ಬೆಳಕು ಕ್ಷೀಣಿಸುವುದು ಏಕೆ?

ಬೆಳಕು ಕ್ಷೀಣಿಸುವುದು ಏಕೆ?

ಮನೆಯಲ್ಲಿ ನಾವು ಕತ್ತಲೆಯಲ್ಲಿ ದೀಪವನ್ನು ಬಳಸುತ್ತೇವಲ್ಲವೇ? ನಮ್ಮ ಕಾಲದಲ್ಲಿ ನಾವು ಸೀಮೆ ಎಣ್ಣೆ ದೀಪ, ಎಣ್ಣೆ ದೀಪ, ಲಾಟೀನನ್ನು ಬಳಸುತ್ತಿದ್ದೆವು. ಈ ಬೆಳಕು ಬಹಳ ದೂರ ಹೋಗುವುದಿಲ್ಲ. ಈಗ ವಿದ್ಯುತ್ ದೀಪಗಳು ಬಂದಿವೆ ಅವುಗಳು ಒಮ್ಮೆಲೇ ಇಡೀ ಕೊಣೆಯನ್ನೇ ಬೆಳಗುತ್ತವೆ. ಹಿಂದಿನ ಕಾಲದ ಕಾರಿನ ಹೆಡ್ ಲೈಟ್ ಗಳು ಕೆಂಪಗೆ ಉರಿಯುತ್ತಿದ್ದವು. ಅವು ಹೆಚ್ಚು ದೂರ ತಲುಪುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಎಲ್ಇಡಿ ಬಲ್ಬುಗಳು ಒಂದು ಕಿಲೋಮೀಟರ್ ದೂರದ ವರೆಗೆ ನಿಚ್ಚಳವಾಗಿ ಬೆಳಗಿಸುತ್ತವೆ. ಏಕೆ ಹೀಗೆ ಎಂದು ಕೇಳಬಹುದು ನೀವು. ಅಂದಿನ ವಾಹನದ ವೇಗ ಗಂಟೆಗೆ 30 ಕಿಮೀ ಇತ್ತು ಆದರೆ ಈಗ 120 ಕಿಲೋಮೀಟರ್ ಗಳು. ಈ ವೇಗಕ್ಕೆ ಆ ದೀಪವನ್ನು ಬಳಸಿದರೆ ಅಪಘಾತ ಖಾತ್ರಿ. ಈ ಬೆಳಕು ಹೇಗೇ ಇರಲಿ ಆದರೆ ಅನಿಯಮಿತ ದೂರದ ವರೆಗೆ ಹೋಗಲಾರದು. ಅದು ಚಲಿಸುತ್ತಿರುವ ಹಾಗೆ ನಿಧಾನವಾಗಿ ಹರಡುತ್ತಾ ದುರ್ಬಲವಾಗುತ್ತಾ ಸಾಗುತ್ತದೆ. ವಾಹನದ ಹೆಡ್ ಲೈಟ್, ಬೀಕನ್, ಟಾರ್ಚ್ ಲೈಟ್ಗಳಲ್ಲಿ ಪ್ರತಿಫಲಕಗಳನ್ನು ಬಳಸಿ ಅವುಗಳನ್ನು ಸಮಾನಾಂತರಗೊಳಿಸಲು ಪ್ರಯತ್ನಿಸಿದರೂ ಈ ಬೆಳಕಿನ ಹರಡುವಿಕೆ ತಡೆಯಲಾಗುವುದಿಲ್ಲ. 

ಆದರೆ ನೀವು ಲೇಸರ್ (LASER) ಬೆಳಕನ್ನು ನೋಡಿದ್ದೀರಲ್ಲ. ಜಾತ್ರೆಯಲ್ಲಿ ಒಂದು ಲೇಸರ್ ಟಾರ್ಚ್ ಹಿಡಿಯಿರಿ. ನಿಮ್ಮ ಅಂಗೈ ಮೇಲೆ ಒಂದು ಎಷ್ಟು ಅಗಲವಾಗಿರುತ್ತದೋ ಒಂದು ಕಿಲೋಮೀಟರ್ ದೂರದಲ್ಲಿಯೂ ಅಷ್ಟೇ ಅಗಲವಿರುತ್ತದೆ ಹೊರತು ಅದು ಒಂದು ಚೂರೂ ಹರಡುವುದಿಲ್ಲ. ಚಂದ್ರ ಮತ್ತು ಭೂಮಿಯ ನಡುವಿನ ದೂರವನ್ನು ನಿಖರವಾಗಿ ಅಳೆಯಲು, ಅಪೋಲೋ 11, ಮತ್ತು ಅಪೋಲೊ 14 ತಲಾ ಎರಡು ಲೇಸರ್ ಕನ್ನಡಿಗಳನ್ನು ಚಂದ್ರನ ಮೇಲೆ ಸ್ಥಾಪಿಸಿ ಬಂದವು. ಇಲ್ಲಿಂದ ಲೇಸರ್ ಕಿರಣ ಪುಂಜಗಳನ್ನು ಕಳುಹಿಸಿ ಅಲ್ಲಿಂದ ಪ್ರತಿಫಲಿಸಿ ಬರುವ ಲೇಸರ್ ಕಿರಣಗಳು ಗಣನೀಯವಾಗಿ ಹರಡುವುದೇ ಇಲ್ಲ ಏಕೆ ಹೀಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು.

ಈ ಎರಡು ವ್ಯತಿರಿಕ್ತ ನಡವಳಿಕೆಯನ್ನು ಏಕೆ ಬೆಳಕು ಪ್ರದರ್ಶಿಸುತ್ತದೆ. ಬೆಳಕು ಎಂದು ಎಂದಾದರೂ ಯೋಚಿಸಿದ್ದೀರಾ? ಕಳೆದ ವಾರ ಬೆಳಕನ್ನು ಹೊರಸೂಸುವ ವಸ್ತುಗಳ ಬಗ್ಗೆ ನೋಡಿದ್ದೇವೆ. ಒಂದು ವಸ್ತುವನ್ನು ಕಾಯಿಸುತ್ತಾ ಹೋದಂತೆ ಮೊದಲು ಶಾಖ ವಿಕಿರಣ ನಂತರ ಕೆಂಪು ಕೊನೆಯದಾಗಿ ಬಿಳಿಯ ಬೆಳಕನ್ನು (white hot) ಹೊರಸೂಸುತ್ತವೆ. ಈ ಹೊರಸೂಸುವಿಕೆ ಒಂದು ಬಿಂದುವಿನಿಂದ ಏಕ ನೇರದಲ್ಲಿ ಅಲ್ಲ ಬದಲಾಗಿ ಅದರ ಮೇಲ್ಮೈಯಿಂದ ಎಲ್ಲ ನೇರದಲ್ಲಿಯೂ ಬೆಳಕು ಹರಡುತ್ತದೆ. ಆದರೆ ಲೇಸರ್ ನಲ್ಲಿ ಹಾಗಲ್ಲ ಅದರ ಆರಂಭಿಕ ಬಿಂದು (point of origin) ಒಂದು ಬಿಂದು. (ನಿಜವಾಗಿ ಲೇಸರ್ ತನ್ನ ಉಗಮ ಬಿಂದುವಿನ ಸ್ವಲ್ಪ ಹಿಂದೆ ಒಂದು ಸರಳ ರೇಖೆಯಲ್ಲಿ ಹುಟ್ಟಿಕೊಳ್ಳುತ್ತವೆ. ಈ ಬೆಳಕಿನ ಕಿರಣಗಳು ಹರಡುತ್ತಾ ಹೋಗುವುದರಿಂದ ಪ್ರಕಾಶ ಕಡಿಮೆ ಆಗುತ್ತಾ ಹೋಗುತ್ತದೆ. ಬೆಳಕಿನ ದೂರ ಎರಡು ಪಟ್ಟಾಗುವಾಗ ಪ್ರಕಾಶ ನಾಲ್ಕರಷ್ಟು ಕಡಿಮೆಯಾಗುತ್ತದೆ. ಬಿಳಿಯ ಬೆಳಕಿನಲ್ಲಿ ಬಹಳ ತರಂಗಾಂತರಗಳಿರುತ್ತವೆ. ಇವು ಪರಸ್ಪರ ಡಿಕ್ಕಿ ಹೊಡೆಯುವುದರಿಂದ ಅವುಗಳ ಪ್ರಕಾಶ ಕಡಿಮೆಯಾಗುತ್ತದೆ. ಇದು ಸಂತೆಯಲ್ಲಿ ಜನರು ಓಡಾಡಿದ ಹಾಗೆ. ಒಬ್ಬರು ಇನ್ನೊಬ್ಬರಿಗೆ ಡಿಕ್ಕಿ ಹೊಡೆದು ವೇಗ ಕಡಿಮೆಯಾಗುತ್ತದಲ್ಲ ಹಾಗೆ ಬೆಳಕಿನ ಪ್ರಕಾಶವೂ ಕಡಿಮೆಯಾಗುತ್ತದೆ. ಅದೇ ಲೇಸರ್ ಬೆಳಕು ಎಂದರೆ ಸೈನಿಕರು ಪಥ ಸಂಚಲನಕ್ಕೆ ಹೊರಟ ಹಾಗೆ. ಒಂದು ಕಿಲೋಮೀಟರ್ ಹೋದರೂ ಸಾಲು ಚದುರುವುದೂ ಇಲ್ಲ ಎರಡು ಸೈನಿಕರ ನಡುವಿನ ಅಂತರ ಕಡಿಮೆಯಾಗುವುದಿಲ್ಲ. ಇದಲ್ಲದೆ ಬಿಳಿಯ ಬೆಳಕು ಮಾಧ್ಯಮದ ಕಣಗಳ ಸುತ್ತ ಸ್ವಲ್ಪ ಮಟ್ಟಿಗೆ ಬಾಗುತ್ತದೆ. ಇದು ಅಡ್ಡಯಿಸುವಿಕೆ (detraction) ಇದರಿಂದಕೂಡಾ ಬೆಳಕಿನ ಚದುರುವಿಕೆ ಹೆಚ್ಚುತ್ತದೆ. 

ಭೂಮಿಯ ಮೇಲೆ ಬೀಳುವ ಬೆಳಕಿನ ಪ್ರಮಾಣವನ್ನು ಊಹಿಸಿ. ಹಾಗಾದರೆ ಸೂರ್ಯನ ಮೇಲ್ಮೈ ಹೊರಸೂಸುವ ಬೆಳಕು ಎಷ್ಟು ಪ್ರಮಾಣದ್ದಿರಬಹುದು ಅಲ್ಲವೇ?

-ದಿವಾಕರ ಶೆಟ್ಟಿ ಎಚ್, ಮಂಗಳೂರು,

ಚಿತ್ರ ಕೃಪೆ: ಇಂಟರ್ನೆಟ್ ತಾಣ