ಬೆಳಕು ಮತ್ತು ಕತ್ತಲ ಕ್ರಿಯೆಗಳು

ಬೆಳಕು ಮತ್ತು ಕತ್ತಲ ಕ್ರಿಯೆಗಳು

ಈ ಬಾರಿ ಗೊಂದಲವೇನೂ ಇರಲಿಲ್ಲ ನಿಜ. ಆದರೆ ನನಗೆ ಗುರುಗಳು ಹಲವರಿದ್ದಾರೆ. ನನ್ನ ಪಾಠ ಬೋಧನೆಗೆ ಸಂಬಂಧಿಸಿದಂತೆ ಬುದ್ಧ ನನ್ನ ಆದರ್ಶ. ನಿಮಗೆ ಗೊತ್ತಿರಬಹುದು ರಾಜಕುಮಾರನಾಗಿದ್ದ ಗೌತಮ ಬುದ್ಧನಾದ ಜನರಿಗೆ ಬೋಧನೆಯನ್ನು ಆರಂಭಿಸಿದ. ಆತ ಸುಮ್ಮನೆ ಬೋಧನೆ ಆರಂಭಿಸಲಿಲ್ಲ. ಬದಲಾಗಿ ಆತನಿಗೆ ಜ್ಞಾನೋದಯವಾದ ಮೇಲೆ ಬೋಧನೆ ಆರಂಭಿಸಿದ. ನಾವು ಶಿಕ್ಷಕರಾದವರೂ ಹಾಗೆ ಬೋಧಿಸುವ ವಿಷಯ ನಮಗೆ ಸರಿಯಾದ ತಿಳುವಳಿಕೆ ಮೂಡಿದ ಮೇಲೆಯೇ ನಾವು ಪಾಠ ಆರಂಭಿಸಬೇಕು ಎಂಬುದು ನನ್ನ ಅಭಿಪ್ರಾಯ. ಆದ್ದರಿಂದಲೇ ಈ ಬಾರಿ ತಡವಾಗಿ ಲೇಖನ ಬರೆದೆ.

ಹಿಂದಿನ ಸಂಚಿಕೆಯಲ್ಲಿ ದ್ಯುತಿ ಸಂಶ್ಲೇಷಣೆ ಮೂರು ಹಂತಗಳಲ್ಲಿ ನಡೆಯುತ್ತದೆ ಎಂದು ನೋಡಿದೆವು. ಮೊದಲನೆಯದು ಹರಿದ್ರೇಣುವಿನಿಂದ ಬೆಳಕಿನ ಶಕ್ತಿಯ ಹೀರುವಿಕೆ. ಎರಡನೆಯದು ಬೆಳಕಿನ ಸಹಾಯದಿಂದ ನೀರಿನ ವಿಭಜನೆ ಮತ್ತು ಕೊನೆಯದಾಗಿ ಇಂಗಾಲದ ಡೈಆಕ್ಸೈಡ್ ಅನ್ನು ಗ್ಲುಕೋಸ್ ಆಗಿ ಪರಿವರ್ತಿಸುವುದು. ಶಕ್ತಿಯ ಹೀರುವಿಕೆಯ ನಂತರ ದೊರೆತ ಶಕ್ತಿಯಿಂದ ನೀರನ್ನು ಜಲಜನಕ ಮತ್ತು ಆಮ್ಲಜನಕವಾಗಿ ಒಡೆಯಲಾಗುತ್ತದೆ ಮತ್ತು ಅನುಪಯುಕ್ತವಾದ ಆಮ್ಲಜನಕವನ್ನು ಹೊರ ಹಾಕಲಾಗುತ್ತದೆ. ಜಲಜನಕವನ್ನು ಅಂದರೆ ನಗ್ನ ಪ್ರೋಟಾನ್ ಅನ್ನು ನಿರಂತರ ರಾಸಾಯನಿಕ ಕ್ರಿಯೆಗಳ ಸರಪಣಿಯ ಮೂಲಕ ಹರಿದ್ರೇಣುವಿನಲ್ಲಿನ ಥೈಲಕಾಯಿಡ್ ಪೊರೆಯಲ್ಲಿ NADP ಯನ್ನು NADPH ಆಗಿ ಪರಿವರ್ತಿಸುತ್ತದೆ. ಈ NADPH ಬಹಳ ಅಸ್ಥಿರವಾದದ್ದು. ಇದು ತನ್ನಲ್ಲಿರುವ H+ ಅನ್ನು ಬಿಟ್ಡುಕೊಡಲು ಯಾರು ಸಿಕ್ಕುತ್ತಾರೆ ಎಂದು ಕಾಯುತ್ತಿರುತ್ತದೆ. ಈ ರೀತಿ ಯಾರಿಗಾದರೂ ಜಲಜನಕದ ಪರಮಾಣುವನ್ನು ಅಂಟಿಸುವುದನ್ನು ನಾವು ಅಪಕರ್ಷಣೆ (reduction) ಎನ್ನುವುದು. ಈ ಜಲಜನಕವನ್ನು ಸುಲಭವಾಗಿ ಅಂಟಿಸುವ ವಸ್ತುವೇ ಅಪಕರ್ಷಣಕಾರಿ (reducing agent). ಈ NADPH ಒಂದು ಪ್ರಬಲ ಅಪಕರ್ಷಣಕಾರಿ. ಇದು ಇಂಗಾಲದ ಡೈಆಕ್ಸೈಡ್ ಸಿಕ್ಕ ಕೂಡಲೇ ಇಂದಿನ ಕಾಲದ ಗಂಡು ಮಕ್ಕಳ ತಂದೆಯರು ಹೆಣ್ಣು ಮಕ್ಕಳನ್ನು ಹುಡುಕುತ್ತಾರಲ್ಲ ಹಾಗೆ ದಮ್ಮಯ್ಯ ಗುಡ್ಡೆ ಹಾಕಿ ಜಲಜನಕವನ್ನು ದಾಟಿಸಿ ಬಿಡುತ್ತದೆ. ಮೊದಲ ಹಂತದಲ್ಲಿ ಈ ಒಂದು ಇಂಗಾಲದ ಇಂಗಾಲದ ಡೈಆಕ್ಸೈಡ್ ಮೂರು ಇಂಗಾಲದ ಸಂಯಕ್ತವಾಗಿ ಪರಿವರ್ತನೆಯಾಗುತ್ತದೆ. 

ಆದರೂ ಈ NADPH ಅದನ್ನು ಅಟ್ಟಾಡಿಸಿ 6 ಇಂಗಾಲದ ಗ್ಲುಕೋಸ್ ಆಗಿ ಪರಿವರ್ತಿಸುತ್ತದೆ. ಈ ಪ್ರಕ್ರಿಯೆಯನ್ನು ಕೆಲ್ವಿನ್ ಚಕ್ರ (Calvin cycle) ಎನ್ನುವುದು. ಇದಕ್ಕೆ ಬೆಳಕು ಬೇಕಾಗಿಲ್ಲ. ಇದೇ ಕತ್ತಲ ಕ್ರಿಯೆ (dark reaction) ಕತ್ತಲ ಕ್ರಿಯೆ ಎಂದರೆ ಕತ್ಲಲ್ಲಿ ನಡೆಯುವ ಕ್ರಿಯೆ ಅಲ್ಲ ಬದಲಾಗಿ ಬೆಳಕು ಅಗತ್ಯವಿಲ್ಲದ ಕ್ರಿಯೆ. ಇಲ್ಲಿ ಅಗತ್ಯವಾದ ಶಕ್ತಿ ಕೋಶದ ಶಕ್ತಿ ಸಂಚಯಗಳಾದ ATP ಗಳಿಂದ ದೊರೆಯುತ್ತದೆ. ನೀರಿನ ದ್ಯುತಿ ವಿಭಜನೆ, NADPH ತಯಾರಾಗುವ ಪ್ರೋಟಾನ್ ಸರಪಣಿ (proton pathway) ಮತ್ತು ATP ತಯಾರಾಗುವ ಎಲೆಕ್ಟ್ರಾನ್ ಸರಪಣಿಗಳಿಗೆ ಶಕ್ತಿಯ ಮೂಲವೇ ಬೆಳಕು. ಆದ್ದರಿಂದ ಮೊದಲ ಹಂತವನ್ನು ಬೆಳಕಿನ ಕ್ರಿಯೆ (light reaction) ಎನ್ನುತ್ತೇವೆ. ಹೀಗೆ ಅದ್ಭುತವಾಗಿ ಸಿದ್ಧವಾದ ಈ ಅಡುಗೆಯೇ ಇಡೀ ಜೀವ ಮಂಡಲದ (biosphere) ಶಕ್ತಿಯ ಮೂಲ.

-ದಿವಾಕರ ಶೆಟ್ಟಿ ಎಚ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ