ಬೆಳೆಗಳಿಗೆ ಕಾಡುವ ಹಿಟ್ಟು ತಿಗಣೆಯ ನಿಯಂತ್ರಣ

ಬೆಳೆಗಳಿಗೆ ಕಾಡುವ ಹಿಟ್ಟು ತಿಗಣೆಯ ನಿಯಂತ್ರಣ

ಬಿಳಿ ಮೈಬಣ್ಣದ ಅಂಟುವ ಕೀಟ ಬಹುತೇಕ ಸಸ್ಯಗಳಲ್ಲಿ ರಸ ಹೀರುವ ಕೀಟವಾಗಿ ಬೆಳೆಗಳಿಗೆ ತೊಂದರೆ ಮಾಡುತ್ತದೆ. ತರಕಾರಿಗಳಾದ ಅಲಸಂಡೆ, ಬೆಂಡೆ, ಬದನೆ ಬೆಳೆಗಳು, ಹೂವಿನ ಗಿಡಗಳಾದ ದಾಸವಾಳ, ಗುಲಾಬಿ, ತೋಟಗಾರಿಕಾ ಬೆಳೆಗಳಾದ ಮಾವು,ಪಪ್ಪಾಯ, ಮುಸಂಬಿ, ಲಿಂಬೆ,ನೇರಳೆ, ಅನಾನಾಸು, ಪೇರಳೆ, ಸೀತಾಫಲ ಮುಂತಾದ ಬೆಳೆಗಳಿಗೆ, ಕಬ್ಬು, ಹತ್ತಿ, ಮೂಂತಾದ ವಾಣಿಜ್ಯ ಬೆಳೆಗಳಿಗೆ, ಎಣ್ಣೆ ಕಾಳು ಬೆಳೆಗಳಾದ ಸೂರ್ಯಕಾಂತಿ, ನೆಲಕಡ್ಲೆ, ಸೋಯಾ ಅವರೆ, ತೊಗರಿ,  ಹಿಪ್ಪು ನೇರಳೆ, ಕಾಡು ಸಸ್ಯಗಳು, ದ್ರಾಕ್ಷಿ, ಸೇಬು, ಆಲೂಗಡ್ಡೆ, ಮರಗೆಣಸು ಅಲ್ಲದೇ ಎಲ್ಲಾ ನಮೂನೆಯ ಪುಷ್ಪ ಬೆಳೆಗಳಿಗೆ ( ೨೦೦ ಕ್ಕೂ ಹೆಚ್ಚು ಬೆಳೆಗಳಿಗೆ  ಹಾನಿ ಮಾಡುತ್ತದೆ) ಈ ಹಿಟ್ಟು ತಿಗಣೆಯ ಬಾಧೆ ಇರುತ್ತದೆ. ಹಿಟ್ಟು ತಿಗಣೆ  ಬಾಧಿಸಿದ ಭಾಗದಿಂದ ಅದು ರಸ ಹೀರಿ ಘಾಸಿಗೊಳಪಡಿಸುತ್ತದೆ. 

ಇದನ್ನು ಮೀಲೀ ಬಗ್(Mealy bug) ಎಂಬುದಾಗಿ ಕರೆಯುತ್ತಾರೆ. ಅತೀ ಸಣ್ಣ ಕೀಟ. ಈ ಕೀಟದ ಮೈ ಮೇಲೆ ಯಾವಾಗಲೂ ಬಿಳಿ ಬಣ್ಣದ ಹಿಟ್ಟಿನ ತರಹದ ಪುಡಿ ಇರುವ ಕಾರಣ ಇದಕ್ಕೆ ಹಿಟ್ಟು ತಿಗಣೆ ಎಂಬ ಹೆಸರಿಡಲಾಗಿದೆ. ಕೀಟ ಬೆಳೆದಂತೆ ಅದರಲ್ಲಿ ಈ ಬಿಳಿ ಅಂಶ ಹೆಚ್ಚುತ್ತಾ ಹೋಗುತ್ತದೆ. ಸಸ್ಯಗಳ ಕಾಯಿ, ಹೂವು, ಮೊಗ್ಗು, ಕಾಂಡಗಳಲ್ಲಿ ಕುಳಿತು ರಸ ಹೀರುತ್ತದೆ. ತನ್ನ ಮೇಲಿರುವ ಬಿಳಿ ಹುಡಿ ಅದನ್ನು ರಕ್ಷಿಸುತ್ತದೆ. ಗಾಳಿ, ಪಕ್ಷಿ, ನೀರು, ಮತ್ತು ಸಾಗಾಣಿಕೆ ಮೂಲಕ ವರ್ಗಾವಣೆಯಾಗುತ್ತದೆ. 

ಇವು ಸಸ್ಯ ರಸದಿಂದ ದ್ರವ ಆಹಾರ ಸೇವಿಸುವವುಗಳು. ಇದು ಮೃದು ಕೀಟವಾಗಿ ಕಂಡರೂ ಸಹ ಬಲಿಷ್ಟ ಹಲ್ಲುಗಳನ್ನು ಹೊಂದಿದೆ. ಬೇಗ ಸಂತಾನಾಭಿವೃದ್ದಿಗೊಂಡು ಸಂಖ್ಯಾಭಿವೃದ್ದಿಯಾಗುತ್ತದೆ. ಇದರ ಹೆಣ್ಣು ತಿಗಣೆ ಒಮ್ಮೆ ೩೦೦ ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳನ್ನು ತಮ್ಮ ಬಿಳಿ ಹೊದಿಕೆಯ ಕೆಳ ಭಾಗದಲ್ಲಿ ಇಟ್ಟು ರಕ್ಷಿಸುತ್ತವೆ. ಮೊಟ್ಟೆ ಇಟ್ಟು ಒಂದೆರಡು ಗಂಟೆಯಿಂದ ೧-೨  ದಿನದ ಒಳಗೆ ಮರಿಯಾಗುತ್ತದೆ. ಅವು ೬ ವಾರಗಳಲ್ಲಿ ಬೆಳೆಯುತ್ತವೆ. ಈ ಕೀಟಕ್ಕೆ ರೆಕ್ಕೆ ಇಲ್ಲ. ಗಂಡು ಇಲ್ಲದಿದ್ದರೂ ಸಂತಾನೋತ್ಪತ್ತಿ ಹೊಂದುತ್ತದೆ. ಗಂಡಿಗೆ ರೆಕ್ಕೆ ಇರುತ್ತದೆ. ಇವು ಇಂದು ಸ್ವಲ್ಪ ಪ್ರಮಾಣದಲ್ಲಿ ಕಂಡರೂ ಬಂದರೂ ನಾಳೆಗೆ ಎರಡು ಮೂರು ಪಟ್ಟು ಹೆಚ್ಚಳವಾಗುತ್ತದೆ. ಇವು ಆಶ್ರಯಿಸಿದ ಭಾಗಗಳಿಂದ ರಸ ಹೀರಿ ಬೆಳೆಗೆ ಆಹಾರದ ಕೊರತೆಯಾಗುವಂತೆ ಮಾಡಿ ಎಲೆಗಳು, ಕಾಯಿಗಳು, ಹಣ್ಣುಗಳು ಸಮರ್ಪಕವಾಗಿ ಬೆಳೆಯಲು ಬಿಡಲಾರದು. ಮುಟ್ಟಿದರೆ ಮೇಣದಂತೆ ಅಸಹ್ಯವಾದ ಈ ಕೀಟಗಳನ್ನು ನಾಶ ಮಾಡದಿದ್ದರೆ ಬೆಳೆಗಳ ಗುಣಮಟ್ಟ ಕ್ಷೀಣಿಸುತ್ತದೆ. ಮಾರುಕಟ್ಟೆಯಲ್ಲಿ ವಸ್ತು ತಿರಸ್ಕರಿಸಲ್ಪಡುತ್ತದೆ. ಇದನ್ನು ಆಹಾರವಾಗಿ ತಿನ್ನಲು ಕೆಂಪು ಇರುವೆಗಳು, ಕರಿ ಇರುವೆಗಳು ಬರುತ್ತವೆ. ಆದರೆ ಇವುಗಳು ಇದನ್ನು ಗಿಡದಿಂದ ಗಿಡಕ್ಕೆ ಪ್ರಸಾರವಾಗಲು ನೆರವಾಗುತ್ತವೆ.  ಸ್ವಾಭಾವಿಕವಾಗಿ ಇದನ್ನು ಭಕ್ಷಿಸುವ ಪಕ್ಷಿಗಳು, ಕೀಟಗಳು ಇವೆ. ಇರುವೆಗಳನ್ನು ನಾಶ ಮಾಡುವುದರಿಂದ ಇದನ್ನು ಕಡಿಮೆ ಮಾಡಬಹುದು. ಕೆಂಪು, ಕಪ್ಪು ಇರುವೆಯ ಗೂಡನ್ನು ಗುರುತಿಸಿ ನಾಶ ಮಾಡಬೇಕು. 

ನಾವು ಬೆಳೆಸುವ ಹೆಚ್ಚಿನೆಲ್ಲಾ ಬೆಳೆಯಲ್ಲಿ ಈ ಕೀಟ ಕಂಡು ಬರುವುದು ಸಾಮಾನ್ಯ. ಇದರ ಹತೋಟಿಮಾಡದೇ ಇದ್ದಲ್ಲಿ  ಇದರ ಸಂಖ್ಯೆ ಹೆಚ್ಚಳವಾಗಿ ಬೆಳೆ ಹಾಳಾಗಬಹುದು. ಇದನ್ನು ತಿಗಣೆ ನಾಶಕಗಳಾದ ಡೈಕ್ಲೋರೋವಾಸ್, ಮೆಲಾಥಿಯಾನ್ ಅಥವಾ ಅಸಿಫೇಟ್ ಮುಂತಾದ ಕೀಟನಾಶಕ ಸಿಂಪಡಿಸಿ ಹತೋಟಿ ಮಾಡಬಹುದು. ಆಹಾರದ ಬಳಕೆಗಲ್ಲದ ಬೆಳೆಗಳಿಗೆ ಕ್ಲೋರೋಫೆರಿಫೋಸ್ ಚೆನ್ನಾಗಿ ಕೆಲಸ ಮಾಡುತ್ತದೆ. ತರಕಾರಿ ಬೆಳೆಗಳಿಗೆ ಬೆವೇರಿಯಾ ಬೆಸ್ಸಿಯಾನ ಅಥವಾ ವರ್ಟಿಸೀಲಿಯಂ ಲೆಖ್ಯಾನೀ (ಮಾರುಕಟ್ಟೆಯಲ್ಲಿ  ಇದರ ಬ್ರಾಂಡ್ ಹೆಸರು ಬೇರೆ ಇರುತ್ತದೆ. ಅದು ಈ ಜೀವಾಣು ಒಳಗೊಂಡ ಬಗ್ಗೆ ಮುದ್ರಿಸಿರುತ್ತಾರೆ) ಶಿಲೀಂದ್ರ ಆಧರಿತ ಜೈವಿಕ ಕೀಟನಾಶಕ ಹೆಚ್ಚು ಉಪಯುಕ್ತ. ಉತ್ತಮ ಗುಣಮಟ್ಟದ ಜೈವಿಕ ಶಿಲೀಂದ್ರ ಕೀಟನಾಶಕಗಳು ರಾಸಾಯನಿಕ ಕೀಟನಾಶಗಳಿಗಿಂತ ಉತ್ತಮವಾಗಿ ಹಿಟ್ಟು ತಿಗಣೆಯನ್ನು  ನಾಶ ಮಾಡುತ್ತವೆ. Bug Buster ಎಂಬ ಸಸ್ಯ ಜನ್ಯ ಔಷಧಿ ಕೆಲಸ ಮಾಡುತ್ತದೆ. ಗುಲಗುಂಜಿ ಹುಳಗಳು ಹೆಚ್ಚಿನ ಪ್ರಮಾಣದಲ್ಲಿ ಈ ಹಿಟ್ಟು ತಿಗಣೆಯನ್ನು ಭಕ್ಷಿಸುತ್ತವೆ. ಆದ ಕಾರಣ ಅದನ್ನು ಬಿಡುವುದು ಉಪಯುಕ್ತ. ಬೇವಿನ ಬೀಜದ ಕಷಾಯ+ ಹೊಂಗೆ ಎಣ್ಣೆ ಮಿಶ್ರಿತ ಕೀಟನಾಶಕ ( ಐ ಐ ಎಚ್ ಆರ್) ದಲ್ಲಿ ತಕ್ಕಮಟ್ಟಿಗೆ ಹಿಟ್ಟು ತಿಗಣೆ ಕಡಿಮೆಯಾಗುತ್ತದೆ. ಸಣ್ಣ ಪ್ರಮಾಣದ ತರಕಾರಿ, ಹೂವಿನ ಸಸ್ಯ ಬೆಳೆಸುವವರು ಧೋಬಿ ಸಬೂನಿನ ದ್ರಾವಣವನ್ನು ತೊಯ್ಯುವಂತೆ ಸಿಂಪಡಿಸಿ ಅದನ್ನು ನಾಶಮಾಡಬಹುದು. ಹಿಟ್ಟು ತಿಗಣೆ ಇದ್ದಲ್ಲಿಂದ ನೆಡು ಸಾಮಾಗ್ರಿ ತರುವಾಗ ಜಾಗರೂಕತೆ ವಹಿಸಬೇಕು. ಅದು ಅಲ್ಲಿಂದ ವರ್ಗಾವಣೆಯಾಗುತ್ತದೆ. ಇತ್ತೀಚೆಗೆ ನಮ್ಮ ದೇಶದ ಬಹುತೇಕ ಬೆಳೆಗಳಿಗೆ ಈ ಹಿಟ್ಟು ತಿಗಣೆ ಉಪಟಳ ಅಧಿಕವಾಗಿದ್ದು, ಅದನ್ನು  ಜೈವಿಕ ವಿಧಾನದಲ್ಲಿ ನಾಶ ಮಾಡದಿದ್ದರೆ  ಮುಂದೆ ಇದು ಇನ್ನೂ ಹೆಚ್ಚಳವಾಗಬಹುದು.

ಮಾಹಿತಿ : ರಾಧಾಕೃಷ್ಣ  ಹೊಳ್ಳ. 

ಚಿತ್ರಗಳು : ಅಂತರ್ಜಾಲ ಕೃಪೆ