ಬೆಳುದಿಂಗಳ ಮಾಯೆ
ಕವನ
ಕಲಕಲ ಚಲಚಲ
ಝಳಝಳವೆನ್ನುತ
ಹರಿದಿದೆ ನಿರ್ಝರ ಧಾರೆ
ಥಳ ಥಳ ಪಳ ಪಳ
ಹೊಳೆದಿವೆ ಬಾನೊಳು
ಸಾಸಿರ ಹೀರಕ ತಾರೆ!
ರುಮು ರುಮು ರುಮು ರುಮು
ಬೀಸಿದೆ ಬಯಲಲಿ
ತಂಗಾಳಿಯ ತನಿ ಲಹರಿ
ಕಾನನ ಕಾನನ
ಹೆಣೆದಿರುಳಿನ ಹೂ
ಬೆಳುದಿಂಗಳ ನೀಳ್ಗಬರಿ!
ಘಮಘಮ ಘಮಘಮ
ಸೋಂಕಿತು ಸೆಲೆ ಸೆಲೆ
ಹೂಗಂಪಿನ ಸಿರಿ ಸೋನೆ
ದುಮುದುಮು ತುಮುತುಮ
ತನನನವೆನ್ನುತ
ಎಚ್ಚತ್ತಿತು ಭೂ ವೀಣೆ!
ಯಾವಜ್ಞಾತದ
ಮಾದಕ ಸ್ಪರ್ಶಕೆ
ಮೊಳೆಯಿತೊ ಮಣ್ಣಲಿ ಹಾಡು!
ಹಾಡಿನ ಮಡಿಲಲಿ
ತೆರೆಯಿತು ಯಾವುದೊ
ಕನಸಿನ ಬಣ್ಣದ ನಾಡು!
ಇದು ಇಳೆಯನು ತಬ್ಬಿದ
ಶುಭ ಚಂದ್ರನ ನಗೆ
ಮಲ್ಲಿಗೆ ಮಾಯೆಯ ಮರುಳೋ?
ಜಗದೆದೆಯಾಳದಿ
ಹುದುಗಿದ ಸುಮಧುರ
ಸ್ಮ್ರತಿ ನಂದನ ಸುಮದರಳೊ!
ಚಿತ್ರ: ಅಂತರ್ಜಾಲ ತಾಣ
ಚಿತ್ರ್
