ಬೆಳಗಿನ ಚಿಂತನ ಮತ್ತು ಒಂದು ಒಳ್ಳೆಯ ನುಡಿ

ಬೆಳಗಿನ ಚಿಂತನ ಮತ್ತು ಒಂದು ಒಳ್ಳೆಯ ನುಡಿ

ಕಗ್ಗಂಟು

ನಾನೋರ್ವನೇ, ನನಗೆ ಯಾರೂ ಇಲ್ಲ, ನಾನು ಏಕಾಂಗಿ, ನನ್ನನ್ನು ಯಾರೂ ಗಮನಿಸುವುದಿಲ್ಲ, ಗುರುತವೇ ಇಲ್ಲ, ಪ್ರೀತಿ ಯಾರಿಗೂ ನನ್ನ ಮೇಲಿಲ್ಲ, ವಿಶ್ವಾಸ ಮೊದಲೇ ಇಲ್ಲ, ನನ್ನನ್ನು ಯಾರೂ ನಂಬುವುದಿಲ್ಲ ಎಂಬ ಕೀಳರಿಮೆ ಒಮ್ಮೊಮ್ಮೆ ಆವರಿಸಿಬಿಡುತ್ತದೆ.

ನನ್ನ ತಲೆ ಅಡಿಗೆ ನನ್ನ ಕೈ, ಬೇರೆಯವರು ಯಾರೂ ಕೈಹಿಡಿದು ಎತ್ತುವುದಿಲ್ಲ, ಅಯ್ಯೋ ನನ್ನ ಗತಿ ಏನಾಗಿಹೋಯಿತು, ನಾನೇನು ಮಾಡಲಿ ದೇವರೇ ಅಂತ ಕಳವಳಗೊಳ್ಳುವುದು, ಬಿಡಿಸಲಾರದ ಕಗ್ಗಂಟಾಗಿ ಬಿಡುತ್ತದೆ. ಇದು ಕೆಲವರಲ್ಲಿ ಕ್ಷಣ ಕಾಲ ಇರುತ್ತದೆ. ಕಳವಳ ಎನ್ನುವುದು ಒಂದು ಸಂಚಾರಿಭಾವ.

ಇನ್ನೂ ಕೆಲವರಲ್ಲಿ ಸ್ಥಿರವಾಗಿಬಿಡುತ್ತದೆ. ಅವರು ಮೋಡ ಕವಿದ ಆಗಸದ ತರ ಇರುತ್ತಾರೆ. ಮೊಗದಲ್ಲಿ ಮಂದಹಾಸ, ಕಿರು ನಗೆ ಇಲ್ಲವೇ ಇಲ್ಲ. ಇದಕ್ಕೆ ಖಿನ್ನತೆ ಅಂತ ಹಣೆಪಟ್ಟಿ ಕಟ್ಟುವವರೂ ಇದ್ದಾರೆ. ಸರಿಯಾದ ಸಮಯಕ್ಕೆ ಆತನಿಗೆ ಸಾಂತ್ವನ ಸಿಕ್ಕಿದರೆ, ಸಹಾಯ ಹಸ್ತ ಚಾಚಿದರೆ ಈ ಕಳವಳವನ್ನು, ಕಗ್ಗಂಟನ್ನು ಬಿಡಿಸಬಹುದು.

ಉತ್ತಮ ಸ್ನೇಹಿತರು, ಒಳ್ಳೆಯ ಪುಸ್ತಕಗಳು, ದೇವರ ಸ್ತೋತ್ರಗಳು, ವಾಯುವಿಹಾರ, ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ, ಕುಟುಂಬದವರ ಸ್ನೇಹ, ಪ್ರೀತಿ, ಗೌರವ, ಆದರಣೆ ದೊರೆತಾಗ, ಇಂತಹ ಕಳವಳಗಳು ದೂರವಾಗಬಹುದು.

ಈ ಸಮಯದಲ್ಲಿ ನಾವು ದುಶ್ಚಟಗಳಿಗೆ ಬಲಿಯಾಗ ಬಾರದು. 'ಸಜ್ಜನರ ಸಂಗ ಹೆಜ್ಜೇನು ಸವಿದಂತೆ'ಅದನ್ನು ಮಾಡೋಣ. ಪ್ರಕೃತಿಯ ಮಡಿಲಲ್ಲಿ ಒಂದಷ್ಟು ಕಾಲ ಕಳೆಯೋಣ. ಸಮುದ್ರದ ದಂಡೆ ಲಭ್ಯವಿದ್ದಲ್ಲಿ ಒಂದಷ್ಟು ಹೊತ್ತು ಅಲ್ಲಿ ಕುಳಿತಾಗ ಮಾನಸಿಕ ನೆಮ್ಮದಿ ಸಿಗಬಹುದು.

ತೋಟಗಾರಿಕೆ ಅತ್ಯಂತ ಒಳ್ಳೆಯ ಹವ್ಯಾಸ. ಹೂಗಿಡಗಳನ್ನು  ಬೆಳೆಸುವುದು ಇನ್ನೂ ಉತ್ತಮ.ಅಂಥವರು ನಮ್ಮ ನಿಮ್ಮ ಸುತ್ತಮುತ್ತ ಇರಬಹುದು. ನಾಲ್ಕು ಸಾಂತ್ವನದ ಮಾತುಗಳನ್ನು ಅವರಿಗೆ ಹೇಳೋಣ ಆಗದೇ?

*****

ಒಂದೊಳ್ಳೆ ನುಡಿ

ಧೋರಣೆ ಅನ್ನುವುದು ಗಾಡಿಯ ಚಕ್ರದೊಳಗಿನ ಗಾಳಿಯಿದ್ದ ಹಾಗೆ. ಗಾಡಿ ಎಷ್ಟೇ ಚೆನ್ನಾಗಿದ್ದರೂ, ಲಕ್ಷಾಂತರ ರೂಪಾಯಿ ಬೆಲೆಬಾಳುವುದಿದ್ದರೂ, ಚಕ್ರದಲ್ಲಿ ಗಾಳಿ ಇಲ್ಲದಿದ್ದರೆ ಮುಂದಕ್ಕೆ ಚಲಿಸಲಾರದು.ನಮ್ಮ ಜೀವನವೂ ಅಷ್ಟೆ. ಉಸಿರಿದ್ದಷ್ಟು ದಿನ ಜೀವನ.

ಎಷ್ಟೋ ಜನರನ್ನು ನಾವು ನಮ್ಮ ಬದುಕಿನ ಹಾದಿಯಲ್ಲಿ ನೋಡುತ್ತೇವೆ. ಅದರಲ್ಲಿ ಹಲವು ನಮೂನೆಯ, ಬೇರೆ ಬೇರೆ ಸ್ವಭಾವದವರನ್ನು ಕಾಣುತ್ತೇವೆ. ಕೆಲವು ಜನರಲ್ಲಿ ಒಳಗಿಂದ ದ್ವೇಷ-ಹೊರಗಿಂದ ಸಣ್ಣ ನಗು. ಇದನ್ನೇ ಮುಖವಾಡ ಅನ್ನುವುದು. ಸರಿಯಾದ ಹೆಸರು ಗೋಮುಖ ವ್ಯಾಘ್ರ.

ಗೋವಿನ ಸಾಧುತ್ವ, ಒಳಗೆ ಹುಲಿಯ ಸ್ವಭಾವ. ಇಂತಹವರ ನಗೆಯಲ್ಲಿ ಸಂತಸವಾಗಲಿ, ಸಹೃದಯತೆಯಾಗಲಿ, ಆತ್ಮೀಯತೆಯಾಗಲಿ, ತಂಪು ಕಂಪುಗಳನ್ನು ಕಾಣಲು ಸಾಧ್ಯವಿಲ್ಲ. ತಮ್ಮೊಳಗಿನ ಹೊಟ್ಟೆಕಿಚ್ಚನ್ನು ಹೊಗೆ ಎಂಬ ನಗೆಯಿಂದ ಮುಚ್ಚಿಹಾಕಲು ಪ್ರಯತ್ನಿಸುತ್ತಾರೆ. ಬೇರೆಯವರ ಅಭ್ಯುದಯ ನೋಡಿ, ಸಹಿಸಲಾರದೆ ಮತ್ಸರ ವ್ಯಕ್ತಪಡಿಸುತ್ತಾರೆ.

ಇನ್ನೊಂದೆಡೆ ದುಃಖ, ಅಸಹಾಯಕತೆ, ಹತಾಶೆ,ಬೇಸರ, ಬೇರೆ ದಾರಿಯೇ ಇಲ್ಲ ಎಂದು ಆದಾಗ ಮೇಲ್ನೋಟಕ್ಕೆ ನಗುವವರೂ ಇದ್ದಾರೆ. ಇದಕ್ಕೆ ದೇಶಾವರಿ ನಗು ಎನ್ನುತ್ತೇವೆ. ಆದರೆ ಆತನ ಕಣ್ಣುಗಳು ನೋವು, ಸಂಕಟವನ್ನು ತೋರ್ಪಡಿಸುತ್ತವೆ.

ಹೂ ಅರಳಿದರೆ ಮಾತ್ರ ಪರಿಮಳ. ಇದರಂತೆ ನಗುವುದೇ ಶ್ರೇಷ್ಠವಾದ ನಗು. ಇದರಲ್ಲಿ ಹುಳುಕಿಲ್ಲ. ಕೃತಕೃತ್ಯತೆಯಿಲ್ಲ. ಮತ್ಸರವಿಲ್ಲ.ಬೇರೆಯವರನ್ನು ಅಪಹಾಸ್ಯ ಮಾಡುವ ನಗುವಲ್ಲ.

ಆದ್ದರಿಂದ ನಾವು ಗೋಮುಖವ್ಯಾಘ್ರಗಳಾಗದೆ,ಸಾಂತ್ವನದ ಹರಿಕಾರರಾಗೋಣ. ಗಾಳಿಯಿರುವ ಚಕ್ರಗಳಾಗೋಣ. ಸಹಜತೆಯ ಮೂರುತಿಗಳಾಗೋಣ. ಇತರರ ಬೇನೆಯನ್ನು ನಿವಾರಿಸುವ ನಗುವಾಗೋಣ. ಸಹಾಯ ಹಸ್ತಗಳಾಗೋಣ. ಬೇಗೆಯನ್ನು ಕರಗಿಸಬಲ್ಲ ನಗುವಿನ ಅಸ್ತ್ರಗಳಾಗಿ ಬದುಕೋಣ.

ನಗುವ, ನಗಿಸುವ, ನಗುವ ಕೇಳುತ ನಗುವ

ನಗುನಗುತ ಬಾಳಪಥದಲಿ ಸಾಗುವ

ತಿಳಿಮನದ ಭಾಗ್ಯಶಾಲಿಗಳೇ ಧನ್ಯರು!

ನಗುವು ಸಹಜದ ಧರ್ಮ 

ನಗಿಸುವುದು ಪರಧರ್ಮ

 ಅಲ್ಲವೇ?

 

ಸಂಗ್ರಹ: ರತ್ನಾ ಭಟ್ ತಲಂಜೇರಿ