ಬೆಳಕ ಬೆನ್ನ ಹಿಂದೆ
ಸಾರಿಕ ಶೋಭಾ ವಿನಾಯಕ ಎನ್ನುವ ಕವಯತ್ರಿ ‘ಬೆಳಕ ಬೆನ್ನ ಹಿಂದೆ' ಎನ್ನುವ ಚುಟುಕು ಮತ್ತು ಕವನಗಳ ಸಂಕಲನವನ್ನು ಹೊರತಂದಿದ್ದಾರೆ. ಈ ಕೃತಿಗೆ ಮೈಸೂರು ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಆದ ಡಾ. ಎಸ್ ಎನ್ ಮಂಜುನಾಥ ಇವರು ಬೆನ್ನುಡಿಯನ್ನು ಬರೆದು ಪ್ರೋತ್ಸಾಹ ತುಂಬಿದ್ದಾರೆ. ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಆಯ್ದ ಭಾಗ ನಿಮ್ಮ ಓದಿಗಾಗಿ...
“ಸಾರಿಕ ಅವರು ಮೂಲತಃ ದಾವಣಗೆರೆ ಹತ್ತಿರದ ಹರಪನಹಳ್ಳಿಯವರು. ವಿಜಯನಗರ ಜಿಲ್ಲೆಗೆ ಸೇರಿದವರು. ಈಗ ಸಾಪ್ಟವೇರ್ ಇಂಜಿಯರ್ ವೃತ್ತಿಯಲ್ಲಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಶಿಕ್ಷಣ ಮತ್ತು ವೃತ್ತಿ ವಲಯಗಳು ಸಾಹಿತ್ಯಕ್ಕೆ ಸಂಬಂಧ ಪಟ್ಟಿಲ್ಲದಿದ್ದರೂ ಸಾರಿಕ ಅವರು ಸ್ವಂತ ಆಸಕ್ತಿಯಿಂದ ಸಾಹಿತ್ಯಾಭಿರುಚಿಯನ್ನು ಬೆಳೆಸಿಕೊಂಡಿದ್ದಾರೆ. ಇವರ ಸಾಂಸ್ಕೃತಿಕ ಅರಿವು ಪ್ರಶಂಸನೀಯವಾಗಿದ್ದು, ಕನ್ನಡ ಭಾಷೆಯ ಬದ್ಧತೆಯಿಂದ ಕ್ರೀಯಾಶೀಲರಾಗಿರುವುದು ಮತ್ತೊಂದು ವಿಶೇಷ. ಕರ್ನಾಟಕದಲ್ಲಿ ಕನ್ನಡವು ಎಲ್ಲಾ ಕ್ಷೇತ್ರಗಳಲ್ಲೂ ಆದ್ಯತೆ ಪಡೆಯಬೇಕೆಂಬ ಕಾಳಜಿಯಿಂದ ಇವರು ತಮ್ಮ ಬಳಗದೊಂದಿಗೆ ಕಾರ್ಯಕ್ರಮಗಳನ್ನು ರೂಪಿಸಿ ಜನಮನಕ್ಕೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಸಾರಿಕ ಅವರ ಈ ಕವನ ಸಂಕಲನವು ಭಾವಕೋಶದ ಬೆರಗಿನಲ್ಲಿ ಬದುಕಿನ ಬೆಳಕನ್ನು ಹುಡುಕುವ ಒತ್ತಾಸೆಗಳ ಹೂಗುಚ್ಚವಾಗಿದೆ. ಬಹುಪಾಲು ರಚನೆಯಲ್ಲಿ ಭಾವಪ್ರೇರಿತ ನೋಟ ಎದ್ದು ಕಾಣುತ್ತದೆ. ಇದರ ಫಲವಾಗಿ ಪ್ರೀತಿಯ ಆರ್ದ್ರತೆ, ಕನಸುಗಾರಿಕೆಗಳು ಮೈದಾಳುತ್ತವೆ. ಬದುಕಿನಲ್ಲಿ ಬೆಳಕು ಮತ್ತು ನೆಮ್ಮದಿಯನ್ನ ಅರಸುತ್ತವೆ. ಬದುಕಿನಲ್ಲಿರುವ ವೈರುದ್ಯದ ವಾಸ್ತವವನ್ನೂ ಗಮನಿಸುತ್ತವೆ. ಈ ಹಿನ್ನೆಲೆಯಲ್ಲಿ ಸಾರಿಕ ಅವರು ಕವನದ ಜೊತೆ ನಡೆಸುವ ಆತ್ಮ ಸಂವಾದವು ಕುತೂಹಲಕಾರಿಯಾಗಿದೆ. “ಅನಿಸಿದ್ದೆನ್ನೆಲ್ಲಾ ಹೇಳುತಾ/ಹೇಳುತ್ತಲೇ ಇದ್ದೇನೆ / ಆದರೆ ನಿನಗೆ ಅರ್ಥವಾಗುವುದೇ ಇಲ್ಲ/" ಎಂದು ಆರಂಭವಾಗುವ "ಕವನ" ವೆಂಬ ಶೀರ್ಷಿಕೆಯ ಕವನವು ಅಭಿವ್ಯಕ್ತಿ ಸಾಧ್ಯತೆಯ ಸಂಕಷ್ಟವನ್ನ ಸೂಚಿಸುತ್ತದೆ. ಕವಿಗೆ ಅನಿಸಿದ್ದೆಲ್ಲವೂ ಸಾಧ್ಯವಾಗುವುದಿಲ್ಲವೆಂಬ ಮಾತಿನ ಜೊತೆಗೆ “ಭಾವನೆಗಳಲಿ ಬೆರೆತು/ ನಿನ್ನಲ್ಲೇ ಕಳೆದು ಹೋಗಿದ್ದೇನೆ/ಆದರೆ ನಿನಗೆ ಅರಿವಾಗುವುದೇ ಇಲ್ಲ" ಎಂಬ ನುಡಿಗಳು ಮೂಡಿ ಕವನವೊಂದು ಮೈತಾಳುವ ಕಷ್ಟಕ್ಕೂ ಕನ್ನಡಿ ಹಿಡಿಯುತ್ತವೆ. ಅಂದರೆ ಕವಿಯ ಭಾವನೆಗಳು ಕವನದ ಭಾಷೆಯಾಗಿ ಆಕೃತಿಗೊಳ್ಳುವಾಗ ಎದುರಿಸುವ ವೈಫಲ್ಯ ಮತ್ತು ವಿಷಾದದ ಛಾಯೆಯೂ ಈ ಸಾಲುಗಳಲ್ಲಿದೆ. ಅನುಭವ ಮತ್ತು ಅಭಿವ್ಯಕ್ತಿಗಳ ನಡುವೆ ಕೂಡಬೇಕಾದ ಬಂಧದ ಬಯಕೆಯೂ ಇದೆ. ಆದರೆ ಈ ಬಯಕೆಯು ಫಲಿಸುತ್ತಿಲ್ಲವೆಂಬ ವಾಸ್ತವ ಗೊತ್ತಾದಾಗ ಕವಿಯಲ್ಲಿ ಮೂಡುವ ಅತೃಪ್ತಿಯ ಅನಾವರಣವೂ ಈ ಸರಳ ಸಾಲುಗಳಲ್ಲಿ ಆಗುತ್ತದೆ. ಇದು ಕೇವಲ ಕೊರಗುವಿಕೆಯಲ್ಲ, ಅನುಭವ ಮತ್ತು ಅಭಿವ್ಯಕ್ತಿ ರೂಪಗಳಲ್ಲಿ ಸಾಧಿಸಬೇಕಾದ ಸಾವಯವ ಸಂಬಂಧದ ಹಂಬಲವೂ ಆಗುತ್ತದೆ; ಜೊತೆಗೆ ಆತ್ಮಾವಲೋಕನವುಳ್ಳ ಒಳ ವಿಮರ್ಶೆಯೂ ಆಗುತ್ತದೆ. ಈ "ಕವನ"ವು ಒಂದರ್ಥದಲ್ಲಿ ಸಾರಿಕ ಅವರ ಅಭಿವ್ಯಕ್ತಿ ಹಂಬಲದ ತಳಮಳವನ್ನೂ ಸಾಧಿಸಬೇಕಾದ ಹಂತವನ್ನೂ ಒಟ್ಟಿಗೆ ಸರಳ ಸಾಲುಗಳಲ್ಲಿ ಸೂಚಿಸುತ್ತದೆ.ಈ "ಕವನ"ದಲ್ಲಿರುವ ಅಂಶವು ಇವರ ಅನೇಕ ಕವನಗಳ ಅಭಿವ್ಯಕ್ತಿ ಸ್ವರೂಪದ ಇತಿಮಿತಿಗೂ ಮುನ್ನುಡಿ ಬರೆದಂತಿದೆ.
"ಬರಹ" ಎಂಬ ಕವನವು ಕವಿಯ ತಳಮಳವನ್ನ ಮೀರಿ ಅಕ್ಷರಾಭಿವ್ಯಕ್ತಿಯ ಜೊತೆಗೆ ಅತ್ಮೀಯವಾಗಿ ಸಾಗುತ್ತಿರುವ ಸೂಚನೆಯನ್ನು ಸಾರಿಕ ಅವರಿಗೆ ಸಹಜವಾದ ಸರಳ ಸಾಲುಗಳಲ್ಲಿ ಮೂಡಿಸುತ್ತದೆ. ಇಲ್ಲಿ ಬರಹವೇ ಕವಿಯಿಂದ ಬರೆಸಿ ಬೆರಗಾಗುವಂತೆ ಮಾಡುವ ಸಂಭ್ರಮವಿದೆ.
* ಸಾಲುಗಳು ಸಾಗುತ ತೆರೆದಿಟ್ಟು ಹೋಗುತಿವೆ ನೆನಪೆಂಬ ಝರಿಯ ತಾರೆಯ ಹೊಳೆಪಿನಂತೆ" (ಬರಹ)
ಹೀಗೆ ಅಭಿವ್ಯಕ್ತಿ ಸ್ವರೂಪದ ಜೊತೆ ಸಲಿಗೆಯ ಸಂಬಂಧ ಸಾಧ್ಯವಾಗಿ "ತಾರೆಯ ಹೊಳಪು" ಹೊಮ್ಮುತ್ತದೆ. "ಕವನ" ಮತ್ತು "ಬರಹ" ಎಂಬ ಈ ಎರಡು ರಚನೆಗಳು ಕವಿ ಮನಸಿನ ಎರಡು ಹಂತಗಳನ್ನು ಒಡಮೂಡಿಸುತ್ತವೆ. ಮೊದಲಿದ್ದ ತಳಮಳ, ವೈಫಲ್ಯ, ವಿಷಾದಗಳನ್ನು ಮೀರಿ ಸಾಫಲ್ಯದತ್ತ ಸಾಗುತ್ತಿರುವ ವಿಶ್ವಾಸವನ್ನು ವ್ಯಕ್ತ ಮಾಡುತ್ತದೆ. ಇಡೀ ಸಂಕಲನಕ್ಕೆ ಈ ಎರಡೂ ಕವನಗಳ ಅಂತರ್ಯವು ಅನ್ವಯಿಸುತ್ತದೆ. ಎರಡೂ ರಚನೆಗಳಲ್ಲಿರುವ ಎರಡು ಹಂತದ ಅಭಿವ್ಯಕ್ತಿಗೆ ನಿದರ್ಶನಗಳನ್ನು ಈ ಸಂಕಲನ ಒದಗಿಸುತ್ತದೆ.
ನಾನು ಆರಂಭದಲ್ಲಿ ಹೇಳಿದಂತೆ ಈ ಸಂಕಲನದಲ್ಲಿ ಭಾವ-ಕೋಶದ ಮೇಲುಗೈ ಕಾಣುತ್ತದೆ. "ಭಾವಸಾಲು" ಎಂಬ ರಚನಾ ಮುಂದಿನ ಸಾಲುಗಳನ್ನ ಗಮನಿಸಿ:
* ಸುಂದರ ಬೆಳದಿಂಗಳಿಗೆ
ಪ್ರೀತಿಯೇ ಕಾರಣವಾಗಿರಲು
ಭ್ರಮೆಯೇ ಆದರೇನಂತೆ
ಅಲ್ಲಿ ಸ್ವಾತಂತ್ರ್ಯವಿದೆ ನಗಲು"
"ಜಗದ ವಾಸ್ತವ ಸೃಷ್ಟಿಗೆ
ಬೆಳಕು ಕಮರಿ ಮಾಸಲು
ನೆನಪಿಗೆಂದು ಉಳಿದಿದೆ
ಭಾವನೆಗಳ ಸಾಲು ಸಾಲು"
ಕವಿಗೆ ಪ್ರೀತಿಯ ಸುಂದರ ಬೆಳದಿಂಗಳ ಭಾವನೆಯಿದ್ದಂತೆಯೇ ಬೆಳಕನ್ನು ಹತ್ತಿಕ್ಕುವ ವಾಸ್ತವಗಳ ಅರಿವೂ ಇದೆ, ಆದರೆ ನೆನಪಿನಲ್ಲಾದರೂ ಸುಂದರ ಭಾವನೆಗಳನ್ನು ಉಳಿಸಿಕೊಳ್ಳುವ ಉಮೇದು ಇದೆ. ಈ ಉಮೇದಿನಲ್ಲಿ ಹುಟ್ಟಿದ ಸಾಲುಗಳು ಮುಂದಿನಂತಿವ
"ನೋಡುವ ಕಣ್ಣಿಗೆ ಮಾತನಾಡುವ ಬಾಯಿಗೆ ದಣಿವಾಗಬಹುದು ಭಾವನೆಯ ನೋಟಕೆ ಮನಸಿನ ಮಾತಿಗೆ ದಣಿವೇ ದೂರಾಗುವುದು" (ದಣಿವು)
ಸಾರಿಕ ಅವರ ಭಾವಕೋಶದ ಭಾಗವಾಗಿ ಪ್ರೀತಿ ಅರಳಿರುವ, ಕಾಡಿರುವ ಕವನಗಳು ಈ ಸಂಕಲನದಲ್ಲಿವೆ.
* ಅರಿವಿಲ್ಲದೆ ಆಗುವ ಪ್ರೀತಿಗೆ ಯಾರು ಹೊಣೆಗಾರರು? ತಿಳಿಯದೇ ಅಳಿಸುವ ಪ್ರೀತಿಗೆ ಕಾರಣವಲ್ಲ ಬೇರೆಯವರು ಆಗಬೇಕು ಉಳಿಸಲು ಪ್ರೀತಿಗೆ ನಾವೇ ಕಾವಲುಗಾರರು" (ಕಾವಲು)
ಪ್ರೀತಿ ಕುರಿತ ಕವಿಯ ಅನಿಸಿಕೆಯನ್ನು ಮೇಲಿನ ಸಾಲುಗಳಲ್ಲಿ ಕಾಣಬಹುದು. ಅಂತ್ಯವಿಲ್ಲದ ಒಲವಿನ ಬಗ್ಗೆ ರೂಪಾತ್ಮಕವಾಗಿ ಸೊಗಸಿನಿಂದ ಕೂಡಿದ ಸಾಲುಗಳು ಮುಂದಿನಂತಿವೆ:
ಒಲವ ಹುಡುಕಲೆಂದೇ
ಕಡಲ ಸೇರಿದೆ ಅಂತ್ಯವೆಲ್ಲಿದೆ?
ಒಂದೊಂದು ಅಲೆಗಳದೂ ಹುಟ್ಟಿನ ಆರಂಭವೇ "
ಸಾಮಾನ್ಯವಾಗಿ ಸರಳ ನುಡಿಗಳಲ್ಲಿ ಮಿಡಿಯುವ ಕವಿಯ ಭಾವನೆಗಳಿಗೆ ಅಪರೂಪಕ್ಕೊಮ್ಮೆ ರೂಪಕ ಶಕ್ತಿಯೂ ಲಭ್ಯವಾಗಿದೆ. ಇದಕ್ಕೆ ನಿದರ್ಶನವಾಗಿ "ಪರೋಪಕಾರ" ಎಂಬ ಕವಿತೆಯನ್ನ ಗಮನಿಸಬಹುದು:
* ಬಾನಲ್ಲಿ ಮೂಡಿದ ಮೊಡಗಳ ಚಿತ್ತಾರವು ಹೊಸ ಕನಸುಗಳ ಹೊತ್ತು ನಿಂತಿತ್ತು ಅದಕರಿವಿಲ್ಲದೆ ನನಸಾಗದೆ ಗೋಪುರವು ಶಾಶ್ವತವಾಗಿ ಕರಗಿ ನೀರಾಗಿತ್ತು" ಇಂಥ ಸಾಲುಗಳು ರೂಪಕಾತ್ಮಕ ಅರ್ಥಪೂರ್ಣತೆಯಿಂದ ಕೂಡಿದ್ದು ಕವಿಯ ಬಗ್ಗೆ ಹೆಚ್ಚಿನ ನಿರೀಕ್ಷೆ ಮೂಡಿಸುತ್ತದೆ. ಪ್ರೀತಿ, ಕನಸುಗಾರಿಕೆ, ಭಾವಲಹರಿಗಳಲ್ಲದೆ ಸಮಾಜದಲ್ಲಿರುವ ಅಸಮಾನತೆಯ ಬಗ್ಗೆಯೂ ಸಾರಿಕ ಬರೆದಿದ್ದಾರೆ. ಇದಕ್ಕೆ ನಿದರ್ಶನವಾಗಿ "ತಾರತಮ್ಮ" ಎಂಬ ರಚನೆಯನ್ನು ನೋಡಬಹುದು. "ಹಸಿದು ಬಾಯಾರಿದ ಹೊಟ್ಟೆಗೆ ತುತ್ತು ಅನ್ನದಾ ಚಿಂತೆ. ಎಲ್ಲಾ ಇದ್ದು ಹೆಚ್ಚಾದವನಿಗೆ ಅದ ಕರಗಿಸುವಾ ಚಿಂತೆ"
ಹೀಗೆ ನೇರವಾಗಿ ವಾಚ್ಯದಲ್ಲಿ ವಾಸ್ತವವನ್ನು ಧಾಕಲಿಸುತ್ತಲೇ “ ಎಲ್ಲರೂ ಬದುಕುವೀ ಬದುಕಿಗೆ ತಾರತಮ್ಯವೇ ಅಲಂಕಾರವಂತೆ" ಎಂದು ವ್ಯಂಗ್ಯದಲ್ಲಿ ಧ್ವನಿಸುತ್ತಾರೆ. ಸಾಮಾಜಿಕತೆಗಿಂತ ವೈಯಕಿತೆಯೇ ಹೆಚ್ಚಾಗಿ ಆವರಿಸಿಕೊಂಡಂತೆ ಕಾಣುವ ಕೆಲವು ಕವನಗಳು ಅದರಾಚೆಗೂ ಚಲಿಸುವ ಸಾಧ್ಯತೆಗಳನ್ನು ಒಳಗೊಂಡಿರುವುದುಂಟು, ಸಾರಿಕ ಅವರ ಕವನಗಳು ಪ್ರೀತಿಯ ಕನವರಿಕೆ, ಕನಸುಗಾರಿಕೆ, ಚಡಪಡಿಕೆಗಳು ಅದೇ ಭಾವದವರಲ್ಲಿ ಸಾಮಾನೀಕೃತ ಮನಸ್ಸಾಗಿ ಮೂಡುವ ಸಂವೇದನೆಯನ್ನು ಹೊಂದಿವೆ. ಆದರೆ ಭಾವಗಳು ಲಹರಿಯ ರೂಪ ತಾಳುತ್ತಾ ವಸ್ತು-ವಿನ್ಯಾಸಗಳ ಸಾವಯವ ಸಂಬಂಧವನ್ನು ಸಾಧ್ಯವಾಗಿಸುಕೊಳ್ಳುವಲ್ಲಿ ಸೊರಗುವುದೂ ಉಂಟು. ನಿರ್ದಿಷ್ಟ ಭಾವ ಲಯದಲ್ಲಿ ಸಾಗುತ್ತಲೇ ಬಂಧಭಂಗವಾಗುವುದುಂಟು. ಇಷ್ಟಾಗಿಯೂ ಸಾರಿಕ ಅವರಲ್ಲಿ ಕವಿ ಮನಸ್ಸು ಸದಾ ಸಂಚರಿಸುತ್ತದೆ.ಏರಿಳಿತದ ಭಾವ ಸಂಬಂಧವನ್ನು ಹೊಂದಿದೆ. ತನ್ನೊಳಗೇ ಅನುಸಂಧಾನಿಸುತ್ತದೆ. ರೂಪಗೊಳ್ಳುತ್ತಿರುವ ಕವಿ ವ್ಯಕ್ತಿತ್ವದ ಸೂಚನೆಗಳನ್ನೂ ಕೊಡುತ್ತದೆ.”