ಬೆಳಕು ಚೆಲ್ಲುವ ಹುಡುಗಿ (ಕಥಾ ಸಂಕಲನ)

ಬೆಳಕು ಚೆಲ್ಲುವ ಹುಡುಗಿ (ಕಥಾ ಸಂಕಲನ)

ಪುಸ್ತಕದ ಲೇಖಕ/ಕವಿಯ ಹೆಸರು
ಟಿ. ಪದ್ಮನಾಭನ್
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪುಸ್ತಕದ ಬೆಲೆ
ರೂ. 65/-

ಮಲಯಾಳಂ ಭಾಷೆಯ ಪ್ರಮುಖ ಕಥೆಗಾರ ಟಿ. ಪದ್ಮನಾಭನ್ ಅವರ 12 ಕಥೆಗಳ ಸಂಕಲನವಿದು. ಡಾ. ಅಶೋಕ್ ಕುಮಾರ್ ಇವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಪದ್ಮನಾಭನ್ ಅವರ ಕತೆಗಳಲ್ಲಿ ಶೋಷಿತರ, ನೊಂದವರ, ಅಸಹಾಯಕರ ಬದುಕಿನ ಚಿತ್ರಣವಿದೆ. ಕತೆಗಳ ಸನ್ನಿವೇಶ, ಪಾತ್ರಚಿತ್ರಣ, ಸಂವಾದ ಹಾಗೂ ಭಾವತೀವ್ರತೆ ಓದುಗರ ಮನತಟ್ಟುತ್ತವೆ.

ಟಿ. ಪದ್ಮನಾಭನ್ ಅವರ ಜನನ 1931ರಲ್ಲಿ ಕೇರಳದ ಕಣ್ಣೂರಿನಲ್ಲಿ. ಮಂಗಳೂರಿನ ಸರಕಾರಿ ಕಲಾ ಕಾಲೇಜಿನಿಂದ           1952ರಲ್ಲಿ ಬಿ. ಎ. ಪದವಿ ಮತ್ತು ಮದ್ರಾಸಿನ ಕಾನೂನು ಕಾಲೇಜಿನಿಂದ 1955ರಲ್ಲಿ ಕಾನೂನು ಪದವಿ ಪಡೆದರು. ಒಂದು ದಶಕ ಕಾಲ ಕಣ್ಣೂರಿನಲ್ಲಿ ವಕೀಲರಾಗಿ ಕೆಲಸ ಮಾಡಿದ ನಂತರ 1966ರಲ್ಲಿ ಅಲುವಾದಲ್ಲಿರುವ ಫ್ಯಾಕ್ಟ್ ಸಂಸ್ಥೆಗೆ ಸೇರಿದರು. ಅದರಿಂದ 1989ರಲ್ಲಿ ಡೆಪ್ಯುಟಿ ಮ್ಯಾನೇಜರಾಗಿ ನಿವೃತ್ತರಾದರು.

ಮುನ್ನುಡಿಯಲ್ಲಿ ಪ್ರೊ. ಕೆ.ಎಂ. ತರಗನ್ ಲೇಖಕರ ಬಗ್ಗೆ ಬರೆದಿರುವ ಮಾತುಗಳು: “ಪದ್ಮನಾಭನ್ ಸಣ್ಣಕಥಾ ಪ್ರಪಂಚಕ್ಕೆ ಚಾಚೂ ತಪ್ಪದೆ ಅಂಟಿಕೊಳ್ಳುತ್ತಾರೆ. ಒಂದು ದೀರ್ಘ ಕಾದಂಬರಿಯ ರಚನೆಗೆ ತೊಡಗಿದರೆ ಅದರುದ್ದಕ್ಕೂ ತನ್ನ ಸ್ಫೂರ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವೇ ಎಂದು ಅವರು ತಮ್ಮನ್ನೇ ಕೇಳಿಕೊಳ್ಳುತ್ತಾರೆ. …. ಓರ್ವ ಲೇಖಕ ಎಷ್ಟೇ ದೊಡ್ಡವನಾದರೂ ಆತ ಒಂದೇ ಮಾಧ್ಯಮದಲ್ಲಿ ಪರಿಣತನಾಗಿರಲಷ್ಟೇ ಸಾಧ್ಯ. ಈ ನಂಬಿಕೆಯ ಕಾರಣದಿಂದಲೇ ಪದ್ಮನಾಭನ್ ಬಹುಶಃ ಒಂದು ರೀತಿಯ ಸುಪ್ತಪ್ರಜ್ಞೆಯಿಂದ, ಬಹುತೇಕ ಸಣ್ಣಕತೆಗಳನ್ನೇ ಬರೆದಿರುವಂತಹ ಬೋರ್ಜಸ್^ರ ದಾರಿಯನ್ನು ತುಳಿದರು. ಒಂದು ಶಕ್ತಿಶಾಲಿ ಮತ್ತು ಸೂಕ್ಷ್ಮ ದೃಷ್ಟಿಯ ತೀವ್ರ ಪ್ರಭಾವಶಾಲಿ ಮತ್ತು ಪ್ರೇರೇಪಕ ಗುಣ ಇರುವ ಸಣ್ಣಕತೆ ರಚಿಸಲು ಕಥಾವಸ್ತುವಿನ ಮೇಲೆ ಪರಿಪೂರ್ಣ ಗಮನ ಮತ್ತು ತಂತ್ರಗಾರಿಕೆಯ ಮೇಲೆ ಸಂಪೂರ್ಣ ತಾದ್ಯಾತ್ಮತೆ ಅತ್ಯವಶ್ಯಕವಾಗಿರುತ್ತವೆ. ಪದ್ಮನಾಭನ್ ಅವರಿಗೆ ಈ ಸಾಮರ್ಥ್ಯ ಸಿದ್ಧಿಸಿದೆ….

ಪದ್ಮನಾಭನ್^ರ ಕತೆಗಳು, ಪರಕೀಯತೆಯನ್ನು ಅನುಭವಿಸುವ, ದಾರಿದ್ರ್ಯದಲ್ಲಿರುವ, ಶೋಷಣೆಗೊಳಗಾಗಿರುವ ಮಾನವ ಸಹಜೀವಿಗಳಿಗೆ  ಮಾನವರು ಮಾಡುವ ಸಹಾನುಭೂತಿಯ ರೂಪಕಗಳು. ಯಾವುದೇ ಕ್ರಾಂತಿ ಅಥವಾ ಬಿಡುಗಡೆಯ ಹೋರಾಟವನ್ನು ಅವು ಪ್ರತಿಪಾದಿಸುವುದಿಲ್ಲ; ಆದರೆ ಮಾನವ ಬದುಕಿನ ಅನುಕಂಪಾರ್ಹ ಮಜಲುಗಳಿಗೆ ಹೃದಯವಂತಿಕೆ ದೊರೆಯಲು ಸಹಾಯ ಮಾಡುತ್ತವೆ. ಪದ್ಮನಾಭನ್ ಪದಗಳ ಮಿತವ್ಯಯದ ಪ್ರತಿಪಾದಕ. ಪ್ರತಿಯೊಂದು ಪದವೂ ಶಕ್ತಿಪೂರ್ಣವೂ ಯಾವುದಾದರೂ ಗಾಢ ಮಾನವೀಯ ಭಾವನೆಯನ್ನು ಉದ್ದೀಪ್ತಗೊಳಿಸುವುದು ಆಗಿರುತ್ತದೆ….”

ಮೊದಲ ಕತೆ “ಹಿನ್ನೋಟ”, ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಹೋರಾಟಕ್ಕೆ ಕೈಜೋಡಿಸಿದ ಈಪ್ಪನ್ ಎಂಬಾತನ ತಳಮಳ ಹಾಗೂ ಸಂಕಟಗಳನ್ನು ಸಮರ್ಥವಾಗಿ ಚಿತ್ರಿಸುತ್ತದೆ. ಎರಡನೆಯ ಕತೆ “ತ್ಯಾಗದ ಪ್ರತಿರೂಪಗಳು”. ಸಿಡುಬು ಬಂದವರಿಗೆ ಶುಷ್ರೂಷೆ ನೀಡುವ ಐಸೋಲೇಷನ್ ವಾರ್ಡಿನ ಕೆಲವರ ಕತೆ. ಅಲ್ಲಿನ ನರ್ಸ್ ಹೆಲನ್ ಮತ್ತು ಅವಳ ಮನೆಯವರು ಪ್ರತಿಯೊಬ್ಬ ರೋಗಿಯನ್ನು ತಮ್ಮ ಕುಟುಂಬದವರಂತೆಯೇ ಪ್ರೀತಿಯಿಂದ, ಅನುಕಂಪದಿಂದ ನೋಡಿಕೊಳ್ಳುತ್ತಿದ್ದರು. ಒಬ್ಬಳು ಮಹಿಳೆಯ ನಾಲ್ವರು ಮಕ್ಕಳು ಸಿಡುಬಿಗೆ ಬಲಿಯಾಗಿ, ಐದನೆಯ ಮಗನೂ ತೀರಿಕೊಂಡ ಸನ್ನಿವೇಶದ ದಾರುಣತೆ ಮನಕಲಕುತ್ತದೆ.

ಮೂರನೆಯ ಕತೆ “ ಶೇಖೂಟ್ಟಿ”. ಅದೊಂದು ಭಯಂಕರವಾಗಿ ಬೊಗಳುವ, ಅಪರಿಚಿತರನ್ನು ಕರುಣೆಯಿಲ್ಲದೆ ಕಚ್ಚುವ ನಾಯಿ. ಈ ಗುಣಗಳೇ ಅದರ ಸಾವಿಗೆ ಕಾರಣವಾಗುತ್ತವೆ. ಅದರ ಯಜಮಾನ ಅದನ್ನು ತೊರೆಯುತ್ತಾನೆ. ಅದರ ಹೊಣೆ ವಹಿಸಿಕೊಂಡ ವೃದ್ಧ, ಅದಕ್ಕೆ ಬಾಯಿ ತೆರೆಯಲಾಗದಂತೆ ಕಬ್ಬಿಣದ ಕವಚ ಹಾಕಿ, ಆಹಾರ ಕೊಡದೆ ಸಾಯುವ ತನಕ ಶಿಕ್ಷಿಸುತ್ತಾನೆ. ಅದೊಂದು ನಾಯಿಯಲ್ಲ, ನಮ್ಮೊಬ್ಬ ಸಹಜೀವಿ ಮನುಷ್ಯ ಎಂಬಂತೆ ಲೇಖಕರು ಅದರ ಬದುಕು ಚಿತ್ರಿಸಿದ್ದಾರೆ.

ನಂತರದ “ಗಂಡ” ಕತೆ ಹೆಣ್ಣು ಕೂಡ ಗಂಡಿನ ಮೇಲೆ ಮೇಲುಗೈ ಸಾಧಿಸಬಹುದೆಂದು ಸೂಚಿಸುತ್ತದೆ. ಕಥಾನಾಯಕಿ ಅಂಬುಜಾ ತನ್ನ ಕಟಾಕ್ಷಕ್ಕೆ ಕಾದಿರುವ ತನ್ನ ಪುರುಷರನ್ನು ಗೊಂಬೆಯಾಟದ ಗೊಂಬೆಗಳಂತೆ ಕುಣಿಸುತ್ತಾಳೆ. “ಒಂದು ಸಣ್ಣ ಜೀವನವೂ ದೊಡ್ಡ ಮರಣವೂ” ಕತೆಯಲ್ಲಿ ಕುಂಜಿಮೊಯ್ದೀನ್ ಎಂಬ ಹುಡುಗನನ್ನು ಮದ್ರಾಸಿನ ಒಂದು ಹೋಟೆಲಿನಲ್ಲಿ ಕೆಲಸಕ್ಕೆ ಸೇರಿಸಲಾಗುತ್ತದೆ. ಆ ಹೋಟೆಲಿನ ಕ್ರೂರ ಮೆನೇಜರ್ ಅವನಿಂದ ವಿಪರೀತ ಕೆಲಸ ಮಾಡಿಸಿ, ಜ್ವರ ಬಂದಾಗ ಚಿಕಿತ್ಸೆ ಕೊಡಿಸದೆ, ಅವನು ಸಾಯುತ್ತಾನೆ. ಈ ದುರಂತಕ್ಕೆ ಕಾರಣವೇನು? ಎಂಬ ಪ್ರಶ್ನೆ ಓದುಗರನ್ನು ಕಾಡುತ್ತದೆ.
ಶಾಲೆಗೆ ಹೋಗುತ್ತಿರುವ ಒಂದು ಮಗುವಿನ ಕತೆ “ಗೋಲಿ”. ಮಕ್ಕಳಿಗೆ ಆಟಿಕೆಗಳೇ ಮುಖ್ಯ; ಅವು ಶಾಲೆಗೆ ಕಟ್ಟಬೇಕಾದ ಶುಲ್ಕಕ್ಕಿಂತಲೂ ಮುಖ್ಯ ಎಂಬುದನ್ನು ನವಿರಾಗಿ ನಿರೂಪಿಸುವ ಕತೆ. “ಫಲ ಬಿಡದ ಮರ” ಕೂಡ ಒಂದು ಹುಡುಗನ ಕತೆ. ಆದರೆ, ಇದರಲ್ಲಿ ವರ್ಗ ಮೇಲಾಟದ ಭಯಾನಕ ಚಿತ್ರಣವಿದೆ. ತನ್ನ ಮಗ ಮತ್ತು ಅಡುಗೆಯವನ ಮಗನ ಗೆಳೆತನವನ್ನು ಸಹಿಸದ ಮೆನೇಜರ್ ಆ ಬಡ ಹುಡುಗನನ್ನು ನಿಷ್ಕರುಣೆಯಿಂದ ಕೊಲ್ಲುತ್ತಾನೆ.

“ಕಳಿತು ಉದುರುವ ಮನುಷ್ಯಾತ್ಮಗಳು” ಚಿನ್ನದಂತಹ ಹೃದಯವಿರುವ ವೇಶ್ಯೆ ತಂಗಮ್ಮಳನ್ನು ಪರಿಚಯಿಸುತ್ತದೆ. ಅವಳು ಕತೆಯ ನಿರೂಪಕನಿಗೆ ಸಹಾಯ ಮಾಡಿದ್ದಳು ಮತ್ತು ಹೊಸ ಜೀವನದ ಕನಸು ಕಂಡಿದ್ದಳು. ಅವಳನ್ನು ಪತ್ನಿಯಾಗಿ ಸ್ವೀಕರಿಸಲೂ ಸಿದ್ಧನಿದ್ದ ನಿರೂಪಕ ಊರು ತೊರೆಯ ಬೇಕಾಗುತ್ತದೆ. ಕೆಲವು ವರುಷಗಳ ನಂತರ ಅವನು ಹಿಂತಿರುಗಿದಾಗ,
ತಂಗಮ್ಮಳ ಸುಳಿವೇ ಇಲ್ಲ. ಅವಳು ಬದುಕಿದ್ದಾಳೋ ಇಲ್ಲವೋ ಎಂಬುದನ್ನೂ ತಿಳಿಯಲಾಗದೆ ಪರಿತಪಿಸುತ್ತಾನೆ.

“ಮತ್ತೊಂದು ಮೊಗ್ಗೂ ಬಾಡುತ್ತಿದೆ” - ಯಾವುದೇ ಪ್ರತಿಫಲದ ಆಶೆಯಿಲ್ಲದೆ ಇತರರಿಗೆ ಸೇವೆ ಸಲ್ಲಿಸುವ ಜನಾರ್ದನನ ಕತೆ. “ತಿನ್ನಲಾಗದ ಬಿಸ್ಕಿಟ್” - ಪ್ರಾಥಮಿಕ ಶಾಲೆಯ ಮಕ್ಕಳ ಎಳೆಯ ಮನಸ್ಸಿನಲ್ಲಿಯೂ ಆಳವಾಗಿ ಬೇರು ಬಿಟ್ಟಿರುವ ಮೇಲು-ಕೀಳು ಜಾತಿ ಭೇದವನ್ನು ಪರಿಣಾಮಕಾರಿಯಾಗಿ ತಿಳಿಸುವ ಕತೆ.  

“ಭವಿಷ್ಯದತ್ತ” ದೇಶ ವಿಭಜನೆಯ ಮಹಾದುರಂತವನ್ನು ಬೊಟ್ಟು ಮಾಡಿ ತೋರಿಸುವ ಕತೆ. ಮಾನವತೆ ಸತ್ತು ಹೋಗಿದ್ದ ಆ ದಿನಗಳನ್ನು ಸರಳ ಪದಗಳಲ್ಲಿ ಕರುಳು ಇರಿಯುವಂತೆ ನೆನಪು ಮಾಡುವ ಕತೆ.

ಕೊನೆಯ ಕತೆ “ಬೆಳಕು ಚೆಲ್ಲುವ ಹುಡುಗಿ”. ಇದರ ಕಥಾನಾಯಕಿ ಶೋಷಿತಳಲ್ಲ, ಬಲಿ ಪಶುವೂ ಅಲ್ಲ. ಅವಳು ಜೀವನ ಪ್ರೀತಿಯ ಚೈತನ್ಯದ ಚಿಲುಮೆ. ಆತ್ಮಹತ್ಯೆ ಮಾಡಿಕೊಳ್ಳಲಿಕ್ಕಾಗಿ ಚಲನಚಿತ್ರ ಮಂದಿರದೊಳಗೆ ಕುಳಿತಿದ್ದ ಯುವಕನನ್ನು ಮಾತನಾಡಿಸುತ್ತಾ, ಆ ಯೋಚನೆಯನ್ನೇ ಅವನಿಂದ ದೂರ ಮಾಡುವ ಮಗು ಮನಸ್ಸಿನ ಹುಡುಗಿ ಆಕೆ.

ಈ ಸಂಕಲನದ ಹಲವು ಕತೆಗಳಲ್ಲಿ ಮನುಷ್ಯನ ಅಳವಿಗೆ ಸಿಗದ ಚೈತನ್ಯವನ್ನು ಕಾಣುವ ಕ್ಷಣಗಳು ಓದುಗನಿಗೆ ಎದುರಾಗುತ್ತವೆ. ಇವು ಸೂಕ್ತ ಕ್ಷಣದಲ್ಲಿ ತಾವಾಗಿಯೇ ಓದುಗನ ಅರಿವಿಗೆ ಬರುತ್ತವೆ. ಪದ್ಮನಾಭನ್ ಅವರಂತಹ ಸಮರ್ಥ ಸಣ್ಣ ಕಥೆಗಾರರಿಗೆ ಮಾತ್ರ ತಮ್ಮ ಕತೆಗಳಲ್ಲಿ ಇಂತಹ ಅನುಭೂತಿ ಹೆಣೆಯಲು ಸಾಧ್ಯ ಅನಿಸುತ್ತದೆ.