ಬೆಳಗಾನೆ ಎದ್ದು ನಾ ಯಾರ್ಯಾರ ಒದೆಯಲಿ?

ಬೆಳಗಾನೆ ಎದ್ದು ನಾ ಯಾರ್ಯಾರ ಒದೆಯಲಿ?

ಬರಹ

ಇಂದು ಬೆಳಗ್ಗೆ ಎಂದಿಗಿಂತ ಅರ್ಧ ಗಂಟೆ ಬೇಗನೆ ಎದ್ದ ಕುಚೇಲನಿಗೆ ಒಂದು ದೊಡ್ಡ ಜಿಜ್ಞಾಸೆ ಹುಟ್ಟಿಕೊಂಡಿತು. ಹುಲುಮಾನವರು ಹಾಸಿಗೆಯಿಂದೇಳುತ್ತಿದ್ದ ಹಾಗೆಯೇ ತಮ್ಮ ಅಂಗೈಯಲ್ಲಿ ದೇವಾಧಿದೇವತೆಗಳನ್ನು ಕಲ್ಪಿಸಿಕೊಂಡು ಅವರಿಗೆ ನಮಿಸಿಯೋ, ಕೋಣೆಯಲ್ಲಿ ನೇತು ಹಾಕಿಕೊಂಡ ದೇವರ ಪಟಕ್ಕೆ ಕೈ ಮುಗಿಯುತ್ತಲೋ, ಎಡ ಮಗ್ಗುಲಲ್ಲಿ ಎದ್ದೆವಾ ಎಂದು ಗಾಬರಿಯಾಗುತ್ತಲೋ, ರಾತ್ರಿಯ ಗುಂಡು ಜಾಸ್ತಿಯಾಯಿತಾ ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಲೋ, ನಿದ್ರೆ ಕೆಡಿಸಿ ಎಚ್ಚರಿಸಿದ ಹಾಲಿನವನನ್ನೋ, ಪೇಪರ್‌ನವನನ್ನೋ ಬೈದುಕೊಳ್ಳುತ್ತಲೋ, ಇಷ್ಟು ಬೇಗ ಬೆಳಕಾಯಿತಾ ಎಂದು ಅಚ್ಚರಿಗೊಳ್ಳುತ್ತಲೋ, ಮಾಡಬೇಕಾದ ಕೆಲಸಗಳ ಪಟ್ಟಿ ತಯಾರಿಸುತ್ತಲೋ, ದೂರದಲ್ಲಿರುವ ಹೆಂಡತಿಯ ಮುಂಗುರಳನ್ನು ನೆನಪಿಸಿಕೊಳ್ಳುತ್ತಲೋ, ಪರೀಕ್ಷೆಗೆಷ್ಟು ದಿನಗಳಿವೆ ಎಂದು ಲೆಕ್ಕ ಹಾಕುತ್ತಲೋ, ತಿಂಗಳ ಮುನಿಸಿಗಿನ್ನೆಷ್ಟು ದಿನ ಎಂದು ಗುಣಿಸುತ್ತಲೋ ಬೆಳಗನ್ನು ಸ್ವಾಗತಿಸುತ್ತಾರೆ. ಆದರೆ ಸಾಮ್ರಾಟರ ಚೇಲನಾದ ಕುಚೇಲ ಇಂದು ಬೆಳಿಗ್ಗೆ ಎದ್ದಾಗ ಆತನಲ್ಲಿ ಒಂದು ಪ್ರಶ್ನೆ ಹುಟ್ಟಿಕೊಂಡಿತ್ತು. ಬೆಳಗಾನ ಎದ್ದು ನಾ ಯಾರ್ಯಾರ ನೆನೆಯಲಿ ಎಂದು ಹಡಿದ ಜನಪದದ ಹೆಣ್ಣು ಮಗಳನ್ನು ನೆನೆಸಿಕೊಂಡು ಆತ ‘ಬೆಳಗಾನ ಎದ್ದು ನಾ ಯಾರ್ಯಾರ ಒದೆಯಲಿ...’ ಎಂದು ಒರಲತೊಡಗಿದ.

311.beating

ಪಬ್ಬಿನೊಳಗೆ ನುಗ್ಗಿ ಮದಿರೆಯ ಮಬ್ಬಿನಲ್ಲಿ ಉಬ್ಬಿ, ಹಣದ ಕೊಬ್ಬಿನಲ್ಲಿ ಗಬ್ಬು ಗಬ್ಬಾಗಿ ತೂರಾಡಿ, ಹಾರಾಡಿ, ಕುಣಿದಾಡಿ, ಹೊರಳಾಡಿ ರಾಡಿ ಮಾಡುವವರನ್ನು ಅಟ್ಟಾಡಿಸಿಕೊಂಡು ಒದೆಯಲೇ ಎಂದು ಆಲೋಚಿಸಿದ. ಆದರೆ ಆ ಕೆಲಸವನ್ನು ‘ಉತ್ತಮ ಸಮಾಜಕ್ಕಾಗಿ’ ಟೊಂಕ ಕಟ್ಟು ನಿಂತ ಟಿವಿ ಚಾನೆಲ್ಲುಗಳ ಕೆಮರಾ ಹಾಗೂ ಕೆಮರಾ ಮನ್ನುಗಳ ಎದುರಲ್ಲೇ ಹಿಗ್ಗಾಡಿ ಜಗ್ಗಾಡಿ ಒದೆ ಕೊಟ್ಟು ಜಗತ್ತಿನಾದ್ಯಂತ ಹೆಸರು ಮಾಡಿಬಿಟ್ಟಿದ್ದಾರೆ. ‘ಸಂಸ್ಕೃತಿಯ ರಕ್ಷಕರು’ ಅಂತ ಬಿರುದು ಪಡೆದುಬಿಟ್ಟಿದ್ದಾರೆ.

ಇನ್ನು ನಮ್ಮ ನೆಲಕ್ಕೆ ಬಂದು ಇಲ್ಲಿನ ನೀರು, ಗಾಳಿ, ಮಣ್ಣು, ಕರೆಂಟು, ಪಿಜ್ಜಾ, ಬರ್ಗರು, ಕೋಕು ಎಲ್ಲಾ ಬಳಸಿಕೊಂಡು ಇಲ್ಲೇ ಮನೆ ಮಾಡ್ಕಂಡು ಹೆಂಡ್ತಿ ಮಕ್ಕಳು ಮಾಡ್ಕಂಡು ಇಲ್ಲಿಯವರ ಭಾಷೆಗೆ ಕವಡೆ ಕಾಸಿನ ಬೆಲೆ ಕೊಡದವರನ್ನು ಮನೆಗಳಿಂದ, ಆಫೀಸುಗಳಿಂದ, ನೌಕರಿಯ ಅರ್ಹತೆಯ ಪರೀಕ್ಷೆಯ ಕೊಠಡಿಗಳಿಂದ ಎಳೆದು ತಂದು ಬೀದಿಗೆ ಕೆಡವಿ ಬಡಿಯೋಣ ಅನ್ನಿಸಿತು. ಆದರೆ ಈಗಾಗಲೇ ಅಸಂಖ್ಯಾತ ಪಡೆಗಳು, ವೇದಿಕೆಗಳು, ಬಣಗಳು, ಸೇನೆಗಳು ಆ ಕೆಲಸವನ್ನು ಮಾಡುತ್ತಾ ಕ್ರೆಡಿಟ್ಟು ಪಡೆದುಕೊಳ್ಳುವುದಕ್ಕೆ ಕೋಳಿ ಜಗಳ ನಡೆಸುತ್ತಿವೆ. ಅವರ ಮಧ್ಯೆ ತಾನು ಹೋದರೆ ಜಜ್ಜಿ ಬಜ್ಜಿಯಾಗುವುದು ಖಂಡಿತಾ ಎಂಬುದು ಮನವರಿಯಾಯಿತು.

ಸಾವಿರಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಸನಾತನ ಧರ್ಮ, ಜಗತ್ತಿನಲ್ಲೇ ಶ್ರೇಷ್ಠವಾದ ಧರ್ಮಕ್ಕೆ ಕೊಡಲಿ ಪೆಟ್ಟು ಕೊಡುವುದಕ್ಕೆ, ಇಡೀ ದೇಶವನ್ನೇ ಕ್ರೈಸ್ತಮಯವಾಗಿಸುವುದಕ್ಕೆ ಟೊಂಕಕಟ್ಟಿ ನಿಂತಿರುವ ಮಿಶಿ‘ನರಿ’ಗಳ ಚರ್ಚುಗಳಿಗೆ ಕಲ್ಲು ಬೀರಿ ಆ ನರಿಗಳನ್ನು ಹಿಡಿದು ದೊಣ್ಣೆಯಲ್ಲಿ ಬಡಿಯೋಣ ಜೊತೆಗೆ
ದೇಶಕ್ಕೆ ಬೆಂಕಿ ಹಚ್ಚುವವರು, ಭಯೋತ್ಪಾದಕರು, ಪಾಕಿಸ್ತಾನದ ಏಜೆಂಟುಗಳು ಎಂದು ಕಂಡ ಕಂಡ ಮುಸ್ಲೀಮರನ್ನು ಕಂಡಲ್ಲಿ ಅಟ್ಟಿಸಿಕೊಂಡು ಹೋಗಿ ಬಡಿಯೋಣ ಎಂಬ ಆಲೋಚನೆ ಬಂತು. ಆಗಲಾದರೂ ದೇಶವನ್ನು ಕಾಪಾಡಿದ, ದೇಶದ ಭವಿಷ್ಯದ ಬಗ್ಗೆ, ಭದ್ರತೆಯ ಬಗ್ಗೆ ಗಂಭೀರವಾಗಿ ಕೆಲಸ ಮಾಡಿದ ಹೆಸರು ಬರಬಹುದು ಅನ್ನಿಸಿತು. ಆದರೆ ತನ್ನ ಮನೆಗೆ ಬೆಳಿಗ್ಗೆ ಹಾಲು ಹಾಕುವವನಿಂದ ಹಿಡಿದು ರಾತ್ರಿ ಬೀಡ ಕೊಂಡು ಕೊಳ್ಳುವ ಅಂಗಡಿಯವನವರೆಗೆ ಎಲ್ಲರೂ ಮುಸ್ಲೀಮರೇ, ಇಲ್ಲ ಕ್ರೈಸ್ತರೇ. ಮಗಳ ಶಾಲೆ, ಮಗನ ಕಾಲೇಜು, ಈಕೆಯ ಆಸ್ಪತ್ರೆ ಎಲ್ಲವೂ ಆ ಕಿರಿಸ್ತಾನದವರೇ ನಡೆಸ್ತಿರೋದು. ಇನ್ನು ಕುಚೇಲನ ಪತ್ತೇದಾರಿಕೆಗೆ ಬರುವ ಕೇಸುಗಳು ಸಹ ಹಿಂದೂ, ಮುಸಲ್ಮಾನ, ಕ್ರೈಸ್ತ ಎಂದು ಬೇಧ ಕಾಣದಂತವು. ಇವರಿಬ್ಬರಲ್ಲಿ ಯಾರಿಗೆ ಒದ್ದರೂ  ಆ ಏಟು ಕಡೆಗೆ ತನ್ನ ಹೊಟ್ಟೆಗೇ ಬಂದು ಬೀಳುತ್ತೆ .

ತಾಸೆರಡು ತಾಸು ಉರುಳಿದರೂ ಕುಚೇಲನ ಗೊಂದಲಕ್ಕೆ ಪರಿಹಾರವೆಂಬುದು ಸಿಕ್ಕಲೇ ಇಲ್ಲ. ಕಡೆಗೆ ಒದೆಯುವುದಕ್ಕೆ ಹೊರಗೆ ಯಾರನ್ನೋ ಹುಡುಕಿಕೊಂಡೇಕೆ ಅಲೆಯುವುದು, ಮನೆಯಲ್ಲಿರುವ ಹೆಂಡತಿ ಸಾಕಲ್ಲವೇ ಅನ್ನಿಸಿತು. ಆಕೆ ಕೊಟ್ಟ ಕಾಫಿ ಬಟ್ಟಲನ್ನು ನೆಲಕ್ಕೆ ಬಿಸಾಕಿ ನಾಲ್ಕು ಡೈಲಾಗು ಒಗೆದು ನಾಲ್ಕು ಬಿಗಿಯಬಹುದು ಅನ್ನಿಸಿ ಸಂತೋಷವಾಯ್ತು. ಮರುಕ್ಷಣದಲ್ಲೇ ಡೊಮೆಸ್ಟಿಕ್ ವಯಲೆನ್ಸ್ ಆಕ್ಟಿನ ಕಲಮುಗಳು ಕಣ್ಮುಂದೆ ಹರಿದು ಹೋದವು. ಆದರೆ ಅವುಗಳಿಂದ ಆತ ವಿಚಲಿತನಾಗಲಿಲ್ಲ. ಒಂದು ವೇಳೆ ಆಕೆ ತಿರುಗಿ ಎರಡು ಕೊಟ್ಟರೆ ಎಂದು ಭಯವಾಗಿ ಆ ಯೋಜನೆ ಕೈ ಬಿಟ್ಟ.

ಮಕ್ಕಳ ಇನ್ಸ್ಪೆಕ್ಷನ್ ಮಾಡಿ ಕೆದರಿದ ಕೂದಲು, ಮಣ್ಣುಗಟ್ಟಿದ ಉಗುರು, ಕೊಳೆಯಾದ ಕಾಲ್ಚೀಲ, ಹರಿದ ಸ್ಕೂಲ್ ಬ್ಯಾಗು, ಸೋರುವ ಮೂಗು, ಸಂಪೂರ್ಣವಾಗದ ಹೋಂ ವರ್ಕು, ಸಂತೃಪ್ತಿ ತರದ ಮಾರ್ಕ್ಸ್ ಕಾರ್ಡನ್ನು ನೆಪವಾಗಿಟ್ಟುಕೊಂಡು ಕತ್ತೆಗೆ ಒದ್ದ ಹಾಗೆ ಒದೆಯೋಣ ಅಂದುಕೊಂಡ. ಆದರೆ ಮಕ್ಳು ತನಗಿಂತ ಜಾಣ್ರು ತನಗಿಂತ ಸ್ವಚ್ಛವಾಗಿವೆ. ಅಪ್ಪ, ಊಟ ಮಾಡೋ ಮುಂಚೆ ಕೈ ತೊಳೀಬೇಕು ಅಂತ ನಂಗೇ ಪಾಠ ಹೇಳಿಕೊಡಲು ಬರ್ತವೆ. ಹೋಂವರ್ಕ್ ನೋಡೋಕೆ ಹೋದ್ರೆ ಅಪ್ಪ ನಿಂಗೆ ಟ್ರಿಗ್ನಾಮೆಟ್ರಿ ಗೊತ್ತಾ ಅಂತ ನಮ್ ಹೈಸ್ಕೂಲು ಮೇಷ್ಟ್ರು ಹೆದರಿಸ್ತಿದ್ದ ಹಾಗೆ ಹೆದರಿಸ್ತಾರೆ!

ಇನ್ನೇನು ಮಾಡಲು ತೋಚದೆ ಕುಚೇಲ ಸಾಮ್ರಾಟರ ಬಳಿ ಬರುತ್ತಾನೆ. ಯಾರನ್ನು ಒದೆಯಲಿ ಎನ್ನುತ್ತಾ ತಲೆ ಕೆರೆದು ನಿಲ್ಲುತ್ತಾನೆ. ಸಾಮ್ರಾಟರು ಆತನಿಗೆ ಪೂರ್ವಕ್ಕೆ ಮುಖ ಮಾಡಲು ಹೇಳಿ ಜಾಡಿಸಿ ಒದೆಯುತ್ತಾರೆ. “ನಂಗೂ ಬೆಳಗಿಂದ ಇದೇ ಚಿಂತೆ ಆಗಿತ್ತು” ಎಂದು ಹಾಯಾಗಿ ಹೊರಟು ಹೋಗುತ್ತಾರೆ!

(ಚಿತ್ರ ಕದ್ದದ್ದು ಇಲ್ಲಿಂದ: http://www.ismennt.is/not/briem/text/3/31/311.what.works.html )