ಬೆಳುದಿಂಗಳಲ್ಲಿ ಅರಳಿದ ಮೊಲ್ಲೆ

ಬೆಳುದಿಂಗಳಲ್ಲಿ ಅರಳಿದ ಮೊಲ್ಲೆ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಸ್ವಾಮಿನಾಥ ಅಯ್ಯರ್ ಕನ್ನಡಾನುವಾದ: ಬಿ.ಜಿ.ಎಲ್. ಸ್ವಾಮಿ
ಪ್ರಕಾಶಕರು
ಅಂಕಿತ ಪುಸ್ತಕ, ಬೆಂಗಳೂರು
ಪುಸ್ತಕದ ಬೆಲೆ
ರೂ. 120/-

ಕನ್ನಡ ಸಾಹಿತ್ಯಕ್ಕೊಂದು ಅಪೂರ್ವ ಕೊಡುಗೆ ಈ ಪುಸ್ತಕ. ತಮಿಳಿನ ಅಗ್ರ ಸಾಹಿತಿ ಡಾ. ಸ್ವಾಮಿನಾಥ ಅಯ್ಯರ್ ಅವರ ಆಯ್ದ ಪ್ರಬಂಧಗಳ ಈ ಸಂಕಲನವನ್ನು ಕನ್ನಡಕ್ಕೆ ಅನುವಾದಿಸಿದವರು ಬಿ.ಜಿ.ಎಲ್. ಸ್ವಾಮಿ ಅವರು.

ಮುನ್ನುಡಿಯಲ್ಲಿ ಮೂಲ ಲೇಖಕರನ್ನು ಬಿ.ಜಿ.ಎಲ್. ಸ್ವಾಮಿಯವರು ಪರಿಚಯಿಸಿದ ಪರಿ: “ಕಳೆದ ನೂರು ವರ್ಷಗಳಲ್ಲಿ ತಮಿಳು ನುಡಿ ಸಮೃದ್ಧಿ ಹೊಂದುವುದಕ್ಕೆ ಇಬ್ಬರು ಮಹಾ ಮೇಧಾವಿಗಳು ಕಾರಣವೆಂದು ಹೇಳಬಹುದು. ಒಬ್ಬರು ಪಾಂಡಿತ್ಯ, ಸಂಶೋಧನೆ, ಮುದ್ರಣ ಸಾಮರ್ಥ್ಯ ಮತ್ತು ಋಜುತ್ವವುಳ್ಳವರು. ಮತ್ತೊಬ್ಬರು ಕವಿತ್ವಶಕ್ತಿ, ದೇಶಭಕ್ತಿ, ಭಾವನಾಸಂಪತ್ತುಗಳು ಹೆಚ್ಚಾದವರು. ಮಹಾಮಹೋಪಾಧ್ಯಾಯ ದಾಕ್ಷಿಣಾತ್ಯ ಕಲಾನಿಧಿ ಡಾಕ್ಟರ್ ಸ್ವಾಮಿನಾಥ ಅಯ್ಯರ್ ಮೊದಲನೆಯವರು. ಕವಿಯರಸ ಸುಬ್ರಹ್ಮಣ್ಯ ಭಾರತಿಯವರು ಮತ್ತೊಬ್ಬರು. ….

ಸ್ವಾಮಿನಾಥ ಅಯ್ಯರ್ ಅವರು ಹಳೆಯ ತಮಿಳು ಗ್ರಂಥಗಳನ್ನು ಸಂಪಾದಿಸಿ ಸಂಶೋಧಿಸಿ ಪರಿಶೋಧಿಸಿ ಪ್ರಕಟಿಸಿದ ಮೊದಲಿಗರು. ಗುರುಕುಲ ಶಿಕ್ಷೆಯಿಂದ ಪರಿಪಕ್ವವಾದ ಪಾಂಡಿತ್ಯ, ನಲುವತ್ತು ವರ್ಷಗಳಿಗೆ ಮೇಲ್ಪಟ್ಟು ಉಪಾಧ್ಯಾಯ ವೃತ್ತಿ, ಸತತಾಭ್ಯಾಸ - ಇವುಗಳ ಬೆಸುಗೆಯಿಂದ ರೂಪಿತವಾದದ್ದು ಅವರ ಸ್ವಚ್ಛವಾದ ಗದ್ಯಶೈಲಿ….

ಅಯ್ಯರ್ ಅವರ ಗದ್ಯ ನಡೆನುಡಿಗಳಲ್ಲೂ ಆಡುಮಾತಿಗೆ ಹತ್ತಿರವಾದದ್ದು; ವಿಷಯವನ್ನು ತಿಳಿಸುವ ಬಾಣಿ ಪ್ರವಚನ ಶೈಲಿಯದು. “ಈ ಶೈಲಿಯಲ್ಲಿ ಸದಾಚಾರವೂ ಸಂಸ್ಕೃತಿಯೂ ಗಮಗಮಿಸುತ್ತಿರುವುದು. ಪಾಂಡಿತ್ಯವೂ ಪ್ರಸಾದವೂ ಒಂದುಗೂಡಿವೆ. ಅರಿವೂ ಸವಿಯೂ ಹೆಣೆದುಕೊಂಡಿವೆ.” …. ಸಾಹಿತ್ಯ ಸಂಗೀತ ವಿದ್ಯೆಗಳನ್ನು ಕರಗತ ಮಾಡಿಕೊಂಡವರು; ಸಾಹಿತಿಗಳೊಡನೆಯೂ ಸಂಗೀತ ವಿದ್ವಾಂಸರೊಡನೆಯು ಚೆನ್ನಾಗಿ ಪಳಗಿದವರು.”

ಸ್ವಾಮಿನಾಥ ಅಯ್ಯರ್ ಬರೆದ ನೂರಾರು ಗದ್ಯ ಪ್ರಬಂಧಗಳಲ್ಲಿ 43 ಪ್ರಬಂಧಗಳನ್ನು ಆಯ್ದು, ಅನುವಾದಿಸಿ ನಮಗೆ ರಸದೌತಣ  ಉಣಬಡಿಸಿದ್ದಾರೆ ಬಿ.ಜಿ.ಎಲ್. ಸ್ವಾಮಿಯವರು. ಮೂಲಲೇಖಕರ ಶೈಲಿಯ ಸತ್ವವನ್ನು ಕನ್ನಡದಲ್ಲಿ ತಂದಿರುವುದು ಅವರ ವಿಶೇಷ ಸಾಧನೆ.

ಮುನ್ನುಡಿಯ ನಂತರದ ಲೇಖನ ಸ್ವಾಮಿನಾಥ ಅಯ್ಯರ್ ಬರೆದಿರುವ "ನನ್ನ ಧೋರಣೆ”. ಇದರಲ್ಲಿ ಕೆಲವು ಅಂಶಗಳು: "ನನ್ನ ಬಾಳುವೆಯ ಧೋರಣೆಯಲ್ಲಿ ಬಹುಪಾಲು ತಮಿಳಿಗೆ ಸಂಬಂಧಪಟ್ಟದ್ದೇ. ತಮಿಳು ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಬೇಕು, ಅನೇಕ ಸಲ ಅಧ್ಯಯನ ಮಾಡಿದರೆ ಮಾತ್ರ ನಿಜ ತಿಳಿಯುತ್ತದೆ. … ಒಂದು ಗ್ರಂಥದಲ್ಲಿರುವ ನುಡಿ ಸೊಗಸು ಅರ್ಥಸೊಗಸುಗಳನ್ನು ಅನುಭವಿಸಿ ಓದಬೇಕು. ಅವುಗಳನ್ನು ಇತರರೂ ಅರಿಯುವ ಹಾಗೆ ತಿಳಿನಡೆಯಲ್ಲಿ ಬರೆಯಬೇಕು, ಹೇಳಬೇಕು. …. ಕಲಿತವರ ಬಳಿ ಪರಂಪರೆಗನುಸಾರವಾಗಿ ಪಾಠ ಕೇಳಬೇಕು. ಕೇಳಿದ್ದನ್ನು ಚಿಂತಿಸಿ ಪದ್ಧತಿಯಂತೆ ಪಾಠ ಹೇಳಬೇಕು. ಇದಕ್ಕಿಂತ ದೊಡ್ಡ ಉಪಕಾರ ಬೇರೊಂದಿಲ್ಲ. ಯಾವಾಗಲೂ ಓದಿಕೊಂಡೇ ಇರಬೇಕು..." ನುಡಿದಂತೆ ನಡೆಯುವುದೇ ತನ್ನ ಧೋರಣೆ ಎಂಬುದನ್ನು ನೇರವಾಗಿ ಈ ಲೇಖನದಲ್ಲಿ ದಾಖಲಿಸಿದ್ದಾರೆ ಸ್ವಾಮಿನಾಥ ಅಯ್ಯರ್.

ಇದರ ಪ್ರಬಂಧಗಳು ನಾಲ್ಕು ವಿಭಾಗಗಳಲ್ಲಿವೆ. ಮೊದಲನೆಯದು “ಗ್ರಂಥ ಸಂಪಾದನೆ”. ಸ್ವಾಮಿನಾಥ ಅಯ್ಯರ್ ತಮ್ಮ ಬದುಕಿನಲ್ಲಿ ಮಾಡಿದ ಬಹು ದೊಡ್ಡ ಸಾಧನೆ ಹಳೆಯ ತಮಿಳು ಗ್ರಂಥಗಳನ್ನು ಹುಡುಕಿ, ಸಂಶೋಧಿಸಿ, ಸಂಪಾದಿಸಿ, ಪ್ರಕಟಿಸಿದ್ದು. ಅದಕ್ಕಾಗಿ ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಈ ವಿಭಾಗದ ಹತ್ತು ಪ್ರಬಂಧಗಳು ಅವರ ಶ್ರಮ, ಶ್ರದ್ಧೆ, ಛಲ ಬಿಡದ ನಡೆಯನ್ನು ನಮ್ಮ ಕಣ್ಣಿಗೆ ಕಟ್ಟುವಂತೆ ತಿಳಿಸುತ್ತವೆ.

"ಉದುರಿದ ಮಲರುಗಳು” ಪ್ರಬಂಧದ ಬಗ್ಗೆ: ಹಳೆಯ ತಮಿಳು ಗ್ರಂಥಗಳು ತಾಳೆಗರಿಗಳಲ್ಲಿ ಬರೆದವುಗಳು. ಅಂತಹ ಗ್ರಂಥವೊಂದರ ಅನೇಕ “ಪಾಠ’ಗಳೂ ಇರಬಹುದು. "ಪತ್ತುಪಾಟು" ಎಂಬುದು ಪ್ರಾಚೀನ ಹತ್ತು ಕಾವ್ಯಗಳ ಸಂಕಲನ. ಅದರ ಎಂಟನೇ ಹಾಡು "ಕುರಿಂಜಿಪಾಟು". ಇದರ ತಾಳೆಗರಿ ಸ್ವಾಮಿನಾಥ ಅಯ್ಯರ್ ಅವರಿಗೆ ಲಭಿಸಿತ್ತು. ಆದರೆ ಅದರಲ್ಲಿ ಕೆಲವು ಸಾಲುಗಳು ಇರಲಿಲ್ಲ. ಅವುಗಳು ಇರಬಹುದಾದ ಮೂಲ ತಾಳೆಗರಿ ಹುಡುಕುತ್ತಾ ಒಂದು ದಿನ ಧರ್ಮಪುರಿಯ ಒಂದು ಮಠಕ್ಕೆ ಹೋಗುತ್ತಾರೆ. ಅಲ್ಲಿನ ದೇವಸ್ಥಾನದ ಮುಖ್ಯಸ್ಥರಾವ ವೃದ್ಧ ಶ್ರೀ ಮಾಣಿಕ್ಯವಾಚಕ ದೇಶಿಕರ ಬಳಿ ಹೋಗಿ ವಿನಂತಿಸುತ್ತಾರೆ. ಅವರು ಮರುದಿನ ಬರಹೇಳುತ್ತಾರೆ. ಮರುದಿನ ಮುಂಜಾನೆ ಅಲ್ಲಿಗೆ ಹೋಗಿ, ಅವರ ಅನುಮತಿ ಪಡೆದು, ಅಲ್ಲಿನ ಸೇವಕರು ತಂದಿಡುತ್ತಿದ್ದ ತಾಳೆಗರಿ ಕಟ್ಟುಗಳಲ್ಲಿ ತಮಗೆ ಬೇಕಾದ್ದನ್ನು ಹುಡುಕಲು ಶುರು. ಹಗಲಿಡೀ ಹುಡುಕಿದರೂ ಸಿಗಲಿಲ್ಲ. ಸೇವಕರು ದೀವಟಿಗೆ ಹಚ್ಚಿಟ್ಟರು. ಅವುಗಳ ಬೆಳಕಿನಲ್ಲಿ ಹುಡುಕಾಟ ಮುಂದರಿಕೆ. ಕೊನೆಗೆ ರಾತ್ರಿ ಹತ್ತು ಗಂಟೆಯ ನಂತರ ಒಂದು ತಾಳೆಗರಿಯಲ್ಲಿ ಸುಳಿವು ಸಿಕ್ಕಿತು. ತದನಂತರ, ಐವತ್ತು ತಾಳೆಗರಿಗಳನ್ನು ಪಡೆದು ಹೊರಟರು. ಮರುದಿನ ಕುಂಭಕೋಣ ತಲಪಿದ ಬಳಿಕ ಪರಿಶೀಲಿಸಿದಾಗ ಆಯ್ಯರ್ ಅವರಿಗೆ ಬೇಕಾಗಿದ್ದ “ಕುರಿಂಜಿಪಾಟಿ"ನ ಸಾಲುಗಳು ದೊರೆತವು.

ಎರಡನೆಯ ವಿಭಾಗ “ಕವಿಕತೆ”ಯಲ್ಲಿಯೂ ಹತ್ತು ಪ್ರಬಂಧಗಳಿವೆ. ಇವು ತಮಿಳಿನ ಪ್ರಾಚೀನ ಕವಿಗಳಿಗೂ ಅವರ ಕಾವ್ಯಗಳಿಗೂ ಸಂಬಂಧಿಸಿದ ಕಥಾನಕಗಳು. “ಯುವರಾಜನ ವಿರಕ್ತಿ” ಎಂಬ ಪ್ರಬಂಧ ಯುವರಾಜನಾಗಿದ್ದ ಇಳಂಗೋ ಎಂಬ ಮಹಾನುಭಾವ ಇಳಂಗೋ ಅಡಿ(ದಾಸ)ಗಳಾದ ಕಥನ. ಅವರು ರಚಿಸಿದ್ದೇ ಶಿಲಪ್ಪದಿಕಾರವೆಂಬ ಕಾವ್ಯ. ಭವಿಷ್ಯಕಾರನೊಬ್ಬ ರಾಜನ ಎರಡನೆಯ ಮಗ ಇಳಂಗೋ "ಅಂತ್ಯವಿಲ್ಲದ ಆನಂದದ ರಾಜ್ಯವನ್ನು ಆಳುವ ಯೋಗ್ಯತೆ ಪಡೆಯುತ್ತಾನೆಂದು" ಭವಿಷ್ಯ ನುಡಿಯುತ್ತಾನೆ. ಅದನ್ನು ಕೇಳಿ ರಾಜನ ಸಹಿತ ಆಸ್ಥಾನಿಕರೆಲ್ಲ ದಂಗಾಗುತ್ತಾರೆ. ಆಗ ಇಳಂಗೋನ ಸಂಕಲ್ಪ: "ನಾನು ಶಪಥ ಮಾಡುತ್ತೇನೆ…. ದೈವದ ಮೇಲೆ ಆಣೆಯಿಟ್ಟು, ನಾನು ಇಂದೇ, ಈಗಲೇ ವಿರಕ್ತನಾಗುತ್ತೇನೆ". ತಕ್ಷಣವೇ ಆತ ತನ್ನ ಮೈಮೇಲಿದ್ದ ಆಭರಣಗಳನ್ನು ಕಳಚಿ ತಂದೆಯ ಮುಂದಿಟ್ಟು, ಅರಮನೆಯಿಂದ ಗಂಭೀರವಾಗಿ ನಡೆದು ಹೋಗುತ್ತಾನೆ.

ಮೂರನೆಯ ವಿಭಾಗ “ಕಥಾನಕ". ಹೆಸರೇ ಸೂಚಿಸುವಂತೆ, ತಮಿಳುನಾಡಿನ ಸಮೃದ್ಧ ಪರಂಪರೆಯ ದಂತಕಥೆಯಾಗಿರುವ ವ್ಯಕ್ತಿಗಳ ಕಥಾನಕಗಳು ಇದರ ಹದಿನೈದು ಪ್ರಬಂಧಗಳಲ್ಲಿವೆ. "ಮಲ್ಲನನ್ನು ಗೆದ್ದ ಮಾಂಗುಡಿಯಾತ” ಮಾಂಗುಡಿಯ ಕೈಲಾಸ ಅಯ್ಯರ್ ಅವರ ಕತೆ. ಬ್ರಾಹ್ಮಣರಾದ ಅವರು ಶಿವಭಕ್ತರು, ಕೃಷಿಕರು. ಅದೊಂದು ದಿನ ದೊಡ್ಡ ಹುಲ್ಲಿನ ಹೊರೆ ಹೊತ್ತು ರಾಜಾಂಗಣದಲ್ಲಿ ನಡೆಯುತ್ತಿದ್ದ ಮಲ್ಲಯುದ್ಧ ನೋಡತೊಡಗಿದರು. ಉತ್ತರ ಭಾರತದಿಂದ ಬಂದಿದ್ದ ಮಲ್ಲನೊಬ್ಬ ಇತರ ರಾಜ್ಯಗಳ ಮಲ್ಲರನ್ನೆಲ್ಲ ಸೋಲಿಸಿ ಇಲ್ಲಿಗೆ ಬಂದಿದ್ದ. ಇಲ್ಲಿನ ಪ್ರಾಂತ್ಯದ ಮಲ್ಲರನ್ನೂ ಸೋಲಿಸಿ, ಅಹಂಕಾರದಿಂದ ಮೆರೆಯುತ್ತಿದ್ದ. ಕೈಲಾಸ ಅಯ್ಯರ್ ಅವರ ಉಕ್ಕಿನಂತಹ ಶರೀರ ಹಾಗು ಆತ್ಮವಿಶ್ವಾಸ ಗಮನಿಸಿದ ರಾಜ ಇವರನ್ನು ಆ ಮಲ್ಲನೊಂದಿಗೆ ಪಂದ್ಯಕ್ಕೆ ಕಳಿಸುತ್ತಾರೆ. ಅರರೇ, ಅಲ್ಲಿ ನಡೆಯಿತು ನಂಬಲಾಗದ ಸಂಗತಿ. ತನ್ನ ಪಕ್ಕೆಗಳಿಗೆ ಗುದ್ದಲು ಉತ್ತರ ಭಾರತದ ಮಲ್ಲ ನುಗ್ಗಿಸಿದ ಎರಡೂ ಕೈಗಳನ್ನು ಕೈಲಾಸ ಅಯ್ಯರ್ ತಮ್ಮ ಕೈಗಳಿಂದ ಬಿಗಿಯಾಗಿ ಹಿಡಿಯುತ್ತಾರೆ. ಆ ಮಲ್ಲ ಎಷ್ಟು ತಿಣುಕಾಡಿದರೂ ಅವನಿಗೆ ತನ್ನ ಕೈಗಳನ್ನು ಬಿಡಿಸಿಕೊಳ್ಳಲಾಗಲಿಲ್ಲ. ಕೊನೆಗೆ ಸೋಲೊಪ್ಪಿಕೊಂಡ. ಕೈಲಾಸ ಅಯ್ಯರ್ ಅವರ ಉಕ್ಕಿನ ಶರೀರಕ್ಕೆ ಕಾರಣ ಅವರ ಆಹಾರ: ತಂಗಳನ್ನ ಮತ್ತು ಎಳ್ಳು!

ಕೊನೆಯ ವಿಭಾಗ: “ಸಂಗೀತಕ". ತಮಿಳುನಾಡಿನ ಶ್ರೇಷ್ಠ ಸಂಗೀತರಾರರಿಗೆ ಸಂಬಂಧಿಸಿದ ಎಂಟು ಪ್ರಬಂಧಗಳು ಇದರಲ್ಲಿವೆ. "ಅಸೂಯೆಯ ಬೆಂಕಿ” ಎಂಬ ಕಥನ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಯಾಕೆಂದರೆ, ಇದು ತನ್ನ ಮಗನ ವೀಣಾವಾದನದ ಸಾಧನೆಯನ್ನು ಸಹಿಸಲಾಗದ ಅವನ ಹೆಸರಾಂತ ತಂದೆ, ಮಗನ ಎಡಗೈಯ ನಡುಬೆರಳನ್ನು ಬಲವಾಗಿ ಕಚ್ಚಿ ಘಾಸಿ ಮಾಡಿದ್ದನ್ನು ಚಿತ್ರಿಸುತ್ತದೆ - ಅವನು ಇನ್ನು ಯಾವತ್ತೂ ವೀಣಾವಾದನ ಮಾಡಬಾರದೆಂಬ ಇರಾದೆಯಿಂದ. ಇದನ್ನೋದಿದಾಗ, "ಅಬ್ಬ, ಅಸೂಯೆ ಎಂಬುದು ನಿಜಕ್ಕೂ ಬೆಂಕಿ" ಅನಿಸುತ್ತದೆ.

ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕವಿದು. ಕರ್ನಾಟಕದ ಪಕ್ಕದ ರಾಜ್ಯ ತಮಿಳುನಾಡಿನ ಪ್ರಾಚೀನ ಇತಿಹಾಸ ಮತ್ತು ಸಾಹಿತ್ಯದ ಬಗ್ಗೆ ನಮ್ಮ ಕಣ್ಣು ತೆರೆಸುವ ಕಥಾನಕಗಳು ಇದರಲ್ಲಿವೆ. ಜೊತೆಗೆ, ಅಂತಹ ಅಮೂಲ್ಯ ದಾಖಲೆಗಳನ್ನು ಹೇಗೆ ಅನುವಾದಿಸಬೇಕು ಎಂಬುದಕ್ಕೊಂದು ಉತ್ತಮ ಮಾದರಿಯಾಗಿದೆ.