿ ಹಬ್ಬ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವೈಭವದಿಂದ ಆಚರಿಸಲ್ಪಡುತ್ತಿತ್ತು. ವಿಜಯನಗರದ ಅವನತಿಯ ನಂತರ ಮೈಸೂರು ಅರಸರು ಇದರ ಆಚರಣೆಗೆ ತೊಡಗಿದರು. ವಿಜಯನಗರ ಸಾಮ್ರಾಜ್ಯದ ಅಧಃಪತನದ ನಂತರ ಉತ್ತರ ಕರ್ನಾಟಕ ಬಿಜಾಪುರದ ಆದಿಲ್ ಶಾಹಿಗಳು ನಂತರ ಶಿವಾಜಿ ಮತ್ತು ಪೇಶ್ವೆಗಳ ಆಡಳಿತಕ್ಕೊಳಪಟ್ಟವು. ಹೀಗಾಗಿ ದೀಪಾವಳಿ ಆಚರಣೆಯಲ್ಲಿ ಉತ್ತರ ಭಾರತದ ಸಂಪ್ರದಾಯಗಳು ಕಾಣಿಸಿಕೊಂಡವು. ದೀಪಾವಳಿಯನ್ನು ಕರ್ನಾಟಕದ ಎಲ್ಲೆಡೆ ಆಚರಿಸುತ್ತಾದರೂ  ಉತ್ರ ಕರ್ನಾಟಕದ ಆಚರಣೆಯ ರಿವಾಜುಗಳೆ ಬೇರೆ. 

     ಇಲ್ಲಿ ದೀಪಾವಳಿ ಅಮವಾಸ್ಯೆಗೆ ಮೊದಲಿನ ತ್ರತಯೋದಶಿಯಿಂದ ಪ್ರಾರಂಭವಾಗುವ ಹಬ್ಬ ಸುಮಾರು ಒಂದು ವಾರ ತನ್ಕ ನಡೆಯುತ್ತದೆ. ಅದು ಈಗ ಹಿಂದಿನ ವೈಭವ ಕಳೆದು ಕೊಂಡಿದೆಯೆಂದರೂ ತನ್ನ ಛಾಯೆಯುನ್ನು ಇನ್ನೂ ಉಳಿಸಿಕೊಂಡು ಬಂದಿದೆ. ' ಧನತ್ರಯೋದಶಿ' ಯಂದು ನೀರು ತುಂಬುವ ಹಬ್ಬ. ಆ ದಿನ ಬಚ್ಚಲು ಮನೆ ಮತ್ತು ಅಡುಗೆ ಮನೆಗಳನ್ನು ಗೂಡಿಸಿ ಸಾರಿಸಿ ಓರಣಗೋಳಿಸಿ ದೊಡ್ಡ ದೊಡ್ಡ ಹಂಡೆ ಮತ್ತೂ ನೀರಿನ ತೊಟ್ಟಿಗಳಿಗೆ ನೀರು ತುಂಬಿಸಿ ಸುಣ್ಣ ಮತ್ತು ಕೆಮ್ಮಣ್ಣಿನ ಎಳೆಗಳನ್ನು ಎಳೆದು ಅವುಗಳನ್ನು ಮಾಲಿಂಗನ ಬಳ್ಳಿ, ಹಿಂಡ್ಲಿಚ್ಚಿಕಾಯಿಯ ಬಳ್ಳಿ ಹೂವುಗಳಿಂದ ಸಿಂಗರಿಸಿ ಗವಲಿಯ ಪಾಯಸವನ್ನು ಮಾಡಿ ದೇವರಿಗೆ ನೈವೆದ್ಯಮಾಡಿ ಎಲ್ಲರೂ ಸಂಭ್ರಮದಿಂದ ಊಟ ಮಾಡುತ್ತಾರೆ. ಇದು ರಾತ್ರಿಯ ವೇಳೆ ಆಚರಿಸುವ ಹಜಬ್ಬ. 

     ನಂತರ ಮಾರನೇ ದಿನ ನರಕ ಚತುರ್ದಶಿ, ಈ ದಿನ ಬೆರಳಗಿನ ಜಾವ ಅರುಣೋದಯ ಕಾಲದಲ್ಲಿ ಮನೆಯ ಮುಂದೆ ಸಾರಿಸಿ ಗೂಡಿಸಿ ಸುಂದರವಾದ ರಂಗೋಲಿಗಳನ್ನು ಹಾಕಿ ಮನೆಯು ಮುಂದೆಗಡೆ ಬಣ್ಣ ಬಣ್ಣಗಳ ವಿವಿಧ ಆಕಾರಗಳ ಆಕಾಶಬುಟ್ಟಿಗಳಲ್ಲಿ ಎಣ್ಣೆಯ ದೀಪ ಹಚ್ಚಿಟ್ಟು ಮನೆಯ ಮುಂದೆ ಎತ್ತರದಲ್ಲಿ  ತೂಗು ಹಾಕುತ್ತಾರೆ, ಈಗ ಎಣ್ಣೆ ದೀಪದ  ಬದಲಾಗಿ ವಿದ್ಯತ್ ಬಲ್ಬ ಹಚ್ಚುತ್ತಾರೆ. ಬೆಳಿಗ್ಗೆ ಸಣ್ಣ ಸಣ್ಣ ಮಕ್ಕಳನ್ನು ಎಬ್ಬಿಸುತ್ತಾರೆ ಅವರಿಗೆ ಅಚ್ಚರಿಯೋ ಅಚ್ಚರಿ. ದೀಪಗಳ ಝಗಮಗ ರಂಗಾದ ಆಕಾಸಬುಟ್ಟಿ ಹೊಸ ಬಟ್ಟೆ ಬರೆ ಆರತಿ ಎಲ್ಲರಿಗೂ ವಿಶೇಷವಾಗಿ ಮನೆಯ ಮಕ್ಕಳಿಗೆ ಮತ್ತು ಹೆಂಗಳೆಯರಿಗೆ ಸಂಭ್ರಮವೋ ಸಂಬ್ರಮ. ಈ ದಿನ ಎಲ್ಲ ಮಕ್ಕಳೂ ಎಲ್ಲ ಮನೆಗಳಿಗೆ ಹೋಗಿ ಆರತಿಯಲ್ಲಿ ಪಾಲ್ಗೊಳ್ಳಬೇಕಿತ್ತು. ನಂತರ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಎಲ್ಲರ ಮನೆಗೆ ತಿಂಡಿಗೆ ಹೋಗುವುದು  ಅದಿನಗಳಲ್ಲಿ ಮಾಮೂಲಿಯಾಗಿತ್ತು. ಈಗ ಈ ಸಂಪ್ರದಾಯ ಕಡಿಮೆಯಾಗಿದೆ. 

     ನಂತರ ದೀಪಾವಳಿ ಅಮವಾಸ್ಯೆ. ಈ ದಿನದ ವಿಶೇಷ ಲಕ್ಷ್ಮಿಪೂಜೆ. ಈ ದಿನ ಎಲ್ಲರೂ ಮತ್ತು ವಿಶೇಷವಾಗಿ ವ್ಯಾಪಾರಸ್ಥರು ಅಛರಿಸುತ್ತಾರೆ. ಈ ದಿನ ಎಲ್ಲರನ್ನು ಪೂಜೆಗೆ ಕರೆದು ಅಂಗಡಿಗಳವರು ಫಲತಾಂಬೂಲ ಕೊಟ್ಟು ಕಳಿಸುತ್ತಾರೆ. ಮಾರನೆ ದಿನ ಬಲಿಪಾಡ್ಯ ಈ ದಿನದಂದು ದನಗಳ ಸೆಗಣಿಯಿಂದ ಪಂಡವರನ್ನು ಮಾಡಿ ತುಳಸಿಕಟ್ಟೆಯ ಮುಂದೆ, ಸೂರ್ಯನಿಗೆ ಎಲ್ಲ ಹೊಸುಇಲುಗಳ ಎಡಬಲಗಳಲ್ಲಿ ಮತ್ತು ದೇವರಮುಂದೆ ಹಾಗು ದನದ ಕೊಟ್ಟಿಗೆಗಳ್ಲ್ಲಿ ಇಟ್ಟು ಅವುಗಳಿಗೆ ಉತ್ತರಾಣೀ ಕಡ್ಡಿ ಚೆಂಡು ಹೂವುಗಳಿಂದ ಸಿಂಗರಿಸಿ  ಸಿಂಗರಿಸಿ ಪೂಜೆ ಮಾಡಿ ಹಬ್ಬದಡಿಗೆ ಮಾಡಿ ಊಟ ಮಾಡುತ್ತಾರೆ. ನಂತರ ಸಾಯಂಕಾಲ ಸೂರ್ಯಾಸ್ಥಕ್ಕೆ ಮೊದಲು ಎಲ್ಲ ಪಾಂಡವರನ್ನು ಮನೆಯ ಮುಂದುಗಡೆ ಹಂಚಿನಮೇಲೆ ಸಾಲಾಗಿ ಇಡುತ್ತಾರೆ. ಮಳೆಗಾಲದ ವರೆಗೂ ಅವು ಹಾಗೆಯೇ ಇದ್ದು ಮಳೆಯ ನೀರಿಗೆ ಕರಗಿ ಸೂರ ನೀರಿನ ಗುಂಟ ಹರಿದು ಹೋಗುತ್ತವೆ

     ನಂತರ ಭಾವ ಬಿದಿಗೆ ಈ ದಿನದಂದು ಅಕದ್ಕತಂಗಿಯರು ಅಣ್ಣ ತಮ್ಮಂದಿರಿಗೆ ಉಡುಗೊರೆ ಕೊಟ್ಟು ಹಬ್ಬದ ೂಟ ಹಾಕಿ ಸೋದರರ ಯಶ ಕೋರುತ್ತಾರೆ.   ಮಾರನೆ ದಿನ ಅಕ್ಕನ ತದಿಗೆನ ಈ ದಿನದಂದು ಸೋದರರು ತಮ್ಮ ಅಕ್ಕ ತಂಗಿಯರಿಗೆ ಉಡುಗೊರೆಗಳನ್ನು ಕೊಟ್ಟು ಸಿಹಿ ಊಟ ಮಾಡಿಸಿ  ಅವರ ಯಶ ಕೋರುತ್ತಾರೆ. ಮಾರನೆ ದಿನ ಅಮ್ಮನಚೌತಿ ಈ ದಿನದಂದು ಹಿರಿಯ ಹೆಣ್ಣು ಮಕ್ಕಳಿಗೆ ವಿಶೇಷವಾಗಿ ಅಜ್ಜಿಯರಿಗೆ ಶುಭ ಕೋರಬೇಕು. ಆದರೆ ವೈಪರೀತ್ಯವೆಂದರೆ ನಮ್ಮ ಹಿರಿಯ ಹೆಣ್ಣು ಮಕ್ಕಳು ಇದರ ಆಚರಣೆಗೆ ಒಪ್ಪುವುದಿಲ್ಲ ಅವರಿಗೆ ಸಂಕೋಚ. ಯುವ ಪೀಳಿಗೆ ಅದರ ಆಚರಣೆಗೆ  ಹೋವಗುವುದಿಲ್ಲ. ಯಾಕೆಂದರೆ ಅವು ಪರಿತ್ಯಕ್ತ ಜೀವಗಳಲ್ಲವೆ.? ಈ ಹಬ್ಬದಲ್ಲಿ ಮದುವೆಯಾದ ಮೊದಲ ವರ್ಷ ಅಳಿಯ ಮಾವನ ಮನೆಗೆ ಅಳಿಯತನಕ್ಕೆ ಬರುತ್ತಾನೆ. ಅಳಿಯ ಅವನ ಕುಟುಂಬ ವರ್ಗ ಆದರಾಥಿತ್ಯ ಉಡುಗೊರೆ ಮಾವ ಬಸವಳಿದು ಹೋಗುತ್ತಾನೆ. ಈಗ ಸಂಪ್ರದಾಯ ನಶಿಸುತ್ತ ಬಂದಿದೆ ಇದು ಓಳ್ಳೆಯ ಸೂಚನೆ. ಇದರ ವಿಸ್ತೃತ ಅನುಭವಕ್ಕಾಗಿ ಎನ್.ಕೆ.ಕುಲಕರ್ಣಿ( ನಾನಿ ಕಾಕಾ)ಯುವರ ಲೇಖನ ಓದಬೇಕುನ ಾಗಿನ ಕಾಲದ  ಉತ್ತರ ಕರ್ನಾಟಕದ ದೀಪಾವಳಿ ಆಚರಣೆಯ ಸಂಪೂರ್ಣ ಚಿತ್ರ ಕಟ್ಟಿ ಕೊಡುತ್ತಾರೆ. ಶೀಘ್ರದಲ್ಲಿಯೆ ಈ ಹಬ್ಬ ಬರಲಿದೆ, ಈ ಹಬ್ಬ ಎಲ್ಲರಿಗೂ ಶುಭ ತರಲಿ ಎಲ್ಲರ ಬಾಳು ಹಸಸನಾಗಲಿ ಎಂದು ಹಾರೈಕೆ. ಶುಭ ದೀಪಾವಳಿ. 

 ಚಿತ್ರ ಕೃಪೆ ; ಹರಿ ಪ್ರಸಾದ್ ನಾಡಿಗ್

 

 

Comments