ಬೆಳೆಯಬೇಕಿದೆ ಕನ್ನಡ ‘ಬರಹ-ನುಡಿ’ ಯಿಂದಾಚೆಗೆ!
(ನಾಗೇಶ್ ಹೆಗಡೆಯವರ ಸಂಪದ ಪಾಡ್ಕ್ಯಾಸ್ಟ್ ಸಂದರ್ಶನ ಕೇಳಿದ ನಂತರ, ಡಿಜಿಟಲ್ ಡಿವೈಡ್ ಮತ್ತು ಕಂಪ್ಯೂಟರಿನಲ್ಲಿ ಕನ್ನಡದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದೆ. ನಾಲ್ಕು ವರ್ಷಗಳ ಹಿಂದೆ ದಟ್ಸ್ಕನ್ನಡ.ಕಾಮಿನಲ್ಲಿ ಬರೆದ ಈಗಿನ ಈ ಸದರಿ ಲೇಖನ ಮತ್ತೆ ಆ ವಿಚಾರದ ಚರ್ಚೆಗೆ ಸೂಕ್ತ ಮತ್ತು ಆಗಿನ ಎಷ್ಟೋ ವಿಚಾರಗಳು ಈಗಲೂ ಪ್ರಸ್ತುತ ಎನ್ನಿಸಿದ್ದರಿಂದ ಇಲ್ಲಿಯೂ ಅಪ್ಲೋಡ್ ಮಾಡುತ್ತಿದ್ದೇನೆ. - ರವಿ - ಮಾರ್ಚ್ 4, 2008)
[ಕಂಪ್ಯೂಟರ್ನಲ್ಲಿ ಕನ್ನಡದ ಸಾಧ್ಯತೆಗಳ ವಿಸ್ತರಿಸಬೇಕಾಗಿದ್ದ ‘ಕಗಪದ’ ತೌಡು ಕುಟ್ಟುವ ಕೆಲಸ ಮಾಡುತ್ತಿದ್ದರೆ, ತನ್ನ ಯಾವತ್ತಿನ ದಿವ್ಯ ಉದಾಸೀನದಲ್ಲಿ ಕನ್ನಡಿಗ ಮುಳುಗಿಹೋಗಿದ್ದಾನೆ. ಇಂಥದೊಂದು ಸಂಧಿಕಾಲದಲ್ಲಿ , ಕನ್ನಡ ತಂತ್ರಾಂಶದ ಕುರಿತು ಸದ್ಯದ ವಿರೋಧಾಭಾಸಗಳು ಹಾಗೂ ಆಗಬೇಕಾದ ಕೆಲಸಗಳ ಕುರಿತು ಒಂದು ಅವಲೋಕನ. - ಜನವರಿ 9, 2004 - ದಟ್ಸ್ಕನ್ನಡ.ಕಾಮ್]
ಸಾವಿರಾರು ಜನ ಅಂತರ್ಜಾಲದ ಕನ್ನಡ ಪ್ರೇಮಿಗಳು ಸಕ್ರಿಯವಾಗಿರುವ ಯಾಹೂ ಗ್ರೂಪ್ಗಳಲ್ಲಿ ಕಳೆದ ಹದಿನೈದಿಪ್ಪತ್ತು ದಿನಗಳಿಂದ ಒಂದು ವಿಷಯದ ಮೇಲೆ ಕೆಂಡಾಮಂಡಲ ಚರ್ಚೆ ನಡೆಯುತ್ತಿದೆ; ವೈಯುಕ್ತಿಕ ಆರೋಪಗಳಿಂದ ಹಿಡಿದು ಕನ್ನಡದ ಸಾರ್ವಜನಿಕ ಹಿತಾಸಕ್ತಿಯವರೆಗೂ ಸಾಗಿದೆ ಈ ಚರ್ಚೆ. ಚರ್ಚೆಯ ವಸ್ತು : ‘ಕನ್ನಡ ಗಣಕ ಪರಿಷತ್ತು’ ; ಕನ್ನಡದ ‘ನುಡಿ’ ತಂತ್ರಾಂಶದ ತಯಾರಕರು.
‘ನುಡಿ’ ಸರ್ಕಾರಿ ಕಚೇರಿಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಉಚಿತ ತಂತ್ರಾಂಶ. ಇಲ್ಲಿಯವರೆಗೆ ತಮ್ಮ ಸೇವೆಗೆ ಸರ್ಕಾರದಿಂದ ಸುಮಾರು 30 ಲಕ್ಷ ರೂಪಾಯಿಗಳಷ್ಟು ಅನುದಾನ ಪಡೆದಿರುವ ಈ ಸಂಸ್ಥೆ ಈ ಮಧ್ಯೆ ಕನ್ನಡ ತಂತ್ರಾಂಶ ಅಭಿವೃದ್ಧಿಯ ಕೆಲಸ ಬಿಟ್ಟು ಬೇರೆ ಯಾರೂ ಮಾಡಬಹುದಾದ ಕೇವಲ Data Entry ಕೆಲಸ ಮಾಡುತ್ತಿದೆ ಎನ್ನುವುದು ಕೆಲವರ ಆರೋಪ. ಇದೇ ವಿಷಯದ ಮೇಲೆ ಮೇ 25ರಂದು ಮೈಸೂರಿನಲ್ಲಿ ಗಣಕಯಂತ್ರವನ್ನು ಉಪಯೋಗಿಸುವ ಪರಿಣತಿ ವರ್ಷಗಳ ಹಿಂದಿನಿಂದಲೇ ಇರುವ ಪ್ರಸಿದ್ಧ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಆಗ್ರಹದ ಮೇರೆಗೆ ಒಂದು ಸಭೆ ಏರ್ಪಾಟಾಗಿತ್ತು. ತೇಜಸ್ವಿ, ಪ್ರೊ.ಲಿಂಗದೇವರು ಹಳೆಮನೆ, ಕಗಪದ ಮಾಜಿ-ಹಾಲಿಗಳಾದ ಪವನಜ, ಶ್ರೀನಾಥಶಾಸ್ತ್ರಿ ಮುಂತಾದವರ ನಡುವೆ ಒಂದು ದಿನಪೂರ್ತಿಯ ಚರ್ಚೆ ನಡೆಯಿತು. ಈ ಸಭೆಯಲ್ಲಿ ಕೇವಲ ತೌಡು ಕುಟ್ಟುವ ಕೆಲಸವಷ್ಟೇ ನಡೆಯಿತು, ಮತ್ತೇನೇನೂ ಪ್ರಯೋಜನವಾಗಲಿಲ್ಲ ಎನ್ನುವ ಸಂಗತಿ ಸಾರ್ವತ್ರಿಕವಾಯಿತು...
ಇವೆಲ್ಲವುಗಳ ಹಿನ್ನೆಲೆಯಲ್ಲಿ ಕಗಪದ ( ಕನ್ನಡ ಗಣಕ ಪರಿಷತ್) ಇತ್ತೀಚಿನ ಯೋಜನೆಗಳು ಸಹ ಅವರಿಗೆ ಅಂತಹ ಕ್ರೆಡಿಬಿಲಿಟಿ ಕೊಡುವಂತಹವುದಲ್ಲ. ಈ ಮಧ್ಯೆ ಅವರು ಮೈಸೂರು ವಿಶ್ವವಿದ್ಯಾನಿಲಯ ಮತ್ತು ಇನ್ನೊಂದು ಖಾಸಗಿ ಸಂಸ್ಥೆಯಾಂದಿಗೆ ಸಹಭಾಗಿತ್ವದಲ್ಲಿ ಕನ್ನಡ ವಿಶ್ವಕೋಶವನ್ನು CDಯಲ್ಲಿ ಹೊರತರುವ ಕೆಲಸ ಹಮ್ಮಿಕೊಂಡಿದ್ದಾರೆ. ಇಲ್ಲಿ ಕಗಪದ ಪಾತ್ರ ಅಂತಹ ದೊಡ್ಡದೇನೂ ಇದ್ದ ಹಾಗೆ ನನಗಂತೂ ಕಾಣುತ್ತಿಲ್ಲ. ವಿಶ್ವವಿದ್ಯಾನಿಲಯ ಮತ್ತು ಖಾಸಗಿ ಸಂಸ್ಥೆಯವರೇ ಇದನ್ನು ನಿಭಾಯಿಸಬಹುದು. ಆದ್ದರಿಂದಾಗಿಯೇ, "ಇಂಥ DTP ಕೆಲಸವನ್ನು" ಕಗಪ ಮೊದಲ ಆದ್ಯತೆಯೆಂದು ಸ್ವೀಕರಿಸಿ ಮಾಡಬೇಕಿತ್ತೇ?’. ಈ ಪ್ರಶ್ನೆ ಹಲವರ ಬಾಯಿಂದ ಹೊರಬೀಳುತ್ತಿದೆ.
ಕಂಪ್ಯೂಟರ್ ಮತ್ತು ಕನ್ನಡದ ಮೇಲೆ ಇಲ್ಲಿ ಇನ್ನೂ ಕೆಲವು ಪ್ರಶ್ನೆಗಳಿವೆ; ಕಂಪ್ಯೂಟರ್ನಲ್ಲಿ ಕೇವಲ ಇಂಗ್ಲಿಷ್ ಬಳಸಿ ತಯಾರಿಸಿದ ಕನ್ನಡದ ಅಕ್ಷರಗಳನ್ನು (Fonts) ನೋಡಿ ತೃಪ್ತಿಪಟ್ಟುಕೊಳ್ಳಬೇಕೆ? ಇಡೀ ಕಂಪ್ಯೂಟರ್ನ ಭಾಷೆ ಕನ್ನಡ ಆಗುವುದು ಯಾವಾಗ? ಹೇಗೆ? ಇಂಗ್ಲಿಷ್ ಗೊತ್ತಿಲ್ಲದ ಕನ್ನಡಿಗರು ಕಂಪ್ಯೂಟರ್ ಉಪಯೋಗಿಸುವುದು ಹೇಗೆ? ಸಾಧ್ಯವೇ? ಎಂದಿಗೂ ಸಾಧ್ಯವಿಲ್ಲವೇ? ಇತ್ಯಾದಿಗಳು.
ಈವತ್ತಿನ ದಿನದ ಕನ್ನಡಿಗರಿಗೆ ಕಂಪ್ಯೂಟರ್ ಎನ್ನುವ ಆಂತರಿಕವಾಗಿ ಅಥವ ಅಂತಿಮವಾಗಿ ಕೇವಲ 0 ಮತ್ತು 1 ಅಂಕಿಗಳನ್ನು ಮಾತ್ರ ಅರ್ಥ ಮಾಡಿಕೊಳ್ಳಬಲ್ಲ ಎಲೆಕ್ಟ್ರಾನಿಕ್ ಯಂತ್ರವನ್ನು ಉಪಯೋಗಿಸಲು ಇಂಗ್ಲಿಷ್ ಗೊತ್ತಿರಲೇಬೇಕು. ಅಷ್ಟೋ ಇಷ್ಟೋ ಇಂಗ್ಲಿಷ್ ಗೊತ್ತಿಲ್ಲದವ ಕಂಪ್ಯೂಟರ್ ಅನಕ್ಷರಸ್ಥ. ಕನ್ನಡ ಮಾತ್ರ ಚೆನ್ನಾಗಿ ಬಲ್ಲವರಿಗೆ ಕಂಪ್ಯೂಟರ್ ಉಪಯೋಗಿಸುವುದು ರಾಕೆಟ್ ವಿಜ್ಞಾನದಷ್ಟು ಕಡಲೆಯಾದರೆ ಇಂಗ್ಲಿಷ್ ಬಲ್ಲವರಿಗೆ ಅದು ಆಟದ ಸಾಮಾನು. ಜನಸಾಮಾನ್ಯರು ಈ ಎಲೆಕ್ಟ್ರಾನಿಕ್ ಯಂತ್ರವನ್ನು ಸುಲಭವಾಗಿ ಉಪಯೋಗಿಸುವಂತಾಗುವುದು ಯಾವಾಗ?
ಸ್ವಾಭಿಮಾನ ಇರುವವರಿಗೆ ಮಾತ್ರ ಅವಮಾನ ಆಗುತ್ತದೆ :
ಬೆಂಗಳೂರು ನಗರದಷ್ಟೂ ಜನಸಂಖ್ಯೆಯಿರದ ಯೂರೋಪಿನ ಸಣ್ಣಸಣ್ಣ ದೇಶಗಳ ಜನರೆಲ್ಲರೂ ಕಂಪ್ಯೂಟರನ್ನು ತಮ್ಮ ಭಾಷೆಗಳಲ್ಲಿಯೇ ಉಪಯೋಗಿಸುವುದು ಮಾತ್ರವಲ್ಲದೆ ಪ್ರೊಗ್ರ್ಯಾಮಿಂಗ್ ಸಹ ಮಾಡುತ್ತಿರುವಾಗ ಭವ್ಯ ಭಾರತದ ಯಾವುದೇ ಭಾಷೆಯಲ್ಲಿಯೂ ಆ ಸೌಲಭ್ಯವಿಲ್ಲ ಎನ್ನುವುದು ಎಂತಹ ಅವಮಾನಕಾರಿಯಾದ ವಿಷಯ. ಯಾವುದೇ ವಿಂಡೋಸ್ ಆಪರೇಟಿಂಗ್ ಸಿಸ್ಟಂನ Regional and Language Settings ನೋಡಿದರೆ ನಮಗೆ ಅಲ್ಲಿ ಲಭ್ಯವಿರುವ ಭಾಷೆಗಳು ಕಾಣಿಸುತ್ತವೆ, ಆದರೆ ನಮ್ಮ ದೇಶದ ಯಾವುದೇ ಭಾಷೆ ಕಾಣಿಸುವುದಿಲ್ಲ. ಇಂತಹ ಸಮಯದಲ್ಲಿ ಕನ್ನಡದ ವಿಷಯಕ್ಕೇ ಸೀಮಿತಗೊಂಡಾಗ ಕರ್ನಾಟಕ ಸರ್ಕಾರ, ವಿಶ್ವವಿದ್ಯಾನಿಲಯಗಳು, ಕಗಪ ಏನು ಮಾಡುತ್ತಿವೆ? ಆ ವಿಷಯದಲ್ಲಿ ಇವರ ಯೋಜನೆಗಳೇನು ಎಂದರೆ ಉತ್ತರ ತುಂಬಾ ನಿರಾಶಾದಾಯಕ.
ಇವೆಲ್ಲ ಹೇಗೂ ಇರಲಿ; ಸದ್ಯಕ್ಕೆ ಕನ್ನಡ ಬಳಕೆಯ ವಿಷಯವನ್ನೇ ತೆಗೆದುಕೊಳ್ಳೋಣ. ಬೆಂಗಳೂರಿನಲ್ಲಿ ಅಥವಾ ರಾಜ್ಯದ ಇತರ ಮುಖ್ಯ ನಗರಗಳಲ್ಲಿ ನೋಡಿದರೆ ಕನ್ನಡದ Active Vocabulary ದಿನೇದಿನೇ ಕ್ಷೀಣಿಸುತ್ತಿದೆ. ಹೆಸರಿಗಷ್ಟೇ ಕನ್ನಡ. ಹೆಚ್ಚಿನ ಪದಗಳು ಇಂಗ್ಲಿಷ್ನಲ್ಲಿ. ಇಲ್ಲಿ ನಮ್ಮಲ್ಲಿ ಇಲ್ಲದ ಪದಗಳನ್ನು ಬೇರೆ ಭಾಷೆಯಿಂದ ಕನ್ನಡಕ್ಕೆ ತೆಗೆದುಕೊಳ್ಳುವುದಕ್ಕೆ ಯಾರೂ ಅಭ್ಯಂತರ ಮಾಡಬಾರದು. ಆದರೆ ಹತ್ತಾರು ವರ್ಷಗಳ ಹಿಂದೆ ಉಪಯೋಗಿಸುತ್ತಿದ್ದ ಕನ್ನಡ ಪದಗಳಿಗೆ ಬದಲಾಗಿ ಇಂಗ್ಲಿಷ್ ಉಪಯೋಗಿಸುತ್ತಿದ್ದೇವಲ್ಲಾ ಅದು ನಮ್ಮ ಅಯೋಗ್ಯತೆ. ಕೀಳರಿಮೆ.
ಒಂದು ವೈಯುಕ್ತಿಕ ಅನುಭವ ಹೇಳುತ್ತೇನೆ; ಇಲ್ಲಿ ಅಮೇರಿಕಾದಲ್ಲಿ ನನ್ನ ಪಕ್ಕದ ಕ್ಯೂಬಿನಲ್ಲಿ ಕೂರುವ ತಮಿಳು ಸಹೋದ್ಯೋಗಿ ತನ್ನ ಹೆಂಡತಿಯ ಜೊತೆ ದೂರವಾಣಿಯಲ್ಲಿ ತಮಿಳಿನಲ್ಲಿ ಮಾತನಾಡುತ್ತ ಕೊನೆಯಲ್ಲಿ ವಾಡಿಕೆಯಂತೆ Bye ಎಂದ. ಆಗ ಅಲ್ಲಿಯೇ ಇದ್ದ ನಮ್ಮ ಚೀನಾ ಮೂಲದ ಮ್ಯಾನೇಜರ್ "ಏನಯ್ಯಾ, ನಿಮ್ಮ ಭಾಷೇಲಿ ‘Bye' ಇಲ್ಲವಾ?" ಎಂದು ಆತನನ್ನು ಕೇಳಿದ್ದನ್ನು ಕೇಳಿ ನಾನು ಒಂದೆರಡು ದಿನ ಅದರ ಬಗ್ಗೆಯೇ ಯೋಚಿಸುತ್ತಿದ್ದೆ. ಎಷ್ಟು ಚಿಕ್ಕ ಆದರೆ ಬಹು ತೂಕದ ಪ್ರಶ್ನೆ. ನೆನಪಿಗೆ ಬಂದಾಗಲೆಲ್ಲ ಕೀಳರಿಮೆ ಹುಟ್ಟಿಸುತ್ತೆ; ಆ ಪದ ನಮ್ಮಲ್ಲಿ ಇಲ್ಲ ಅಂತಲ್ಲ, ಉಪಯೋಗಿಸುತ್ತಿಲ್ಲವಲ್ಲ ಅಂತ. ಇಂಗ್ಲಿಷ್ ಸಹ ಚೆನ್ನಾಗಿ ಬಲ್ಲ ಈ ಕೆಲವು ಚೀನೀಯರು, ಜಪಾನಿಗಳು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುವಾಗ ಏನೇ ತಿಪ್ಪರಲಾಗ ಹಾಕಿ ಗಮನವಿಟ್ಟು ಕೇಳಿದರೂ ಅವರು ಏನು ಮಾತನಾಡಿಕೊಳ್ಳುತ್ತಿದ್ದಾರೆ ಅಂತಲೇ ತಿಳಿಯೋಲ್ಲ. ಪರಭಾಷೆಯ ಪದಗಳು ಅವರ ಸಂಭಾಷಣೆಯಲ್ಲಿ ನುಸುಳುವುದೇ ಇಲ್ಲ. ಅದೇ ನಮ್ಮ ವಿಷಯ ನೋಡಿ. ಇಬ್ಬರು ಕನ್ನಡದೋರು ಕನ್ನಡದಲ್ಲಿ (?) ಮಾತನಾಡಿಕೊಳ್ಳೋದನ್ನ ಅಷ್ಟೋ ಇಷ್ಟೋ ಇಂಗ್ಲಿಷ್ ಬರೋ ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು. ಪರಭಾಷಿಕರ ಮಧ್ಯೆ ಅವರಿಗೆ ಅರ್ಥವಾಗದ ಹಾಗೆ ನಮ್ಮನಮ್ಮಲ್ಲೇ ಮಾತನಾಡಿಕೊಳ್ಳಲಾಗದ ದುರವಸ್ಥೆ ಎನ್ನುವುದಕ್ಕಿಂತ ನಮ್ಮ ಭಾಷೆಯನ್ನು ನಾವೇ ಸಾಯಿಸುತ್ತಿರುವ ತಬ್ಬಲಿತನ ಇದು. ಕೆಲವರು ಇದನ್ನೇ Development ಕಣಮ್ಮಾ, ನಾವು Universal ಗುರು ಎನ್ನಬಹುದು!!!
ಇವೆಲ್ಲವುಗಳ ಹಿನ್ನೆಲೆಯಲ್ಲಿ ಹೊಸ ಹೊಸ ತಂತ್ರಜ್ಞಾನಗಳಲ್ಲಿ, ವ್ಯವಹಾರದಲ್ಲಿ ಇಂಗ್ಲಿಷ್ ಕಡ್ಡಾಯವೇ ಎಂದರೆ ನಮ್ಮ ದೇಶದವರನ್ನು ಬಿಟ್ಟು ಯಾರೇ ಆಗಲಿ ಇಲ್ಲ ಅಂತಲೇ ಹೇಳುತ್ತಾರೆ. ಉದಾಹರಣೆಗೆ ಜಪಾನಿಯರನ್ನು, ಕೊರಿಯನ್ನರನ್ನು, ಫ್ರೆಂಚ್ ಮತ್ತಿತರ ಯೂರೋಪ್ ರಾಷ್ಟ್ರಗಳನ್ನು ನೋಡಿ; ಬ್ರಿಟನ್ ಬಿಟ್ಟರೆ ಯೂರೋಪಿನ ಎಲ್ಲಾ ದೇಶಗಳಲ್ಲಿ ಕಂಪ್ಯೂಟರ್ ಮತ್ತು ಕೀಲಿಮಣೆ ಅವರ ಸ್ಥಳೀಯ ಭಾಷೆಗಳಲ್ಲಿಯೇ ಇರುತ್ತದೆ. ನಾಲ್ಕು ವರ್ಷದ ಹಿಂದೆಯೇ ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಫ್ರೆಂಚ್ ಕೀಲಿಮಣೆ ಹಿಡಿದು ವಿಂಡೋಸ್ನಲ್ಲಿ ಇಂಗ್ಲಿಷ್ ಜಾಲತಾಣವನ್ನು ಟೈಪಿಸಲು ಬಹಳ ತಿಣುಕಾಡಿದ್ದೆ ನಾನು. ಇಂತಹುದರಲ್ಲಿ ವರ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ತಂತ್ರಾಂಶ ರಪ್ತು ಮಾಡುವ ಕರ್ನಾಟಕದಲ್ಲಿ ಕಂಪ್ಯೂಟರ್ ಉಪಯೋಗಿಸುವುದಕ್ಕೆ ಇಂಗ್ಲಿಷ್ ಬೇಕೇ ಬೇಕು ಎನ್ನುವುದು ನಿಜವಾದ ದಾಸ್ಯ, ಗುಲಾಮಿತನ. ಹಿಂದೆ ಭಾರತದಲ್ಲಿ ಕೆಲವು ವರ್ಗಗಳ ಜನರಿಗೆ ವಿದ್ಯೆ ಹೇಗೆ ನಿರಾಕರಿಸಲಾಗುತ್ತಿತ್ತೊ ಅದೇ ರೀತಿ ಈಗ ಇಂಗ್ಲಿಷ್ ಬರದವರಿಗೆ ಕಂಪ್ಯೂಟರ್ ಬಳಕೆಯ ನಿರಾಕರಣೆ ಸಹ ಅದೇ ಮಟ್ಟದ ಶೋಷಣೆ ಮತ್ತು ಅಸಮಾನತೆ. ಈಗಾಗಲೆ ಕಂಪ್ಯೂಟರ್ ಬಳಕೆ ಎಲ್ಲಾ ಕಡೆಗಳಲ್ಲಿ, ವರ್ಗಗಳಲ್ಲಿ ಸಾಮಾನ್ಯವಾಗುತ್ತಿದೆ. ಆದ್ದರಿಂದ ಈ ವಿಷಯದ ಬಗ್ಗೆ ಗಂಭೀರವಾಗಿ ಯೋಚಿಸುವುದು ಖಾಸಗಿಯವರಿಗಿಂತ ಸರ್ಕಾರದ, ವಿಶ್ವವಿದ್ಯಾಲಯಗಳ ಕೆಲಸ. ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಮತ್ತು ಸ್ವತಹ ಕನ್ನಡದ ಸಾಹಿತಿಗಳೂ ಆದ ಡಾ. ಚಿದಾನಂದ ಗೌಡರು ಸ್ವತಹ ಕಂಪ್ಯೂಟರ್ ತಜ್ಞರು. ಅವರ ನೇತೃತ್ವದಲ್ಲಾದರೂ ಏನಾದರೂ ಸಂಶೋಧನೆ, ಪ್ರಯೋಗಗಳು ನಡೆಯುತ್ತಿವೆಯೇ ? ಗೊತ್ತಿಲ್ಲ.
ಏನಾಗಿದೆ ನಮಗೆ?
ಕನ್ನಡದ ಜನಸಾಮಾನ್ಯರು ಬ್ಯಾಂಕುಗಳಲ್ಲಿ, ಕಚೇರಿಗಳಲ್ಲಿ, ಮನೆಗಳಲ್ಲಿ ಸುಲಭವಾಗಿ ಕನ್ನಡದ ಕಂಪ್ಯೂಟರ್ನಲ್ಲಿ ಕನ್ನಡದಲ್ಲಿಯೇ ತಮ್ಮ ಕೆಲಸ ಮಾಡಿಕೊಳ್ಳುವಂತಾಗಬೇಕು; ಹೊಸ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವಂತಾಗಬೇಕು. ಈಗ ಕನ್ನಡದಲ್ಲಿ ಟೈಪ್ ಮಾಡಬೇಕೆಂದರೆ ಇಂಗ್ಲಿಷ್ ಕೀಲಿಮಣೆ ಉಪಯೋಗಿಸಿ, ಬಳಸುದಾರಿಯಿಂದ ಬರಹ ಇಲ್ಲವೆ ನುಡಿ ಅಥವ ಮತ್ತಿತರ ತಂತ್ರಾಂಶ ಉಪಯೋಗಿಸಿ ಅವುಗಳ Font ನೆರವಿನಿಂದ ಮಾತ್ರ ಕನ್ನಡ ನೋಡಬಹುದು. ಜೊತೆಗೆ ಎಲ್ಲಾ ಭಾಷಾ ಕಂಪ್ಯೂಟರ್ಗಳಲ್ಲಿ ಯಾವುದೇ ತೊಂದರೆಯಿಲ್ಲದೆ ಓದುವಂತಹ ಕನ್ನಡದಲ್ಲಿ ಅಭಿವೃದ್ಧಿ ಪಡಿಸಿದ Applications ಅಭಿವೃದ್ಧಿ ಪಡಿಸುವ ಸ್ಥಿತಿಯಲ್ಲಿ ಇರಲಿ, ಅದರ ಹತ್ತಿರದಲ್ಲಿ ಸಹ ಎಲ್ಲೂ ಇಲ್ಲ. ವಿಂಡೋಸ್ನಲ್ಲಿ ಅಭಿವೃದ್ದಿ ಪಡಿಸಿದ ತಂತ್ರಾಂಶ ಅದು ಯಾವುದೇ ಭಾಷೆಯ ವಿಂಡೋಸ್ನಲ್ಲಿ ಅವರದೇ ಭಾಷೆಯಲ್ಲಿ ಬರುವಂತಹ ಶಿಷ್ಟಾಚಾರ ಇಂದು ಲಭ್ಯವಿದೆ. ಆದ್ದರಿಂದಾಗಿಯೇ ಜರ್ಮನಿ, ಫ್ರೆಂಚ್ಗಳಲ್ಲಿ ಪ್ರೋಗ್ರ್ಯಾಮಿಂಗ್ ಮಾಡುವ ತಂತ್ರಜ್ಞರು ಯಾವುದೇ ತಲೆನೋವಿಲ್ಲದೆ ತಮ್ಮ ಭಾಷೆಯಲ್ಲಿಯೇ ಅಭಿವೃದ್ಧಿ ಪಡಿಸಿ ಪ್ರಪಂಚದ ಎಲ್ಲಾ ಕಡೆ ತಮ್ಮ ತಂತ್ರಾಂಶ ಮಾರುತ್ತಾರೆ. ಅವರಿಗೆ ಇಂಗ್ಲಿಷ್ ಕಲಿತುಕೊಳ್ಳುವ ಅವಶ್ಯಕತೆ ಇಲ್ಲದೆ ಅಷ್ಟು ದಿನದ ಸಮಯವನ್ನು ವಿವಿಧ ತಂತ್ರಗಳ ಕಲಿಕೆ-ಅಭಿವೃದ್ಧಿಯಲ್ಲಿ ಉಪಯೋಗಿಸುತ್ತಾರೆ. ಹಾಗಾದಾಗ HTMLಅಂತಹದನ್ನು ಕೇವಲ ಕನ್ನಡದಲ್ಲಿರುವ ಸಹಾಯ ಪುಟಗಳನ್ನು ಓದಿ ನಮ್ಮ ಕನ್ನಡ ಮಾಧ್ಯಮದ ಶಾಲಾ ಮಕ್ಕಳು ಸಹ ವಿನ್ಯಾಸ ಮಾಡಬಹುದು. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ಎಷ್ಟೊಂದು ಲಕ್ಷ ಶಾಲಾ ಮಕ್ಕಳಿಗೆ ಈ ಇಂಗ್ಲಿಷ್ ಮತ್ತು ಕಂಪ್ಯೂಟರ್ ಎಷ್ಟೊಂದು ಕೀಳರಿಮೆ ಹುಟ್ಟಿಸುತ್ತದೆ ಎನ್ನುವುದನ್ನು ನೆನಸಿಕೊಂಡರೆ ಸಂಕಟವಾಗುತ್ತದೆ.
ಇದಾಗದಿದ್ದ ಪಕ್ಷದಲ್ಲಿ ಅದರ ಪರಿಣಾಮಗಳು ನಾವೆಲ್ಲ ಇಷ್ಟ ಪಡುವ ರೀತಿಯಲ್ಲಿ ಇರುವುದಿಲ್ಲ ಎನ್ನಬಹುದೇನೊ. ಆಗ ಈ ಜಂಗಮ ಭಾಷೆಯೂ ನಿಧಾನವಾಗಿ(?) ಅಳಿಯುತ್ತೆ. 95-96ರ ತಂತ್ರಜ್ಞಾನ ಮೇಳಗಳಲ್ಲಿ ಇಂಟರ್ನೆಟ್, ಲಿನಕ್ಸ್ ಇವೆಲ್ಲ ಹೊಸ ಶೋಧನೆಗಳು; ಹಾಗೂ Catch Phrases. ಆದರೆ ಹತ್ತಕ್ಕಿಂತ ಕಮ್ಮಿ ವರ್ಷಗಳಲ್ಲಿ ಅವೆಲ್ಲ ದಿನಬಳಕೆಯ ತಂತ್ರಜ್ಞಾನಗಳು. ತಂತ್ರಜ್ಞಾನದಿಂದ ಹೊರಗಿರುವುದಕ್ಕೆ ಯಾರೂ ಇಷ್ಟಪಡುವುದಿಲ್ಲ. ಒಂದು ಉಪಮೆ ಇದೆ; ಮುಲ್ಲಾ ಮಸೀದಿಗೆ ಹೋಗಲಿಲ್ಲ ಅಂದರೆ ಮಸೀದಿಯೇ ಮುಲ್ಲಾನ ಬಳಿಗೆ ಬಂದಿತಂತೆ. ಕನ್ನಡದಲ್ಲಿ ಕಂಪ್ಯೂಟರ್ ತಂತ್ರಜ್ಞಾನ ಬರದೇ ಇದ್ದರೆ ಜನ ಇಂಗ್ಲಿಷ್ ಕಲಿತಾದರೂ ಅದನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆಯೇ ಹೊರತು ಅದರಿಂದ ದೂರ ಹೋಗಲಾಗುವುದಿಲ್ಲ. ಅಂತಹ ಸ್ಥಿತಿಯಿಂದ ಭಾಷೆಗೆ, ಸ್ವಂತಿಕೆಗೆ, ಅಭಿವೃದ್ಧಿಗೆ (ಇಂಗ್ಲಿಷ್ ಕಲಿಯಲೇಬೇಕಾದ ಸಮಯದಿಂದಾಗಿ) ಕೇಡು. ಅಷ್ಟೊತ್ತಿಗೆ ಕನ್ನಡ ಇರಲಿ ಕಂಗ್ಲಿಷ್ ಕೂಡ ಬದುಕಿರುವುದಿಲ್ಲ.
ನಿನ್ನ ಮನೆಯ ಯಜಮಾನ ಯಾರಪ್ಪ?
ನಾವೆಲ್ಲ ಗೌರವಿಸುವ, ಮೆಚ್ಚುವ, ಇವರಿಲ್ಲದಿದ್ದರೆ ನಾವೆಲ್ಲ ಕಂಪ್ಯೂಟರ್ನಲ್ಲಿ ಕನ್ನಡವನ್ನೇ ಉಪಯೋಗಿಸಲು ಸಾಧ್ಯವಾಗದೇ ಇರಬಹುದಾಗಿದ್ದ ಬರಹ ವಾಸು ಮತ್ತು ಕಗಪದ ಇತರ ತಂತ್ರಜ್ಞರನ್ನು ಎಂದಿಗೂ ಕುಂದದ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಲೆ ಒಂದು ವಿಷಯ ಹೇಳಬೇಕು. ಈಗ ನಾವು ಬಳಸುತ್ತಿರುವ ಕಂಪ್ಯೂಟರ್ನಲ್ಲಿ ಕನ್ನಡ ದೇಹದ ಮೇಲಿನ ಕಂಪು-ಕನ್ನಡಕ ಮಾತ್ರ. ಅದರೊಳಗಿನ ಆತ್ಮ ಇಂಗ್ಲಿಷೇ. ಫ್ರೆಂಚ್, ರಷ್ಯನ್, ಜಪಾನಿ, ಕೊರಿಯನ್, ಸ್ಲೋವಾಕ್, ಫಿನ್ನಿಷ್ ಇನ್ನೂ ಮೊದಲಾದ ಸಣ್ಣ ಪುಟ್ಟ ಆತ್ಮಗಳೆಲ್ಲ ಬದುಕಿರುವಾಗ ನಮ್ಮದ್ಯಾಕೆ ಹುಟ್ಟೇ ಇಲ್ಲ ? ಬೇರೆಯವರ ಚಾಕರಿ ಮಾಡೋದೇ ಆಯ್ತು ; ನಮ್ಮದ್ಯಾವಾಗ ಮಾಡ್ಕೊಳ್ಳೋದು? ಅಕಿರೋ ಕುರುಸಾವೋನ ಅಭಿಜಾತ ಸಿನೆಮಾ ‘ಸೆವೆನ್ ಸಮುರಾಯ್’ನಲ್ಲಿ ತನ್ನ ಹಳ್ಳಿಗೆ ಕಾವಲುಗಾರರಾಗಿ ಬಂದ ಸಮುರಾಯ್ಗಳಿಗೆ ತನ್ನ ಮನೆಯಲ್ಲವನ್ನೂ ಬಿಟ್ಟುಕೊಟ್ಟು, ಅವರಿಗೆ ಸಮೃದ್ಧ ಭೋಜನ ವ್ಯವಸ್ಥೆ ಮಾಡಿ ತಾನು ಮಾತ್ರ ಗಂಜಿ ಕುಡಿಯುತ್ತ ಕೊಟ್ಟಿಗೆಯಲ್ಲಿ ಕೀಳರಿಮೆಯಿಂದ ಮಲಗುವ ರೈತನಿಗೆ ರೈತನ ಮಗನಾಗಿ ಹುಟ್ಟಿ ನಂತರ ಸಮುರಾಯ್ ಆದವ "ನಿನ್ನ ಮನೆಯಲ್ಲಿ ನೀನು ಯಜಮಾನನಾಗಿರು," ಎಂದು ತೀಕ್ಷ್ಣವಾಗಿ ಬೈಯ್ಯುತ್ತಾನೆ. ನಮ್ಮ ಊರಿನ ನಮ್ಮ ಮನೆಗಳ ಯಂತ್ರಗಳಲ್ಲಿ ನಮ್ಮ ಭಾಷೆ ಉಪಯೋಗಿಸುವುದಕ್ಕಾಗದೆ ?
ಅನಂತಮೂರ್ತಿಯವರಿಗೆ ಜ್ಞಾನಪೀಠ ಬಂದ ಸಂದರ್ಭದಲ್ಲಿ ಖ್ಯಾತ ಚಿಂತಕ ಡಿ.ಆರ್.ನಾಗರಾಜ್ ಈ ರೀತಿ ಬರೆಯುತ್ತಾರೆ:
"ಕನ್ನಡ ಪ್ರತಿಭೆಯ ಒಂದು ಮಾದರಿಯ ಆತ್ಯಂತಿಕ ಯಶಸ್ಸು ಮತ್ತು ಸಾಧನೆ ಅನಂತಮೂರ್ತಿಯವರಲ್ಲಿ ಕಂಡಾಗಿದೆ. ಇನ್ನು ಅದನ್ನು ಮುರಿದು ಮುನ್ನಡೆಯಬೇಕಾಗಿದೆ. ಪಿತೃಹತ್ಯೆಯೆ ಪ್ರಗತಿಯ ಹೆದ್ದಾರಿ. "
ಕಂಪ್ಯೂಟರ್ನಲ್ಲಿ ಕನ್ನಡ ‘ ಬರಹ ’, ‘ನುಡಿ’ ಯಿಂದಾಚೆ ಬೆಳೆಯಬೇಕಾಗಿದೆ.
**
ನನ್ನದೊಂದು ಸಣ್ಣ ಲೆಕ್ಕ ಇದೆ, ಅದು ಎಷ್ಟು ಸರಿಯೋ ಗೊತ್ತಿಲ್ಲ ; ಆದರೆ ಮೇಲ್ನೋಟಕ್ಕೆ ಸರಿ ಇರಬಹುದು ಎನ್ನಿಸುತ್ತೆ. ಈವತ್ತು ಕರ್ನಾಟಕದಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಏನಿಲ್ಲವೆಂದರೂ 5000ಕ್ಕೂ ಮೇಲ್ಪಟ್ಟು ಕಂಪ್ಯೂಟರ್ಗಳಿರಬಹುದು. ಅದೇ ರೀತಿ ಖಾಸಗಿ ಕಚೇರಿಗಳಲ್ಲಿ , ಮುಖ್ಯವಾಗಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವ ಸಹಕಾರಿ ಬ್ಯಾಂಕು-ಸಂಸ್ಥೆಗಳಲ್ಲಿ ಅವುಗಳ ಬಳಕೆ ಹತ್ತಾರು ಸಾವಿರ. (ದೇಶದಲ್ಲಿ ಅಂತರ್ಜಾಲ ಬಳಕೆದಾರರ ಸಂಖ್ಯೆ 40 ಲಕ್ಷಕ್ಕೂ ಹೆಚ್ಚು ಎಂಬ ವರದಿ ಇದೆ. ಅದರಲ್ಲಿ ಕರ್ನಾಟಕದ ಪಾಲು ಏನಿಲ್ಲವೆಂದರೂ ಶೇ.10 ಆದರೂ ಇರಬೇಕು.) ಹೀಗಿರುವಾಗ ಸರ್ಕಾರ ಕರ್ನಾಟಕದಲ್ಲಿ ಹತ್ತು ಸಾವಿರಕ್ಕೂ ಮೇಲ್ಪಟ್ಟು ಕನ್ನಡ ಆಪರೇಟಿಂಗ್ ಸಿಸ್ಟ್ಂನ ಅವಶ್ಯಕತೆ ಇದೆ, ಅದರಲ್ಲಿ ನಮ್ಮ ಸಂಖ್ಯೆ ಇಷ್ಟು ಎಂದು ಮೈಕ್ರೋಸಾಫ್ಟ್ನಂತಹ ಕಂಪನಿಗೆ ಆಶ್ವಾಸನೆ ಇತ್ತರೆ ಅವರು ಇದರಿಂದ ಬರುವ ಹತ್ತಾರು ಮಿಲಿಯನ್ ಡಾಲರ್ಗಳ ವ್ಯಾಪಾರದ ಆಸೆಯಿಂದಾದರೂ ಬೇಗ ಆ ವ್ಯವಸ್ಥೆ (ತಿಂಗಳುಗಳಲ್ಲಿ ?) ಸಿದ್ಧಪಡಿಸುತ್ತಾರೆ. ಒಂದು ಭಾರತದ ಭಾಷೆಯಲ್ಲಿ ಅದು ಬಂದರೆ ಮಿಕ್ಕ ಭಾಷೆಗಳಿಗೆ ಅದನ್ನು ಬದಲಾಯಿಸುವುದು ಮೈಕ್ರೊಸಾಫ್ಟ್ನವರಿಗೆ ಕೆಲವೇ ದಿನಗಳ ಕೆಲಸ. ಆದರೆ ಈ ಸ್ವಾಭಿಮಾನದ ಇಚ್ಛಾಶಕ್ತಿಯನ್ನು ನಮ್ಮ ಅಧಿಕಾರಸ್ಥರು ತೋರಿಸಿಯಾರೆ? ಬಹಳಷ್ಟು ವಿಷಯಗಳಲ್ಲಿ ಆಶಾವಾದಿಯಾದ ನಾನು ಈ ಒಂದು ವಿಷಯದಲ್ಲಿ ಅಂತಹ ನಂಬಿಕೆ ಸದ್ಯದಲ್ಲಿ ಇಟ್ಟಿಲ್ಲ. ಕಾಲ ಗತಿಸುತ್ತಿದೆ;
ರಾಜ್ಯದ ಸಾಮ್ರಾಜ್ಯಗಳ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ ? - (ದ.ರಾ.ಬೇಂದ್ರೆ)
[ರವಿ ಕೃಷ್ಣಾ ರೆಡ್ಡಿ - ಜನವರಿ 9, 2004.]