ಬೆಳಗಾಯಿತೇಳು- ಪ್ರಕಾಶ ಲಹರಿ

ಬೆಳಗಾಯಿತೇಳು- ಪ್ರಕಾಶ ಲಹರಿ

ಕವನ

ಬೆಳಕಾಯಿತೇಳು

   ಏಳೆನ್ನ ಹೃದಯ ಕನ್ಯೆ!

ತಮ  ಸರಿಯಿತೇಳು

‌ಸುಮ ಬಿರಿಯಿತೇಳು

    ತೆರೆಯುತಿದೆ ಜಗದ ಕಣ್ಣೆ!

 

ಖಗ ಗಾನದಿಂಪು

ಹೂ ಹೂವ ಕಂಪು ಸಿರಿ

   ಹೊತ್ತು ಸುತ್ತಿ ಸುಳಿದು

ತಂಬೆಲರು ಬಂದು

ಕರಕರೆಯುತಿಹುದು 

   ಏಳೇಳು ಚೆನ್ನೆ ಎಂದು!

 

ಹೊಸಿಲು  ತೊಳೆದು

ಬಾನಗಲಕುಷೆಯು

   ಸುರ ಗಂಧ ವಾರಿಯಲ್ಲಿ

ರಾಗ ರಸದ ಹೊಂ-

ಬಣ್ಣಗಳಲಿ

   ಬರೆಯುವಳು ರಂಗವಲ್ಲಿ!

 

ಸುಮಾರು  ದ್ರುಮದ

ಸಕುಮಾರ ‌ಸ್ವಪ್ನ

   ಉದುರುದುರಿ ಬಿತ್ತು ಧರೆಗೆ

ಎಸೆದೆದ್ಧವೆಲ್ಲ 

ನಿಶಿಯೊಡಲ ಹದುಳ

   ಹೊಸ ಬಾಳ ಬೆಳಕ ಕರೆಗೆ!

 

ಮೊಳಗುತಿಹುದು 

ಖಗ ಮೃಗದ ಮುಗ್ಧ

   ಆಮೋದ ಖೇದ ಲಹರಿ!

ಜೀವ    ಜಗದ

ಉತ್ಥಾನ ಪಥದ

   ತುತ್ತೂರಿ ವಿಜಯ ಭೇರಿ!

 

ಗಂಧ ಗಾನ ರ‌ಸ

ವರ್ಣ  ರೂಪ

   ಸಂರಂಭ ವೈಭವದಲಿ

ಬಂದು ಸಚ್ಚಿದಾ-

ನಂದ ತಾನೆ

   ನಲಿದಿಹನು ಬೆಳಕೊಳಿಲ್ಲಿ!

 

ನೆಲದ ಬಾನೊಳೆಲ್ಲ

ಅನುರಾಗ ರಂಗು

   ಬಂಗಾರ ನಗೆಯ ಚೆಲ್ಲಿ

ಕರೆಯುವನು ನಿನ್ನ

ಶೃಂಗಾರವಾಗಿ

   ಹೊಸ ಬಾಳ ಪಯಣಕಿಲ್ಲಿ!

 

ಇಲ್ಲೆ  ನಿನ್ನ ಬಗೆ

ಬಾಗಿಲಲ್ಲೆ 

   ತೆರೆ ಮರೆಗೆ ನಗುತ ನಿಂದು

ಕಾಯುತಿಹನು 

ಕ್ಷಣ ಕ್ಷಣದನಂತ

   ಅರವಿಂದ ಹಾರ ಹಿಡಿದು!

 

ಏಳು ಕಣ್ಣ ತೆರೆ,

ಸ್ವಪ್ನ  ಶಯನೆ

   ಪರಿಣಯಕೆ ಪ್ರಾಣ ಕನ್ಯೆ!

ಅಣಿಯಾಗು ಅರಳಿ

ನಿನ್ನೊಲುಮೆ ಒಳಗೆ

   ನಳನಳಿಸುತಿರಲಿ ,ಧನ್ಯೆ!

 

ಕ್ಷಣ ಕ್ಷಣಕು ನಿನಗೆ

ಹೊ‌ಸ ಬದುಕು ಬೆರಗು

   ಈ ನಲ್ಮೆ ಬೆಳಗಿನಲ್ಲಿ!

ನಡೆನಡೆಗು ಹಾಡು 

ಹೂ ಹಿಗ್ಗು ಒಲವಿ-

   ನೊಡನಾಟ ಸಲುಗೆಯಲ್ಲಿ!

 

ಬೆಳಗಾಯಿತೀಗ!

ಬೆಳಕಾಯಿತೀಗ

   ನೀನೆದ್ದು ಹೃದಯಕನ್ಯೆ!

ತಮ ಸರಿಯಿತೀಗ

‌ಸುಮ ಬಿರಿಯಿತೀಗ

   ತೆರೆದೊಳಗೆ ಒಲುಮೆಗಣ್ಣೆ!

   ಅಹ! ನೀನು ಧನ್ಯೆ ಧನ್ಯೆ!

 

ಭಾವಸೂಚಿ:  ಕವಿಯು ತನ್ನ ಹೃದಯಕ್ಕೆ ಪಿಸುನುಡಿಯುತ್ತಿದ್ದಾನೆ.

ಜಗತ್ತಿಗೆ ಬೆಳಗಾಗಿದೆ.ಆ ಸಂಭ್ರಮ-

 ವನ್ನು ನೋಡು.ಅಷ್ಟು ಮಾತ್ರವಲ್ಲ.

ನಿನ್ನ ಒಳಗಣ್ಣು ತೆರೆದರೆ, ನಿಸರ್ಗದ

ಮರೆಯಲ್ಲಿ ನಿನಗೆ ಒಂದು ಮೌನ

ಆಹ್ವಾನವಿದೆ.ನಿನ್ನ ಅಂತರಂಗದ 

ಪ್ರಿಯಕರನು ಅನಂತ ಕಾಲದಿಂದ

ನಿನ್ನ ಜೊತೆ ಬಾಳ ಪಯಣಕ್ಕೆ ಕಾಯುತ್ತಿದ್ದಾನೆ.ಆ ಪಯಣ ಆರಂಭ

ವಾದಾಗಲೇ ನಿನಗೆ ನಿಜವಾದ ಬೆಳಗು.ಈಗ ನೀನು ಆ ಒಲುಮೆಯ 

ಕರೆಗೆ ‌ಸ್ಪಂದಿ‌ಸಿದೆ! ಇನ್ನು ನಿನ್ನ ಹೊಸ

ಬೆಳಕಿನ ಬದುಕು‌ ಆರಂಭ.

ತಮಸೋ ಮಾ ಜ್ಯೋತಿರ್ಗಮಯ !

ಚಿತ್ರ ಕೃಪೆ: ಅಂತರ್ಜಾಲ ತಾಣ

ಚಿತ್ರ್